ಒಂದು ಕಾಲದಲ್ಲಿ ಕೈಮಗ್ಗ ಸೀರೆಗಳ ಮೂಲಕ ದೇಶದಾದ್ಯಂತ ಹೆಸರುವಾಸಿಯಾಗಿದ್ದ ರಬಕವಿ–ಬನಹಟ್ಟಿ ಇಂದು ತನ್ನ ವೈಭವವನ್ನು ಕಳೆದುಕೊಳ್ಳುತ್ತಿದೆ. ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದ ಪಾರಂಪರಿಕ ವೃತ್ತಿ ಕೈಮಗ್ಗ ಈಗ ಅಳಿವಿನಂಚಿನಲ್ಲಿದೆ.
ಒಮ್ಮೆ ಸುಮಾರು 12 ಸಾವಿರಕ್ಕೂ ಹೆಚ್ಚು ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿದ್ದ ರಬಕವಿ-ಬನಹಟ್ಟಿ ಪ್ರದೇಶದಲ್ಲಿ ಈಗ ಕೇವಲ 7 ಕೈಮಗ್ಗಗಳು ಮಾತ್ರ ಉಳಿದಿವೆ. ಈ 7 ಮಗ್ಗಗಳಲ್ಲಿಯೂ ಕೇವಲ 7 ನೇಕಾರರು ಹಾಗೂ ನಾಲ್ವರು ಮಹಿಳೆಯರು ಪೂರಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಈ ಪಾರಂಪರಿಕ ವೃತ್ತಿ ಉಳಿಸಿಕೊಳ್ಳಲು ಹವಣಿಸುತ್ತಿದ್ದಾರೆ.
ಈ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ಸ್ಥಳೀಯ ಕೈಮಗ್ಗ ನೇಕಾರ, ಮಾಲೀಕ ಅಶೋಕ ಮಾಚಕನೂರ “ಇದೇ ಪರಿಸ್ಥಿತಿ ಮುಂದುವರಿದರೆ ಬರುವ ಪೀಳಿಗೆಗೆ ಕೈಮಗ್ಗವನ್ನು ವಸ್ತುಸಂಗ್ರಹಾಲಯದಲ್ಲೇ ತೋರಿಸುವ ಪರಿಸ್ಥಿತಿ ಬರಬಹುದು” ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಎರಡು ದಶಕಗಳ ಹಿಂದೆ ಅಶೋಕ ಮಾಚಕನೂರ ಬಳಿ 32 ಕೈಮಗ್ಗಗಳಿದ್ದವು. ಇಂದು ಅವು ಕೇವಲ ನಾಲ್ಕಕ್ಕೆ ಸೀಮಿತವಾಗಿವೆ. ಉಳಿದ ಮೂವರು ನೇಕಾರರಿಗೆ ತಾವೇ ನೂಲು ಪೂರೈಸುತ್ತಿದ್ದು, ಉದ್ಯಮವನ್ನು ಹೇಗಾದರೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಪ್ರಸ್ತುತ ಅಶೋಕ ಮಾಚಕನೂರ, ಪಂಡಿತಪ್ಪ ಹಟ್ಟಿ, ಪರಪ್ಪ ಬೆಳ್ಳಗಿ, ಮಾಹಲಿಂಗಪ್ಪ ಟಿರಕಿ, ಬಾಲಚಂದ್ರ ಹುಲ್ಕಾಳ ಹಾಗೂ ಗುರುಸಿದ್ದಪ್ಪ ಚನಾಳ ಕೈಮಗ್ಗ ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಹಾನಂದ ಮಾಚಕನೂರ, ಶಿವಲೀಲಾ ಗಿರಿಸಾಗರ ಮತ್ತು ರಾಜೇಶ್ವರಿ ಮಾಚಕನೂರ ಪೂರಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.
ಬೇಡಿಕೆ ಇದೆ, ಆದರೆ ನೇಕಾರರಿಲ್ಲ:
ಕೈಮಗ್ಗ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಈಗಲೂ ಉತ್ತಮ ಬೇಡಿಕೆಯಿದೆ. ಆದರೆ ಈ ವೃತ್ತಿಯತ್ತ ಯುವಜನತೆ ಆಸಕ್ತಿ ತೋರದಿರುವುದು ನೇಕಾರರ ದೊಡ್ಡ ನೋವಾಗಿದೆ. ಒಂದು ಕೈಮಗ್ಗದಲ್ಲಿ ವಾರಕ್ಕೆ ಸರಾಸರಿ 5 ಸೀರೆಗಳು ಮಾತ್ರ ತಯಾರಾಗುತ್ತವೆ. ಒಂದು ಸೀರೆಗೆ ₹210ರಿಂದ ₹300ರವರೆಗೆ ಕೂಲಿ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಈ ಸೀರೆಗಳನ್ನು ₹600ರಿಂದ ₹1,600ರವರೆಗೆ ಮಾರಾಟ ಮಾಡಲಾಗುತ್ತದೆ. ಆದರೆ ಮಧ್ಯವರ್ತಿಗಳು ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಾರೆ ಎಂದು ನೇಕಾರ ಪಂಡಿತಪ್ಪ ಹಟ್ಟಿ ಹೇಳುತ್ತಾರೆ.
ನೂಲಿನ ಬೆಲೆ ಏರಿಕೆ ಮತ್ತೊಂದು ಹೊಡೆತ
ಜಾಗತಿಕ ಬೆಳವಣಿಗೆಗಳ ಪರಿಣಾಮದಿಂದ ನೂಲಿನ ಬೆಲೆ ಗಗನಕ್ಕೇರಿದೆ. ಐದು ಕೆ.ಜಿ. ನೂಲಿನ ಬೆಲೆ ಹಿಂದೆ ₹2,400–₹2,800 ಇದ್ದರೆ, ಈಗ ಮಸರಾಯಿ ನೂಲು ₹2,800ರಿಂದ ₹3,500ಕ್ಕೆ ಏರಿದೆ. ಕೆಲವು ವಿಧದ ಐದು ಕೆ.ಜಿ. ನೂಲು ₹4,200ರಿಂದ ₹7,000ರವರೆಗೆ ತಲುಪಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಶೋಕ ಮಾಚಕನೂರ ವಿವರಿಸುತ್ತಾರೆ.
ಸಂಬಂಧಗಳನ್ನು ಬೆಸೆಯುತ್ತಿದ್ದ ಕೈಮಗ್ಗ
ರಬಕವಿ–ಬನಹಟ್ಟಿಯಲ್ಲಿ ನೇಯ್ದ ಸೀರೆಗಳು ಅಥಣಿ, ಮಹಾಲಿಂಗಪುರ, ಕೊಲ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಮಾರಾಟವಾಗುತ್ತವೆ. ಹಿಂದೆ ಹಳ್ಳಿಗಳಿಗೆ ಸೀರೆಗಳನ್ನು ಕೊಂಡೊಯ್ದಾಗ ಹಣದ ಬದಲು ಗೋಧಿ, ಜೋಳ ಹಾಗೂ ಇತರ ಧಾನ್ಯಗಳನ್ನು ನೀಡುತ್ತಿದ್ದರು. ಅದು ಕೇವಲ ವ್ಯಾಪಾರವಲ್ಲ, ಕುಟುಂಬಗಳ ನಡುವಿನ ಆತ್ಮೀಯ ಸಂಬಂಧವನ್ನು ಬೆಸೆಯುವ ಬದುಕಿನ ಬಾಂಧವ್ಯವಾಗಿತ್ತು. ಆದರೆ ಇಂದು ಆ ಸಂಪ್ರದಾಯವೂ ನಿಧಾನವಾಗಿ ಕಣ್ಮರೆಯಾಗುತ್ತಿದೆ.
ಸರ್ಕಾರದ ನೆರವಿನ ನಿರೀಕ್ಷೆ
“ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಕೈಮಗ್ಗ ನೇಕಾರರಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು. ಉಚಿತ ಆರೋಗ್ಯ ಸೇವೆ, ನೇರ ಮಾರುಕಟ್ಟೆ ವ್ಯವಸ್ಥೆ, ನೂಲಿನ ಬೆಲೆ ನಿಯಂತ್ರಣ ಹಾಗೂ ಕೈಮಗ್ಗ ವೃತ್ತಿಗೆ ಯುವಕರನ್ನು ಸೆಳೆಯಲು ಪ್ರೋತ್ಸಾಹಧನ ನೀಡಬೇಕು” ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿದ್ದಾರೆ.
ಒಮ್ಮೆ ಉತ್ತರ ಕರ್ನಾಟಕದ ಆರ್ಥಿಕತೆಯ ಬೆನ್ನೆಲುಬಾಗಿದ್ದ ರಬಕವಿ–ಬನಹಟ್ಟಿಯ ಕೈಮಗ್ಗ ಉದ್ಯಮ ಇಂದು ಅಳಿವಿನಂಚಿಗೆ ತಲುಪಿರುವುದು ಕಳವಳಕಾರಿ ಬೆಳವಣಿಗೆ. ಸರ್ಕಾರದ ಸಮರ್ಪಕ ನೀತಿ, ಮಾರುಕಟ್ಟೆ ಬೆಂಬಲ ಮತ್ತು ಯುವಜನರ ಆಸಕ್ತಿ ದೊರಕದಿದ್ದರೆ, ಶತಮಾನಗಳ ಇತಿಹಾಸ ಹೊಂದಿರುವ ಈ ಕೈಮಗ್ಗ ಸಂಸ್ಕೃತಿ ಮುಂದಿನ ಪೀಳಿಗೆಗೆ ಕೇವಲ ನೆನಪಾಗಿ ಉಳಿಯುವ ಅಪಾಯ ಎದುರಾಗಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



