ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನಡೆಸಿದ ನರಮೇಧಕ್ಕೆ ಇಸ್ರೇಲ್ ಶಸ್ತ್ರಾಸ್ತ್ರಗಳನ್ನು ಪೂರೈಸಿ, ತರಬೇತಿಯನ್ನೂ ನೀಡಿತ್ತು ಎಂದು ಮ್ಯಾನ್ಮಾರ್‌ನ ಖ್ಯಾತ ಹೋರಾಟಗಾರ, ಶಿಕ್ಷಣತಜ್ಞ ಮೌಂಗ್ ಝರ್ನಿ ಗಂಭೀರ ಆರೋಪ ಮಾಡಿದ್ದಾರೆ.
ಪ್ರಸ್ತುತ ದೇಶ ತೊರೆದು ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಝರ್ನಿ ಅವರು, ತಮ್ಮ ದೇಶದ ಮಿಲಿಟರಿ ಆಡಳಿತಕ್ಕೆ ಚೀನಾ, ರಷ್ಯಾ ಹಾಗೂ ಭಾರತ ಕೂಡ ಶಸ್ತ್ರಾಸ್ತ್ರ ಮತ್ತು ರಾಜತಾಂತ್ರಿಕ ಬೆಂಬಲ ನೀಡಿವೆ ಎಂದು ಉಲ್ಲೇಖಿಸಿದ್ದಾರೆ.
ಪ್ರಸ್ತುತ 10 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ತಮ್ಮ ತಾಯ್ನಾಡಿನಿಂದ ಹೊರಗೆ ನಿರಾಶ್ರಿತರಾಗಿ ಬದುಕುತ್ತಿದ್ದು, ಅರಕನ್ (ರಾಖೈನ್) ಪ್ರಾಂತ್ಯದ ಮೂರನೇ ಒಂದು ಭಾಗದಷ್ಟು ಮುಸ್ಲಿಮರು ವಿವಿಧ ದೇಶಗಳಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ಝರ್ನಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ರೋಹಿಂಗ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ (ICJ) ನೀಡಿರುವ ತೀರ್ಪಿನ ಕುರಿತು ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ತೀರ್ಪು ರೋಹಿಂಗ್ಯಾಗಳಿಗೆ ಕೇವಲ ನೈತಿಕ ಬೆಂಬಲವನ್ನು ಮಾತ್ರ ನೀಡಿದೆಯೇ ಹೊರತು, ಅವರ ಪ್ರಮುಖ ಬೇಡಿಕೆಗಳಾದ ಪೌರತ್ವದ ಮರುಸ್ಥಾಪನೆ, ತಾಯ್ನಾಡಿಗೆ ಮರಳುವ ಹಕ್ಕು ಹಾಗೂ ಅನುಭವಿಸಿದ ನೋವಿಗೆ ಸೂಕ್ತ ಪರಿಹಾರವನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ನ್ಯಾಯಾಲಯದ ತೀರ್ಪು ಬಂದ ತಕ್ಷಣ ಸಂತ್ರಸ್ತರ ಜೀವನ ಬದಲಾಗುವುದಿಲ್ಲ; ಇದಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದಿಂದ ರಾಜಕೀಯ ಮತ್ತು ಆರ್ಥಿಕ ಒತ್ತಡ ಹೇರುವುದು ಅತ್ಯಗತ್ಯ ಎಂದು ಝರ್ನಿ ಪ್ರತಿಪಾದಿಸಿದ್ದಾರೆ. ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳ ಸ್ವಹಿತಾಸಕ್ತಿಯಿಂದಾಗಿ ಮ್ಯಾನ್ಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಈ ತೀರ್ಪಿನ ಕಾನೂನಾತ್ಮಕ ಮಹತ್ವವನ್ನು ವಿಶ್ಲೇಷಿಸಿರುವ ಅಂತಾರಾಷ್ಟ್ರೀಯ ಕಾನೂನು ತಜ್ಞೆ ಪ್ರೊಫೆಸರ್ ರೋಸಾ ಫ್ರೀಡ್‌ಮನ್, “ಮ್ಯಾನ್ಮಾರ್ ಸರ್ಕಾರವು ರೋಹಿಂಗ್ಯನ್ನರನ್ನು ತಮ್ಮ ದೇಶದ ಜನಾಂಗವೆಂದು ಒಪ್ಪಿಕೊಳ್ಳದೆ ನಿರಾಕರಿಸುತ್ತಿದ್ದ ಸಂದರ್ಭದಲ್ಲಿ, ನ್ಯಾಯಾಲಯವು ಅವರನ್ನು ಒಂದು ಪ್ರತ್ಯೇಕ ಜನಾಂಗೀಯ ಗುಂಪು ಎಂದು ಸ್ಪಷ್ಟವಾಗಿ ಗುರುತಿಸಿ ಜಾಗತಿಕ ವೇದಿಕೆಯಲ್ಲಿ ಮಾನ್ಯತೆ ನೀಡಿರುವುದು ಬಹಳ ಮುಖ್ಯ” ಎಂದು ಹೇಳಿದ್ದಾರೆ.
“ನರಮೇಧದ ಉದ್ದೇಶವನ್ನು ಸಾಬೀತುಪಡಿಸಲು ನ್ಯಾಯಾಲಯವು ಸಾಕ್ಷ್ಯಗಳನ್ನು ಪರಿಗಣಿಸುವಲ್ಲಿ ಹೆಚ್ಚು ಹೊಂದಿಕೊಳ್ಳುವ ನಿಲುವು ತಳೆದಿದೆ” ಎಂದು ಪ್ರೊಫೆಸರ್ ಮಾರ್ಕೊ ಮಿಲನೋವಿಕ್ ಅಭಿಪ್ರಾಯಪಟ್ಟಿದ್ದಾರೆ.


