ನೆನಪು | ಮಲೆನಾಡಿನ ಜನಮಾನಸದಲ್ಲಿ‌ ಬಂಗಾರಪ್ಪ ಇವತ್ತಿಗೂ ಉಸಿರಾಡುತ್ತಲೇ ಇದ್ದಾರೆ

Date:

ಅನಕ್ಷರಸ್ಥರ ಬಾಳಿಗೆ ಅಕ್ಷರ ತುಂಗಾ, ಹಸಿದವರ ಪಾಲಿಗೆ ಅನ್ನ, ವಿದ್ಯೆಯ ಅಕ್ಷಯ ಪಾತ್ರೆ,
ಬಡವರ ಪಾಲಿಗೆ ನೆರಳು ಕೊಟ್ಟ ಆಶ್ರಯದಾತ, ಬಡ ಚೌಡಿ ದೈವ ಭೂತಗಳಿಗೆ ನೆಲೆ ಕೊಟ್ಟ ಆರಾಧಕ, ಮಧ್ಯಮವರ್ಗದ ಗುಡಿ ಕೈಗಾರಿಕೆಗಳಿಗೆ ಚೈತನ್ಯದ ವಿಶ್ವಶಕ್ತಿಯ ಹರಿಕಾರ ಎಸ್‌ ಬಂಗಾರಪ್ಪ

ಸಮಾಜವಾದಿ, ಸಮತಾವಾದಿ, ಸಹಬಾಳ್ವೆ, ಸಹಿಷ್ಣುತೆಯ ಸರ್ವರ ಸ್ವಾತಂತ್ರ್ಯದ ಹರಿಕಾರ
ಕರುನಾಡ ಬಂಗಾರ ಎಸ್ ಬಂಗಾರಪ್ಪ.‌ ಅವರು ಮಹಾನ್ ಮೇಧಾವಿ, ಸ್ವಾಭಿಮಾನಿ, ಅದ್ಭುತ ಹಾಡುಗಾರ, ಡೊಳ್ಳು ಕುಣಿತದ ಪಂಟರ್, ಗ್ರಾಮೀಣ ಸೊಗಡಿನ ಪ್ರತಿಭೆ, ಸಮಾಜವಾದಿ ನೆಲದ ಹೋರಾಟಗಾರ, ಹಠಕ್ಕೆ ಇನ್ನೊಂದು ಹೆಸರಿನಂತಿದ್ದ ಕನ್ನಡನಾಡು ಕಂಡ ಕಲರ್ ಫುಲ್ ರಾಜಕಾರಣಿ. ಅವರು ಬದುಕಿದ್ದರೆ ಇಂದಿಗೆ ತೊಂಬತ್ತು ವರ್ಷ ತುಂಬುತ್ತಿತ್ತು. ನಾಡು ಅವರನ್ನು ಕಳೆದುಕೊಂಡು ಹನ್ನೊಂದು ವರ್ಷವೇ ಆದರೂ ಇಂದಿಗೂ ಮಲೆನಾಡಿನ ಜನಮಾನಸದಲ್ಲಿ‌ ಬಂಗಾರಪ್ಪ ಉಸಿರಾಡುತ್ತಲೇ ಇದ್ದಾರೆ.

ವಿಧಾನಸಭೆಯ ಸದನದಲ್ಲಿ ಚರ್ಚೆಗೂ ಒಳಪಡಿಸದೆ, ಮಲೆನಾಡು ಭಾಗದ ಜನಪ್ರತಿನಿಧಿಗಳಿಗೆ ಕನಿಷ್ಠ ಅವಗಾಹನೆಗೂ ತರದೇ ಸರ್ಕಾರ ರದ್ದು ಮಾಡಿರುವ ಡಿನೋಟಿಫಿಕೇಷನ್‌ನಿಂದ ಶರಾವತಿ ಮುಳುಗಡೆಯ ಭೂಸಂತ್ರಸ್ತರು ಭೂಮಿಯ ಹಕ್ಕು ಕಳೆದುಕೊಂಡಿರುವ ಸಂಕಷ್ಟದ ಘಳಿಗೆಯಲ್ಲಿ, ಮಲೆನಾಡು ಕಂಡು ಕೇಳರಿಯದ ಎಲೆಚುಕ್ಕಿ ರೋಗಕ್ಕೆ ತನ್ನ ಆರ್ಥಿಕ ಸಂಪತ್ತಾದ ಅಡಿಕೆ ತೋಟವನ್ನು ಬಲಿಕೊಡುತ್ತಾ ಯಾವ ಪರಿಹಾರವೂ ಸರ್ಕಾರದ ವತಿಯಿಂದ ಬಾರದೇ ಜನರು ಕಂಗಾಲಾಗಿರುವಾಗ, ಅವರೊಬ್ಬರಿರಬೇಕಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ವಾಭಿಮಾನಕ್ಕಾಗೇ ಬದುಕಿದ ಎಸ್ ಬಂಗಾರಪ್ಪ ಜನರ ಏಳಿಗೆ ಬಯಸಿ ಸರ್ವ ಆಡಳಿತಕ್ಕೂ ಸೆಡ್ಡು ಹೊಡೆಯಬಲ್ಲ ಗಟ್ಟಿ ನಾಯಕತ್ವದ ನಾಯಕರ ಬರ ಅನುಭವಿಸುತ್ತಿರುವ ಮಲೆನಾಡಿಗೆ ಬಂಗಾರಪ್ಪನವರ ನಂತರ ಸೃಷ್ಟಿಯಾದ ಶೂನ್ಯ ಬಹುದೊಡ್ಡ ನಷ್ಟವೇ ಸರಿ. ಮಲೆನಾಡಿಗರ ಕಣ್ಣಲ್ಲಿ ಊರೂರಲ್ಲಿ ಹತ್ತು ಜನರ ಹೆಸರು ಹಿಡಿದು ಹೇಳಬಲ್ಲ, ಪ್ರತಿ ಊರಿನ ನಾಡಿಮಿಡಿತ ಬಲ್ಲ ನಾಯಕರೆಂದರೆ ಅದು ಸಾರೆಕೊಪ್ಪದ ಬಂಗಾರಪ್ಪ ಮಾತ್ರ.

ಎಸ್ ಬಂಗಾರಪ್ಪ ಎಂಬ ಬಡ ಕುಟುಂಬದ ವಕೀಲರಾದ ಅವರು ರಾತ್ರೋರಾತ್ರಿ ನಾಯಕರಾಗಿ ರೂಪುಗೊಂಡವರಲ್ಲ. ಕಾಗೋಡು ಸತ್ಯಾಗ್ರಹದ ನಂತರದ ಗೇಣಿ ಹೋರಾಟಗಳಲ್ಲಿ ರೈತರ ಮೇಲೆ ಕೇಸ್ ಮೇಲೆ ಕೇಸ್ ಹಾಕಿ ಸರ್ಕಾರ ಒಳಗಟ್ಟುತ್ತಿದ್ದರೆ, ಒಬ್ಬೊಬ್ಬ ರೈತನ ಕೇಸ್‌ಗೂ ಉಚಿತವಾಗಿ ಸಮರ್ಥವಾಗಿ ವಾದ ಮಂಡಿಸಿ, ರೈತರ ಮನೆ ಜಪ್ತಿ, ಆಸ್ತಿ ಜಪ್ತಿ ಹಾಗೂ ಆರೋಪಿತ ರೈತರು ಜೈಲು ಪಾಲಾಗದಂತೆ ಕಾಪಾಡುತ್ತಿದ್ದ ಯುವ ವಕೀಲರಾಗಿದ್ದ ಅವರು ರೈತರ ಪಾಲಿನ ಆಶಾಕಿರಣವಾಗಿದ್ದರು.

ಬಡವರಿಗಾಗಿ, ರೈತರಿಗಾಗಿ ತುಡಿಯುತ್ತಿದ್ದ ಸೊರಬದ ಯುವ ವಕೀಲರಾಗಿದ್ದ ಇವರು, ಶಾಂತವೇರಿ ಗೋಪಾಲಗೌಡರ ಕಣ್ಣಿಗೆ ಬಿದ್ದ ಮೇಲೆ ಸಂಯುಕ್ತ ಸಮಾಜವಾದಿ ಪಾರ್ಟಿಯ ಸೊರಬ ಕ್ಷೇತ್ರದ ಉಮೇದುವಾರಿಕೆಗೆ ಏಕ ಮಾತ್ರ ಆಯ್ಕೆಯಾಗಿದ್ದರು. ರಾಜಕೀಯ ಗುರುವಿನ ನಂಬಿಕೆ ಉಳಿಸುವಂತೆ ಮೊದಲ ಯತ್ನದಲ್ಲೇ 1967ರಲ್ಲಿ ಸೊರಬದಿಂದ ಎಸ್ ಬಂಗಾರಪ್ಪ ಅವರು ಶಾಸಕರಾಗಿ ಅಯ್ಕೆಯಾಗಿದ್ದರು.

ಶಾಂತವೇರಿ ಗೋಪಾಲಗೌಡರ ಅಕಾಲಿಕ ಮರಣದಿಂದ ಬಡವರ ಪರ, ರೈತರ ಪರ ಧ್ವನಿಯಾಗಬಲ್ಲ ನಾಯಕನ‌ ಕೊರತೆಯನ್ನು ನಾಡು ಎದುರಿಸುತ್ತಿತ್ತು. ದೇವರಾಜ ಅರಸರಿಗೂ ಒಬ್ಬ ಹಿಂದುಳಿದ ವರ್ಗದ ಗಟ್ಟಿ ನಾಯಕನ ಜೊತೆಗಾರಿಕೆ ಅವಶ್ಯವಾಗಿತ್ತು. ದೇವರಾಜ ಅರಸರು ಎಸ್ ಬಂಗಾರಪ್ಪ ಅವರನ್ನು ಮಂತ್ರಿ ಮಾಡಿ ಪಕ್ಕದಲ್ಲಿ ಕೂರಿಸಿಕೊಂಡರು. ಬಂಗಾರಪ್ಪ ಎಂಬ ಯುವ ರಾಜಕಾರಣಿಗೆ ಮಂತ್ರಿಗಿರಿಯ ಕೆಲಸಗಳಿಂದ ಮನ‌ಮನೆಗೆ ತಲುಪಲು ಹೆಚ್ಚು ಕಷ್ಟವಾಗಲಿಲ್ಲ. 1967ರಿಂದ ನಂತರ ಸರಿಸುಮಾರು ಇಪ್ಪತೊಂಬತ್ತು ವರ್ಷ ಸತತ ಏಳು ಬಾರಿ ಶಾಸಕರಾಗಿ ಆಯ್ಕೆಯಾಗುತ್ತಲೇ ಹೋದರು. ಎಷ್ಟೋ ಬಾರಿ ನಾಮಿನೇಷನ್ ಮಾಡಿದ್ದು ಬಿಟ್ಟರೆ ಕ್ಷೇತ್ರಕ್ಕೂ ಕಾಲಿಟ್ಟು ವೋಟ್ ಕೇಳದೇನೆ ಗೆದ್ದು ಹೋದ ಉದಾಹರಣೆಯೂ ಇದೆ. ಸೊರಬದ ಜನಕ್ಕೆ ಬಂಗಾರಪ್ಪ ಅನ್ನುವ ಹೆಸರಷ್ಟೇ ಸಾಕಿತ್ತು ಗೆಲ್ಲಿಸಲು.

ರಾಜಕಾರಣದ ಆರಂಭ ಸಂಯುಕ್ತ ಸೋಷಿಯಲ್ ಪಾರ್ಟಿಯಿಂದ ಆರಂಭಿಸಿದರೂ ಅತಿ ಹೆಚ್ಚು ಸಮಯ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಬಂಗಾರಪ್ಪ ಎಂಬ ರಾಜಕಾರಣಿಯನ್ನು ಯಾವತ್ತೂ ಒಂದು‌ ಪಕ್ಷದ ಪರಿಧಿಯಲ್ಲಿ ಕಟ್ಟಿ ಹಾಕುವುದು ಕಷ್ಟ ಸಾಧ್ಯ. ತನ್ನ‌ ಮೊದಲ ದಿನದಿಂದಲೂ ಹೃದಯದ ಮಾತು ಕೇಳಿ ಸ್ವಾಭಿಮಾನದ ರಾಜಕಾರಣ ಮಾಡಿದರೇ ಹೊರತು ಕಾಲಕ್ಕೆ ತಕ್ಕಂತ ವೇಷ ಹಾಕಿ ಕೂರುವ ಮೆದುಳಿನ ರಾಜಕಾರಣಕ್ಕೆ ಎಂದೂ ಬೆಲೆ‌ ಕೊಡಲಿಲ್ಲ.

ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ದಲಿತರ ಆಶಾಕಿರಣವಾಗಿ ಇಡೀ ನಾಡಿನಲ್ಲಿ‌ ತುಳಿತಕ್ಕೆ ಒಳಗಾದ ದೀವರ ಸಮುದಾಯದ ದೇವರಂತೆ ರಾಜಕಾರಣದಲ್ಲಿ‌ ಹೆಜ್ಜೆ ಗುರುತು ಮೂಡಿಸುತ್ತಾ ಮುನ್ನಡೆದರು. ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದ್ದಂತೆ ಹೊಸ ಪಕ್ಷ ಕಟ್ಟಿ ತನ್ನ ಖದರ್ ತೋರಿಸುತ್ತಿದ್ದ ಸಾರೆಕೊಪ್ಪದ ಬಂಗಾರಪ್ಪ ಕೊನೆಯ ಉಸಿರಿನವರೆಗೂ ಸ್ವಾಭಿಮಾನಿಯಾಗೇ ಉಳಿದು ಹೋದರು.

ಮೊದಲು ಕಟ್ಟಿದ್ದು ಕರ್ನಾಟಕ ಕ್ರಾಂತಿ ರಂಗ, ಆನಂತರ ಕರ್ನಾಟಕ ಕಾಂಗ್ರೆಸ್, ಹಾಗೇ ಮುಂದುವರೆದಂತೆ ಕರ್ನಾಟಕ ವಿಕಾಸ ಪಾರ್ಟಿ, ಸಮಾಜವಾದಿ ಪಾರ್ಟಿ. ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ ಅಸಮಾಧಾನಕ್ಕೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಮೂರು ಬಾರಿ ತನ್ನದೇ ಪಾರ್ಟಿ ಕಟ್ಟಿ ಅಧಿಕಾರ ಕಳೆದಿದ್ದು, ಅದೇ ಕಾಂಗ್ರೆಸ್ ಪಕ್ಷವನ್ನು ಸೇರಿ ಮತ್ತೆ ಮೂರು ಬಾರಿ ಅಧಿಕಾರಕ್ಕೆ ತಂದಿದ್ದರು. ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದ ಯಡಿಯೂರಪ್ಪ, ಮಂತ್ರಿಗಿರಿಯ ಕನಸು ಕಾಣುತ್ತಿದ್ದ ಈಶ್ವರಪ್ಪನವರನ್ನು ಶಿಕಾರಿಪುರ, ಶಿವಮೊಗ್ಗದ ಅಖಾಡದಲ್ಲಿ ಸೋಲಿಸಿ ಮಕಾಡೆ ಮಲಗಿಸಿದ್ದು, ತದನಂತರದ ಬೆಳವಣಿಗೆಯಲ್ಲಿ ಅದೇ ಭಾರತೀಯ ಜನತಾ ಪಾರ್ಟಿ ಸೇರಿ ಮೇಲ್ವರ್ಗದ ಜನರ ಪಕ್ಷ ಎಂಬ ಟ್ಯಾಗ್ ಇಟ್ಟುಕೊಂಡು ನಲವತ್ತರ ಆಸುಪಾಸಿನಲ್ಲಿದ್ದ ಪಕ್ಷಕ್ಕೆ ಹಿಂದುಳಿದ ವರ್ಗಗಳ ಬೆಂಬಲ ಕೊಡಿಸಿ ಎಂಭತ್ತಕ್ಕೇರಿಸಿದ್ದು, ಮುಖ್ಯಮಂತ್ರಿ‌ ಹುದ್ದೆ ಎರಡು ಬಾರಿ ತಪ್ಪಿಸಿದ ದೇವೇಗೌಡರಿಗೆ, ಅವರದೇ ಸಮುದಾಯದ ಡಿ ಕೆ ಶಿವಕುಮಾರ್ ಎಂಬ ಹುಡುಗನನ್ನು ಬೆಳೆಸಿದ್ದು, ಜೀವಿತಾವಧಿಯ ಸಂಧ್ಯಾಕಾಲದಲ್ಲಿ ಅವರದೇ ಪಕ್ಷ ಜಾತ್ಯತೀತ ಜನತಾದಳ ಸೇರಿ ತನ್ನ ಮಗನನ್ನು ಶಾಸಕ ಮಾಡಿದ್ದು ಎಲ್ಲವೂ ಇವರ ರಾಜಕೀಯ ಜೀವನದ ಟ್ವಿಸ್ಟ್ ಮತ್ತು ಟರ್ನ್ಸ್.

ಸಾರೆಕೊಪ್ಪದ ಬಂಗಾರಪ್ಪನವರ ದೊಡ್ಡತನವಿದ್ದುದೇ ನಾಯಕರನ್ನು ಸೃಷ್ಟಿ ಮಾಡುವ ವಿಷಯದಲ್ಲಿ, ಅಧಿಕಾರ ಇರಲಿ ಬಿಡಲಿ ಬಂಗಾರಪ್ಪ ತಾವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿಯ ಸ್ಥಳೀಯ ಮುಖಂಡತ್ವಕ್ಕೆ ಮೊದಲ ಆದ್ಯತೆ. ಊರಿನ್ನೂ ಹತ್ತಿಪ್ಪತ್ತು ಕಿ.ಮಿ ಇರುವಾಗಲೇ ಊರಿನ ನಾಯಕರ ದಂಡನ್ನು ಕರೆಸಿಕೊಂಡು ಗಾಡಿ ಹತ್ತಿಸಿಕೊಂಡು, ತಮ್ಮ ಗನ್ ಮ್ಯಾನ್, ಹಿಂಬಾಲಕರು ಕೊನೆಗೆ ಡ್ರೈವಿಂಗ್ ಗೊತ್ತಿದ್ದ ಸ್ಥಳೀಯ ನಾಯಕರಿದ್ದರೆ ಡ್ರೈವರ್‌ಗೂ ಎಸ್ಕಾರ್ಟ್ ಗಾಡಿ ಹತ್ತಿಕೊಳ್ಳುವ ಭಾಗ್ಯ ಸಿಗುತ್ತಿತ್ತು.

ದೇಶದ ಸಮಸ್ಯೆ, ನಾಯಕತ್ವ, ಹೇಳಬೇಕಾದ್ದು, ಹೇಳಬಾರದ್ದು ಎಲ್ಲದರ ಮಾಹಿತಿ ಪಡೆದು ಭಾಷಣಕ್ಕೆ ನಿಂತರೆ ಇಡೀ ಊರಿನ‌ ಮುಕ್ಕಾಲು ಪಾಲು ಜನರ ಹೆಸರು ಹೇಳಿ, ಉಭಯ ಕುಶಲೋಪರಿ ನಡೆಸಿಯೇ ಭಾಷಣ ಆರಂಭವಾಗುತ್ತಿತ್ತು. ಲೋಕಲ್ ಸಮಸ್ಯೆಯನ್ನು ರಾಜ್ಯ ರಾಜಕಾರಣಕ್ಕೆ ರಾಷ್ಟ್ರ ರಾಜಕಾರಣಕ್ಕೆ ಸಮೀಕರಿಸಿ ಸರಳಗೊಳಿಸಿ ಬಂಗಾರಪ್ಪ ವಾಗ್ಝರಿ ಹರಿಸುತ್ತಿದ್ದರೆ ಮನೆಯ ಮಗನ ಮಾತು ಕೇಳುವಂತೆ ಸಭೆ ಮಂತ್ರ ಮುಗ್ಧವಾಗಿರುತ್ತಿತ್ತು. ಅಲ್ಲಿಂದ ಹೊರಡುವಾಗಲೂ ಲೋಕಲ್ ನಾಯಕರ ಹೆಸರಿಡಿದೇ ಮಾತಾಡಿ ವಿದಾಯ ಹೇಳಿಯೇ ಹೊರಡುವುದು ಬಂಗಾರಪ್ಪನವರ ವಾಡಿಕೆ.

ಇನ್ನೂ ಹತ್ತಾರು ವರ್ಷ ಕಳೆದರೂ ಆ ಹೆಸರುಗಳು ಸ್ಮೃತಿಪಟಲದಿಂದ ಮಾಯವಾಗುತ್ತಿರಲಿಲ್ಲ. ಬಂಗಾರಪ್ಪನವರ ಕೊನೆ ದಿನಗಳಲ್ಲಿ ಟಿವಿ9 ಸುದ್ದಿ ವಾಹಿನಿಗಾಗಿ ಮರೆಯಲಾರೆ ಕಾರ್ಯಕ್ರಮದ ತಯಾರಿ ನಡೆಸುವಾಗ ಇಳಿವಯಸ್ಸು ತಲುಪಿ ದೈಹಿಕವಾಗಿ ಸುಸ್ತಾಗಿದ್ದಂತೆ ಕಂಡರೂ ಮನಸ್ಸು ಮಾತು ನವತರುಣನದೇ ಆಗಿತ್ತು. ಒಮ್ಮೆ ಯಾವೂರು ಅಂದವರಿಗೆ ʼಸಾರ್, ನಮ್ಮದು ತೀರ್ಥಹಳ್ಳಿ ಬಳಿ ಹುಂಚದಕಟ್ಟೆʼ ಎಂದಿದ್ದೆ. ಆ ನಂತರ ಅಲ್ಲಿ ಯಾರು- ಎತ್ತ ಎಂದು ವಿಚಾರಿಸಿ ಅಪ್ಪನ ಹೆಸರು ಕೇಳಿ, ಆ ಹೆಸರಿನರು ಮೂರ್ನಾಲ್ಕು ಜನರ ಪಟ್ಟಿ ಮಾಡಿ ಅದರಲ್ಲಿ ಯಾರು ಅಂತಾ ಕೇಳಿ ಸುಳುಗೋಡು ನಾರಾಯಣ, ಜಿ ಡಿ ನಾರಾಯಣಪ್ಪನ ಜೊತೆ ಬರ್ತಿದ್ನಲ್ಲಾ ಅವನೇ ಎನಾ ಅಂತಾ ಕೇಳಿ ಹೌದು ಅಂದ ಮೇಲೆ ಹೇ ನಂಗೊತ್ತು ತಗಾ ನಿಮ್ಮಪ್ಪ ಅಂತಾ ಪ್ರೀತಿ ತೋರಿದ್ದರು.

ಬಂಗಾರಪ್ಪ ಹೆಕ್ಕಿ ತೆಗೆದು ಬೆಳೆಸಿದ ನಾಯಕರ ಪಟ್ಟಿ ದೊಡ್ಡದಿದೆ. ಮೂರು ಪಕ್ಷಗಳಲ್ಲೂ ತಮ್ಮ ನೆಲೆ ಕಂಡುಕೊಂಡಿರುವ ನಾಯಕರು ಅಂದಿಗೂ ಇಂದಿಗೂ ನಾವು ಬಂಗಾರಪ್ಪನವರ ಗರಡಿಯ ರಾಜಕಾರಣಿಗಳು ಎಂದು ಹೇಳಿಕೊಳ್ಳಲು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಜೊತೆಗಿದ್ದಾಗಲೂ, ಬಿಟ್ಟು ಹೋದಾಗಲೂ ತಾನು ಬೆಳೆಸಿದ ನಾಯಕರ ಜೊತೆಗೆ ದ್ವೇಷಕ್ಕೆ ಬೀಳದೆ ಗುರು ಶಿಷ್ಯರ ಸಂಬಂಧ ಕಾಪಾಡಿಕೊಂಡು ಬಂದಿದ್ದು ಅಷ್ಟೇ ದಿಟ.

ಬಂಗಾರಪ್ಪನವರ ಗರಡಿಯಲ್ಲಿ‌ ಪಳಗಿದ ರಾಮಲಿಂಗಾರೆಡ್ಡಿ, ಡಿ ಕೆ ಶಿವಕುಮಾರ್, ಜಾರಕಿಹೊಳಿ ಬ್ರದರ್ಸ್, ಕೆ ಜೆ ಜಾರ್ಜ್, ಆರ್ ವಿ ದೇವರಾಜ್, ಡಿ ಸುಧಾಕರ್, ರಮೇಶ್ ಜಿಗಜಿಣಗಿ, ಕುಮಾರ್ ಬಂಗಾರಪ್ಪ, ಗೋವಿಂದ ಕಾರಜೋಳ, ದಿವಂಗತ ಸಿ ಎಸ್ ಶಿವಳ್ಳಿ, ಬೀಮಣ್ಣ ನಾಯ್ಕ್, ಮಧು ಬಂಗಾರಪ್ಪ, ಹರತಾಳು ಹಾಲಪ್ಪ, ದಿವಂಗತ ಪೂರ್ಯಾನಾಯ್ಕ್, ಶಾರದಾ ಪೂರ್ಯನಾಯ್ಕ್, ಬೇಳೂರು ಗೋಪಾಲಕೃಷ್ಣ, ಜಿ ಡಿ ನಾರಾಯಣಪ್ಪ, ಡಿ ಲಕ್ಷ್ಮಣ, ಕಬಸೆ ಅಶೋಕಮೂರ್ತಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪುಟ ಸಾಲದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕಾಲದಲ್ಲಿ ಹನ್ನೆರಡಕ್ಕೂ ಹೆಚ್ಚು ಮಂತ್ರಿಗಳು ಬಂಗಾರಪ್ಪನ ಗರಡಿಯವರಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.

ಆಶ್ರಯ, ಅಕ್ಷರ, ಆರಾಧನ, ಅಕ್ಷರ ವಿಶ್ವದಂತಹ ಪಂಚ ಯೋಜನೆಗಳನ್ನು ನೀಡಿ ಬಡವರ ಜೀವನಕ್ಕೆ ಆಧಾರವಾದ ಕನಸುಗಾರ, ರಾಜಕೀಯದ ಎಲ್ಲ ಪಟ್ಟುಗಳನ್ನು ಅರಿತು ಪಕ್ಕಾ ರಾಜಕಾರಣಿಯೇ ಆದರೂ ವಾತ್ಸಲ್ಯಮಯಿ ತಾಯಿಯಂತಹ ಮೃದು ಮನಸಿನ ಭಾವನೆಗಳನ್ನು ವ್ಯಕ್ತಪಡಿಸಲು ಹಿಂದೆ ಬಿದ್ದವರಲ್ಲ.

ಇದನ್ನೂ ಓದಿದ್ದೀರಾ? ವರ್ತಮಾನ | ‘ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿ ಬ್ರಿಟೀಷರ ಏಜೆಂಟ್’ ಮತ್ತಿತರ ಸುಳ್ಳುಗಳು

ಒಟ್ಟಿನಲ್ಲಿ ಸೊರಬದ ಕುಬಟೂರಿನ ಬಡ ಗೇಣಿದಾರನ ಮಗನೊಬ್ಬ ಗೇಣಿ ರೈತರಿಗೆ ನ್ಯಾಯ ಕೊಡಿಸುತ್ತಾ ಒಂದೊಂದೇ ಹೆಜ್ಜೆ ಮೇಲೇರುತ್ತಾ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಸ್ವಾಭಿಮಾನದ ಎದುರು ಯಾವ ಹುದ್ದೆಯೂ ನಿಕೃಷ್ಟ ಅನ್ನುತ್ತಾ ಈ ನೆಲದ ಮಕ್ಕಳ ಕಷ್ಟಕ್ಕೆ ದನಿಯಾಗುತ್ತಾ ಇಡೀ ಜೀವಿತದಲ್ಲಿ ಹಿಂದುಳಿದ ವರ್ಗವನ್ನು ಮುನ್ನೆಲೆಗೆ ತಂದು ಸಮಾನತೆಯ ಕನಸು ಕಾಣುವಷ್ಟು ಪ್ರಬಲಗೊಳಿಸಿದ ಹೋರಾಟದ ಬದುಕು ಅಜರಾಮರ.

ಅನಕ್ಷರಸ್ಥರ ಬಾಳಿಗೆ ಅಕ್ಷರ ತುಂಗಾ
ಹಸಿದವರ ಪಾಲಿಗೆ ಅನ್ನ, ವಿದ್ಯೆಯ ಅಕ್ಷಯ ಪಾತ್ರೆ
ಬಡವರ ಪಾಲಿಗೆ ನೆರಳು ಕೊಟ್ಟ ಆಶ್ರಯದಾತ
ಬಡ ಚೌಡಿ ದೈವ ಭೂತಗಳಿಗೆ ನೆಲೆ ಕೊಟ್ಟ ಆರಾಧಕ
ಮಧ್ಯಮವರ್ಗದ ಗುಡಿ ಕೈಗಾರಿಕೆಗಳಿಗೆ ಚೈತನ್ಯದ ವಿಶ್ವ ಶಕ್ತಿಯ ಹರಿಕಾರ ಎಸ್‌ ಬಂಗಾರಪ್ಪ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸದ, ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರ

ಚಾಮರಾಜನಗರ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ...

ಹಾಸನ ಪೆನ್ ಡ್ರೈವ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ, ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಿ: ಕುಶಾಲಾ ಸ್ವಾಮಿ

ಹಾಸನ ಸೇರಿದಂತೆ ರಾಜ್ಯದಾದ್ಯಂತ ಓಡಾಡುತ್ತಿರುವ ಸಾವಿರಾರು ಅಶ್ಲೀಲ ವಿಡಿಯೋಗಳುಳ್ಳ ಪೆನ್ ಡ್ರೈವ್,...

ಬರ ಪರಿಹಾರ | ಸುಪ್ರೀಂ ಕೋರ್ಟ್ ಉಗಿದಿದ್ದನ್ನೇ ಮೋದಿ ಪ್ರಸಾದ ಎನ್ನುತ್ತಿರುವ ಬಿಜೆಪಿ!

ರಾಜ್ಯಕ್ಕೆ 3,454 ಕೋಟಿ ರುಪಾಯಿ ಬರ ಪರಿಹಾರ ಸುಪ್ರೀಮ್ ಕೋರ್ಟ್ ಕೊಟ್ಟದ್ದೇ...

ಚಾಮರಾಜನಗರ | ಮತಗಟ್ಟೆ ಧ್ವಂಸ ಮಾಡಿದ ಇಂಡಿಗನತ್ತ ಗ್ರಾಮದಲ್ಲಿ ಏ.29ರಂದು ಮರು ಮತದಾನ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ...