ವಿಶ್ವದ ಶ್ರೀಮಂತ ಕಲೆಗಳಲ್ಲಿ ಒಂದಾಗಿರುವ ಬಿದರಿ ಕಲೆ ಬೀದರ್ನ ಹೆಮ್ಮೆಯಾಗಿದೆ. ಕಲೆ, ಸಂಸ್ಕೃತಿ ಹಾಗೂ ಪರಂಪರೆ ನಮ್ಮ ಭವ್ಯ ಇತಿಹಾಸವನ್ನು ಪ್ರತಿಬಿಂಬಿಸುತ್ತವೆ. ಅವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಹೇಳಿದರು.
ನಗರದ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ಸೋಮವಾರ ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಬಸವಕಲ್ಯಾಣದ ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ‘ಬಿದರಿ ಕಲೆ, ಬೀದರ್ನ ಕಲೆ ಹಾಗೂ ವಾಸ್ತುಶಿಲ್ಪ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಕಲ್ಯಾಣದ ಸರ್ಕಾರಿ ವಸ್ತು ಸಂಗ್ರಹಾಲಯದ ಪ್ರಭಾರ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಮಾತನಾಡಿ, “ಪ್ರಸ್ತುತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಕಷ್ಟು ಕೋರ್ಸ್ಗಳ ಅವಕಾಶಗಳಿವೆ. ಒಂದೇ ಕೋರ್ಸ್ಗೆ ಸೀಮಿತವಾಗದೆ, ತಮ್ಮ ಆಸಕ್ತಿ ಮತ್ತು ಭವಿಷ್ಯಕ್ಕೆ ಪೂರಕವಾದ ಸೂಕ್ತ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಿ.ಬಿ.ದೇವರಾಜು ಮಾತನಾಡಿ, “ಬೀದರ್ ಕೋಟೆ, ಮುಹಮ್ಮದ್ ಗವಾನ್ ಮದರಸಾ, ಅಷ್ಟೂರಿನ ಗುಮ್ಮಟಗಳು ಹಾಗೂ ಚೌಖಂಡಿ ಸೇರಿದಂತೆ ಜಿಲ್ಲೆಯ ಹಲವು ಸ್ಮಾರಕಗಳು ಐತಿಹಾಸಿಕ ಮಹತ್ವ ಹೊಂದಿವೆ. ಇವು ನಮ್ಮ ನಾಡಿನ ಶ್ರೀಮಂತ ಇತಿಹಾಸ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಸಾರುತ್ತವೆ” ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿ, “ಬಿದರಿ ಕಲೆಗೆ ದೇಶ-ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ, ಈ ಕಲೆಯನ್ನು ನಂಬಿಕೊಂಡಿರುವ ಕಲಾವಿದರ ಬದುಕು ಶೋಚನೀಯವಾಗಿದೆ. ಬಿದರಿ ಕಲೆಯ ಉಳಿವು ಹಾಗೂ ಕಲಾವಿದರ ಜೀವನೋಪಾಯಕ್ಕಾಗಿ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಅಗತ್ಯ ನೆರವು ನೀಡಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಔರಾದ್ | ಆಂಗ್ಲ ವ್ಯಾಮೋಹದಿಂದ ಕನ್ನಡಕ್ಕೆ ಹಿನ್ನಡೆ
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದೇವೇಂದ್ರ, ಡಾ. ಪಂಡಿತ, ಶ್ರೀಲತಾ, ಶೃತಿ, ಸುಧಾ ಮುದ್ದಾ, ಶಶಿಕಾಂತ ಮತ್ತಿತರರು ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕ ಬಸವರಾಜ ಬಿರಾದಾರ ನಿರೂಪಿಸಿದರು. ಈಶ್ವರ ರೆಡ್ಡಿ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಸಂಗಪ್ಪ ತೌಡಿ ವಂದಿಸಿದರು.



