ವಿಶಿಷ್ಟ ಕತೆಗಳ ಮೂಲಕ ಗುರುತಿಸಿಕೊಂಡ ಬರಹಗಾರ ಗುರುಪ್ರಸಾದ್, ತುಮಕೂರು ಜಿಲ್ಲೆಯವರು. ಚಿಕ್ಕನಾಯಕನಹಳ್ಳಿ ಸೀಮೆಯ ಕನ್ನಡ ಮತ್ತು ಅಲ್ಲಿನ ಬದುಕು ಇವರ ಬರಹದ ಜೀವಾಳ. ಇತ್ತೀಚಿನ ಕೃತಿ 'ಟ್ರಂಕು ತಟ್ಟೆ'ಯಿಂದ ಆಯ್ದ ಬರಹ ಇಲ್ಲುಂಟು
ತುಮಕೂರಿನಲ್ಲಿ ಯು ಆರ್ ಅನಂತಮೂರ್ತಿಯವರು ಸರ್ವಾಧ್ಯಕ್ಷರಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿತ್ತು. ಒಮ್ಮೆಲೇ ಲಕ್ಷೋಪಾದಿಯಲ್ಲಿ ಸೇರುವ ಜನತೆಯ ಊಟದ ಜವಾಬ್ದಾರಿಯನ್ನು ಅನ್ನದಾಸೋಹಕ್ಕೆ ಹೆಸರಾಗಿದ್ದ ಸಿದ್ಧಗಂಗಾ ಮಠ ವಹಿಸಿಕೊಂಡಿತ್ತು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ನಮಗೆ ಅಷ್ಟೂ ದಿನ ರಜೆ ಘೋಷಿಸಿದ್ದರೂ, ಸೀನಿಯರ್ಗಳಿಗೆ ಸ್ವಯಂಸೇವಕರನ್ನಾಗಿ ನೇಮಿಸಿಕೊಂಡು ಕೆಲಸ ಹಂಚಿದ್ದರು.
ತುಮಕೂರು ನಗರವಿಡೀ ಎಲ್ಲಿ ನೋಡಿದರೂ ಜನವೋ ಜನ. ಸದಾ ನೂಕುನುಗ್ಗಲು ಇರುತ್ತಿತ್ತು. ಜೂನಿಯರ್ ಕಾಲೇಜಿನ ಕಾಂಪೌಂಡ್ ಒಳಗೆ ಊಟ ವ್ಯವಸ್ಥೆಯಾಗಿತ್ತು. ಊಟದ ಕ್ಯೂಗಳು ಕಿಲೋಮೀಟರ್ಗಟ್ಟಲೆ ಇರುತ್ತಿದ್ದವು. ಮಧ್ಯಾಹ್ನದ ಊಟಕ್ಕಾಗಿ ಬೆಳಗ್ಗಿನಿಂದಲೇ ಕ್ಯೂ ನಿಂತಿರುತ್ತಿದ್ದರು. ನೂಕುನುಗ್ಗಲು ಹೆಚ್ಚಾಗಿ, ಸರತಿ ಕಾಪಾಡಲು ಹಾಕಿದ್ದ ಮರದ ಸರಳುಗಳನ್ನು ಕಿತ್ತೊಗೆಯಲಾಗಿತ್ತು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟು ಕೈಚೆಲ್ಲುತ್ತಿದ್ದರು.
ಈ ಆಡಿಯೊ ಸಂದರ್ಶನ ಕೇಳಿದ್ದೀರಾ?: ಮಾತೇ ಕತೆ – ನಾಗೇಶ ಹೆಗಡೆ ಸಂದರ್ಶನ | ‘ದಿಲ್ಲಿಯ ಗರ್ಲ್ಫ್ರೆಂಡ್ ಕರ್ಕೊಂಡು ನಮ್ ಹಳ್ಳಿಗೆ ಹೋದಾಗ…’
ಊಟಕ್ಕಾಗಿ ನಿಂತಿದ್ದ ಜನರ ಪ್ರವಾಹದೊಳಗೆ ಒಮ್ಮೆ ನಾನೂ ಸಿಲುಕಿಬಿಟ್ಟೆ. ಒಮ್ಮೆಲೇ ತಳ್ಳಿದಂತಾಗುತ್ತಿದ್ದರಿಂದ ಅದೆಷ್ಟೋ ದೂರ ಎಲ್ಲರೊಂದಿಗೆ ಹಿಂದಕ್ಕೂ ಮುಂದಕ್ಕೂ ಉಸಿರು ಕಟ್ಟಿದ ಉಯ್ಯಾಲೆಯಾಡಿದಂತಾಗುತ್ತಿತ್ತು. ಕೈ-ಕಾಲುಗಳು ಕಚಕಚನೆ ತುಳಿಯಲ್ಪಡುತ್ತಿದ್ದವು. ಒಂದು ಹೊತ್ತಿನಲ್ಲಂತೂ, ಊಟವೂ ಬೇಡ ಏನೂ ಬೇಡ ಹಿಂದಕ್ಕೆ ಹೋಗಿ ಜೀವ ಉಳಿಸಿಕೊಂಡರೆ ಸಾಕೆನ್ನುವಷ್ಟರ ಮಟ್ಟಿಗೆ ಆತಂಕ ಸೃಷ್ಟಿಯಾಗಿತ್ತು. ಅಂತೂ ಇಂತೂ, ಊಟದ ಆಸೆ ಕೈಬಿಟ್ಟು ಅಲ್ಲಿಂದ ಹೊರಬಿದ್ದು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಪುನರ್ಜನ್ಮವೆತ್ತಿ ಬಂದಂತಾಗಿತ್ತು.
ಇಂತಹ ಕರಾಳ ಅನುಭವವಿದ್ದರೂ ರಷ್ ಕಡಿಮೆ ಇರುವ ಕಡೆಯಲ್ಲಿ ಪ್ರಯತ್ನಿಸಬೇಕೆಂಬ ಊಟದ ಮೇಲಿನ ಆಸೆ ಹಾಗೆಯೇ ಇತ್ತು. ನನ್ನ ಜೊತೆಯಲ್ಲಿರುತ್ತಿದ್ದ ಹೊಟ್ಟೆ ನಾಗರಾಜ ಅಂತಹ ಒಂದು ಜಾಗವನ್ನು ಆ ದಿನ ಸಂಜೆ ಪತ್ತೆಹಚ್ಚಿ ತಂದ. ನಮ್ಮ ಪಿಯುಸಿ ಹಾಸ್ಟೆಲ್ನ ಪಕ್ಕದಲ್ಲಿ ದೊಡ್ಡ ಕಾಂಪೌಂಡ್ ಇತ್ತು. ಅದರ ಆ ಕಡೆ ಬದಿಯಲ್ಲಿ ಬೆಂಗಳೂರು ಯುನಿವರ್ಸಿಟಿಯ ಹಳೆಯ ಪಿ.ಜಿ ಸೆಂಟರ್ ಇತ್ತು. ಅದರ ವಿಸ್ತಾರವಾದ ಬಯಲಿನಲ್ಲಿ ವಿಐಪಿಗಳಿಗೆ ಮಾತ್ರ ಎಂದು ಸ್ಪೆಷಲ್ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ವೇದಿಕೆಯಲ್ಲಿ ಭಾಷಣ ಮಾಡಿದ ಸಾಹಿತಿ ಮಹೋದಯರನ್ನು ಇಲ್ಲಿಗೆ ಕರೆತಂದು ವಿಶೇಷವಾಗಿ ಗಮನಿಸುತ್ತಿದ್ದರು. ಇಂಥವರ ಸಂಖ್ಯೆಯೇ ಸಾವಿರದ ಮೇಲಿರುತ್ತಿತ್ತು.

ಆ ದಿನ ರಾತ್ರಿ ಎಂಟರ ಸುಮಾರಿಗೆ ನಾಗರಾಜ, ಭಗತ್ ಹಾಗೂ ನಾನು ಆ ಕಾಂಪೌಂಡ್ ಬಳಿ ಹೋದೆವು. ಹತ್ತು ಅಡಿಯಷ್ಟು ಎತ್ತರವಿದ್ದ ಆ ಕಾಂಪೌಂಡ್ ಏರುವುದು ಸುಲಭವಾಗಿರಲಿಲ್ಲ. ಅಕ್ಕಪಕ್ಕದಲ್ಲಿ ಬಿದ್ದಿದ್ದ ದಡಿ ಕಲ್ಲುಗಳನ್ನು ಒಂದರಮೇಲೊಂದರಂತೆ ಜೋಡಿಸಿ, ಮೊದಲಿಗೆ ನಾಗರಾಜನನ್ನು ಹತ್ತಿಸಲು ಪ್ರಯತ್ನಿಸಿದೆವು. ಕುಳ್ಳಗಿದ್ದ ಆತನಿಗೆ ಗೋಡೆಯ ತುದಿ ಸಿಗದೆ ವಿಫಲನಾದ. ನಾನು ಹತ್ತಲು ಮುಂದಾದೆ. ಕುಂಡಿಗೆ ಕೈಹಾಕಿ ಸ್ನೇಹಿತರು ತಳ್ಳಿದರಿಂದ ನನಗೆ ಕಾಂಪೌಂಡ್ ತುದಿ ಸಿಕ್ಕಿತು. ಪರದಾಡಿಕೊಂಡು ಹತ್ತಿಯೇಬಿಟ್ಟೆ. ಅಲ್ಲಿಂದ ಅನಾಮತ್ತಾಗಿ ಕೆಳಕ್ಕೆ ಧುಮುಕಿ, ವಿಐಪಿ ಊಟದ ಹಾಲ್ ತಲುಪಿದೆ. ಮತ್ತಿನ್ಯಾರೂ ಮೇಲತ್ತಿ ಬಂದದ್ದು ಕಾಣಲಿಲ್ಲ.
ಇಲ್ಲಿ ಜಘಮಘಿಸುವ ಬೆಳಕಿನೊಂದಿಗೆ ವಿಶೇಷವಾದ ಊಟ ವ್ಯವಸ್ಥೆಯಾಗಿತ್ತು. ಬಂದವರನ್ನೆಲ್ಲ ಕೂರಿಸಿ ಬಡಿಸುತ್ತಿದ್ದರು. ಉಣ್ಣಲು ಕೊಡುವ ಪ್ಲೇಟ್ಗಳೂ ವಿಶೇಷವಾಗಿದ್ದವು. ನಾನು ಹೋಗಿ ಯಾರೋ ವಿಐಪಿ ಪಕ್ಕದಲ್ಲಿ ಕೂತು, ಎಲ್ಲರ ಕಡೆ ಸುಮ್ಮನೆ ಕಣ್ಣಾಯಿಸಿದೆ. ಈಗ ಎದೆ ನಡುಕ ಶುರುವಾಯಿತು. ಅಲ್ಲಿ ಕೂತಿರುವ ಅಷ್ಟೂ ಮಂದಿ ತಮ್ಮ ಶರ್ಟ್ ಜೋಬಿನ ಮುಂದೆ ಅಗಲವಾದ ಗರಿಗರಿ ಬ್ಯಾಡ್ಜ್ ಹಾಕಿಕೊಂಡಿದ್ದುದರ ಜೊತೆಗೆ, ಅದು ಕಾಣಲೆಂಬಂತೆ ಮುಂದಕ್ಕೆ ಬಿಟ್ಟುಕೊಂಡಿದ್ದರು. ನನ್ನ ಜೇಬನ್ನು ನೋಡಿಕೊಂಡೆ… ಬೋಳು ಬೋಳು!
ಈ ವಿಡಿಯೊ ನೋಡಿದ್ದೀರಾ?: ಸೈನ್ಸ್ ಮೇಷ್ಟ್ರು (ವಿಡಿಯೊ) | ಅರಿಶಿಣದ ನೀರು ಮತ್ತು ನಿಂಬೆಹಣ್ಣಿನ ದೋಸ್ತಿ ರಹಸ್ಯ
ಸವಿಸವಿಯಾದ ಬಣ್ಣಬಣ್ಣದ ತಿನಿಸುಗಳು ಒಂದೊಂದಾಗಿ ಪ್ಲೇಟ್ ಮೇಲೆ ಬೀಳುತ್ತಿದ್ದರೂ, ನನ್ನ ಗಮನ ಆ ಕಡೆಯಿಂದ ಕುಶಲೋಪರಿ ವಿಚಾರಿಸುವ ನೆಪದಲ್ಲಿ ಬ್ಯಾಡ್ಜ್ ಚೆಕ್ ಮಾಡಿಕೊಂಡು ಬರುತ್ತಿದ್ದವರ ಕಡೆಗಿತ್ತು. ಬ್ಯಾಡ್ಜ್ ಇರಬೇಕಾದ ಜಾಗವನ್ನು ಕೃತಕವಾಗಿ ಕೈನಿಂದಲೇ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅದೇನೇನು ತಿನ್ನುತ್ತಿದ್ದೆನೋ ಗೊತ್ತಿಲ್ಲ… ಆತಂಕದಲ್ಲಿ ಯಾವುದೂ ರುಚಿಸಲೂ ಇಲ್ಲ. ಬ್ಯಾಡ್ಜ್ ಚೆಕ್ ಮಾಡಿಕೊಂಡು ಬರುತ್ತಿದ್ದವರು…
ಪುಸ್ತಕ: ಟ್ರಂಕು ತಟ್ಟೆ (ಅನುಭವ ಕಥನ) | ಲೇಖಕರು: ಗುರುಪ್ರಸಾದ್ ಕಂಟಲಗೆರೆ | ಪುಟಗಳ ಸಂಖ್ಯೆ: 130 | ಬೆಲೆ: 180 | ಪ್ರಕಾಶಕರು: ಚೈತನ್ಯ ಪ್ರಕಾಶನ, ತುಮಕೂರು | ಸಂಪರ್ಕ ಸಂಖ್ಯೆಗಳು: ಲೇಖಕರು - 9964521083, ಪ್ರಕಾಶಕರು - 9964076203
ಈದಿನ.ಕಾಮ್ ಬರಹಗಳ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ