ಕಾಡು ಎಂದರೆ ಕೇವಲ ಮರಗಳು, ಪ್ರಾಣಿಗಳು ಮತ್ತು ಭೌಗೋಳಿಕ ಪ್ರದೇಶವಲ್ಲ. ಅದು ಸಾವಿರಾರು ವರ್ಷಗಳಿಂದ ಮನುಷ್ಯ ಮತ್ತು ಪ್ರಕೃತಿ ಪರಸ್ಪರ ಅವಲಂಬನೆಯೊಂದಿಗೆ ಬದುಕಿಕೊಂಡು ಬಂದಿರುವ ಜೀವಂತ ಪರಿಸರ ವ್ಯವಸ್ಥೆ. ಈ ವ್ಯವಸ್ಥೆಯೊಂದಿಗೆ ಅತ್ಯಂತ ಆಳವಾದ ಸಂಬಂಧ ಹೊಂದಿರುವವರು ಆದಿವಾಸಿಗಳು ಮತ್ತು ನೆಲಮೂಲವಾಸಿಗಳು
ಇಂದು ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ದೇಶದಾದ್ಯಂತ ಗಂಭೀರ ಪರಿಸರ ಹಾಗೂ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿದೆ. ಆನೆಗಳ ದಾಳಿ, ಹುಲಿ ಮತ್ತು ಚಿರತೆಗಳ ಹಾವಳಿ, ಬೆಳೆ ನಾಶ, ಜಾನುವಾರುಗಳ ಸಾವು ಮತ್ತು ಮಾನವ ಪ್ರಾಣಹಾನಿಯ ಘಟನೆಗಳು ಹೆಚ್ಚುತ್ತಿವೆ. ಆದರೆ, ಇದೇ ಕಾಡಿನೊಳಗೆ ತಲೆಮಾರುಗಳಿಂದ ಬದುಕುತ್ತಿರುವ ಆದಿವಾಸಿ ಸಮುದಾಯಗಳ ಜೀವನವನ್ನು ಗಮನಿಸಿದಾಗ ಒಂದು ಮಹತ್ವದ ಪ್ರಶ್ನೆ ಎದುರಾಗುತ್ತದೆ. ಕಾಡಿನ ಹೊರಗೆ ಮನುಷ್ಯ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಹೆಚ್ಚುತ್ತಿರುವಾಗ, ಕಾಡಿನೊಳಗೆ ಆದಿವಾಸಿಗಳು ಮತ್ತು ಪ್ರಾಣಿಗಳ ನಡುವೆ ಸಹಜೀವನದ ಸಂಬಂಧ ಹೇಗೆ ಸಾಧ್ಯವಾಗಿದೆ? ಈ ಪ್ರಶ್ನೆಗೆ ಉತ್ತರ ಹುಡುಕಿದಾಗ ಆದಿವಾಸಿಗಳ ಬದುಕಿನ ಕ್ರಮ, ಸಾಂಪ್ರದಾಯಿಕ ಜ್ಞಾನ, ಪ್ರಕೃತಿಯ ಬಗೆಗಿನ ಗೌರವ ಮತ್ತು ಜೀವವೈವಿಧ್ಯದೊಂದಿಗಿನ ಅವರ ಅವಿನಾಭಾವ ಸಂಬಂಧದ ಮಹತ್ವ ಅರ್ಥವಾಗುತ್ತದೆ.
ಕಾಡು ಅವರಿಗೆ ಕೇವಲ ವಾಸಸ್ಥಾನವಲ್ಲ, ಬದುಕಿನ ಅಸ್ತಿತ್ವ
ಕರ್ನಾಟಕದ ಪಶ್ಚಿಮ ಘಟ್ಟಗಳು, ಮಲೆನಾಡು ಮತ್ತು ದಕ್ಷಿಣ ಭಾಗದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಸೋಲಿಗ, ಜೇನುಕುರುಬ, ಬೆಟ್ಟಕುರುಬ, ಎರವ ಸೇರಿದಂತೆ ಹಲವು ಆದಿವಾಸಿ ಸಮುದಾಯಗಳು ತಲೆಮಾರುಗಳಿಂದ ಬದುಕುತ್ತಿವೆ. ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯದಂತಹ ಪ್ರದೇಶಗಳೊಂದಿಗೆ ಇವರ ಬದುಕು ಬೆಸೆದುಕೊಂಡಿದೆ.
ಆಧುನಿಕ ಸಮಾಜ ಕಾಡನ್ನು ಹೆಚ್ಚಾಗಿ ಮರದ ಸಂಪತ್ತು, ಖನಿಜ, ಪ್ರವಾಸೋದ್ಯಮ ಮತ್ತು ವನ್ಯಜೀವಿಗಳ ಆವಾಸಸ್ಥಾನವಾಗಿ ನೋಡುತ್ತದೆ. ಆದರೆ, ಆದಿವಾಸಿಗಳ ದೃಷ್ಟಿಯಲ್ಲಿ ಕಾಡು ಅವರ ತಾಯಿ, ಮನೆ, ದೇವರು ಮತ್ತು ಜೀವನೋಪಾಯದ ಮೂಲ. ಮರ, ಗಿಡ, ಬಳ್ಳಿ, ಕೀಟ, ಪಕ್ಷಿ, ಪ್ರಾಣಿ, ನೀರು ಮತ್ತು ಮಣ್ಣು ಇವೆಲ್ಲವೂ ಪರಸ್ಪರ ಅವಲಂಬಿತವಾಗಿರುವ ಜೀವಂತ ವ್ಯವಸ್ಥೆ ಎಂಬ ಅರಿವು ಅವರ ಬದುಕಿನಲ್ಲಿದೆ.
ಅವರಿಗೆ ಪ್ರಾಣಿಗಳು ಕೇವಲ ವನ್ಯಜೀವಿಗಳಲ್ಲ; ಅವು ಸಹಜೀವಿಗಳು. ಕೆಲವು ಪ್ರಾಣಿಗಳು ಕುಲದೈವಗಳಾಗಿದ್ದರೆ, ಇನ್ನು ಕೆಲವು ದೈವಿಕ ಶಕ್ತಿಯ ಪ್ರತಿರೂಪಗಳಾಗಿವೆ. ಸೋಲಿಗರು ಹುಲಿಯನ್ನು ದೊಡ್ಡನಾಯಿಎಂದು, ಆನೆಯನ್ನು ದೊಡ್ಡಪ್ಪ ಎಂದು ಗೌರವದಿಂದ ಕರೆಯುತ್ತಾರೆ. ಈ ಸಂಬೋಧನೆಗಳಲ್ಲಿ ಪ್ರಾಣಿಗಳ ಬಗೆಗಿನ ಭಯಕ್ಕಿಂತ ಗೌರವ ಮತ್ತು ಆತ್ಮೀಯತೆ ಪ್ರಧಾನವಾಗಿವೆ.
ಸೋಲಿಗರ ಬದುಕಿನಲ್ಲಿ ಹುಲಿ ಮತ್ತು ಆನೆಗಳೊಂದಿಗೆ ಸಹಬಾಳ್ವೆ
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಸೋಲಿಗ ಸಮುದಾಯವು ಮನುಷ್ಯ ಮತ್ತು ವನ್ಯಜೀವಿಗಳ ಸಹಬಾಳ್ವೆಯ ಕುರಿತು ಚರ್ಚಿಸುವಾಗ ಪ್ರಮುಖವಾಗಿ ಉಲ್ಲೇಖಿಸಬೇಕಾದ ಸಮುದಾಯವಾಗಿದೆ. ಸೋಲಿಗರಿಗೆ ಕಾಡಿನಲ್ಲಿ ಪ್ರಾಣಿಗಳ ಚಲನವಲನ ಗುರುತಿಸುವುದು ತಲೆಮಾರುಗಳಿಂದ ಬಂದ ಅನುಭವದ ಭಾಗವಾಗಿದೆ. ಪ್ರಾಣಿಗಳ ಹೆಜ್ಜೆ ಗುರುತು, ಮಲಮೂತ್ರ, ಮರಗಳ ಮೇಲಿನ ಉಗುರು ಗುರುತು, ಕೂಗು, ಪಕ್ಷಿಗಳ ಎಚ್ಚರಿಕೆಯ ಧ್ವನಿ ಮತ್ತು ಗಾಳಿಯಲ್ಲಿ ಹರಡುವ ವಾಸನೆಯಿಂದ ಪರಿಸರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅಂದಾಜಿಸುತ್ತಾರೆ.
ಆನೆಗಳ ಹಿಂಡು ಸಾಗುವ ದಾರಿ, ಹುಲಿ ಅಥವಾ ಚಿರತೆ ಸಂಚರಿಸುವ ಪ್ರದೇಶ, ಕರಡಿಗಳ ಆಹಾರ ಹುಡುಕುವ ಸ್ಥಳ ಮತ್ತು ಪ್ರಾಣಿಗಳು ನೀರು ಕುಡಿಯಲು ಬರುವ ತಾಣಗಳ ಬಗ್ಗೆ ಅವರಿಗೆ ಸ್ಥಳೀಯ ತಿಳಿವಳಿಕೆಯಿದೆ. ಅಪಾಯಕಾರಿ ಪ್ರಾಣಿಗಳ ಚಲನವಲನ ಕಂಡಾಗ ಅವುಗಳನ್ನು ಹಿಂಬಾಲಿಸುವುದಕ್ಕಿಂತ ತಮ್ಮ ದಾರಿಯನ್ನು ಬದಲಿಸಿಕೊಳ್ಳುವ ಎಚ್ಚರಿಕೆಯ ಬದುಕಿನ ಕ್ರಮವನ್ನು ಅನುಸರಿಸುತ್ತಾರೆ. ಇದು ಪ್ರಾಣಿಗಳನ್ನು ಪಳಗಿಸುವ ಅಥವಾ ಅವುಗಳ ಮೇಲೆ ನಿಯಂತ್ರಣ ಸಾಧಿಸುವ ವಿಧಾನವಲ್ಲ. ಬದಲಾಗಿ, ಅವುಗಳ ಸ್ವಾಭಾವಿಕ ವರ್ತನೆಗೆ ಗೌರವ ನೀಡಿ ಅವುಗಳ ವಾಸಸ್ಥಾನದಲ್ಲಿ ಮನುಷ್ಯ ತನ್ನ ಮಿತಿಯನ್ನು ಅರಿತು ಬದುಕುವ ಪರಿಸರ ಪ್ರಜ್ಞೆಯಾಗಿದೆ.
ಜೇನುಕುರುಬರು ಮತ್ತು ಜೇನುನೊಣಗಳ ಪರಿಸರ ಸಂಬಂಧ
ನಾಗರಹೊಳೆ ಮತ್ತು ಬಂಡೀಪುರದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜೇನುಕುರುಬ ಸಮುದಾಯದ ಬದುಕು ಕಾಡುಜೇನು ಮತ್ತು ಜೇನುನೊಣಗಳೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ಜೇನು ಸಂಗ್ರಹಿಸುವುದು ಅವರ ಜೀವನೋಪಾಯದ ಒಂದು ಭಾಗವಾದರೂ, ಜೇನುಗೂಡುಗಳ ಸ್ಥಳ, ಜೇನುನೊಣಗಳ ಚಲನವಲನ, ಹೂಬಿಡುವ ಋತುಮಾನ ಮತ್ತು ಕಾಡಿನ ಸಸ್ಯವೈವಿಧ್ಯದ ಕುರಿತು ಅವರ ಅನುಭವ ವಿಶೇಷವಾಗಿದೆ.
ಜೇನುನೊಣಗಳು ಕೇವಲ ಜೇನು ಉತ್ಪಾದಿಸುವ ಕೀಟಗಳಲ್ಲ. ಅವು ಕಾಡಿನ ಸಸ್ಯಗಳ ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೂವುಗಳಿಂದ ಮಕರಂದ ಸಂಗ್ರಹಿಸುವ ಸಂದರ್ಭದಲ್ಲಿ ಒಂದು ಸಸ್ಯದಿಂದ ಮತ್ತೊಂದು ಸಸ್ಯಕ್ಕೆ ಪರಾಗವನ್ನು ಸಾಗಿಸಿ ಸಸ್ಯಗಳ ಸಂತಾನೋತ್ಪತ್ತಿ ಹಾಗೂ ಹಣ್ಣುಗಳ ಉತ್ಪಾದನೆಗೆ ನೆರವಾಗುತ್ತವೆ. ಜೇನುನೊಣಗಳ ಸಂಖ್ಯೆ ಕಡಿಮೆಯಾದರೆ ಸಸ್ಯವೈವಿಧ್ಯದ ಮೇಲೂ ಪರಿಣಾಮ ಉಂಟಾಗಬಹುದು. ಹೀಗಾಗಿ, ಜೇನುನೊಣಗಳ ವಾಸಸ್ಥಾನಗಳನ್ನು ರಕ್ಷಿಸುವುದು ಅರಣ್ಯದ ಪುನರುತ್ಪಾದನೆಗೂ ಅಗತ್ಯವಾಗಿದೆ.
ಜೇನು ಸಂಗ್ರಹಿಸುವ ಸಂದರ್ಭದಲ್ಲಿ ಮರಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು, ಜೇನುಗೂಡುಗಳನ್ನು ಸಂಪೂರ್ಣ ನಾಶಪಡಿಸದಿರುವುದು ಮತ್ತು ಜೇನುನೊಣಗಳ ಮುಂದಿನ ಚಟುವಟಿಕೆಗೆ ಅವಕಾಶ ನೀಡುವುದು ಸುಸ್ಥಿರ ಸಂಗ್ರಹಣೆಯ ಪ್ರಮುಖ ಅಂಶಗಳಾಗಿವೆ. ಇಂತಹ ಸಾಂಪ್ರದಾಯಿಕ ವಿಧಾನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಉತ್ತಮ ಪದ್ಧತಿಗಳನ್ನು ಗುರುತಿಸುವ ಅಗತ್ಯವಿದೆ.
ಬೆಟ್ಟಕುರುಬರು ಮತ್ತು ಆನೆಗಳ ಬದುಕಿನ ತಿಳಿವಳಿಕೆ
ಬೆಟ್ಟಕುರುಬ ಸಮುದಾಯಗಳ ಬದುಕು ಕೂಡ ಕಾಡಿನ ಪರಿಸರ ವ್ಯವಸ್ಥೆಯೊಂದಿಗೆ ಆಳವಾದ ಸಂಬಂಧ ಹೊಂದಿದೆ. ಅರಣ್ಯದ ಕಾಲುದಾರಿಗಳು, ನೀರಿನ ತಾಣಗಳು, ಮೇವು ಪ್ರದೇಶಗಳು ಮತ್ತು ಋತುಮಾನಕ್ಕೆ ಅನುಗುಣವಾಗಿ ಬದಲಾಗುವ ಸಸ್ಯವೈವಿಧ್ಯದ ಬಗ್ಗೆ ಇವರಿಗೆ ಅನುಭವದ ಜ್ಞಾನವಿದೆ. ಆನೆಗಳ ಹಿಂಡು ಯಾವ ದಾರಿಯಲ್ಲಿ ಸಂಚರಿಸುತ್ತದೆ, ಮರಿಗಳಿರುವ ಹಿಂಡಿನ ವರ್ತನೆ ಹೇಗಿರುತ್ತದೆ, ಯಾವ ಸಂದರ್ಭಗಳಲ್ಲಿ ಆನೆಗಳು ಗಾಬರಿಗೊಳ್ಳುತ್ತವೆ ಮತ್ತು ಅವುಗಳಿಗೆ ಯಾವ ರೀತಿಯ ಅಂತರ ನೀಡಬೇಕು ಎಂಬ ತಿಳಿವಳಿಕೆ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಸಹಕಾರಿಯಾಗಬಲ್ಲದು.
ಜೇನುಕುರುಬ ಮತ್ತು ಬೆಟ್ಟಕುರುಬ ಸಮುದಾಯಗಳ ಕೆಲವು ಸದಸ್ಯರು ಆನೆಗಳ ಆರೈಕೆ ಮತ್ತು ಪಳಗಿಸುವ ಪರಂಪರೆಯಲ್ಲಿಯೂ ಐತಿಹಾಸಿಕವಾಗಿ ತೊಡಗಿಸಿಕೊಂಡಿದ್ದಾರೆ. ಮೈಸೂರು ದಸರಾ ಸೇರಿದಂತೆ ಆನೆಗಳ ಆರೈಕೆಯ ಹಲವು ಕ್ಷೇತ್ರಗಳಲ್ಲಿ ಆದಿವಾಸಿ ಸಮುದಾಯಗಳ ಅನುಭವ ಗಮನಾರ್ಹವಾಗಿದೆ. ಈ ಜ್ಞಾನವನ್ನು ಬಳಸಿಕೊಂಡು ಆನೆಗಳ ಚಲನವಲನದ ಮಾಹಿತಿ ಸಂಗ್ರಹಿಸುವುದು, ಅರಣ್ಯದಂಚಿನ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡುವುದು ಮತ್ತು ಸಂಘರ್ಷವನ್ನು ಕಡಿಮೆ ಮಾಡುವ ಯೋಜನೆಗಳನ್ನು ರೂಪಿಸುವುದು ಸಾಧ್ಯ. ಆದರೆ ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ ತರಬೇತಿ, ಸುರಕ್ಷತೆ, ವಿಮೆ ಮತ್ತು ಸೂಕ್ತ ಸಂಭಾವನೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ.
ದೇವರ ಕಾಡುಗಳು: ನಂಬಿಕೆಯೇ ಸಂರಕ್ಷಣೆಯ ಶಕ್ತಿ
ಆದಿವಾಸಿ ಸಮುದಾಯಗಳ ಪರಿಸರ ಸಂರಕ್ಷಣೆಯಲ್ಲಿ ದೇವರ ಕಾಡುಗಳು ವಿಶಿಷ್ಟ ಸ್ಥಾನ ಹೊಂದಿವೆ. ಕೆಲವು ಮರಗಳು, ಬೆಟ್ಟಗಳು, ಬಂಡೆಗಳು, ನೀರಿನ ಸೆಲೆಗಳು ಮತ್ತು ಅರಣ್ಯದ ನಿರ್ದಿಷ್ಟ ಪ್ರದೇಶಗಳನ್ನು ಪವಿತ್ರ ಸ್ಥಳಗಳೆಂದು ಪರಿಗಣಿಸಲಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಮರ ಕಡಿಯುವುದು, ಬೇಟೆಯಾಡುವುದು ಅಥವಾ ಪ್ರಕೃತಿಗೆ ಹಾನಿ ಮಾಡುವುದು ನಿಷಿದ್ಧವಾಗಿರುತ್ತದೆ.
ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಪಾಲಿಗೆ ದೊಡ್ಡ ಸಂಪಿ(ಪೋಡು)ಗೆ ಮರದಂತಹ ಪವಿತ್ರ ಸ್ಥಳಗಳು ಕೇವಲ ಧಾರ್ಮಿಕ ನೆಲೆಗಳಲ್ಲ. ಅವು ಸಮುದಾಯದ ಇತಿಹಾಸ, ಸಂಸ್ಕೃತಿ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಪ್ರತಿನಿಧಿಸುತ್ತವೆ. ಇಂತಹ ಪವಿತ್ರ ಅರಣ್ಯ ಪ್ರದೇಶಗಳು ಅನೇಕ ಸಸ್ಯಗಳು, ಪಕ್ಷಿಗಳು, ಕೀಟಗಳು ಮತ್ತು ಸಣ್ಣ ಪ್ರಾಣಿಗಳಿಗೆ ಆಶ್ರಯ ಒದಗಿಸುತ್ತವೆ. ಸಮುದಾಯದ ನಂಬಿಕೆ ಮತ್ತು ಸಂಪ್ರದಾಯಗಳು ಪ್ರಕೃತಿ ಸಂರಕ್ಷಣೆಯ ಅನೌಪಚಾರಿಕ ನಿಯಮಗಳಾಗಿ ಕಾರ್ಯನಿರ್ವಹಿಸುತ್ತವೆ. ಕಾನೂನಿನ ಭಯಕ್ಕಿಂತ ಪ್ರಕೃತಿಯ ಬಗೆಗಿನ ಗೌರವವೇ ಇಲ್ಲಿ ಸಂರಕ್ಷಣೆಯ ಶಕ್ತಿಯಾಗುತ್ತದೆ.
ಸಾಂಪ್ರದಾಯಿಕ ಅರಣ್ಯ ನಿರ್ವಹಣೆ ಮತ್ತು ಕಾಡ್ಗಿಚ್ಚು
ಆದಿವಾಸಿಗಳ ಪರಿಸರ ಜ್ಞಾನದಲ್ಲಿ ಬೆಂಕಿಯ ಬಳಕೆಯೂ ಒಂದು ಪ್ರಮುಖ ಅಂಶವಾಗಿದೆ. ಹಿಂದೆ ಕೆಲವು ಅರಣ್ಯ ಪ್ರದೇಶಗಳಲ್ಲಿ ಒಣಗಿದ ಹುಲ್ಲು ಮತ್ತು ತರಗೆಲೆಗಳನ್ನು ನಿಯಂತ್ರಿತವಾಗಿ ಸುಡುವ ಪದ್ಧತಿಗಳಿದ್ದವು. ಇದರಿಂದ ಒಣಗಿದ ಸಸ್ಯದ್ರವ್ಯ ಕಡಿಮೆಯಾಗುವುದು, ಕೆಲವು ಪ್ರದೇಶಗಳಲ್ಲಿ ಹೊಸ ಹುಲ್ಲು ಚಿಗುರುವುದು ಮತ್ತು ಕೆಲವು ಸಸ್ಯಗಳ ಬೆಳವಣಿಗೆಗೆ ಅವಕಾಶ ಸಿಗುವುದು ಮುಂತಾದ ಪರಿಣಾಮಗಳಿದ್ದವು.
ಆದರೆ, ಬೆಂಕಿಯ ಬಳಕೆಯೆಲ್ಲವೂ ಪರಿಸರಕ್ಕೆ ಒಳ್ಳೆಯದು ಎನ್ನಲಾಗದು. ತಪ್ಪಾದ ಸಮಯದಲ್ಲಿ ಅಥವಾ ನಿಯಂತ್ರಣವಿಲ್ಲದೆ ಬೆಂಕಿ ಹಚ್ಚಿದರೆ ಸಣ್ಣ ಜೀವಿಗಳು, ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳು, ಮರಗಳ ಪುನರುತ್ಪಾದನೆ ಮತ್ತು ವನ್ಯಜೀವಿಗಳ ಆವಾಸಸ್ಥಾನಕ್ಕೆ ಅಪಾರ ಹಾನಿಯಾಗಬಹುದು. ಆದ್ದರಿಂದ, ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಅರಣ್ಯ ವಿಜ್ಞಾನದೊಂದಿಗೆ ಸಂಯೋಜಿಸಬೇಕು. ಯಾವ ಪ್ರದೇಶದಲ್ಲಿ ಬೆಂಕಿ ಅಪಾಯಕಾರಿ, ಎಲ್ಲಿ ಒಣ ಸಸ್ಯದ್ರವ್ಯ ನಿರ್ವಹಣೆ ಅಗತ್ಯ, ಯಾವ ವಿಧಾನ ಜೀವವೈವಿಧ್ಯಕ್ಕೆ ಅನುಕೂಲ ಎಂಬುದನ್ನು ಸ್ಥಳೀಯ ಹಿರಿಯರು ಮತ್ತು ಅರಣ್ಯ ತಜ್ಞರು ಜಂಟಿಯಾಗಿ ನಿರ್ಧರಿಸಬೇಕು.
ಬಿಳಿಗಿರಿರಂಗನ ಬೆಟ್ಟ: ಸಂರಕ್ಷಣೆಗೆ ಹೊಸ ದೃಷ್ಟಿಕೋನ
ಬಿಳಿಗಿರಿರಂಗನ ಬೆಟ್ಟದ ಸೋಲಿಗ ಸಮುದಾಯದ ಅನುಭವವು ಅರಣ್ಯ ಹಕ್ಕುಗಳು ಮತ್ತು ವನ್ಯಜೀವಿ ಸಂರಕ್ಷಣೆಯ ನಡುವಿನ ಸಂಬಂಧವನ್ನು ಚರ್ಚಿಸಲು ಮಹತ್ವದ ಉದಾಹರಣೆಯಾಗಿದೆ.
ಅರಣ್ಯ ಹಕ್ಕು ಕಾಯ್ದೆ-2006ರ ಅಡಿಯಲ್ಲಿ ಸೋಲಿಗರ ಸಾಮುದಾಯಿಕ ಅರಣ್ಯ ಹಕ್ಕುಗಳನ್ನು ಗುರುತಿಸಿದ ನಂತರ ಈ ಪ್ರದೇಶವು ದೇಶದ ಗಮನ ಸೆಳೆಯಿತು. 35ರಿಂದ 68ಕ್ಕೆ ಹುಲಿಗಳ ಸಂಖ್ಯೆ ಏರಿಕೆಯಾದ ಅಂಕಿಅಂಶವನ್ನು ಈ ಪ್ರದೇಶದ ಕುರಿತು ಪ್ರಕಟವಾದ ಹಲವು ವರದಿಗಳು ಉಲ್ಲೇಖಿಸಿವೆ. ಆದರೆ, ಈ ಏರಿಕೆಗೆ ಸಾಮುದಾಯಿಕ ಹಕ್ಕುಗಳೇ ಏಕೈಕ ಕಾರಣವೆಂದು ಹೇಳಲಾಗದು. ಬೇಟೆಪ್ರಾಣಿಗಳ ಲಭ್ಯತೆ, ಆವಾಸಸ್ಥಾನದ ಗುಣಮಟ್ಟ, ಕಳ್ಳಬೇಟೆ ನಿಯಂತ್ರಣ ಮತ್ತು ಇತರ ಪರಿಸರ ಅಂಶಗಳೂ ಹುಲಿಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆ.
ಆದರೂ, ಸೋಲಿಗರ ಅರಣ್ಯ ಹಕ್ಕುಗಳನ್ನು ಗುರುತಿಸುವುದು ಮತ್ತು ಅವರನ್ನು ಸಂರಕ್ಷಣೆಯ ಪಾಲುದಾರರನ್ನಾಗಿ ಮಾಡುವುದು ಮಹತ್ವದ ಬದಲಾವಣೆಯಾಗಿದೆ. ಅರಣ್ಯವನ್ನು ರಕ್ಷಿಸುವ ಹೆಸರಿನಲ್ಲಿ ಕಾಡಿನೊಂದಿಗೆ ಬದುಕುವ ಜನರನ್ನು ಹೊರಗಿಡುವ ಬದಲು, ಅವರ ಜ್ಞಾನ ಮತ್ತು ಅನುಭವಕ್ಕೆ ಅಧಿಕೃತ ಸ್ಥಾನ ನೀಡಬೇಕು ಎಂಬ ಸಂದೇಶವನ್ನು ಈ ಅನುಭವ ನೀಡುತ್ತದೆ.
ಮುಂದಿನ ಪೀಳಿಗೆಗೆ ಉಳಿಯಬೇಕಾದ ಪರಿಸರ ಜ್ಞಾನ
ಆದಿವಾಸಿ ಸಮುದಾಯಗಳು, ಅದರೊಂದಿಗೆ ತಲೆಮಾರುಗಳಿಂದ ಬಂದ ಪರಿಸರ ಜ್ಞಾನ ಕಳೆದುಹೋಗಬಾರದು. ಪ್ರಾಣಿಗಳ ಹೆಜ್ಜೆ ಗುರುತು ಗುರುತಿಸುವುದು, ಔಷಧೀಯ ಸಸ್ಯಗಳ ತಿಳಿವಳಿಕೆ, ಜೇನು ಸಂಗ್ರಹದ ವಿಧಾನ, ನೀರಿನ ಮೂಲಗಳ ಗುರುತು, ಕಾಡಿನ ಋತುಮಾನ ಬದಲಾವಣೆ ಮತ್ತು ಸಸ್ಯಗಳ ಪುನರುತ್ಪಾದನೆಯಂತಹ ಜ್ಞಾನವನ್ನು ಸಮುದಾಯದ ಅನುಮತಿಯೊಂದಿಗೆ ದಾಖಲಿಸಬೇಕು. ಶಾಲೆ ಮತ್ತು ಸಮುದಾಯ ಮಟ್ಟದಲ್ಲಿ ಸ್ಥಳೀಯ ಪರಿಸರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು.
ಈ ವಿಶೇಷ ವರದಿ ಓದಿದ್ದೀರಾ? ವನ್ಯಜೀವಿ ಸಂಘರ್ಷದ ಸುಳಿಯಲ್ಲಿ ಅರಣ್ಯದ ಭವಿಷ್ಯ: ಸಂರಕ್ಷಣೆಯ ಹೆಸರಿನಲ್ಲಿ ಹೊಸ ಹಿತಾಸಕ್ತಿಗಳಿಗೆ ಅವಕಾಶವೇ?
ಆದಿವಾಸಿ ಯುವಕರಿಗೆ ವನ್ಯಜೀವಿ ಮೇಲ್ವಿಚಾರಣೆ, ಅರಣ್ಯ ಪುನರುಜ್ಜೀವನ, ಕಾಡ್ಗಿಚ್ಚು ಮುನ್ನೆಚ್ಚರಿಕೆ ಮತ್ತು ಜೀವವೈವಿಧ್ಯ ದಾಖಲಾತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಕಾಡಿನ ಮಕ್ಕಳನ್ನು ಕಾಡಿನಿಂದ ದೂರವಿಟ್ಟು ಕಾಡನ್ನು ಉಳಿಸುವ ಪ್ರಯತ್ನ ಪೂರ್ಣ ಯಶಸ್ಸು ಕಾಣಲಾರದು. ಅವರ ಹಕ್ಕು, ಜ್ಞಾನ ಮತ್ತು ಬದುಕನ್ನು ಗೌರವಿಸುವುದೇ ಶಾಶ್ವತ ಸಂರಕ್ಷಣೆಯ ದಾರಿ.
ಈ ವಿಶೇಷ ಲೇಖನ ಓದಿದ್ದೀರಾ? ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ ಐಕ್ಯತೆ ಬಲವಾಗಲಿ
ಕಾಡು ಆದಿವಾಸಿಗಳ ಮನೆ. ವನ್ಯಜೀವಿಗಳು ಅವರ ಸಹಜೀವಿಗಳು. ಪ್ರಕೃತಿ ಅವರ ಅಸ್ತಿತ್ವ. ಈ ಮೂರರ ನಡುವಿನ ಸಂಬಂಧವನ್ನು ಮುರಿಯದೆ ಉಳಿಸುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಬಂದೂಕು ಮತ್ತು ಬೇಲಿಗಳಿಂದ ಮಾತ್ರ ಕಾಡನ್ನು ರಕ್ಷಿಸಲಾಗದು; ಕಾಡಿನ ಭಾಷೆ ಅರಿತ ಜನರ ಜ್ಞಾನಕ್ಕೂ ಸಂರಕ್ಷಣೆಯಲ್ಲಿ ಸಮಾನ ಸ್ಥಾನ ನೀಡಿದಾಗ ಮಾತ್ರ ಮನುಷ್ಯ ಮತ್ತು ವನ್ಯಜೀವಿಗಳ ಸಹಬಾಳ್ವೆ ಶಾಶ್ವತವಾಗಲು ಸಾಧ್ಯ.
ಸಂಚಿಕೆ ಮುಂದುವರಿಯಲಿದೆ…



