ನಮ್ ಜೀವನ | ಕಷ್ಟ ಕೋಟಲೆಯಿಂದ ಬದುಕಿನ ಬೆಳಕಿನ ದಾರಿ ತೋರಿದ ಕ್ಯಾಬ್ ಡ್ರೈವಿಂಗ್

Date:

Advertisements
ಈಗ 27 ವರ್ಷ, ನಾನು 19 ವರ್ಷದವನಿದ್ದಾಗಿನಿಂದ ಬೆಂಗಳೂರಿನಲ್ಲಿ ಕ್ಯಾಬ್ ಓಡಿಸುತ್ತಿದ್ದೇನೆ. ಮಾಡುವ ಕೆಲಸದಲ್ಲಿ ನನಗೆ ಖುಷಿ ಇದೆ. ದಿನಕ್ಕೆ 4 ರಿಂದ 5 ಸಾವಿರ ದುಡಿಯುತ್ತಿದ್ದೇನೆ. ತಿಂಗಳಿಗೆ ಲಕ್ಷ ದುಡಿಯಲು ಪ್ರಯತ್ನಿಸುತ್ತೇನೆ. ಖರ್ಚು ಕಳೆದು, ಇಎಂಐ ಕಟ್ಟಿ ಅಲ್ಪ ಸ್ವಲ್ಪ ಉಳಿಯುತ್ತದೆ… ಅಷ್ಟು ಸಾಕು

 

ರಾಜಧಾನಿಯ ಆಧುನಿಕ ಜೀವನಶೈಲಿ, ಹವಾಮಾನ, ಮೆಟ್ರೋಪಾಲಿಟನ್ ಪರಿಸರ ಜನರನ್ನು ಆಕರ್ಷಿತರನ್ನಾಗಿ ಮಾಡುತ್ತದೆ. ನಗರದಲ್ಲಿ ಮೂಲ ಬೆಂಗಳೂರಿಗರು ಕಾಣಸಿಗುವುದೇ ಕಷ್ಟಕರವಾಗಿದೆ. ಏಕೆಂದರೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ಹೊರ ರಾಜ್ಯದ ಜನರು ದುಡಿಮೆಗಾಗಿ ಬೆಂಗಳೂರಿಗೆ ಆಗಮಿಸುವುದು ಸರ್ವೇ ಸಾಮಾನ್ಯವಾಗಿದೆ. ಕಲಿತ ಜನರು ನಗರದ ಐಟಿ, ಬಿಟಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನು ಕಲಿಕೆ ಮುಂದುವರೆಸದೇ ಇರುವವರು, ಅನಕ್ಷರಸ್ಥರನ್ನು ಸಹ ನಗರ ಕೈ ಬಿಟ್ಟಿಲ್ಲ. ಅವರೂ ಕೂಡ ಸ್ವಂತಂತ್ರವಾಗಿ ದುಡಿಮೆ ಮಾಡಲು ನಗರ ದಾರಿ ಮಾಡಿಕೊಟ್ಟಿದೆ. ಹೌದು, ಒಬ್ಬೊಬ್ಬರ ಜೀವನ ಒಂದೊಂದು ರೀತಿಯಾಗಿ ಇರುತ್ತದೆ. ಇದೀಗ ಅಕ್ಷರಸ್ಥರು, ಅನಕ್ಷರಸ್ಥರು ಎನ್ನದೇ ಡಬಲ್ ಪದವಿ ಹೊಂದಿದವರು ಕೂಡ ನಗರದಲ್ಲಿ ಟ್ಯಾಕ್ಸಿ ಓಡಿಸಿ ಜೀವನ ಸಾಗಿಸುತ್ತಿದ್ದಾರೆ.

ಸದ್ಯ ನಗರದಲ್ಲಿ ಲಕ್ಷಾಂತರ ಜನರು ಟ್ಯಾಕ್ಸಿ ಓಡಿಸುತ್ತಾ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇವರಲ್ಲಿ, ಉತ್ತರ ಕರ್ನಾಟಕದಿಂದ ನಗರಕ್ಕೆ ಬಂದವರ ಪಾಲು ಕೂಡ ಇದೆ. ಅಂತಹವರಲ್ಲಿ, ಬಸವರಾಜ ಕೂಡ ಒಬ್ಬರು. ಬಡತನದ ನಡುವೆಯೂ ಪಿಯುಸಿವರೆಗೆ ಓದಿ, ಕುಟುಂಬ ಬಂಡಿ ನೂಕಲು ಬೆಂಗಳೂರಿಗೆ ಬಂದು ಟ್ಯಾಕ್ಸಿ ಓಡಿಸುತ್ತಿದ್ದಾರೆ. ದುಡಿದ ಹಣದಿಂದ ತಮ್ಮ ಕುಟುಂಬವನ್ನ ಸಲುಹುತ್ತಿದ್ದಾರೆ.

ತಮ್ಮ ಬದುಕಿನ ಬಂಡಿಯ ಕುರಿತು ಈ ದಿನ.ಕಾಮ್‌ ಜತೆಗೆ ಬಸವರಾಜ ಅವರು ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಜೀವನದ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಬನ್ನಿ ಅವರ ಬದುಕಿನೊಂದಿಗೆ ಪ್ರಯಾಣ ಬೆಳೆಸೋಣ…

Advertisements

ಕುಂದಾನಗರಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮದನಭಾವಿ ಎಂಬ ಕುಗ್ರಾಮದಲ್ಲಿ ನಾನು ಹುಟ್ಟಿ ಬೆಳೆದಿದ್ದು. ನಾವು ಮೂರು ಜನ ಅಣ್ಣ-ತಮ್ಮಂದಿರು, ನಮಗಿರುವುದೇ ಒಂದೂವರೆ ಎಕರೆ ಜಮೀನು, ವರ್ಷದಲ್ಲಿ ಎರಡು ತಿಂಗಳು ಮಾತ್ರ ನಮ್ಮ ಜಮೀನಿನಲ್ಲಿ ಕೆಲಸ ಇರುತ್ತೆ. ಆದರೆ, ಲಾಭ ಬರುತ್ತದೆ ಎಂಬುದು ದೂರದ ಮಾತು. ನಮ್ಮ ಅಪ್ಪ-ಅಮ್ಮ ಜಮೀನು ಕೆಲಸದ ಜತೆಗೆ ಹೊರಗಡೆ ಕೂಲಿ ಕೆಲಸ ಮಾಡಿ ವಾರಕ್ಕೆ ₹250 ದುಡಿದು ನಮ್ಮ ಹೊಟ್ಟೆಗೆ ಹಿಟ್ಟಾಕುತ್ತಿದ್ದರು.

ನಾವು ಚಿಕ್ಕವರಿದ್ದಾಗಿನಿಂದಲೇ ನಮಗೆ ಜೀವನ ಎಂದರೆ ಏನು? ಜೀವನದಲ್ಲಿ ಎಷ್ಟು ಕಷ್ಟ ಇರುತ್ತದೆ? ಯಾವ ರೀತಿಯ ಕಷ್ಟಗಳಿರುತ್ತವೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಎಷ್ಟೇ ಕಷ್ಟ ಇದ್ದರೂ ನಮ್ಮ ಅಪ್ಪ-ಅಮ್ಮ ಯಾವತ್ತೂ ನಮ್ಮನ್ನು ಉಪವಾಸ ಮಲಗಿಸಿಲ್ಲ. ನಮ್ಮ ಹೊಟ್ಟೆಯ ಬಗ್ಗೆಯೇ ಅವರ ಮೊದಲ ಕಾಳಜಿ.

ಅಪ್ಪ-ಅಮ್ಮನ ಕಷ್ಟ ಕಂಡ ನಾವು ದುಡಿಯಬೇಕು ಎಂಬ ಹಂಬಲವನ್ನು ಚಿಕ್ಕವರಿದ್ದಾಗಿನಿಂದಲೇ ಬೆಳೆಸಿಕೊಂಡೆವು. ದ್ವಿತೀಯ ಪಿಯುಸಿ ತೇರ್ಗಡೆಯಾದ ನಂತರ ಕೆಲಸ ಅರಸಿ ಬೆಂಗಳೂರಿನತ್ತ ಹೊರಟೆ…

ಬೆಂಗಳೂರಿಗೆ ನನ್ನ ಪಯಣ

ಉತ್ತಮ ಅಂಕಗಳೊಂದಿಗೆ ಪಿಯುಸಿ ತೇರ್ಗಡೆಯಾದರೂ ಆರ್ಥಿಕ ಹೊಡೆತದ ಕಾರಣ ವಿದ್ಯಾಭ್ಯಾಸ ಮುಂದುವರೆಸಲು ಆಗಲಿಲ್ಲ. ದುಡಿದು ಮನೆಗೆ ನನ್ನ ಕೈಲಾದಷ್ಟು ಹಣ ನೀಡಲೇಬೇಕಾದ ಪರಿಸ್ಥಿತಿ ಇತ್ತು. ಹೀಗಾಗಿ, ಓದು ನಿಲ್ಲಿಸಿ, ಒಂದು ಬ್ಯಾಗ್‌ಗೆ ನನ್ನ ನಾಲ್ಕು ಜತೆ ಬಟ್ಟೆ ತುಂಬಿಕೊಂಡು ಬೆಂಗಳೂರಿಗೆ ಪಯಣ ಆರಂಭಿಸಿದೆ.

ನನ್ನ ಹೆತ್ತವರಿಗೆ ನಾನು ಬೆಂಗಳೂರಿಗೆ ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಬೆಂಗಳೂರಿಗೆ ಹೋಗಬೇಡ ನಮ್ಮ ಜೊತೆಗೆ ಇರು ಎಂದು ದುಂಬಾಲು ಬಿದ್ದರು. ಊರಿನಲ್ಲಿ ಇದ್ದು ಏನು ಕೆಲಸ ಮಾಡುವುದು? ಕೆಲಸ ಮಾಡಿದರೂ ಎಷ್ಟು ಸಂಬಳ ಬರುತ್ತದೆ? ಎಂಬ ಎಲ್ಲ ಪ್ರಶ್ನೆಗಳನ್ನ ಅವರ ಮುಂದೆ ಇಟ್ಟೆ. ಆದರೂ ಅಪ್ಪ-ಅಮ್ಮ ಅವರ ಜೊತೆಗೆ ಇರುವಂತೆ ಒತ್ತಾಯಿಸಿದರು. ಬೆಂಗಳೂರಿಗೆ ತೆರಳಲು ಆಗಿನ ಸಮಯದಲ್ಲಿ ಅಪ್ಪ ಹಣ ಕೊಡಲಿಲ್ಲ. ನಾನು ಹಠ ಮಾಡಿದೆ. ಬೆಂಗಳೂರಿಗೆ ಹೋಗಿ ದುಡಿಯುವೆ ಎಂಬ ವಿಶ್ವಾಸ ನನ್ನಲ್ಲಿ ಮೂಡಿತ್ತು. ಹಾಗಾಗಿ, ಪಕ್ಕದ ಮನೆ ಅಜ್ಜಿಯ ಬಳಿ ₹300 ಸಾಲ ಪಡೆದು ರೈಲು ಹತ್ತಿ ಬೆಂಗಳೂರಿಗೆ ಹೊರಟೆ…

ಮೆಜೆಸ್ಟಿಕ್‌ನಲ್ಲಿ ಏಳು ದಿನ ಕಳೆದೆ

ನಮ್ಮ ಊರಿನವರೇ ಒಬ್ಬರು ಬೆಂಗಳೂರಿನಲ್ಲಿ ಸೆಕ್ಯೂರಿಟಿ ಕೆಲಸ ಕೊಡಿಸುವೆ ಎಂದು ಹೇಳಿದ್ದರು. ಅದನ್ನು ನಂಬಿ ನಾನು ನನ್ನ ಮೂರು ಜನ ಸ್ನೇಹಿತರ ಜತೆಗೆ ಬೆಂಗಳೂರಿಗೆ ಹೊರಟು ಬಂದೆ. ಆದರೆ ನಗರಕ್ಕೆ ಬಂದ ನಂತರ ಅವರು ಹಲವಾರು ದಾಖಲೆ ಪತ್ರಗಳನ್ನು (ರೆಂಟಲ್ ಅಗ್ರಿಮೆಂಟ್, ಆಧಾರ ಕಾರ್ಡ್‌, ಪಾನ್ ಕಾರ್ಡ್‌ ಸೇರಿದಂತೆ ಇನ್ನಿತರ) ಕೇಳಿದರು. ಅವು ಯಾವುವೂ ನಮ್ಮ ಬಳಿ ಇರಲಿಲ್ಲ. ದಾಖಲೆ ಪತ್ರಗಳನ್ನು ನೀಡದಿದ್ದರೆ ಕೆಲಸ ಇಲ್ಲ ಎಂದು ಹೇಳಿದ್ದರು. ಬಳಿಕ ಏನು ಮಾಡುವುದು ಎಲ್ಲಿ ಹೋಗುವುದು ಒಂದೂ ಅರ್ಥವಾಗದೆ ಸತತ ಏಳು ದಿನ ಮೆಜೆಸ್ಟಿಕ್ ಬಸ್‌ ಸ್ಟ್ಯಾಂಡ್‌ನಲ್ಲಿ ನಾನು ನನ್ನ ಸ್ನೇಹಿತರು ತಂಗಿದ್ದೆವು. ಅಲ್ಲೇ ಊಟ ನಿದ್ದೆ, ಸುಲಭ ಶೌಚಾಲಯದಲ್ಲಿ ಸ್ನಾನ ಹೀಗೆ ದಿನ ಕಳೆಯುತ್ತಿತ್ತು. ಆದರೆ, ಊರಿಗೆ ವಾಪಸ್ ಹೋಗಬೇಕು ಎಂಬ ವಿಷಯ ನಮ್ಮ ಮುಂದೆ ಇರಲಿಲ್ಲ. ಏಕೆಂದರೆ ಆರ್ಥಿಕ ಸಮಸ್ಯೆ ಬೆನ್ನಿಗೆ ಬಿಗಿದುಕೊಂಡಿತ್ತು.

ಮೆಜೆಸ್ಟಿಕ್‌ನ ಗೋಡೆಯೊಂದರ ಮೇಲೆ ‘ಕೆಲಸಕ್ಕಾಗಿ ಬೇಕಾಗಿದ್ದಾರೆ ಊಟ ವಸತಿ ಜತೆಗೆ ₹10,000 ಸಂಬಳ ನೀಡಲಾಗುವುದು’ ಎಂಬ ಪೋಸ್ಟ್‌ರ್‌ವೊಂದನ್ನು ಅಂಟಿಸಲಾಗಿತ್ತು. ಇದನ್ನು ನೋಡಿದ ನಾವು ನಾಲ್ಕು ಜನ ಸ್ನೇಹಿತರು ಸೇರಿ ಪೋಸ್ಟರ್‌ನಲ್ಲಿ ಇರುವ ನಂಬರ್‌ಗೆ ಕರೆ ಮಾಡಿ ಜಾಗ ತಿಳಿದುಕೊಂಡೆವು.

ಮೆಜೆಸ್ಟಿಕ್‌ನಿಂದ ಕುಂಬಳಗೋಡಿಗೆ ದಾರಿ

ಅಬ್ಬಾ… ಅಂತೂ ಇಂತೂ ಕೆಲಸ ಸಿಕ್ಕಿತಲ್ಲ ಎಂಬ ಖುಷಿಯಲ್ಲಿ ಮೂವರು ಬ್ಯಾಗ್‌ಗಳನ್ನು ಎತ್ತಿಕೊಂಡು ಕುಂಬಳಗೋಡು ಕಡೆಗೆ ಪಯಣ ಬೆಳೆಸಿದೆವು. ಅದು ಗಾರ್ಮೆಂಟ್ಸ್. ಅಲ್ಲಿ ಹೋದ ಮೇಲೆ ಅವರು, ಆರು ತಿಂಗಳು ನಿಮ್ಮ ದುಡ್ಡಿನಲ್ಲೇ ಎಲ್ಲ ನೀವೇ ಮಾಡಿಕೊಳ್ಳಬೇಕು. ಎಂಟು ಗಂಟೆ ಕೆಲಸ ಇರುತ್ತದೆ ಎಂದು ಹೇಳಿದ್ದರು. ಊರಿಂದ ತಂದ ದುಡ್ಡೆಲ್ಲ ಖಾಲಿಯಾಗುತ್ತಿರುವ ಹೊತ್ತಿನಲ್ಲಿ ಸಿಕ್ಕ ಈ ಕೆಲಸವನ್ನು ಮಾಡಲು ಒಪ್ಪಿಕೊಂಡೆವು.

ಆ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಮೊದಲು ಹೇಳಿದ ಮಾತುಗಳಿಗೆ ತದ್ವಿರುದ್ಧವಾಗಿ ಅಲ್ಲಿ ಕೆಲಸ ಇತ್ತು. ಈ ಗಾರ್ಮೆಂಟ್ಸ್‌ನಲ್ಲಿ ನಿಂತುಕೊಂಡು 13 ತಾಸು ಕೆಲಸ ಮಾಡಬೇಕಾಗಿತ್ತು. ಏನಾದರೂ ಸಮಸ್ಯೆ ಹೇಳಿಕೊಂಡರೆ ಬೈಯುತ್ತಿದ್ದರು, ಕೆಲಸ ಬಿಟ್ಟು ಹೋಗು ಎಂದು ಹೇಳುತ್ತಿದ್ದರು, ಸಂಬಳ ಕೊಡುವುದಿಲ್ಲ ಎಂದು ಹೆದರಿಸುತ್ತಿದ್ದರು. ಹೀಗಾಗಿ, ಸುಮ್ಮನೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಯಿತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಸುಳ್ಳು ಆರೋಪ: ತಪ್ಪು ಯತ್ನಾಳರದ್ದೋ, ಕಾಂಗ್ರೆಸ್ಸಿನವರದ್ದೋ?

ಗಾರ್ಮೆಂಟ್ಸ್‌ ಕೆಲಸ ಮಾಡುವ ಸಮಯದಲ್ಲಿ ತುಂಬಾ ಸಮಸ್ಯೆಗಳಿದ್ದ ಕಾರಣ 1 ತಿಂಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಒಂದೂವರೆ ತಿಂಗಳಿಗೆ ಅಲ್ಲಿ ಕೆಲಸ ಮಾಡುವುದನ್ನು ಬಿಟ್ಟೆ. ಆದರೆ ನಾನು ಕೆಲಸ ಬಿಟ್ಟಾಗ ಅವರು ನನ್ನ ಕೈಗೆ ಕೊಟ್ಟ ಸಂಬಳ ಕೇವಲ ₹3,500. ಯಾಕಿಷ್ಟು ಸಂಬಳ ಕೊಟ್ರಿ, ಹೇಳಿದ್ದು ₹10,000 ಅಲ್ವಾ ಎಂದು ಕೇಳಿದರೆ, ಎಲ್ಲ ಚಾರ್ಜಸ್‌ ಕಟ್ ಆಗಿ ಅಷ್ಟು ಬರುತ್ತೆ ಎಂದು ಕಳುಹಿಸಿದ್ದರು. ನಾವು ಅವರೊಂದಿಗೆ ವಾದ ಮಾಡುವ ಪರಿಸ್ಥಿತಿ ಇರಲಿಲ್ಲ. ಹಾಗಾಗಿ, ಸುಮ್ಮನೆ ಬಂದೆವು…

ಅಲ್ಲಿಂದ ಬಂದ ಮೇಲೆ ನಾನು ಬೆಂಗಳೂರಿನಲ್ಲಿಯೇ ದುಡಿದು ಮನೆಗೆ ದುಡ್ಡು ಕಳಿಸಲೇಬೇಕಾಗಿತ್ತು. ಏನು ಕೆಲಸ ಮಾಡಬೇಕು, ಎಲ್ಲಿ ಇರಬೇಕು, ಹೇಗೆ ಇರಬೇಕು ಎಂಬ ನೂರಾರು ಚಿಂತೆಯ ಜತೆಗೆ ದಿನಗಳನ್ನು ಕಳೆದೆ.

ನನ್ನ ಸಂಬಂಧಿ ಕೆಎಂಎಫ್‌ ಬೆಂಗಳೂರು ಡೈರಿನಲ್ಲಿ ಡ್ರೈವರ್ ಆಗಿದ್ದರು. ನಾನು ಗಾಡಿ ಕ್ಲೀನರ್‌ ಆಗಿ ಕೆಲಸಕ್ಕೆ ಸೇರಿಕೊಂಡೆ. ಆದರೆ, ಅಲ್ಲಿ ಸಂಬಳ ನೀಡುತ್ತಿರಲಿಲ್ಲ. ಊಟ ಕೊಡುತ್ತಿದ್ದರು. ಇರಲು ಜಾಗ ಇರಲಿಲ್ಲ. ಒಂದೂವರೆ ವರ್ಷ ಕ್ವಾಟರ್ಸ್‌ ಫುಟ್‌ಪಾತ್‌ ಮೇಲೆ ಮಲಗಿದೆವು. ಅಲ್ಲಿ ಕ್ಲೀನರ್ ಕೆಲಸ ಮಾಡಿಕೊಂಡು ಗಾಡಿ ಓಡಿಸೋದು ಕಲಿತೆ, ಇದೇ ನನ್ನ ಜೀವನಕ್ಕೆ ದಾರಿ ತೋರಿತು.

ಕೆಎಂಎಫ್‌ನಲ್ಲಿ ಡ್ರೈವರ್ ಆಗಿದ್ದ ನನ್ನ ಸಂಬಂಧಿ ಹೊಸ ಕಾರ್ ತೆಗೆದುಕೊಂಡು ಕ್ಯಾಬ್‌ ಓಡಿಸಲು ಪ್ರಾರಂಭ ಮಾಡಿದರು. ನಮ್ಮ ಮನೆಯಲ್ಲಿಯೂ ಕೂಡ ಕಾರ್ ತೆಗೆದುಕೊಂಡು ಓಡಿಸಿ ಸಂಪಾದನೆ ಮಾಡು ಎಂದು ಹೇಳಿದರು. ನಮ್ಮ ಅಮ್ಮ ಅವರ ಬಳಿ ಇದ್ದ ಒಂದಿಷ್ಟು ಬಂಗಾರ ಒತ್ತೆ ಇಟ್ಟು ₹50,000 ಹಣ ಕೊಟ್ಟರು. ನಮ್ಮ ಅಣ್ಣ ಸ್ವಲ್ಪ ಹಣ ಕೊಟ್ಟರು. ಅದರಲ್ಲಿಯೇ ನಾನು ಒಂದು ಗಾಡಿ ತಗೊಂಡು ಬೆಂಗಳೂರಿನಲ್ಲಿ ಕ್ಯಾಬ್ ಓಡಿಸಲು ಪ್ರಾರಂಭ ಮಾಡಿದೆ.

ಡ್ರೈವರ್ ತಂದೆ                     ಕ್ಯಾಬ್‌ ಡ್ರೈವರ್ ಬಸವರಾಜ ಅವರ ತಂದೆ 

ನಾನು ಕ್ಯಾಬ್ ಓಡಿಸಲು ಪ್ರಾರಂಭ ಮಾಡಿದ ಬಳಿಕ ಸಂಪಾದನೆ ಚೆನ್ನಾಗಿ ಆಗತೊಡಗಿತು. ನನ್ನ ಅಣ್ಣ ಮತ್ತು ತಮ್ಮ ಇಬ್ಬರು ಕೂಡ ಬೆಂಗಳೂರಿಗೆ ಬಂದರು. ಈಗ ಅವರು ಕೂಡ ಕ್ಯಾಬ್ ಓಡಿಸುತ್ತಿದ್ದಾರೆ. ನಾನು ಮೊದಲು ತೆಗೆದುಕೊಂಡ ಕಾರನ್ನು ನನ್ನ ತಮ್ಮ ಓಡಿಸುತ್ತಿದ್ದಾನೆ. ಇತ್ತೀಚೆಗೆ, ಇನ್ನೊಂದು ಹೊಸ ಕಾರ್ ತೆಗೆದುಕೊಂಡಿದ್ದೇನೆ. ಈ ಹೊಸ ಕಾರನ್ನು ನನ್ನ ಅಣ್ಣ ಬೆಳಗ್ಗೆ 6ರಿಂದ ಸಾಯಂಕಾಲ 6 ಗಂಟೆಯವರೆಗೂ ಓಡಿಸುತ್ತಾರೆ. ನಾನು ಸಾಯಂಕಾಲ 6 ರಿಂದ ಬೆಳಗ್ಗೆ 6 ಗಂಟೆಯವರೆಗೂ ಓಡಿಸುತ್ತೇನೆ. ಹೀಗೆ ಗಾಡಿ ಓಡಿಸಿಕೊಂಡು ಮೂರು ಜನ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದೇವೆ. ಈಗ ಮನೆಗೂ ಹಣ ನೀಡುತ್ತೇವೆ. ಮೊದಲಿದ್ದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಹೋಲಿಕೆ ಮಾಡಿದರೆ, ಉತ್ತಮವಾಗಿದ್ದೇವೆ ಎನಿಸುತ್ತದೆ.. ಎಂದು ಜೀವನದ ಕ್ಷಣಗಳನ್ನು ಮೆಲುಕು ಹಾಕಿದರು.

ಕ್ಯಾಬ್‌ ಜೀವನ

ನನಗೆ ಈಗ 27 ವರ್ಷ, ನಾನು 19 ವರ್ಷದವನಿದ್ದಾಗಿನಿಂದ ಬೆಂಗಳೂರಿನಲ್ಲಿ ಕ್ಯಾಬ್ ಓಡಿಸುತ್ತಿದ್ದೇನೆ. ಮಾಡುವ ಕೆಲಸದಲ್ಲಿ ನನಗೆ ಖುಷಿ ಇದೆ. ಕ್ಯಾಬ್‌ ಡ್ರೈವರ್ ಎಂದರೇ ಊಟ, ನಿದ್ದೆ, ಕುಟುಂಬ ಎಲ್ಲ ಮರೆತು ಕೆಲಸ ಮಾಡಬೇಕು. ಈ ಮೂರು ಬೇಕು ಎಂದರೆ ಕ್ಯಾಬ್ ಓಡಿಸಲು ಆಗುವುದಿಲ್ಲ. ಸರಿಯಾದ ಸಮಯಕ್ಕೆ ನಿದ್ದೆ, ಊಟ ಬೇಕು ಎನ್ನುವವರು ಹೆಚ್ಚು ದಿನ ಕ್ಯಾಬ್ ಓಡಿಸುವ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಇದು ನನ್ನ ಅಭಿಪ್ರಾಯ.

ಸದ್ಯ ದಿನಕ್ಕೆ 4 ರಿಂದ 5 ಸಾವಿರ ದುಡಿಯುತ್ತಿದ್ದೇನೆ. ತಿಂಗಳಿಗೆ ಏನಿಲ್ಲ ಎಂದರೂ ಲಕ್ಷ ದುಡಿಯಲು ಪ್ರಯತ್ನಿಸುತ್ತೇನೆ. ಗಾಡಿಯ ಇಎಂಐ 15 ಸಾವಿರ ಕಳೆದು ಉಳಿದ ಸ್ವಲ್ಪ ಹಣ ಮನೆಗೆ ಕೊಟ್ಟು ಇನ್ನು ಸ್ವಲ್ಪ ಹಣವನ್ನು ನನ್ನ ಖರ್ಚಿಗೆ ಇಟ್ಟುಕೊಳ್ಳುತ್ತೇನೆ. ಹೀಗೆ ಜೀವನ ಸಾಗುತ್ತಿದೆ…

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X