ಖ್ಯಾತ ನಟ ಡಾ ರಾಜಕುಮಾರ್ ಅವರ ಮೊಮ್ಮಗ ನಟ ವಿನಯ್ ರಾಜಕುಮಾರ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಸರಳ ಜೀವನಶೈಲಿ ಮತ್ತು ಬಟ್ಟೆಗಳ ಬಗ್ಗೆ ಮಾತನಾಡಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. “ನಾನು ಫ್ಯಾಷನ್ ಹಿಂದೆ ಓಡುವ ವ್ಯಕ್ತಿಯಲ್ಲ. ಹಳೆಯ ಬಟ್ಟೆಗಳ ಧರಿಸುವುದೇ ಆನಂದ” ಎಂದು ಹೇಳುವ ಮೂಲಕ ತಮ್ಮ ವಿನಮ್ರತೆಯನ್ನು ಮೆರೆದಿದ್ದಾರೆ.
“ನಾನು ದುಬಾರಿ ಬಟ್ಟೆಗಳನ್ನು ತೊಟ್ಟು ಫೋಸ್ ನೀಡಿದರೆ, ನನ್ನನ್ನು ಆರಾಧಿಸುವ ಅಭಿಮಾನಿಗಳು ಕೂಡ ಅಂತಹದ್ದೇ ಬಟ್ಟೆ ಬೇಕೆಂದು ಸಾಲ ಮಾಡಿಯಾದರೂ ಕೊಂಡುಕೊಳ್ಳಬಹುದು. ಅವರ ಹಣ ವ್ಯರ್ಥವಾಗಬಾರದು. ಹೊಸ ಬಟ್ಟೆಗಳಿಗಿಂತ ನನಗೆ ಹಳೆಯ ಬಟ್ಟೆಗಳನ್ನು ಧರಿಸುವುದೇ ಹೆಚ್ಚು ಆರಾಮದಾಯಕ ಮತ್ತು ಆನಂದದಾಯಕ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕನ್ನಡ ರಾಷ್ಟ್ರೀಯತೆಯನ್ನು ಕಟ್ಟಿದ ಮಹನೀಯ ರಾಜಕುಮಾರ್ : ಚ ಹ ರಘುನಾಥ ಅಭಿಮತ
“ನನಗೆ ಯಾವುದು ಆರಾಮ ಅನಿಸುತ್ತದೆಯೋ ಆ ಬಟ್ಟೆಯನ್ನು ನಾನು ಇಷ್ಟಪಡುತ್ತೇನೆ. ಒಂದು ಬಟ್ಟೆ ಚೆನ್ನಾಗಿದೆ ಎನಿಸಿದರೆ ಅದನ್ನು ಪದೇ ಪದೇ ಧರಿಸಲು ನನಗೆ ಯಾವುದೇ ಮುಜುಗರವಿಲ್ಲ. ಫ್ಯಾಷನ್ ಅಥವಾ ಟ್ರೆಂಡ್ ಅನುಸರಿಸುವುದು ಮಾನಸಿಕವಾಗಿ ಒತ್ತಡ ತರಬಹುದು, ಆದರೆ ನಮಗೆ ಇಷ್ಟ ಬಂದಂತೆ ಇರುವುದು ನಿಜವಾದ ಸಂತೋಷ ನೀಡುತ್ತದೆ. ತೆರೆಯ ಮೇಲೆ ಪಾತ್ರಕ್ಕಾಗಿ ಎಂತಹ ಬಟ್ಟೆ ಬೇಕಿದ್ದರೂ ಧರಿಸುತ್ತೇನೆ, ಆದರೆ ಕ್ಯಾಮೆರಾ ಹಿಂದಿನ ಬದುಕಿನಲ್ಲಿ ನಾನು ನಾನಾಗಿರಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.
ವಿನಯ್ ಅವರ ಈ ಮಾತುಗಳು ಕೇಳಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದಿನ ಕಾಲದಲ್ಲಿ ಸೆಲೆಬ್ರಿಟಿಗಳು ಪ್ರತಿ ಬಾರಿ ಬಹಿರಂಗವಾಗಿ ಕಾಣಿಸಿಕೊಂಡಾಗಲೂ ಹೊಸ ಹೊಸ ಡಿಸೈನರ್ ಬಟ್ಟೆಗಳನ್ನು ಧರಿಸುತ್ತಾರೆ. ಅದಕ್ಕಾಗಿಯೇ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಈ ನಡುವೆ ಇಷ್ಟವಾದ ಬಟ್ಟೆಯನ್ನು ಪದೇ ಪದೇ ಹಾಕಲು ತನಗೆ ಮುಜುಗರವಿಲ್ಲ ಎಂದು ಹೇಳಿಕೊಳ್ಳುವ ಮೂಲಕ ವಿನಯ್ ಸರಳತೆ ಮೆರೆದಿದ್ದಾರೆ.
ಇನ್ನು ಈ ಸಂದರ್ಶನದಲ್ಲಿ ತಮ್ಮ ಅಜ್ಜ ಡಾ. ರಾಜಕುಮಾರ್ ಅವರು ಕಲಿಸಿದ ಪಾಠಗಳನ್ನೂ ವಿನಯ್ ರಾಜಕುಮಾರ್ ನೆನೆಪಿಸಿಕೊಂಡಿದ್ದಾರೆ. “ನಿನಗೆ ಇಷ್ಟ ಬಂದಿದ್ದನ್ನು ಹೊಟ್ಟೆತುಂಬಾ ತಿನ್ನು, ಆದರೆ ತಿಂದದ್ದನ್ನು ಕರಗಿಸಲು ಅಷ್ಟೇ ಕಠಿಣವಾಗಿ ಕಸರತ್ತು ಮಾಡು” ಎಂದು ತಮ್ಮ ಅಜ್ಜ ಡಾ. ರಾಜಕುಮಾರ್ ಹೇಳುತ್ತಿದ್ದರು ಎಂದು ವಿನಯ್ ತಿಳಿಸಿದ್ದಾರೆ. “ಇದೇ ಕಾರಣಕ್ಕೆ ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡುತ್ತೇನೆ. ಆದರೆ ಡಯಟ್ ಹೆಸರಿನಲ್ಲಿ ಉಪವಾಸ ಇರಲು ಇಷ್ಟಪಡಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ
ತಮ್ಮ ದೊಡ್ಡ ಕುಟುಂಬದ ಬಗ್ಗೆಯೂ ವಿನಯ್ ಹೇಳಿದ್ದಾರೆ. “50 ಜನರ ದೊಡ್ಡ ಕುಟುಂಬದಲ್ಲಿ ಬೆಳೆದೆ. ಇಡೀ ಕುಟುಂಬ ಪ್ರವಾಸಕ್ಕೆ ಹೋಗುವಾಗ ನಮ್ಮದೇ ಆದ ಖಾಸಗಿ ಬಸ್‌ನಲ್ಲಿ ಹೋಗುತ್ತಿದ್ದೇವು. ಕಾಲೇಜು ಸೇರುವವರೆಗೂ ನನಗೆ ಪ್ರತ್ಯೇಕ ಕೋಣೆ ಇರಲಿಲ್ಲ. ಮನೆಯವರೆಲ್ಲರ ಜೊತೆ ಬೆರೆತು ಬಾಳಿದೆ” ಎಂದು ಹೇಳಿದ್ದಾರೆ.
ಕೇವಲ ಕಮರ್ಷಿಯಲ್ ಸಿನಿಮಾಗಳಿಗಿಂತ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆರಿಸಿಕೊಳ್ಳುವುದಾಗಿ ಹೇಳಿರುವ ವಿನಯ್, “ಧನುಶ್, ವಿಜಯ್ ಸೇತುಪತಿ, ನವಾಜುದ್ದೀನ್ ಸಿದ್ದೀಕಿ, ಹಾಲಿವುಡ್‌ನ ಲಿಯೋನಾರ್ಡೋ ಡಿ ಕ್ಯಾಪ್ರಿಯೋ ನಟನೆ ಬಹಳ ಇಷ್ಟ” ಎಂದು ತಿಳಿಸಿದ್ದಾರೆ.
ವಿನಯ್ ರಾಜಕುಮಾರ್ ಮಾತ್ರವಲ್ಲ, ಅಜ್ಜ ಡಾ. ರಾಜಕುಮಾರ್ ಮತ್ತು ಅವರ ಚಿಕ್ಕಪ್ಪ (ಪುನೀತ್ ರಾಜಕುಮಾರ್) ಕೂಡ ಸರಳತೆಗೆ ಹೆಸರುವಾಸಿಯಾಗಿದ್ದವರು. ತಾವು ಹಾಕಿಕೊಳ್ಳುವ ಬಟ್ಟೆಯ ಶೈಲಿಯನ್ನು, ಆ ಬ್ರ್ಯಾಂಡ್ ಅನ್ನು ಅಭಿಮಾನಿಗಳು ಅನುಕರಿಸುತ್ತಾರೆ ಎಂಬ ಕಾರಣಕ್ಕಾಗಿ ಪುನೀತ್ ರಾಜಕುಮಾರ್ ಕೂಡ ಕಡಿಮೆ ಬೆಲೆಯ ಬಟ್ಟೆಗಳನ್ನು ಧರಿಸುತ್ತಿದ್ದರು. ಇನ್ನು ಡಾ. ರಾಜಕುಮಾರ್ ಅವರು ಸರಳವಾಗಿದ್ದವರು. ಚಿತ್ರೀಕರಣದ ಸಮಯದಲ್ಲಿ ಲೈಟ್ ಬಾಯ್‌ಗಳಿಂದ ಹಿಡಿದು ಎಲ್ಲ ಕೆಲಸಗಾರರಿಗೂ ತಮ್ಮಂತೆಯೇ ಸಮಾನವಾದ ಊಟ ಸಿಗಬೇಕು ಎಂದು ಅವರು ಕಡ್ಡಾಯಗೊಳಿಸಿದ್ದರು. ತಾವು ಹೆಚ್ಚಾಗಿ ನೆಲದ ಮೇಲೆಯೇ ಕೂತು ಊಟ ಮಾಡಲು ಇಷ್ಟಪಡುತ್ತಿದ್ದರು.
ತೆರೆಕಾಣಲು ಸಜ್ಜಾಗಿರುವ ಗ್ರಾಮಾಯಣ, ಸಿಟಿ ಲೈಟ್ಸ್
ಇನ್ನು ವಿನಯ್ ಸಿನಿಮಾ ರಂಗಕ್ಕೆ ಬರುವ ಮುನ್ನ ಇವರು ವಿದೇಶದಲ್ಲಿ ನಟನೆಯ ಬಗ್ಗೆ ತರಬೇತಿ ಪಡೆದಿದ್ದಾರೆ. ತೆರೆಯ ಹಿಂದೆ ಕೆಲಸ ಮಾಡಿ ಅನುಭವ ಗಳಿಸಿದ್ದಾರೆ. 2015ರಲ್ಲಿ ಸಿದ್ಧಾರ್ಥ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ವಿನಯ್ ಅವರು 2016ರಲ್ಲಿ ರನ್ ಆಂಟೋನಿ ಸಿನಿಮಾದಲ್ಲಿ ನಟಿಸಿದ್ದಾರೆ. ಸುಧೀರ್ ಶಾನಭೋಗ್ ನಿರ್ದೇಶನದ ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ವಿನಯ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ 2024ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿದೆ. 2024ರಲ್ಲಿ ಪೆಪೆ ವಿನಯ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದ ಮಾಸ್ ಚಿತ್ರವಾಗಿದೆ. ಸದ್ಯ ಗ್ರಾಮಾಯಣ, ಸಿಟಿ ಲೈಟ್ಸ್ ಸಿನಿಮಾ ಚಿತ್ರೀಕರಣ ಮುುಗಿದಿದೆ. ಎರಡೂ ಸದ್ಯದಲ್ಲೇ ತೆರೆ ಕಾಣಲಿವೆ.





