ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ‘ಚಿನ್ನ ಖರೀದಿ ಕಡಿತ’ದ ಕರೆಗೆ ದೇಶದ ಜನತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗೆಯೇ ಈ ಜನಸ್ಪಂದನೆಯನ್ನು 1960ರ ದಶಕದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನೀಡಿದ್ದ ‘ಒಂದು ಹೊತ್ತಿನ ಊಟ ತ್ಯಜಿಸಿ’ ಕರೆಗೆ ತಾವೇ ಹೋಲಿಸಿಕೊಂಡಿದ್ದಾರೆ. ಸದ್ಯ ಪ್ರಧಾನಿಯವರ ಈ ಹೇಳಿಕೆ ಈಗ ರಾಷ್ಟ್ರಮಟ್ಟದಲ್ಲಿ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶನಿವಾರ (ನವೆಂಬರ್ 21) ಉತ್ತರ ಪ್ರದೇಶದ ಲಕ್ನೋದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಡೆದ 5ನೇ ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವ (ಕೌಶಲ್ ದೀಕ್ಷಾಂತ್ ಸಮಾರೋಹ) ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಒಂದು ವರ್ಷದ ಹಿಂದೆ, ಅನಿವಾರ್ಯವಲ್ಲದಿದ್ದರೆ ಒಂದು ವರ್ಷಗಳ ಕಾಲ ಚಿನ್ನ ಖರೀದಿಸಬೇಡಿ ಎಂದು ನಾನು ದೇಶವಾಸಿಗಳಲ್ಲಿ ಮನವಿ ಮಾಡಿದ್ದೆ. ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರು ದೇಶವಾಸಿಗಳಿಗೆ ಒಂದು ಹೊತ್ತಿನ ಊಟ ತ್ಯಜಿಸುವಂತೆ ಕರೆ ನೀಡಿದಾಗ ದೇಶವು ಹೇಗೆ ಅವರ ಮಾತಿಗೆ ಬೆಲೆ ಕೊಟ್ಟಿತ್ತೋ, ಇಂದಿಗೂ ನನ್ನ ದೇಶವು ಅದೇ ಗುಣವನ್ನು ಉಳಿಸಿಕೊಂಡಿದೆ ಎಂಬುದು ನನಗೆ ಸಂತೋಷ ತಂದಿದೆ,” ಎಂದು ಹೇಳಿದ್ದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಇಟಲಿ ಪ್ರವಾಸ; ಪ್ರಧಾನಿ ಸ್ಥಾನದ ಘನತೆ ಕಳೆದ ಮೋದಿ
ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿ ದೇಶದ ವಿದೇಶಿ ವಿನಿಮಯ ಮೀಸಲಿನ ಮೇಲೆ ಒತ್ತಡ ಬಿದ್ದಿದ್ದ ಸಂದರ್ಭದಲ್ಲಿ (ಮೇ 2026ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ) ಮೋದಿ ಅವರು ಈ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 6 ರಿಂದ ಶೇ. 15 ಕ್ಕೆ ಏರಿಸಿತ್ತು. ಮೇ ತಿಂಗಳಲ್ಲಿ ಮೋದಿ ಈ ಕರೆ ನೀಡಿದಾಗಲೇ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರ ನಡೆದಿತ್ತು.
ಇನ್ನು ಭಾರತೀಯ ಗ್ರಾಹಕರ ಬೇಡಿಕೆ ಕಡಿಮೆಯಾದ ಕಾರಣಕ್ಕಿಂತ ಹೆಚ್ಚಾಗಿ ಅಮೆರಿಕದ ಬಡ್ಡಿದರ ಏರಿಕೆಯ ನಿರೀಕ್ಷೆ, ಬಾಂಡ್ ಯೀಲ್ಡ್ ಹೆಚ್ಚಳ, ಡಾಲರ್ ಮೌಲ್ಯ ಬಲವರ್ಧನೆ ಮತ್ತು ಜಾಗತಿಕ ಹೂಡಿಕೆದಾರರು ಲಾಭ ಗಳಿಸಲು ಚಿನ್ನವನ್ನು ಮಾರಾಟ ಮಾಡಿದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮೇ ತಿಂಗಳಲ್ಲಿ ಪ್ರತಿ 10 ಗ್ರಾಂಗೆ ಸುಮಾರು ₹1.52 ಲಕ್ಷದಷ್ಟಿದ್ದ ಎಂಸಿಎಕ್ಸ್ ಚಿನ್ನದ ದರ, ಶುಕ್ರವಾರದ ವೇಳೆಗೆ ಸುಮಾರು ₹1.22 ಲಕ್ಷಕ್ಕೆ ಇಳಿದಿದೆ. ಅಂದರೆ ಸುಮಾರು ಶೇ. 20 ರಷ್ಟು ಕುಸಿತ ಕಂಡಿದೆ. ಆದರೆ, ಚಿನ್ನದ ಬೆಲೆ ಗಗನಕ್ಕೇರಿದ್ದರಿಂದಲೇ ಗ್ರಾಹಕರು ಖರೀದಿ ಕಡಿಮೆ ಮಾಡಿದ್ದಾರೆಯೇ ಹೊರತು ಕೇವಲ ಸ್ವಯಂನಿಯಂತ್ರಣದಿಂದಲ್ಲ ಎಂದು ವಿಶ್ವ ಚಿನ್ನದ ಮಂಡಳಿ (WGC) ದತ್ತಾಂಶಗಳು ಹೇಳುತ್ತವೆ. ಅಂದರೆ ಪ್ರಧಾನಿ ಮೋದಿ ಹೇಳಿದ ಕಾರಣಕ್ಕಾಗಿ ಜನರು ಚಿನ್ನ ಖರೀದಿ ಕಡಿಮೆ ಮಾಡಿರುವುದೇನಲ್ಲ!
ಇದು ಸಲಹೆಯಲ್ಲ, ಸರ್ಕಾರದ ವೈಫಲ್ಯದ ಸಾಕ್ಷಿ!
ಪ್ರಧಾನಿ ನರೇಂದ್ರ ಮೋದಿ ಅವರ ‘ಚಿನ್ನ ಖರೀದಿ ಕಡಿತ’ದ ಕರೆ ಮತ್ತು ಅದನ್ನು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಐತಿಹಾಸಿಕ ‘ಒಂದು ಹೊತ್ತಿನ ಊಟ ತ್ಯಜಿಸಿ’ ಕರೆಗೆ ಹೋಲಿಸಿರುವ ಕುರಿತು ವಿರೋಧ ಪಕ್ಷಗಳು, ಆರ್ಥಿಕ ವಿಶ್ಲೇಷಕರು ಹಾಗೂ ಆಭರಣ ವ್ಯಾಪಾರಿಗಳ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿವೆ.
ಇದನ್ನೂ ಓದಿ: ಚುನಾವಣೆ ಮುಗಿದ ಮೇಲಷ್ಟೇ ದೇಶದ ಬಿಕ್ಕಟ್ಟು ನೆನಪಾಯಿತೇ? ಪ್ರಧಾನಿಗೆ ವಿಪಕ್ಷಗಳ ತರಾಟೆ
ಮೇ 2026ರಲ್ಲಿ ಪ್ರಧಾನಿ ಮೋದಿ ಅವರು ವಿದೇಶಿ ವಿನಿಮಯ ಉಳಿಸಲು ‘ಚಿನ್ನ ಖರೀದಿಸಬೇಡಿ, ವಿದೇಶ ಪ್ರವಾಸ ಮಾಡಬೇಡಿ, ಪೆಟ್ರೋಲ್ ಕಡಿಮೆ ಬಳಸಿ, ಮನೆಯಿಂದಲೇ ಕೆಲಸ ಮಾಡಿ (WFH)’ ಎಂದು ಕರೆ ನೀಡಿದಾಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದರು. “ಇವು ಉಪದೇಶಗಳಲ್ಲ, ಬದಲಾಗಿ 12 ವರ್ಷಗಳ ಆಡಳಿತ ವೈಫಲ್ಯಕ್ಕೆ ಸಾಕ್ಷಿಗಳು. ದೇಶವನ್ನು ಇಂತಹ ಪರಿಸ್ಥಿತಿಗೆ ತಂದು ನಿಲ್ಲಿಸಲಾಗಿದೆ ಎಂದರೆ ಜನರು ಏನು ಖರೀದಿಸಬೇಕು, ಏನು ಖರೀದಿಸಬಾರದು ಎಂಬುದನ್ನೂ ಸರ್ಕಾರವೇ ಹೇಳುವಂತಾಗಿದೆ” ಟೀಕಿಸಿದ್ದರು. ಸರ್ಕಾರವು ತನ್ನ ಆರ್ಥಿಕ ನೀತಿಗಳ ವೈಫಲ್ಯ ಮತ್ತು ಇಂಧನ ಭದ್ರತೆಯನ್ನು ಕಾಪಾಡುವಲ್ಲಿನ ಅಸಮರ್ಥತೆಯನ್ನು ಮರೆಮಾಚಲು, ಹೊಣೆಗಾರಿಕೆಯನ್ನು ಸಾಮಾನ್ಯ ಜನರ ಹೆಗಲ ಮೇಲೆ ವರ್ಗಾಯಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪ್ರಧಾನಿಯವರ ಕರೆಯ ಸಮಯವನ್ನು ಪ್ರಶ್ನಿಸಿದ್ದರು. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳು ಮುಗಿದ ತಕ್ಷಣ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ನೆನಪಾಗಿದೆ. ಇಷ್ಟೊಂದು ನಿರ್ಬಂಧಗಳನ್ನು ಹೇರಬೇಕಾದ ಪರಿಸ್ಥಿತಿ ಬಂದರೆ, ‘5 ಟ್ರಿಲಿಯನ್ ಡಾಲರ್ ಆರ್ಥಿಕತೆ’ಯ ಕನಸು ಹೇಗೆ ನನಸಾಗುತ್ತದೆ? ಸರ್ಕಾರದ ಕೈಯಿಂದ ನಿಯಂತ್ರಣ ತಪ್ಪಿದೆ ಎಂದು ವಾಗ್ದಾಳಿ ನಡೆಸಿದ್ದರು.
ಚಿನ್ನದ ಬೆಲೆ ಇಳಿಕೆಗೆ ‘ಮೋದಿ ಕರೆ’ ಕಾರಣವಲ್ಲ: ಆರ್ಥಿಕ ತಜ್ಞರ ವಾದ
ನವೆಂಬರ್ 21ರಂದು ಲಕ್ನೋದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ನನ್ನ ಮಾತು ಕೇಳಿ ಜನ ಚಿನ್ನ ಖರೀದಿಸುವುದನ್ನು ಕಡಿಮೆ ಮಾಡಿದ್ದರಿಂದಲೇ ಚಿನ್ನದ ಬೆಲೆ ಇಳಿಯಿತು” ಎಂದು ಹೇಳಿಕೊಂಡಿರುವುದನ್ನು ಆರ್ಥಿಕ ತಜ್ಞರು ಅಲ್ಲಗಳೆದಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸುಮಾರು ಶೇ. 25 ರಷ್ಟು ಕುಸಿಯಲು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆಯ ನಿರೀಕ್ಷೆ, ಬಾಂಡ್ ಯೀಲ್ಡ್ ಹೆಚ್ಚಳ ಮತ್ತು ಡಾಲರ್ ಮೌಲ್ಯ ಬಲಗೊಂಡಿರುವುದು ಕಾರಣವೇ ಹೊರತು ಭಾರತೀಯರ ಬೇಡಿಕೆ ಕಡಿಮೆಯಾಗಿರುವುದು ಮಾತ್ರ ಕಾರಣವಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಸ್ಪಷ್ಟಪಡಿಸಿದ್ದಾರೆ.
ವಿಶ್ವ ಚಿನ್ನದ ಮಂಡಳಿ (World Gold Council) ದತ್ತಾಂಶಗಳ ಪ್ರಕಾರ, ಭಾರತದಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ (10 ಗ್ರಾಂಗೆ ₹1.52 ಲಕ್ಷದವರೆಗೆ) ಏರಿದ್ದರಿಂದ ಜನರಿಗೆ ಖರೀದಿಸಲು ಸಾಧ್ಯವಾಗದೆ ಬೇಡಿಕೆ ಕಡಿಮೆಯಾಯಿತೇ ಹೊರತು, ಕೇವಲ ಪ್ರಧಾನಿಯವರ ಮನವಿಗೆ ಓಗೊಟ್ಟು ಜನ ಖರೀದಿ ನಿಲ್ಲಿಸಲಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಅಲ್ಲದೆ, ಸರ್ಕಾರವು ಆಮದು ಸುಂಕವನ್ನು ಶೇ. 6 ರಿಂದ ಶೇ. 15 ಕ್ಕೆ ಏರಿಸಿದ್ದು ಕೂಡ ಆಮದು ಇಳಿಕೆಗೆ ಪ್ರಮುಖ ಕಾರಣವಾಗಿದೆ.
1965ರ ಯುದ್ಧ ಮತ್ತು ತೀವ್ರ ಆಹಾರ ಧಾನ್ಯಗಳ ಕೊರತೆಯ ಸಂದರ್ಭದಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಹಸಿವು ನೀಗಿಸಲು ‘ಒಂದು ಹೊತ್ತಿನ ಊಟ ತ್ಯಜಿಸಿ’ ಎಂದು ಕರೆ ನೀಡಿದ್ದರು. ಆ ಐತಿಹಾಸಿಕ ತ್ಯಾಗದ ಕರೆಯನ್ನು ಇಂದಿನ ಆರ್ಥಿಕ ನೀತಿಗಳ ನಿರ್ವಹಣೆಯ ವೈಫಲ್ಯದಿಂದ ಉಂಟಾದ ವಿದೇಶಿ ವಿನಿಮಯ ಕೊರತೆ ಮತ್ತು ಚಿನ್ನ ಖರೀದಿಯಂತಹ ವಿಷಯಕ್ಕೆ ಹೋಲಿಸಿರುವುದು ಸೂಕ್ತವಲ್ಲ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ವ್ಯಕ್ತವಾಗಿವೆ.



