ಆರ್‌ಎಸ್‌ಎಸ್ ಸಂಯೋಜಿತ ಸಂಸ್ಥೆಗಳು ಆಯೋಜಿಸಿರುವ ಶಾಲಾ ಮಟ್ಟದ ವಿದ್ಯಾರ್ಥಿವೇತನ ಮಾದರಿಯ ಪರೀಕ್ಷೆಯು ಕೇರಳದಲ್ಲಿ ರಾಜಕೀಯ ಮತ್ತು ಕಾನೂನು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವು ಪರೀಕ್ಷೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದರೂ, ನವೆಂಬರ್ 22ರಂದು ನಿಗದಿಯಾಗಿರುವ ಜಿಲ್ಲಾ ಮಟ್ಟದ ‘ಮಯಿಲ್‌ಪೀಲಿ ಯಂಗ್ ಸ್ಕಾಲರ್’ (MYS) ಪರೀಕ್ಷೆಯನ್ನು ನಡೆಸಲು ಕೇರಳ ಹೈಕೋರ್ಟ್ ಮಧ್ಯಂತರ ಅನುಮತಿ ನೀಡಿದೆ. ಆದರೆ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸದಂತೆ ಮತ್ತು ಮುಂದಿನ ಸುತ್ತಿನ ರಾಜ್ಯ ಮಟ್ಟದ ಪರೀಕ್ಷೆಗಳನ್ನು ನಡೆಸದಂತೆ ನ್ಯಾಯಮೂರ್ತಿ ಪಿ. ಗೋಪಿನಾಥ್ ಸೂಚಿಸಿದ್ದಾರೆ.
5ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಈ ಉಚಿತ ಸಾಮಾನ್ಯ ಜ್ಞಾನ ಮತ್ತು ವಿಜ್ಞಾನ ಸ್ಪರ್ಧೆಯನ್ನು ಆರ್‌ಎಸ್‌ಎಸ್‌ನ ಅಂಗಸಂಘಟನೆ ಬಾಲಗೋಕುಲಂ ಪ್ರಕಟಿಸುವ ಮಕ್ಕಳ ನಿಯತಕಾಲಿಕೆ ‘ಮಯಿಲ್‌ಪೀಲಿ’ ಮತ್ತು ರಾಷ್ಟ್ರೀಯ ಶಿಕ್ಷಕರ ಒಕ್ಕೂಟ ‘ದೇಶೀಯ ಅಧ್ಯಾಪಕ ಪರಿಷತ್’ (NTU) ಜಂಟಿಯಾಗಿ ಹಮ್ಮಿಕೊಂಡಿವೆ. ಈಗಾಗಲೇ ಶಾಲಾ ಮಟ್ಟದ ಮತ್ತು ಉಪ-ಜಿಲ್ಲಾ ಮಟ್ಟದ ಪರೀಕ್ಷೆಗಳು ನಡೆದಿವೆ. ಆದರೆ, ಜಿಲ್ಲಾ ಮಟ್ಟದ ಪರೀಕ್ಷೆಗೆ ವಿವಿಧ ವಲಯಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಅನುಮತಿಯನ್ನು ರದ್ದುಗೊಳಿಸಿತ್ತು.
ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಎನ್‌ಟಿಯು ಪ್ರಧಾನ ಕಾರ್ಯದರ್ಶಿ ಟಿ ಅನೂಪ್ ಕುಮಾರ್, “ಯಾವುದೇ ನೋಟಿಸ್ ನೀಡದೆ ಅಥವಾ ತಮ್ಮ ವಾದವನ್ನು ಆಲಿಸದೆ ಸಾರ್ವಜನಿಕ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರ ಸೂಚನೆಯ ಮೇರೆಗೆ ಏಕಪಕ್ಷೀಯವಾಗಿ ಅನುಮತಿ ಹಿಂಪಡೆಯಲಾಗಿದೆ” ಎಂದು ಆರೋಪಿಸಿದ್ದರು.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್, “ಆರಂಭದಲ್ಲಿ ತಪ್ಪಾಗಿ ಅನುಮತಿ ನೀಡಲಾಗಿತ್ತು; ರಾಜಕೀಯ ಪಕ್ಷಗಳು ಅಥವಾ ಧಾರ್ಮಿಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಸಂಸ್ಥೆಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಇಂತಹ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡುವುದು ಸರ್ಕಾರದ ನೀತಿಗೆ ವಿರುದ್ಧವಾಗಿದೆ” ಎಂದು ಸಮರ್ಥಿಸಿಕೊಂಡರು.
ಆದಾಗ್ಯೂ, ಪರೀಕ್ಷೆಗೆ ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಕೊನೆಯ ಕ್ಷಣದಲ್ಲಿ ಪರೀಕ್ಷೆ ರದ್ದುಗೊಳಿಸಿದರೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಪರೀಕ್ಷೆ ನಡೆಸಲು ಅನುವು ಮಾಡಿಕೊಟ್ಟಿದೆ.
ಈ ಲೇಖನ ಓದಿದ್ದೀರಾ?: ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?
ಇದೀಗ, ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೈದ್ಧಾಂತಿಕ ಹಿನ್ನೆಲೆಯ ಸಂಘಟನೆಗಳ ಚಟುವಟಿಕೆಗಳಿಗೆ ಅವಕಾಶ ನೀಡಬೇಕೇ ಎಂಬ ಚರ್ಚೆಯು ಕೇರಳದ ಆಡಳಿತಾರೂಢ ಯುಡಿಎಫ್ ಮತ್ತು ವಿಪಕ್ಷ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ನಡುವೆ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಹೈಕೋರ್ಟ್‌ನ ಮಧ್ಯಂತರ ಆದೇಶವು ಸರ್ಕಾರಕ್ಕೆ ಹಿನ್ನಡೆಯಲ್ಲ ಎಂದು ಪ್ರತಿಪಾದಿಸಿರುವ ಶಿಕ್ಷಣ ಸಚಿವ ಎನ್. ಶಂಸುದ್ದೀನ್, “ನ್ಯಾಯಾಲಯವು ಕೇವಲ ತಾಂತ್ರಿಕ ಕಾರಣಗಳಿಗಾಗಿ ಪರೀಕ್ಷೆಗೆ ಅನುಮತಿ ನೀಡಿದ್ದು, ಫಲಿತಾಂಶ ಪ್ರಕಟಣೆ ಮತ್ತು ರಾಜ್ಯ ಮಟ್ಟದ ಸ್ಪರ್ಧೆಯನ್ನು ನಿರ್ಬಂಧಿಸಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದೆಡೆ, ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯುಡಿಎಫ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇರಳದ ಶಿಕ್ಷಣ ಕ್ಷೇತ್ರಕ್ಕೆ ಸಂಘ ಪರಿವಾರದ ಸಂಘಟನೆಗಳ ಪ್ರವೇಶಕ್ಕೆ ಸರ್ಕಾರವೇ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ.
ಸದ್ಯ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 10ಕ್ಕೆ ಮುಂದೂಡಿದ್ದು, ಅಂದು ಸರ್ಕಾರದ ಆದೇಶದ ಕಾನೂನುಬದ್ಧತೆಯ ಕುರಿತು ಹೆಚ್ಚಿನ ಪರಿಶೀಲನೆ ನಡೆಯಲಿದೆ.


