ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಧಾರವಾಡದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹಿರೇಮಠ್ ನೇತೃತ್ವದ ತಂಡವು ಮಂಗಳವಾರ ನಗರದ ಸಬ್ ರಿಜಿಸ್ಟ್ರಾರ್ (ಉಪ ನೋಂದಣಾಧಿಕಾರಿ) ಕಚೇರಿಗೆ ದಿಢೀರ್ ಭೇಟಿ ನೀಡಿ ತೀವ್ರ ಪರಿಶೀಲನೆ ನಡೆಸಿತು.
ಕಚೇರಿಯ ಕಾರ್ಯವೈಖರಿ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಸಾರ್ವಜನಿಕರ ದೂರು ದುಮ್ಮಾನಗಳನ್ನು ಆಲಿಸಿದ ಅಧಿಕಾರಿಗಳು, ಕಚೇರಿಯ ಪ್ರಮುಖ ದಾಖಲೆಗಳನ್ನು ಕಲೆಹಾಕಿ ಪರಿಶೀಲಿಸಿದರು.
ಬಾಂಡ್ ರೈಟರ್‌ಗಳ ಪರವಾನಗಿ ತಪಾಸಣೆ:
ಇದೇ ವೇಳೆ ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಂಡ್ ರೈಟರ್‌ಗಳ (ಪತ್ರ ಬರಹಗಾರರ) ಪರವಾನಗಿ (ಲೈಸೆನ್ಸ್) ಹಾಗೂ ದಾಖಲೆಗಳನ್ನು ಲೋಕಾಯುಕ್ತ ತಂಡ ತಪಾಸಣೆಗೆ ಒಳಪಡಿಸಿತು. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಸುದ್ದಿ ತಿಳಿಯುತ್ತಿದ್ದಂತೆಯೇ, ಕೆಲವು ಬಾಂಡ್ ರೈಟರ್‌ಗಳು ತಮ್ಮ ಸ್ಥಳದಿಂದ ಕಾಲ್ಕಿತ್ತಿರುವುದು ಕಂಡುಬಂದಿತು.
ಕಚೇರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಗತ್ಯ ವಿಳಂಬ ಹಾಗೂ ಮಧ್ಯವರ್ತಿಗಳ ಹಾವಳಿಯ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದು, ತಪಾಸಣೆಯ ಸಂಪೂರ್ಣ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.



