ಬಾಲ್ಯವಿವಾಹ ತಡೆಗೆ ರಾಜ್ಯ ಸರ್ಕಾರ ಮತ್ತು ವಿವಿಧ ಇಲಾಖೆಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬರೋಬ್ಬರಿ 1,712 ಬಾಲ್ಯವಿವಾಹ ಪ್ರಕರಣಗಳು ವಿಚಾರಣೆಗಾಗಿ ಬಾಕಿ ಉಳಿದಿವೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಬಾಲ್ಯವಿವಾಹ ನಿರ್ಮೂಲನೆ ಮತ್ತು ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಹಾಗೂ ದುರ್ಬಳಕೆ ತಡೆ ಕುರಿತು ರಾಜ್ಯಮಟ್ಟದ ಸಮಾಲೋಚನಾ ಸಭೆ ನಡೆದಿದೆ. ಈ ಸಭೆಯಲ್ಲಿ ಬಾಲ್ಯವಿವಾಹದ ಹಿಂದಿನ ಕಾರಣಗಳು ಮತ್ತು ಮುನ್ಸೂಚನೆಗಳ ಬಗ್ಗೆ ವಿವರಿಸಿದ ನ್ಯಾಯಮೂರ್ತಿಗಳು, “ಬಾಲ್ಯವಿವಾಹ ಎನ್ನುವುದು ಏಕಾಏಕಿ ನಡೆಯುವ ಘಟನೆಯಲ್ಲ, ಬದಲಾಗಿ ಅದಕ್ಕೂ ಮುನ್ನ ಹಲವು ಸೂಚನೆಗಳು ಕಾಣಿಸಿಕೊಳ್ಳುತ್ತವೆ” ಎಂದರು.
“ಮಕ್ಕಳು ಶಾಲೆ ತೊರೆಯುವುದು, ಕುಟುಂಬಗಳ ಆರ್ಥಿಕ ಸಂಕಷ್ಟ ಹಾಗೂ ಮಕ್ಕಳ ಶಿಕ್ಷಣಕ್ಕಿಂತ ಸಾಮಾಜಿಕ ನಿರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಇಂತಹ ಘಟನೆಗಳಿಗೆ ಮುಖ್ಯ ಕಾರಣವಾಗುತ್ತಿವೆ. ಇಂತಹ ಮುನ್ಸೂಚನೆಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ರೀತಿಯಲ್ಲಿ ಮಧ್ಯಪ್ರವೇಶಿಸಿದರೆ ಬಾಲ್ಯವಿವಾಹವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷೆ ಅನು ಶಿವರಾಮನ್ ಅವರು, “ಕೇವಲ ಕಾನೂನು ಜಾರಿಗೊಳಿಸುವುದರಿಂದ ಈ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.
“ವಿಶೇಷವಾಗಿ, ಗ್ರಾಮೀಣ ಮಟ್ಟದಲ್ಲಿ ಬಾಲ್ಯವಿವಾಹದ ವಿರುದ್ಧ ನಿರಂತರ ಜನಜಾಗೃತಿ ಮೂಡಿಸುವುದು ಮತ್ತು ಸಮುದಾಯದ ಸಹಭಾಗಿತ್ವ ಪಡೆಯುವುದು ಅತ್ಯಂತ ಮುಖ್ಯವಾಗಿದೆ. ತಲೆಮಾರುಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಎಂಬ ನೆಪದಲ್ಲಿ ಬಾಲ್ಯವಿವಾಹವನ್ನು ಸಮರ್ಥಿಸಿಕೊಳ್ಳುವ ಮನೋಭಾವ ಬದಲಾಗಬೇಕು” ಎಂದು ಅವರು ಒತ್ತಿಹೇಳಿದರು.
ಇದರ ಜೊತೆಗೆ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಆನ್‌ಲೈನ್ ಲೈಂಗಿಕ ಶೋಷಣೆಯ ಅಪಾಯವೂ ಹೆಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಗಂಭೀರ ಕಳವಳ ವ್ಯಕ್ತವಾಯಿತು. ಮಕ್ಕಳ ಸುರಕ್ಷತೆ, ಶಿಕ್ಷಣ ಮತ್ತು ಹಕ್ಕುಗಳ ರಕ್ಷಣೆಗಾಗಿ ವಿವಿಧ ಸರ್ಕಾರಿ ಇಲಾಖೆಗಳು, ಕಾನೂನು ಸೇವಾ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಘಟನೆಗಳು ಪರಸ್ಪರ ಸಮನ್ವಯದಿಂದ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಮೂರ್ತಿಗಳು ಕರೆ ನೀಡಿದರು.


