ರಾಜಸ್ಥಾನದ ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ದೊರೆತ ಭಾರೀ ಮುನ್ನಡೆ ಬಿಜೆಪಿಯ ರಾಜಕೀಯ ಪ್ರಾಬಲ್ಯಕ್ಕೆ ದೊಡ್ಡ ಪೆಟ್ಟು ನೀಡಿದೆ. ಎಸ್ಐಆರ್ ನಂತರದ ಮತದಾರರ ಪಟ್ಟಿಯನ್ನು ಬಳಸದೆ ನಡೆದ ಈ ಚುನಾವಣೆಯ ಫಲಿತಾಂಶ, ಎಸ್ಐಆರ್ ಮೂಲಕ ಹಿಂಬಾಗಿಲಿನ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ ಪಾಠ ಕಲಿಸಿದೆ.
ರಾಜಸ್ಥಾನದ ಹಳ್ಳಿಗಳು ಮಾತನಾಡಿವೆ. ಅಧಿಕಾರದ ಗದ್ದಲದ ನಡುವೆ ಸಾಮಾನ್ಯ ಮತದಾರನ ಧ್ವನಿ ಕೇಳಿಸುವುದಿಲ್ಲ ಎಂದು ಭಾವಿಸಿದ್ದವರಿಗೆ ಅಲ್ಲಿನ ಪಂಚಾಯತಿ ಚುನಾವಣಾ ಫಲಿತಾಂಶ ಸ್ಪಷ್ಟ ಸಂದೇಶ ರವಾನಿಸಿದೆ: ”ಅಧಿಕಾರದಲ್ಲಿರುವುದೇ ಜನಬೆಂಬಲದ ಶಾಶ್ವತ ಪ್ರಮಾಣಪತ್ರವಲ್ಲ. ಆಡಳಿತದ ಯಂತ್ರಾಂಗ, ರಾಜಕೀಯ ಪ್ರಚಾರ, ನಾಯಕರ ವರ್ಚಸ್ಸು ಯಾವುದೂ ಮತದಾರನ ತೀರ್ಪನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ” ಎಂಬ ಎಚ್ಚರಿಕೆ ನೀಡಿದೆ.
ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿಗೆ ಪಂಚಾಯತಿ ಚುನಾವಣೆಗಳಲ್ಲಿ ಭಾರೀ ಹಿನ್ನಡೆಯಾಗಿದೆ. ಜಿಲ್ಲಾ ಪರಿಷತ್ ಮತ್ತು ಪಂಚಾಯತಿ ಚುನಾವಣೆಗಳೆರಡರಲ್ಲೂ ಕಾಂಗ್ರೆಸ್ ಗಣನೀಯ ಮುನ್ನಡೆ ಸಾಧಿಸಿದೆ. ಈ ಫಲಿತಾಂಶವು, ಗ್ರಾಮೀಣ ರಾಜಸ್ಥಾನದಲ್ಲಿ ಬಿಜೆಪಿಯ ಪ್ರಾಬಲ್ಯಕ್ಕೆ ದೊಡ್ಡ ಪೆಟ್ಟುಕೊಟ್ಟಿದೆ.
ನವೆಂಬರ್ 20ರ ಫಲಿತಾಂಶಗಳ ಪ್ರಕಾರ, ಪಂಚಾಯತಿ ಸಮಿತಿಗಳಲ್ಲಿ ಕಾಂಗ್ರೆಸ್ 3,701 ಸ್ಥಾನಗಳನ್ನು ಗೆದ್ದಿದ್ದರೆ ಬಿಜೆಪಿ 2,181 ಸ್ಥಾನಗಳಿಗೆ ಸೀಮಿತವಾಗಿದೆ. ಜಿಲ್ಲಾ ಪರಿಷತ್ಗಳಲ್ಲಿ ಕಾಂಗ್ರೆಸ್ 599 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿಗೆ 301 ಸ್ಥಾನಗಳು ದೊರೆತಿವೆ.
ಸರ್ಕಾರ ನಡೆಸುತ್ತಿರುವ ಪಕ್ಷಕ್ಕೆ ಇದು ಸುಮ್ಮನೆ ಮರೆತುಬಿಡಬಹುದಾದ ಫಲಿತಾಂಶವಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಹೊಂದಿರುವ ನೆಲೆ, ಸ್ಥಳೀಯ ರಾಜಕೀಯ ಸಮೀಕರಣಗಳು, ಆಡಳಿತದ ಕುರಿತ ಜನರ ಅಸಮಾಧಾನ –ಇವೆಲ್ಲವೂ ಫಲಿತಾಂಶದಲ್ಲಿ ಪ್ರತಿಫಲಿಸಿವೆ. ರಾಜಕೀಯ ಎದುರಾಳಿಗಳನ್ನು ಸೋಲಿಸುವ ಲೆಕ್ಕಾಚಾರದಲ್ಲಷ್ಟೇ ಇರುವ ಬಿಜೆಪಿಗೆ, ಜನರ ಬದುಕಿನ ಪ್ರಶ್ನೆಗಳನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವೇ ಇಲ್ಲ ಎಂಬುದನ್ನು ಒತ್ತಿ ಹೇಳಿದೆ.
ರಾಜಸ್ಥಾನದ ಹಳ್ಳಿಗಳಲ್ಲಿ ಮತದಾರರು ಕೃಷಿ, ಉದ್ಯೋಗ, ಗ್ರಾಮೀಣ ಮೂಲಸೌಕರ್ಯ, ಸ್ಥಳೀಯ ಆಡಳಿತ, ಸಾರ್ವಜನಿಕ ಸೇವೆಗಳ ಲಭ್ಯತೆಯೇ ತಮ್ಮ ಆದ್ಯತೆ. ಈ ವಿಚಾರಗಳೇ ತಮ್ಮ ರಾಜಕೀಯ ತೀರ್ಮಾನಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಮತ್ತೊಮ್ಮೆ ಹೇಳಿದ್ದಾರೆ.
ಆದ್ದರಿಂದಲೇ, ಈ ಚುನಾವಣೆಯಲ್ಲಿ ಬಿಜೆಪಿ ಸಚಿವರ ಕುಟುಂಬದ ಅಭ್ಯರ್ಥಿಗಳಿಗೂ ಸೋಲುಣಿಸಿದ್ದಾರೆ. ರಾಜ್ಯ ಸರ್ಕಾರದ ಸಚಿವರಾಗಿರುವ ಝಾಬರ್ ಸಿಂಗ್ ಖರ್ರಾ ಅವರ ಪತ್ನಿಯ ಸೋಲು ಇದಕ್ಕೊಂದು ಉದಾಹರಣೆ. ಇದು ರಾಜಕೀಯ ಅಧಿಕಾರ ಮತ್ತು ಜನರ ವಿಶ್ವಾಸದ ನಡುವಿನ ಕಂದಕವನ್ನು ಸ್ಪಷ್ಟವಾಗಿ ಸೂಚಿಸಿದೆ.
ರಾಜಸ್ಥಾನದ ಈ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳ ಗೆಲುವು-ಸೋಲಿಗಿಂತಲೂ ಮತ್ತೊಂದು ಗಂಭೀರ ವಿಷಯವಿದೆ. ಅದು: ಮತದಾರರ ಪಟ್ಟಿ. ಈ ಚುನಾವಣೆಯಲ್ಲಿ ಎಸ್ಐಆರ್ ನಂತರದ ಮತದಾರರ ಪಟ್ಟಿಯನ್ನು ಬಳಸಲಾಗಿಲ್ಲ. ರಾಜಸ್ಥಾನದ ರಾಜ್ಯ ಚುನಾವಣಾ ಆಯೋಗವು 2025ರ ಜನವರಿಯ ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಿದ ಪ್ರತ್ಯೇಕ ಮತಪಟ್ಟಿಯನ್ನು ಬಳಸಲಾಗಿದೆ.
ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಂತ ಮಹತ್ವದ ಸಂಗತಿ. ಏಕೆಂದರೆ, ಕೇಂದ್ರ ಚುನಾವಣಾ ಆಯೋಗದ ಎಸ್ಐಆರ್ ಅಂತಿಮ ಪಟ್ಟಿಯಲ್ಲಿ ಸುಮಾರು 5.15 ಕೋಟಿ ಮತದಾರರಿದ್ದರೆ, ರಾಜ್ಯ ಚುನಾವಣಾ ಆಯೋಗದ ಸ್ಥಳೀಯ ಚುನಾವಣಾ ಪಟ್ಟಿಯಲ್ಲಿ ಸುಮಾರು 5.45 ಕೋಟಿ ಮತದಾರರಿದ್ದಾರೆ. ಗ್ಯಾನೇಶ್ ಕುಮಾರ್ ಅವರ ಆಯೋಗವು 30 ಲಕ್ಷ ಮತದಾರರನ್ನು ಅಳಿಸಿಹಾಕಿದೆ.
ಅಳಿಸಿಹೋದ ಈ ಮತದಾರರ ಸಂಖ್ಯೆಯು ಬರೀ ಸಂಖ್ಯೆ ಮಾತ್ರವಲ್ಲದೆ, ಚುನಾವಣೆಯ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿವೆ. ಅಲ್ಲದೆ, ರಾಜ್ಯ ಚುನಾವಣಾ ಆಯೋಗವು ಬದುಕಿದ್ದಾರೆಂದು ಗುರುತಿಸಿ, ಮತದ ಹಕ್ಕು ಕೊಟ್ಟಿರುವವರನ್ನು ಕೇಂದ್ರ ಚುನಾವಣಾ ಆಯೋಗವು ಸತ್ತಿದ್ದಾರೆ, ಸ್ಥಳಾಂತರಗೊಂಡಿದ್ದಾರೆ ಎಂದು ಅಳಿಸಿಹಾಕಿದೆ. ಅಲ್ಲದೆ, ಎಸ್ಐಆರ್ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಕೈಬಿಡಲಾಗಿದ್ದ 1.82 ಲಕ್ಷ ಮಂದಿಯ ಹೆಸರುಗಳು ಪಂಚಾಯತಿ ಪಟ್ಟಿಯಲ್ಲಿ ಉಳಿದುಕೊಂಡಿರುವ ಬಗ್ಗೆಯೂ ವರದಿಗಳಿವೆ. ರಾಜ್ಯ ಚುನಾವಣಾ ಆಯೋಗ ಅರ್ಹರೆಂದು ಗುರುತಿಸಿರುವ ಮತದಾರರು ಕೇಂದ್ರ ಆಯೋಗದ ಪಟ್ಟಿಯಲ್ಲಿ ಏಕೆ ಕಾಣಿಸುವುದಿಲ್ಲ? ಯಾವ ದಾಖಲೆಗಳನ್ನು ಆಧರಿಸಿ ಆತನ ಹೆಸರನ್ನು ಕೈಬಿಡಲಾಗಿದೆ? ಎಂಬುದಕ್ಕೆ ಕೇಂದ್ರ ಚುನಾವಣಾ ಆಯೋಗ ಅರ್ಥಾತ್ ಗ್ಯಾನೇಶ್ ಕುಮಾರ್ ಬಳಿ ಉತ್ತರವೂ ಇಲ್ಲ.
ರಾಜಸ್ಥಾನದ ಈ ರಾಜಕೀಯ ಬೆಳವಣಿಗೆಯು ಕರ್ನಾಟಕಕ್ಕೂ ಪ್ರಸ್ತುತವಾಗಿದೆ. ಇಲ್ಲಿನ ಸ್ಥಳೀಯ ಚುನಾವಣೆಗಳಿಗೆ ಯಾವ ಮತಪಟ್ಟಿಯನ್ನು ಬಳಸಬೇಕು ಎಂಬ ಗೊಂದಲ ರಾಜ್ಯ ಚುನಾವಣಾ ಆಯೋಗದ ಮುಂದಿದೆ. ಅದಕ್ಕಾಗಿ, ಸುಪ್ರೀಂ ಕೋರ್ಟ್ನ ಮೊರೆ ಹೋಗಿದೆ. ಆದರೆ, ರಾಜ್ಯದಲ್ಲಿಯೂ ಸುಮಾರು 99 ಲಕ್ಷ ಮತದಾರರನ್ನು ಹೊರಗಿಟ್ಟಿರುವ ಎಸ್ಐಆರ್ನ ಮತಪಟ್ಟಿಯನ್ನು ಬಳಸಬಾರದು, ಹಳೆಯ ಮತಪಟ್ಟಿಯನ್ನೇ ಬಳಸಬೇಕು ಎಂದು ನಾಗರಿಕ ಸಂಘಟನೆಗಳು ಒತ್ತಾಯಿಸಿವೆ.
ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇರುವುದೇ ಜನರಿಗೆ ತಮ್ಮ ಪ್ರತಿನಿಧಿಗಳನ್ನು ಆರಿಸುವ ಮತ್ತು ಬದಲಿಸುವ ಹಕ್ಕು ಇರುವುದರಲ್ಲಿ. ಆದರೆ, ಈಗ ಆ ಹಕ್ಕನ್ನು ನಿರ್ಧರಿಸುವ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯೇ ಪ್ರಶ್ನೆಗೆ ಗುರಿಯಾಗಿದೆ. ಚುನಾವಣಾ ಆಯೋಗವನ್ನು ನಾಗರಿಕರು ಅನುಮಾನಿಸುವಂತಾಗಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಮೃತಪಟ್ಟವರ, ಸ್ಥಳಾಂತರಗೊಂಡವರ ಮತ್ತು ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ತನ್ನ ಉದ್ದೇಶ ಎಂದು ಚುನಾವಣಾ ಆಯೋಗ ಹೇಳಿಕೊಂಡಿತ್ತು. ಅನರ್ಹ ಹೆಸರುಗಳನ್ನು ತೆಗೆದುಹಾಕುವುದು ಹೇಗೆ ಚುನಾವಣಾ ಆಯೋಗದ ಕರ್ತವ್ಯವೋ, ಅಂತೆಯೇ ಅರ್ಹ ನಾಗರಿಕರನ್ನು ಪಟ್ಟಿಯಲ್ಲಿ ಉಳಿಸುವುದು/ಸೇರಿಸುವುದೂ ಕೂಡ ಅದರ ಕರ್ತವ್ಯ. ಆದರೆ, ಎರಡನೆಯ ಜವಾಬ್ದಾರಿಯನ್ನು ಕಡೆಗಣಿಸಿ ಆಯೋಗವು, ಮೊದಲನೆಯದನ್ನು ಮಾತ್ರ ಆರಿಸಿಕೊಂಡಿದೆ. ಅರ್ಹರನ್ನೂ ಮತಪಟ್ಟಿಯಿಂದ ಹೊರದಬ್ಬಿದೆ. ಇದು ಎಸ್ಐಆರ್ನ ಹುನ್ನಾರಕ್ಕೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ.
ಈ ಲೇಖನ ಓದಿದ್ದೀರಾ?: ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?
ಯೋಗೇಂದ್ರ ಯಾದವ್ ಅವರಂತಹ ವಿಶ್ಲೇಷಕರು, ನಾಗರಿಕ ಸಂಘಟನೆಗಳು ಹಾಗೂ ವಿಪಕ್ಷಗಳ ನಾಯಕರು ಮತಪಟ್ಟಿಯಿಂದ ಅರ್ಹ ನಾಗರಿಕರು ಹೊರಗುಳಿಯುತ್ತಿರುವ ಅಪಾಯವನ್ನು ಗುರುತಿಸಿದ್ದಾರೆ. ವಿಶೇಷವಾಗಿ ವಲಸೆ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಮತಪಟ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಮತದ ಹಕ್ಕು ಉಳಿಸಿಕೊಳ್ಳಲು ಅಗತ್ಯ ದಾಖಲೆಗಳ ಸಂಗ್ರಹಕ್ಕಾಗಿ ಕಷ್ಟಪಡುತ್ತಿದ್ದಾರೆ. ಇವೆಲ್ಲರೆಲ್ಲರೂ ಬಹುತೇಕ ಗ್ರಾಮೀಣ ಭಾರತದಲ್ಲೇ ವಾಸಿಸುವವರು. ಅವರನ್ನು ಚುನಾವಣಾ ಆಯೋಗವು ಏಕಪಕ್ಷೀಯವಾಗಿ ಹೊರಹಾಕಿದೆ.
ಮೋದಿ-ಶಾ ಜೋಡಿಯ ಸೂತ್ರದ ಬೊಂಬೆಯಾಗಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆಯಿಂದ ದೇಶಾದ್ಯಂತ ಬರೋಬ್ಬರಿ 13 ಕೋಟಿ ಮತದಾರರು ಮತದ ಹಕ್ಕು ಕಳೆದುಕೊಂಡಿದ್ದಾರೆ.
ಮತದಾರರ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿರುವ ಇದೇ ಸಂದರ್ಭದಲ್ಲಿ, ಚುನಾವಣಾ ಆಯೋಗದ ಒಳಗಿನ ಭಿನ್ನಾಭಿಪ್ರಾಯಗಳೂ ಬಹಿರಂಗಗೊಂಡಿವೆ. ಫಾರಂ 6ರ ಬದಲಾವಣೆಗಳು ಸೇರಿದಂತೆ ಹಲವು ನಿರ್ಧಾರಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತರು ಲಿಖಿತ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಇದು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು, ಆಳುವವರ ಪದತಲದಲ್ಲಿ ತಲೆಬಾಗಿ ನಿಂತಿರುವುದನ್ನು ಸಾಬೀತುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ಮತಪಟ್ಟಿಯ ಆಧಾರದ ಮೇಲೆ ನಡೆದ ರಾಜಸ್ಥಾನ ಚುನಾವಣೆಯು ಬಿಜೆಪಿಗೆ ಮಾತ್ರವಲ್ಲ, ಚುನಾವಣಾ ಆಯೋಗಕ್ಕೂ ಎಚ್ಚರಿಕೆಯ ಸಂದೇಶ ನೀಡಿದೆ. ಪ್ರಜಾಪ್ರಭುತ್ವವನ್ನು ಅಣಕಿಸಬೇಡಿ ಎಂದು ಪಾಠ ಹೇಳಿದೆ.


