ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಸರ್ಕಾರಿ ನಿವಾಸದ ಗೃಹಪ್ರವೇಶ ಔತಣಕೂಟದಲ್ಲಿ ಬಿಜೆಪಿ ಶಾಸಕರು ಪಾಲ್ಗೊಂಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೂಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ಪಕ್ಷದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತಿರುಗೇಟು ನೀಡಿದ್ದಾರೆ
ನವೆಂಬರ್ 19ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ನೂತನ ಅಧಿಕೃತ ನಿವಾಸವಾದ ‘ಗಂಗಾ’ದಲ್ಲಿ ಗೃಹಪ್ರವೇಶದ ಅಂಗವಾಗಿ ಪಕ್ಷಾತೀತ ಔತಣಕೂಟವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ಗಾಲಿ ಜನಾರ್ದನ ರೆಡ್ಡಿ, ಎಸ್.ಆರ್. ವಿಶ್ವನಾಥ್, ಕೆ. ಗೋಪಾಲಯ್ಯ, ಎಂ. ಕೃಷ್ಣಪ್ಪ ಹಾಗೂ ಎಲ್.ಎ. ರವಿ ಸುಬ್ರಹ್ಮಣ್ಯ ಸೇರಿದಂತೆ ಹಲವು ಬಿಜೆಪಿ ಶಾಸಕರು ಹಾಜರಾಗಿದ್ದರು. ಆದರೆ, ‘ತಮ್ಮ ಪಕ್ಷದ ಶಾಸಕರು ಮುಖ್ಯಮಂತ್ರಿಗಳ ಔತಣಕೂಟದಲ್ಲಿ ಭಾಗಿಯಾಗಿರುವುದನ್ನು ವೈಯಕ್ತಿಕವಾಗಿ ಒಪ್ಪುವುದಿಲ್ಲ’ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ ಹೊರಹಾಕಿದ್ದರು.
ವಿಜಯೇಂದ್ರ ಅವರ ಈ ಅಸಮಾಧಾನಕ್ಕೆ ಕೊಪ್ಪಳದ ಕಾರಟಗಿಯಲ್ಲಿ ಪ್ರತಿಕ್ರಿಯಿಸಿರುವ ಜನಾರ್ದನ ರೆಡ್ಡಿ, “ಮುಖ್ಯಮಂತ್ರಿಗಳ ಔತಣಕೂಟಕ್ಕೆ ಬಿಜೆಪಿ ಶಾಸಕರು ಹೋಗಬಾರದು ಎಂಬ ನಿರ್ಧಾರವಿದ್ದರೆ ರಾಜ್ಯಾಧ್ಯಕ್ಷರು ಈ ಮೊದಲೇ ಸ್ಪಷ್ಟ ಸೂಚನೆ ನೀಡಬೇಕಿತ್ತು. ಮೊದಲೇ ತಿಳಿಸಿದ್ದರೆ ನಮ್ಮಲ್ಲಿ ಯಾರೂ ಆ ಕಾರ್ಯಕ್ರಮಕ್ಕೆ ಹೋಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಮುಂದುವರೆದು, “ತಾವು ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಗೃಹಪ್ರವೇಶ ಕಾರ್ಯಕ್ರಮಕ್ಕೆ ಒಬ್ಬ ಶಾಸಕನಾಗಿ ಬಹಿರಂಗವಾಗಿಯೇ ಹೋಗಿದ್ದೇವೆಯೇ ಹೊರತು, ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ನಾವು ಬೇರೆಯವರಂತೆ ಹಿಂದಿನ ಬಾಗಿಲಿನಿಂದ ಅಥವಾ ಕತ್ತಲಲ್ಲಿ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿಯಲ್ಲ, ಬದಲಾಗಿ ಎಲ್ಲವನ್ನೂ ನೇರವಾಗಿ ಮಾಡುವ ರಾಜಕಾರಣಿ” ಎಂದು ಖಾರವಾಗಿ ನುಡಿದಿದ್ದಾರೆ.


