ನಿಗದಿತ ಬೆಲೆಗಿಂತ 1 ರೂಪಾಯಿ 12 ಪೈಸೆಯಷ್ಟು ಹೆಚ್ಚುವರಿ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಔಷಧ ಕಂಪನಿ ವಿರುದ್ಧದ ಪ್ರಕರಣವನ್ನು ಬರೋಬ್ಬರಿ 10 ವರ್ಷಗಳ ಬಳಿಕ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಕಂಪನಿಯ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಎಲ್ಲ ಪ್ರಕ್ರಿಯೆಗಳನ್ನು ರದ್ದುಪಡಿಸಿ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
2016ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮೆಡ್‌ಪ್ಲಸ್ ಮಳಿಗೆಯೊಂದಕ್ಕೆ ತೆರಳಿದ್ದ ವರದಿಗಾರರೊಬ್ಬರು ‘ಲ್ಯಾನ್ಜೋಲ್ ಜೂನಿಯರ್ 15 ಎಂಜಿ’ ಮಾತ್ರೆಗಳನ್ನು ಖರೀದಿಸಿದ್ದರು. ಖರೀದಿಸಿದ ಮೂರು ದಿನಗಳ ಬಳಿಕ ವರದಿಗಾರರು ಬೆಂಗಳೂರಿನ ಸಹಾಯಕ ಔಷಧ ನಿಯಂತ್ರಕ-1ರ ಮುಂದೆ ದೂರು ದಾಖಲಿಸಿದ್ದರು. ಕಂಪನಿಯ ಘಟಕ ನೀಡಿದ್ದ ಬಿಲ್‌ನಲ್ಲಿ ಎಂಟು ಮಾತ್ರೆಗಳಿಗೆ ಹಣ ವಿಧಿಸಲಾಗಿದ್ದರೂ, ತಮಗೆ ಕೇವಲ ಏಳು ಮಾತ್ರೆಗಳನ್ನು ಮಾತ್ರ ನೀಡಲಾಗಿದೆ. ಹೆಚ್ಚುವರಿಯಾಗಿ 1.12 ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಈ ದೂರಿನ ಆಧಾರದ ಮೇಲೆ ರಿಟ್ ಮೆಡ್ಫಾರ್ಮಾ ರಿಟೇಲ್ ಪ್ರೈವೇಟ್ ಲಿಮಿಟೆಡ್‌ನ ಘಟಕದ ಇಬ್ಬರು ನಿರ್ದೇಶಕರು ಮತ್ತು ಪ್ರತಿನಿಧಿಯ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು. ನಗರದ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.
ತಮ್ಮ ವಿರುದ್ಧ ‘ಔಷಧ ಬೆಲೆ ನಿಯಂತ್ರಣ ಆದೇಶ-2013’ರ ಕಲಂ 26 ಮತ್ತು ‘ಅಗತ್ಯ ವಸ್ತುಗಳ ಕಾಯ್ದೆ-1955’ರ ಸೆಕ್ಷನ್ 7(1)(ಎ)(ii) ಅಡಿಯಲ್ಲಿ ದಾಖಲಾಗಿದ್ದ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಆರೋಪಿಗಳು 2023ರಲ್ಲಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠವು ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ. ಔಷಧ ಬೆಲೆ ನಿಯಂತ್ರಣ ಆದೇಶ-2013ರ ಕಲಂ 26ನ್ನು ಉಲ್ಲೇಖಿಸಿದ ಹೈಕೋರ್ಟ್, “ಔಷಧದ ಬೆಲೆ ಪಟ್ಟಿಯಲ್ಲಿ ಅಥವಾ ಅದರ ಪ್ಯಾಕ್‌ನ ಮೇಲಿನ ಲೇಬಲ್‌ನಲ್ಲಿ ನಮೂದಿಸಿರುವ ಬೆಲೆಗಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ಔಷಧ ಮಾರಾಟ ಮಾಡಿದಾಗ ಮಾತ್ರ ಈ ಕಲಂ ಅನ್ವಯವಾಗುತ್ತದೆ” ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಪ್ರಸ್ತುತ ಪ್ರಕರಣದಲ್ಲಿ ಎಂಟು ಮಾತ್ರೆಗಳ ಬದಲಿಗೆ ಏಳು ಮಾತ್ರೆಗಳನ್ನು ನೀಡಿ 1.12 ರೂಪಾಯಿ ಹೆಚ್ಚುವರಿ ಹಣ ಪಡೆಯಲಾಗಿದೆ ಎಂಬ ಆರೋಪವಿದೆಯೇ ಹೊರತು, ಔಷಧದ ಪ್ಯಾಕ್ ಅಥವಾ ಲೇಬಲ್‌ನಲ್ಲಿ ನಮೂದಿಸಿರುವ ನಿಗದಿತ ಬೆಲೆಗಿಂತ ಹೆಚ್ಚಿನ ದರ ವಿಧಿಸಲಾಗಿದೆ ಎಂಬ ಆರೋಪವೇ ಇಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಈ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧ ಈ ಕಾಯ್ದೆಗಳ ಅಡಿಯಲ್ಲಿ ಕಾನೂನು ಕ್ರಮವನ್ನು ಮುಂದುವರಿಸುವುದರಿಂದ ಅವರಿಗೆ ಅನಗತ್ಯ ಮುಜುಗರ ಉಂಟಾಗುವುದಲ್ಲದೆ, ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೂ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಔಷಧ ಕಂಪನಿ ವಿರುದ್ಧದ ಪ್ರಕರಣವನ್ನು ರುದ್ದು ಮಾಡಿದೆ.


