ನಗರದ ಪಂಚಶಾಸ್ತ ಎಜುಕೇಶನ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ನಿರ್ವಿಘ್ನ ಸೇವಾ ಸಮಿತಿ ವತಿಯಿಂದ ಗೌವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಕನ್ನಡರಾಜ್ಯೋತ್ಸವದ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ಸ್ ಮತ್ತು ಕಲಿಕಾ ಪರಿಕರಗಳನ್ನು ನೀಡುವುದರ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಚೇತನ್ ಶ್ರೀಶಾಂತ್ ಮಾತನಾಡಿ, ‘ಪ್ರತಿ ವರ್ಷ ನವೆಂಬರ್ 1 ರಂದು ನಾವು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸುತ್ತೇವೆ. 1956ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದಾಗಿ ಮೈಸೂರು ರಾಜ್ಯ ಉದಯವಾಯಿತು. ನಂತರ, 1973ರ ನವೆಂಬರ್ 1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಈ ಐತಿಹಾಸಿಕ ದಿನದ ನೆನಪಿಗಾಗಿ ನಾವು ಪ್ರತಿ ವರ್ಷ ರಾಜ್ಯೋತ್ಸವ ಆಚರಿಸುತ್ತೇವೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದೆ. ಆಲೂರು ವೆಂಕಟರಾಯರು, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತರು ಸೇರಿದಂತೆ ಅನೇಕ ಸಾಹಿತಿಗಳು ಮತ್ತು ಹೋರಾಟಗಾರರ ಶ್ರಮದಿಂದ ಕನ್ನಡ ನಾಡು ರೂಪುಗೊಂಡಿದೆ’ ಎಂದು ತಿಳಿಸಿದರು.
ಹಾಗೆಯೇ, ‘ನಮ್ಮ ನಾಡಿನ ಕಲೆ, ಸಂಸ್ಕೃತಿ, ಜಾನಪದ ಮತ್ತು ಪರಂಪರೆ ಅತ್ಯಂತ ವಿಶಿಷ್ಟವಾದುದು. ಕೆಂಪು ಮತ್ತು ಹಳದಿ ಬಣ್ಣದ ಕನ್ನಡ ಬಾವುಟ ಹಾಗೂ ಕುವೆಂಪು ಅವರ “ಜಯ ಭಾರತ ಜನನಿಯ ತನುಜಾತೆ” ನಾಡಗೀತೆ ನಮಗೆ ಹೆಮ್ಮೆ ತರುತ್ತವೆ. ಕನ್ನಡವನ್ನು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ, ದಿನನಿತ್ಯದ ಬದುಕಿನಲ್ಲಿ ಬಳಸೋಣ ಮತ್ತು ಬೆಳೆಸೋಣ’ ಎಂದು ಹೇಳಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | 38 ಕಾಡಾನೆ ಸ್ಥಳಾಂತರ; ಸ್ಥಳೀಯರಲ್ಲಿ ಆತಂಕ
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚೇತನ್ ಶ್ರೀಶಾಂತ್, ಶಾಲೆಯ ಮುಖ್ಯೊ ಪಧ್ಯಾಯರಾದ ಮರುಳಸಿದ್ದಯ್ಯ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



