ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನಾಡಿನ ಸಮಸ್ತ ಜನರ ಬದುಕಿಗೆ ಆರ್ಥಿಕ ಭದ್ರತೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕರ್ನಾಟಕ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಜಾಗತಿಕ ಮೂಲ ಆದಾಯ (ಯುನಿವರ್ಸಲ್ ಬೇಸಿಕ್ ಇನ್‌ಕಮ್) ಪರಿಕಲ್ಪನೆಯನ್ನು ಅತಿದೊಡ್ಡ ಪ್ರಮಾಣದಲ್ಲಿ ಸಾಕಾರಗೊಳಿಸುತ್ತಿರುವ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಷಯವಾಗಿದೆ” ಎಂದರು.
“ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿಯುತ್ತಿರುವವರಿಗೆ ರಾಜ್ಯದಲ್ಲಿ ಆರ್ಥಿಕ ಪ್ರಗತಿ ಪ್ರಗತಿ ಸಾಧಿಸಿ ತೋರಿಸುವ ಮೂಲಕ ನಾವು ಉತ್ತರ ನೀಡಲಿದ್ದೇವೆ. ಹೊಸ ಅವಿಷ್ಕಾರಗಳನ್ನು ನಡೆಸಿ ಅವು ಫಲಾನುಭವಿಗಳಿಗೆ ಇನ್ನಷ್ಟು ಹೆಚ್ಚು ನೆರವಾಗುವ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಉದ್ಯುಕ್ತವಾಗಿದೆ” ಎಂದು ಹೇಳಿದರು.
“ಶಕ್ತಿ ಯೋಜನೆಯಡಿ ಮಹಿಳೆಯರು 270 ಕೋಟಿ ಟ್ರಿಪ್ ಉಚಿತ ಪ್ರಯಾಣ ಸೌಲಭ್ಯ ಪಡೆದಿದ್ದಾರೆ. ಮಹಿಳೆಯರು 6541 ಕೋಟಿ ರೂ.ಗಳಷ್ಟು ಪ್ರಯಾಣ ವೆಚ್ಚ ಉಳಿತಾಯ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರದ ಅಸಹಕಾರದಿಂದಾಗಿ ಅಕ್ಕಿಯ ಬದಲಿಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ. ನಮ್ಮ ಸರ್ಕಾರದ ಜನಕಲ್ಯಾಣ ಯೋಜನೆಗಳು ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ,ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ನೀಡುವ ವಿವಿಧ ಯೋಜನೆಗಳಡಿ 13,027 ಕೋಟಿ ರೂ.ವೆಚ್ಚ ಮಾಡಲಾಗಿದೆ” ಎಂದು ವಿವರಿಸಿದರು.
“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಮುಂಗಾರು ಹಂಗಾಮುಗಳಲ್ಲಿ ರಾಜ್ಯ ಸಂಪೂರ್ಣ ವಿಭಿನ್ನ ಪರಿಸ್ಥಿತಿಯನ್ನು ಎದುರಿಸಿದೆ.ಕಳೆದ ವರ್ಷ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೆ,ಈ ಬಾರಿ ಅತಿವೃಷ್ಟಿಗೆ ಒಳಗಾಗಿದೆ. ಕೇಂದ್ರ ಸರ್ಕಾರ ಬರಪರಿಹಾರ ಮೊತ್ತವನ್ನು ತಡವಾಗಿ ನೀಡಿದರೂ ಸಹ ರಾಜ್ಯದಲ್ಲಿ ಬರದಿಂದ ಜನರಿಗೆ ಹೆಚ್ಚು ಅನಾನುಕೂಲಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಯಿತು. .ಜೀವಹಾನಿ,ಜಾನುವಾರುಗಳ ಸಾವು ಹಾಗೂ ಮನೆ ಹಾನಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ.ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂ.ಪರಿಹಾರದೊಂದಿಗೆ ಮನೆ ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ” ಎಂದರು
“ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು “ಬಹಿಷ್ಕೃತ ಹಿತಕಾರಿಣಿ ಸಭಾ” ಸ್ಥಾಪಿಸಿದ ಘಟನೆಗೂ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ ಸ್ಮರಣೀಯ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸುತ್ತಿದೆ” ಎಂದು ಇದೇ ವೇಳೆ ಹೇಳಿದರು.
ಆಕರ್ಷಕ ಪಥ ಸಂಚಲನ
ಪರೇಡ್ ಕಮಾಂಡರ್ ಗೋಪಾಲರೆಡ್ಡಿ ಹಾಗೂ ಡೆಪ್ಯುಟಿ ಕಮಾಂಡರ್ ಹರೀಶ್ ಹೆಚ್.ಎನ್.ನೇತೃತ್ವದಲ್ಲಿ ಗಡಿ ಭದ್ರತಾ ಪಡೆ,ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಕೈಗಾರಿಕಾ ಭದ್ರತಾ ಪಡೆ,ಗೋವಾ ಪೊಲೀಸ್,ಶ್ವಾನದಳ,ಅಬಕಾರಿ, ಸಂಚಾರ ಪೊಲೀಸ್,ಅಗ್ನಿ ಶಾಮಕ ದಳ,ಗೃಹ ರಕ್ಷಕ ದಳ,ಎನ್‌ಸಿಸಿ, ರಾಷ್ಟ್ರೀಯ ಮಿಲಿಟರಿ ಶಾಲೆ, ಆರ್ಮಿ ಪಬ್ಲಿಕ್ ಶಾಲೆ,ಪೊಲೀಸ್ ಪಬ್ಲಿಕ್ ಶಾಲೆ ,ಸಮರ್ಥನಂ ಹಾಗೂ ರಮಣಶ್ರೀ ಸಂಸ್ಥೆಗಳ ದೃಷ್ಟಿವಿಕಲಚೇತನ (ಅಂಧ) ಮಕ್ಕಳು ಸೇರಿದಂತೆ ವಿವಿಧ ಶಾಲಾ ತುಕಡಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.
ಅಂಗಾಂಗ ದಾನ ಮಾಡಿದ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿಯವರು ವೇದಿಕೆಗೆ ಆಹ್ವಾನಿಸಿ ಪ್ರಶಂಸಾ ಪತ್ರ ನೀಡಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್,ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ವೇದಿಕೆಯಲ್ಲಿ ಇದ್ದರು.