HDK ‘ಚಾಟ್ ಬಾಂಬ್’ ಠುಸ್? ನೋಟಿಸ್ ಪಡೆಯಲು ಹಿಂದೇಟು; ನಿಜವಾಯ್ತಾ ‘AI ಸೃಷ್ಟಿ’ಯ ಅನುಮಾನ!

Date:

ಹಾಸನ ಜಿಲ್ಲಾಡಳಿತದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದ ವಾಟ್ಸ್ಯಾಪ್ ಚಾಟ್‌ಗಳ ಸತ್ಯಾಸತ್ಯತೆಯ ಕುರಿತು ಸೈಬರ್ ಕಮಾಂಡ್ ಸೆಂಟರ್ ಪೊಲೀಸರು ನೋಟಿಸ್ ಜಾರಿಗೊಳಿಸಿರುವುದು ಮತ್ತು ಅದನ್ನು ಪಡೆಯಲು ಕುಮಾರಸ್ವಾಮಿ ಹಿಂದೇಟು ಹಾಕಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

- Advertisement -

ಏನಿದು ವಿವಾದ? 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ನವೆಂಬರ್ 8ರಂದು ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಹಾಸನ ಜಿಲ್ಲಾಡಳಿತದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಹಾಗೂ ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಕಡತಗಳ ವಿಲೇವಾರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಸುಮಾರು ₹75 ಲಕ್ಷ ಲಂಚ ನೀಡಿದ್ದಾರೆ ಎಂದು ಕುಮಾರಸ್ವಾಮಿ ದೂರಿದ್ದರು.

ತಮ್ಮ ಆರೋಪಕ್ಕೆ ಪುಷ್ಟಿ ನೀಡಲು, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ (PA) ಎಚ್.ಡಿ. ಶಶಿಕಿರಣ್ ಮತ್ತು ಮಧ್ಯವರ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾದ 15 ಪುಟಗಳ ವಾಟ್ಸ್ಯಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಅವರು ಮಾಧ್ಯಮಗಳ ಮುಂದೆ ಪ್ರದರ್ಶಿಸಿ, ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ಕುಮಾರಸ್ವಾಮಿ ಅವರ ಈ ಆರೋಪದ ಬೆನ್ನಲ್ಲೇ, ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಸಚಿವ ಶಿವಲಿಂಗೇಗೌಡ ಅವರು ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. “ನನ್ನ ಹೆಸರು ಮತ್ತು ಫೋನ್ ನಂಬರ್ ಬಳಸಿಕೊಂಡು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ನಕಲಿ ವಾಟ್ಸ್ಯಾಪ್ ಚಾಟ್ ಸೃಷ್ಟಿಸಿ ತೇಜೋವಧೆ ಮಾಡಲಾಗುತ್ತಿದೆ” ಎಂದು ಡಿಸಿ ಆಪ್ತ ಸಹಾಯಕ ಶಶಿಕಿರಣ್ ಹಾಸನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 335 ಮತ್ತು 336(4) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸೈಬರ್ ಕಮಾಂಡ್ ಸೆಂಟರ್ ಪೊಲೀಸರು, ಮಂಗಳವಾರ (ನವೆಂಬರ್ 24) ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಿ, ಆ ವಾಟ್ಸ್ಯಾಪ್ ಚಾಟ್‌ಗಳ ಮೂಲ ಮತ್ತು ಅವು ಹೇಗೆ ಲಭ್ಯವಾದವು ಎಂಬುದರ ಕುರಿತು ಮಾಹಿತಿ ಕೇಳಿದ್ದಾರೆ.

ಸೈಬರ್ ಪೊಲೀಸರು ನೋಟಿಸ್ ನೀಡಲು ಮುಂದಾದಾಗ ಕುಮಾರಸ್ವಾಮಿ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಎಂ.ಎ. ಸಲೀಂ ಅವರಿಗೆ ಕರೆ ಮಾಡಿದ ಕುಮಾರಸ್ವಾಮಿ, “ರಾಜ್ಯದಲ್ಲಿ ಈವರೆಗೆ ಆರೋಪ ಮಾಡಿದ ಎಷ್ಟು ಜನರ ವಿರುದ್ಧ ಪ್ರಕರಣ ದಾಖಲಿಸಿ ಈ ರೀತಿ ನೋಟಿಸ್ ನೀಡಿದ್ದೀರಿ?” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.  “ನಾನು ಯಾವುದೇ ವೈಯಕ್ತಿಕ ಆರೋಪ ಮಾಡಿಲ್ಲ, ನನಗೆ ಬಂದ ದಾಖಲೆಗಳನ್ನು ತನಿಖೆ ಮಾಡಿ ಎಂದಷ್ಟೇ ಕೇಳಿದ್ದೇನೆ. ನನಗೆ ನೋಟಿಸ್ ನೀಡಲು ಇವರು ಯಾರು? ನನ್ನನ್ನು ಪ್ರಶ್ನಿಸಲು ಇವರಿಗೆ ಏನು ಅಧಿಕಾರವಿದೆ?” ಎಂದು ಪ್ರಶ್ನಿಸಿದ್ದಾರೆ.

“ನಾನು ದಾಖಲೆ ಬಿಡುಗಡೆ ಮಾಡಿದ ದಿನವೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಸಿಎಂ ಅವರೇ ಕ್ಲೀನ್ ಚಿಟ್ ಕೊಟ್ಟ ಮೇಲೆ ಪೊಲೀಸರು ನನ್ನಿಂದ ಯಾವ ಮಾಹಿತಿ ನಿರೀಕ್ಷಿಸುತ್ತಿದ್ದಾರೆ?” ಎಂದು ವಾಗ್ದಾಳಿ ನಡೆಸಿದ್ದಾರೆ.

“ನನಗೆ ನೋಟಿಸ್ ನೀಡುವ ಬದಲು ಡಿಸಿ ಆಪ್ತ ಸಹಾಯಕ ಶಶಿಕಿರಣ್ ಅವರ ಮೊಬೈಲ್ ಫೋನ್ ಜಪ್ತಿ ಮಾಡಿ ತನಿಖೆ ನಡೆಸಲಿ, ಆಗ ಸತ್ಯಾಂಶ ಹೊರಬರುತ್ತದೆ” ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಎರಡು ಪ್ರಮುಖ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಹಿಂದೆಯೂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ‘ಪೆನ್ ಡ್ರೈವ್ ಬಾಂಬ್’ ಸೇರಿದಂತೆ ಹಲವು ದಾಖಲೆಗಳಿವೆ ಎಂದು ಆರೋಪಿಸಿ, ನಂತರ ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ ಎಂಬ ಟೀಕೆಯನ್ನು ಆಡಳಿತಾರೂಢ ಕಾಂಗ್ರೆಸ್ ನಾಯಕರು ಪದೇ ಪದೇ ಮಾಡುತ್ತಲೇ ಬಂದಿದ್ದಾರೆ. ಇದೀಗ ಹಾಸನ ಪ್ರಕರಣದಲ್ಲೂ ದಾಖಲೆ ಬಿಡುಗಡೆ ಮಾಡಿದವರೇ ಪೊಲೀಸ್ ವಿಚಾರಣೆಗೆ ಮತ್ತು ನೋಟಿಸ್ ಪಡೆಯಲು ಹಿಂದೇಟು ಹಾಕುತ್ತಿರುವುದು, ವಿರೋಧಿಗಳಿಗೆ “ಕುಮಾರಸ್ವಾಮಿ ಸೂಕ್ತ ಆಧಾರವಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ” ಎಂದು ಟೀಕಿಸಲು ಹೊಸ ಅಸ್ತ್ರ ನೀಡಿದಂತಾಗಿದೆ.

 ಸಚಿವ ಶಿವಲಿಂಗೇಗೌಡ ಮತ್ತು ಡಿಸಿ ಪಿಎ ಶಶಿಕಿರಣ್ ಅವರು ಈ ವಾಟ್ಸ್ಯಾಪ್ ಚಾಟ್‌ಗಳನ್ನು AI  ಅಥವಾ ChatGPT ಯಂತಹ ತಂತ್ರಜ್ಞಾನ ಬಳಸಿ ನಕಲಿಯಾಗಿ ಸೃಷ್ಟಿಸಲಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ನಕಲಿ ವಾಟ್ಸ್ಯಾಪ್ ಸ್ಕ್ರೀನ್‌ಶಾಟ್‌ಗಳನ್ನು ಸೃಷ್ಟಿಸುವುದು ಸುಲಭವಾಗಿರುವುದರಿಂದ, ಸೈಬರ್ ಪೊಲೀಸರ ತನಿಖೆಯು ಈ ಚಾಟ್‌ಗಳ ಮೆಟಾಡೇಟಾ ಮತ್ತು ಮೂಲವನ್ನು ಪತ್ತೆಹಚ್ಚುವತ್ತ ಕೇಂದ್ರೀಕೃತವಾಗಿದೆ.

ಈ ವಿವಾದದ ನಡುವೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ನೀಡಿದ ಪ್ರತಿಕ್ರಿಯೆ ಕೂಡ ಗಮನ ಸೆಳೆದಿತ್ತು. ದಿನಕ್ಕೆ ₹60,000 ಖರ್ಚು ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದ ಅವರು, “ನಾನೇನು ದಿನಕ್ಕೆ 60 ಸಾವಿರ ಖರ್ಚು ಮಾಡಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ವಾಸವಿದ್ದೇನೆಯೇ?” ಎಂದು ಪ್ರಶ್ನಿಸಿದ್ದರು. 2018-19ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಫೈವ್ ಸ್ಟಾರ್ ಹೋಟೆಲ್‌ನಿಂದ ಆಡಳಿತ ನಡೆಸಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿ ಈ ಮಾತನ್ನ ಹೇಳಿದ್ದರು. ಅಲ್ಲದೆ, “ಪ್ರತಿಯೊಂದು ಧ್ವನಿಗೂ ಉತ್ತರಿಸುವ ಅಗತ್ಯವಿಲ್ಲ” ಎಂಬ ಅಡಿಬರಹದೊಂದಿಗೆ ಸಿಂಹದ ಚಿತ್ರವನ್ನು ವಾಟ್ಸ್ಯಾಪ್ ಸ್ಟೇಟಸ್ ಹಾಕಿಕೊಂಡು ತಿರುಗೇಟು ನೀಡಿದ್ದರು.

ಪ್ರಸ್ತುತ ಈ ಪ್ರಕರಣವು ಎರಡು ಭಿನ್ನ ದಿಕ್ಕುಗಳಲ್ಲಿ ಸಾಗುತ್ತಿದೆ. ಒಂದು, ಕುಮಾರಸ್ವಾಮಿ ಆರೋಪಿಸಿರುವಂತೆ ಜಿಲ್ಲಾಡಳಿತದಲ್ಲಿ ನಿಜವಾಗಿಯೂ ಭ್ರಷ್ಟಾಚಾರ ನಡೆದಿದೆಯೇ? ಎರಡನೆಯದು, ಅವರು ಪ್ರದರ್ಶಿಸಿದ ವಾಟ್ಸ್ಯಾಪ್ ಚಾಟ್‌ಗಳು ಅಸಲಿಯೇ ಅಥವಾ AI ತಂತ್ರಜ್ಞಾನ ಬಳಸಿ ಸೃಷ್ಟಿಸಿದ ನಕಲಿ ದಾಖಲೆಗಳೇ?

ಕಾನೂನು ಪ್ರಕಾರ, ಸಾರ್ವಜನಿಕವಾಗಿ ಗಂಭೀರ ಆರೋಪ ಮಾಡಿದಾಗ ಅದಕ್ಕೆ ಸಂಬಂಧಿಸಿದ ಪ್ರಾಥಮಿಕ ಸಾಕ್ಷ್ಯಗಳ ಮೂಲವನ್ನು ತನಿಖಾ ಸಂಸ್ಥೆಗಳಿಗೆ ನೀಡುವುದು ದೂರುದಾರರ ಅಥವಾ ಆರೋಪ ಮಾಡಿದವರ ಜವಾಬ್ದಾರಿಯಾಗಿರುತ್ತದೆ. ಕುಮಾರಸ್ವಾಮಿ ಪೊಲೀಸರ ನೋಟಿಸ್‌ಗೆ ಯಾವ ರೀತಿ ಕಾನೂನುಬದ್ಧ ಉತ್ತರ ನೀಡುತ್ತಾರೆ ಮತ್ತು ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಲ್ಲಿ ಈ ಚಾಟ್‌ಗಳ ಅಸಲಿಯತ್ತು ಏನೆಂದು ಸಾಬೀತಾಗುತ್ತದೆ ಎಂಬುದರ ಮೇಲೆ ಈ ಪ್ರಕರಣದ ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬಿದರಿ ಕಲೆ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ

ವಿಶ್ವದ ಶ್ರೀಮಂತ ಕಲೆಗಳಲ್ಲಿ ಒಂದಾಗಿರುವ ಬಿದರಿ ಕಲೆ ಬೀದರ್‌ನ ಹೆಮ್ಮೆಯಾಗಿದೆ. ಕಲೆ,...

ರಾಜ್ಯ ಹೈಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಎಂ.ಎಸ್ ರಾಮಚಂದ್ರ ರಾವ್ ನೇಮಕಕ್ಕೆ ಶಿಫಾರಸು!

ಕರ್ನಾಟಕ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರನ್ನು ಜಾರ್ಖಂಡ್...

ಬಾಗಲಕೋಟೆ |ಬಸವ–ಅಂಬೇಡ್ಕರ್ ಚಿಂತನೆಗೆ ರಾಜಕೀಯ ಶಕ್ತಿ ತುಂಬಲು ‘ಬಸವ ಭೀಮ ಸಂಗಮ’

ಬಸವಣ್ಣನವರ ಸಮಾನತೆಯ ಆಶಯ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಿಕ ಚಿಂತನೆಗಳನ್ನು...

ಬೆಳಗಾವಿ |ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯಲ್ಲಿ ಅನ್ಯಾಯ: ಪ್ರತ್ಯೇಕ ರಾಜ್ಯದ ಕೂಗು ತಪ್ಪಲ್ಲ ಎಂದ ಬಾಲಚಂದ್ರ ಜಾರಕಿಹೊಳಿ!

ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಆಡಳಿತ ಮತ್ತು ಅಭಿವೃದ್ಧಿಯಲ್ಲಿ...