ಬಸವಣ್ಣನವರ ವಿರೋಧಿಯಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿರುವ ‘ಕೊಂಡಿ ಮಂಚಣ್ಣ’ ಈಗ ಮತ್ತೆ ಕರ್ನಾಟಕದ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ಬಂದಿದ್ದಾನೆ. ಸಚಿವ ಎಂ.ಬಿ. ಪಾಟೀಲ್ ಅವರು ಶಂಕರ್ ಬಿದರಿ ಮತ್ತು ಮನು ಬಳಿಗಾರ್ ಅವರನ್ನು ‘21ನೇ ಶತಮಾನದ ಕೊಂಡಿ ಮಂಚಣ್ಣಗಳು’ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಕೊಂಡಿ ಮಂಚಣ್ಣನ ಸುತ್ತ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯಲ್ಲಿ ಬಸವಣ್ಣನವರ ಕುರಿತ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿದೆ. ಇದೇ ಕಾರಣಕ್ಕಾಗಿ, ರವಿ ಹಂಜ್ ಅವರನ್ನು ಬಂಧಿಸಲಾಗಿದೆ. ಆತನನ್ನು ಸಂದರ್ಶನ ನಡೆಸಿದ್ದ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಈ ‘ಬಸವ ಮಂಟಪ’ ಪುಸ್ತಕ ವಿವಾದವು ಈಗ ಶಂಕರ್ ಬಿದರಿ ಮತ್ತು ಸಚಿವ ಎಂ.ಬಿ. ಪಾಟೀಲ್ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ.
ಈ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ’ದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ವಿರುದ್ಧ ಎಂ.ಬಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರನ್ನು ಅವಹೇಳನ ಮಾಡಲಾಗಿದೆ ಎನ್ನಲಾದ ಪುಸ್ತಕದ ಬಿಡುಗಡೆಗೆ ಹಾಜರಾದ ಇವರಿಬ್ಬರನ್ನು ಪಾಟೀಲರು ‘21ನೇ ಶತಮಾನದ ಕೊಂಡಿ ಮಂಚಣ್ಣಗಳು’ ಎಂದು ಕರೆದಿದ್ದಾರೆ. ಆದರೆ, ಪುಸ್ತಕದಲ್ಲಿ ಬಸವಣ್ಣನವರ ಕುರಿತು ಏನು ಬರೆಯಲಾಗಿದೆ ಎಂಬುದು ತಮಗೆ ತಿಳಿದಿರಲಿಲ್ಲ, ಕೃತಿಯನ್ನು ಓದಿರಲಿಲ್ಲ ಎಂದು ಬಿದರಿ ಸ್ಪಷ್ಟನೆ ನೀಡಿದ್ದಾರೆ. ತಮ್ಮನ್ನು ಕೊಂಡಿ ಮಂಚಣ್ಣನಿಗೆ ಹೋಲಿಸಿರುವುದು ನೋವು ತಂದಿದೆ ಎಂದಿದ್ದಾರೆ. ಪಾಟೀಲ್ ಅವರ ಹೇಳಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿವಾದಕ್ಕೆ ಮತ್ತೊಂದು ಆಯಾಮವೂ ಇದೆ. ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮಗಳೇ ಅಥವಾ ಒಂದೇ ಪರಂಪರೆಯೇ ಎಂಬ ವಿಚಾರದಲ್ಲಿ ಇಬ್ಬರ ನಿಲುವುಗಳೂ ಭಿನ್ನವಾಗಿವೆ. ಈ ಸೈದ್ಧಾಂತಿಕ ಭಿನ್ನಾಭಿಪ್ರಾಯವೂ ಪ್ರಸ್ತುತ ಸಂಘರ್ಷದ ಹಿನ್ನೆಲೆಯಲ್ಲಿ ಕಾಣಿಸುತ್ತಿದೆ. ಆದರೆ, ಇಷ್ಟೆಲ್ಲ ಚರ್ಚೆಗೆ ಕಾರಣವಾಗಿರುವ ಕೊಂಡಿ ಮಂಚಣ್ಣ ಎಂಬ ಹೆಸರಿನ ಹಿಂದೆ ಸುಮಾರು 850 ವರ್ಷಗಳ ಇತಿಹಾಸವಿದೆ.
ಬಿಜ್ಜಳನ ಆಸ್ಥಾನದಲ್ಲಿ ಮಂಚಣ್ಣ ಮತ್ತು ಆತನ ಹೆಸರಿಗೆ ಜೋಡಿಯಾದ ಕೊಂಡಿ
12ನೇ ಶತಮಾನದ ಕಲ್ಯಾಣವು ದಕ್ಷಿಣ ಭಾರತದ ಪ್ರಮುಖ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕೇಂದ್ರಗಳಲ್ಲಿ ಒಂದಾಗಿತ್ತು. ಇಂದಿನ ಬೀದರ್ ಜಿಲ್ಲೆಯ ಬಸವಕಲ್ಯಾಣವೇ ಅಂದಿನ ಕಲ್ಯಾಣ. ಈ ಪ್ರದೇಶದಲ್ಲಿ ಕಲಚುರಿ ದೊರೆ ಎರಡನೇ ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣನವರು ಮಹತ್ವದ ಸ್ಥಾನ ಪಡೆದಿದ್ದರು. ರಾಜಕೀಯ ಅಧಿಕಾರದ ಜೊತೆಗೆ ಅವರು ಕಾಯಕ, ದಾಸೋಹ, ಸಮಾನತೆ ಹಾಗೂ ಜಾತಿಭೇದ ವಿರೋಧಿ ಚಿಂತನೆಗಳ ಆಧಾರದಲ್ಲಿ ಶರಣ ಚಳವಳಿಯನ್ನು ಮುನ್ನಡೆಸುತ್ತಿದ್ದರು. ಇದೇ ಸಮಯದಲ್ಲಿ, ಕೊಂಡಿ ಮಂಚಣ್ಣ ಬಿಜ್ಜಳನ ಆಸ್ಥಾನದ ಮಂತ್ರಿಯಾಗಿದ್ದರು.
ಆದಾಗ್ಯೂ, ಅವರ ಹೆಸರು ಮಂಚಣ್ಣ. ಆದರೆ, ಕಾಲಕ್ರಮೇಣ ಅವರನ್ನು ಕೊಂಡಿ ಮಂಚಣ್ಣ ಎಂದು ಕರೆಯಲಾಯಿತು. ಕನ್ನಡದಲ್ಲಿ ‘ಕೊಂಡಿ’ ಅಥವಾ ‘ಕೊಂಡೆ’ ಎಂದರೆ ಚಾಡಿ ಹೇಳುವ, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟುವ ಅಥವಾ ಕಿತಾಪತಿ ಮಾಡುವ ವ್ಯಕ್ತಿ ಎಂಬ ಅರ್ಥದ ಬಳಕೆ ಇದೆ. ಬಸವಣ್ಣನವರ ವಿರುದ್ಧ ಬಿಜ್ಜಳನ ಆಸ್ಥಾನದಲ್ಲಿ ಚಾಡಿ ಹೇಳುತ್ತಿದ್ದನೆಂಬ ಕಥನದಿಂದ ಮಂಚಣ್ಣನ ಹೆಸರಿನೊಂದಿಗೆ ‘ಕೊಂಡಿ’ ಎಂಬ ವಿಶೇಷಣ ಸೇರಿಕೊಂಡಿದೆ ಎಂದು ಶರಣ ಪರಂಪರೆ ವಿವರಿಸುತ್ತದೆ. ಹೀಗಾಗಿಯೇ ‘ಕೊಂಡಿ ಮಂಚಣ್ಣ’ ಎಂಬುದು ಕೇವಲ ವ್ಯಕ್ತಿಯ ಹೆಸರಾಗಿ ಉಳಿದಿಲ್ಲ. ವಿಶ್ವಾಸದ್ರೋಹ, ಒಳಸಂಚು, ದ್ವೇಷ ಮತ್ತು ಒಬ್ಬ ವ್ಯಕ್ತಿಯ ವಿರುದ್ಧ ಮತ್ತೊಬ್ಬರನ್ನು ಪ್ರಚೋದಿಸುವ ನಡವಳಿಕೆಗಳ ರೂಪಕವಾಗಿಯೂ ಬಳಕೆಯಾಗುತ್ತಿದೆ.
ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣನವರೊಂದಿಗೆ ಕೆಲಸ ಮಾಡುತ್ತಿದ್ದ ಮಂಚಣ್ಣ, ಕಾಲಕ್ರಮೇಣ ಬಸವಣ್ಣನವರ ವಿರೋಧಿಯಾಗಿ ಗುರುತಿಸಿಕೊಂಡಿದ್ದಾರೆ. 19ನೇ ಶತಮಾನದ ಕೊನೆ ಮತ್ತು 20ನೇ ಶತಮಾನದ ಆರಂಭದ ಕನ್ನಡ ಸಾಹಿತ್ಯ ಚರಿತ್ರೆ ಕುರಿತ ಅಧ್ಯಯನಗಳಲ್ಲಿಯೂ ಮಂಚಣ್ಣನ ಉಲ್ಲೇಖವಿದೆ. ಆತನನ್ನು ಬಸವಣ್ಣನವರ ವಿರುದ್ಧ ರಾಜನ ಮುಂದೆ ಚಾಡಿ ಹೇಳುತ್ತಿದ್ದ ಪ್ರತಿಸ್ಪರ್ಧಿ ಮಂತ್ರಿಯಾಗಿ ಇತಿಹಾಸದಲ್ಲಿ ಚಿತ್ರಿಸಲಾಗಿದೆ.
ಬಿಜ್ಜಳನ ಆಡಳಿತದಲ್ಲಿ ಬಸವಣ್ಣನವರು ರಾಜ್ಯದ ಭಂಡಾರವನ್ನು ನಿರ್ವಹಿಸುವ ಜವಾಬ್ದಾರಿಯಲ್ಲಿದ್ದರು. ಆದ್ದರಿಂದ, ಅವರು ರಾಜಭಂಡಾರದ ಹಣವನ್ನು ಶರಣರಿಗೆ ಬಳಸುತ್ತಿದ್ದಾರೆ ಎಂದು ಮಂಚಣ್ಣ ಮತ್ತು ನಾರಣ ಕ್ರಮಿತ ಮೊದಲಾದವರು ಬಿಜ್ಜಳನ ಮುಂದೆ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದ್ದರು ಎಂದು ಶರಣ ಚರಿತ್ರೆಗಳು ಹೇಳುತ್ತವೆ.
ಕಲ್ಯಾಣ ಕ್ರಾಂತಿಯ ಹಿಂದೆ ಕೊಂಡಿ ಮಂಚಣ್ಣನ ಪಾತ್ರವಿತ್ತೇ?
ಕೊಂಡಿ ಮಂಚಣ್ಣನ ಕುರಿತು ಅತ್ಯಂತ ಗಂಭೀರವಾದ ಆರೋಪ ಎಂದರೆ, ಕಲ್ಯಾಣದ ಶರಣರ ವಿರುದ್ಧ ನಡೆದ ಸಂಘರ್ಷದಲ್ಲಿ ಆತನ ಪಾತ್ರವಿತ್ತು ಎಂಬುದು. ಬಸವಣ್ಣನವರ ನೇತೃತ್ವದಲ್ಲಿ ಬೆಳೆದ ಶರಣ ಚಳವಳಿ ಕೇವಲ ಧಾರ್ಮಿಕ ಚಳವಳಿಯಾಗಿರಲಿಲ್ಲ. ಅದು ಸಮಾಜದ ಜಾತಿ ಶ್ರೇಣೀಕರಣ, ಅಸ್ಪೃಶ್ಯತೆ, ವೃತ್ತಿಯ ಆಧಾರದ ಮೇಲುಕೀಳು ಹಾಗೂ ಸಾಂಪ್ರದಾಯಿಕ ಸಾಮಾಜಿಕ ಅಧಿಕಾರವನ್ನು ಪ್ರಶ್ನಿಸಿತ್ತು.
ಅಲ್ಲದೆ, ವಿವಿಧ ಜಾತಿ ಮತ್ತು ವೃತ್ತಿಗಳ ಜನರು ಶರಣ ಸಮುದಾಯದಲ್ಲಿ ಒಂದಾಗತೊಡಗಿದ್ದರು. ಕಾಯಕಕ್ಕೆ ಗೌರವ, ದಾಸೋಹಕ್ಕೆ ಮಹತ್ವ ಮತ್ತು ವ್ಯಕ್ತಿಯ ಆಧ್ಯಾತ್ಮಿಕ ಸಮಾನತೆ ಶರಣ ಚಿಂತನೆಯ ಪ್ರಮುಖ ಅಂಶಗಳಾಗಿದ್ದರು. ಈ ಬದಲಾವಣೆಗಳು ಅಂದಿನ ಸಾಮಾಜಿಕ ವ್ಯವಸ್ಥೆಯೊಂದಿಗೆ ಸಂಘರ್ಷಕ್ಕೆ ಕಾರಣವಾದವು.
ಶರಣ ಚರಿತ್ರೆಯ ನಿರೂಪಣೆಗಳ ಪ್ರಕಾರ, ವಿಭಿನ್ನ ಜಾತಿಗಳಿಗೆ ಸೇರಿದ ಯುವಕ-ಯುವತಿಯ ವಿವಾಹದ ವಿಚಾರ ಈ ಸಂಘರ್ಷವನ್ನು ತೀವ್ರಗೊಳಿಸಿತ್ತು. ಶರಣ ಚಳವಳಿಯ ವಿರೋಧಿಗಳು ಇಂತಹ ವಿವಾಹವು ಅಸ್ತಿತ್ವದಲ್ಲಿದ್ದ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ವಾದಿಸಿದ್ದರು. ಅಂದಿನ ರಾಜಕೀಯ ಸಂಘರ್ಷಗಳು, ಬಿಜ್ಜಳನ ಆಡಳಿತದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಶರಣರ ವಿರುದ್ಧದ ಪ್ರತಿರೋಧ ಒಟ್ಟಾಗಿ ಕಲ್ಯಾಣದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿದವು.
ಈ ಕಥನದಲ್ಲಿ ಮಂಚಣ್ಣನನ್ನು ಶರಣರ ವಿರುದ್ಧ ರಾಜಕೀಯವಾಗಿ ಕಾರ್ಯನಿರ್ವಹಿಸಿದ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. ವಿಶೇಷವಾಗಿ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ತಲೆದಂಡ ನಾಟಕದಲ್ಲಿಯೂ ಮಂಚಣ್ಣನಂತಹ ಆಸ್ಥಾನದ ಪಾತ್ರಗಳು ಜಾತಿವ್ಯವಸ್ಥೆಯ ರಕ್ಷಣೆ ಮತ್ತು ಅಧಿಕಾರಕ್ಕಾಗಿ ನಡೆಯುವ ಸಂಘರ್ಷದಲ್ಲಿ ಕಾಣಿಸಿಕೊಳ್ಳುತ್ತವೆ. ನಾಟಕದ ಘಟನೆಗಳನ್ನು ವಿಶ್ಲೇಷಿಸಿರುವ 2018ರ ಸಂಶೋಧನಾ ಲೇಖನವೊಂದರಲ್ಲಿ ಮಂಚಣ್ಣ, ದಾಮೋದರ ಭಟ್ಟ ಹಾಗೂ ಬಿಜ್ಜಳನ ಪುತ್ರ ಸೋವಿದೇವನ ನಡುವಿನ ರಾಜಕೀಯ ಸಂಚಿನ ಚಿತ್ರಣವಿದೆ.
ಮಂಚಣ್ಣನ ಪತ್ನಿ ಲಕ್ಷ್ಮಮ್ಮ ಕೂಡ ವಚನಕಾರ್ತಿ!
ಕೊಂಡಿ ಮಂಚಣ್ಣನ ಕುರಿತ ಚರ್ಚೆಯಲ್ಲಿ ಬಹುತೇಕ ಗಮನಕ್ಕೆ ಬಾರದ ಅತ್ಯಂತ ಕುತೂಹಲಕಾರಿ ಅಂಶವೆಂದರೆ ಆತನ ಪತ್ನಿ ಲಕ್ಷ್ಮಮ್ಮ ಅವರಿಗಿದ್ದ ಶರಣ ಸಾಹಿತ್ಯದ ನಂಟು. ಬಸವ ಸಮಿತಿಯು ಪ್ರಕಟಿಸಿದ, ವಚನ ಸಾಹಿತ್ಯ ಸಂಶೋಧಕ ಎಂ.ಎಂ ಕಲಬುರ್ಗಿ ಅವರ ಸಂಪಾದಕತ್ವದ ಇಂಗ್ಲಿಷ್ ವಚನ ಸಂಕಲನದಲ್ಲಿರುವ ವಚನಕಾರರ ಪರಿಚಯದಲ್ಲಿ ‘ಕೊಂಡಿ ಮಂಚಣ್ಣನ ಪುಣ್ಯಸ್ತ್ರೀ ಲಕ್ಷ್ಮಮ್ಮ’ ಎಂಬ ಹೆಸರಿದೆ. ಅದರ ಪ್ರಕಾರ, ಲಕ್ಷ್ಮಮ್ಮ ಬಿಜ್ಜಳನ ಮಂತ್ರಿಯಾಗಿದ್ದ ಕೊಂಡಿ ಮಂಚಣ್ಣನ ಪತ್ನಿ. ಆಕೆಯ ಕಾಲವನ್ನು ಸುಮಾರು ಕ್ರಿ.ಶ. 1160 ಎಂದು ಗುರುತಿಸಲಾಗಿದ್ದು, ‘ಅಗಜೇಶ್ವರಲಿಂಗ’ ಅಂಕಿತದ ಆಕೆಯ ಒಂದು ವಚನ ಲಭ್ಯವಿದೆ.
ಲಕ್ಷ್ಮಮ್ಮನ ಕುರಿತು ಲಭ್ಯವಿರುವ ಒಂದು ವಚನ ಹೀಗಿದೆ:
‘ಆಯುಷ್ಯ ತೀರಲು ಮರಣ,
ವ್ರತ ತಪ್ಪಲು ಶರೀರ ಕಡೆ,
ಮೇಲು ವ್ರತವೆಂಬ ತೂತರ ಮೆಚ್ಚ
ನಮ್ಮ ಅಗಜೇಶ್ವರಲಿಂಗವು.’
ಈ ವಚನದಲ್ಲಿ ವ್ರತನಿಷ್ಠೆ, ಬದುಕಿನ ಅರ್ಥ ಹಾಗೂ ಆಧ್ಯಾತ್ಮಿಕ ಬದ್ಧತೆಯ ವಿಚಾರಗಳು ವ್ಯಕ್ತವಾಗುತ್ತವೆ. ಬಸವಮಾರ್ಗದ ಬರಹಗಾರ ವಿಶ್ವಾರಾಧ್ಯ ಸತ್ಯಂಪೇಟ ಅವರು ಲಕ್ಷ್ಮಮ್ಮನ ಬಗ್ಗೆ ಬರೆದ ಲೇಖನದಲ್ಲಿಯೂ ಆಕೆಯ ವಚನ ಮತ್ತು ಮಂಚಣ್ಣನ ಹಿನ್ನೆಲೆಯನ್ನು ವಿವರಿಸಿದ್ದಾರೆ. ಇಲ್ಲಿ ಗಮನಿಸಬೇಕಾದ್ದು; ಬಸವಣ್ಣನವರ ಶರಣ ಚಳವಳಿಯನ್ನು ವಿರೋಧಿಸಿದ್ದನೆಂದು ಹೇಳಲಾಗುವ ಮಂಚಣ್ಣನ ಕುಟುಂಬವು ಅದೇ ಶರಣ ಸಾಹಿತ್ಯದ ಭಾಗವಾಗಿತ್ತು ಎಂಬುದು.
ಮಂಚಣ್ಣ ನಿಜಕ್ಕೂ ಬಸವಣ್ಣನವರ ವಿರೋಧಿಯಾಗಿದ್ದನೇ?
ಕೊಂಡಿ ಮಂಚಣ್ಣನನ್ನು ಸಂಪೂರ್ಣವಾಗಿ ಬಸವವಿರೋಧಿ ಎಂದು ಚಿತ್ರಿಸುವ ಜನಪ್ರಿಯ ಕಥನಕ್ಕೆ ವ್ಯತಿರಿಕ್ತವಾದ ವಿವರಣೆಯೂ ಕನ್ನಡ ಶರಣ ಸಾಹಿತ್ಯದ ಅಧ್ಯಯನದಲ್ಲಿ ಕಂಡುಬರುತ್ತದೆ. ವಿಶ್ವಾರಾಧ್ಯ ಸತ್ಯಂಪೇಟ ಅವರು ತಮ್ಮ ಲೇಖನದಲ್ಲಿ ವಚನ ಸಾಹಿತ್ಯದ ಸಂಶೋಧಕ ಡಾ. ಫ.ಗು. ಹಳಕಟ್ಟಿಯವರ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ. ಅದರಂತೆ; ‘ಮಂಚಣ್ಣ ಮತ್ತು ಆತನ ಪತ್ನಿ ಲಕ್ಷ್ಮಮ್ಮ ಶರಣರ ವಿರೋಧಿಗಳಂತೆ ಕಾಣಿಸಿಕೊಂಡರೂ, ವಾಸ್ತವವಾಗಿ ಶರಣರಿಗೆ ಗುಪ್ತವಾಗಿ ನೆರವಾಗುತ್ತಿದ್ದರು’ ಎಂಬುದು ಹಳಕಟ್ಟಿಯವರ ಗ್ರಹಿಕೆ. ಆದರೆ, ಅವರು ಹೇಗೆ ನೆರವಾದರು ಎಂಬುದಕ್ಕೆ ವಿವರವಾದ ಸಾಕ್ಷ್ಯಗಳು ದೊರೆಯುವುದಿಲ್ಲ ಎಂದೂ ಅದೇ ಲೇಖನ ಹೇಳುತ್ತದೆ.
ಈ ಲೇಖನ ಓದಿದ್ದೀರಾ?: ಕರ್ನಾಟಕದ ಮತಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ ಬೇರೆಯೇ ಇದೆ
ಇನ್ನು, ಭೈರವೇಶ್ವರ ಕಾವ್ಯದ ‘ಕಥಾಮಣಿ ಸೂತ್ರ ರತ್ನಾಕರ’ದ ನಿರೂಪಣೆಯಲ್ಲಿ ‘ಮಂಚಣ್ಣನು ಬಹಿರಂಗವಾಗಿ ವೈಷ್ಣವನಂತೆ ಕಾಣಿಸಿಕೊಂಡರೂ, ಒಳಗಿನಿಂದ ಅತ ಶಿವಭಕ್ತನಾಗಿದ್ದ’ ಎಂಬ ಕಥನವಿದೆ. ಈ ಪರಂಪರೆಯಲ್ಲಿ ಆತನನ್ನು ‘ಗುಪ್ತ ಮಂಚಣ್ಣ’, ‘ಧೂಪದ ಮಂಚಣ್ಣ’ ಮತ್ತು ‘ಕೊಂಡೆಯ ಮಂಚಣ್ಣ’ ಎಂಬ ಹೆಸರುಗಳಿಂದ ಗುರುತಿಸಲಾಗಿದೆ. ಆತ ‘ನಾರಾಯಣಪ್ರಿಯ ರಾಮನಾಥ’ ಅಂಕಿತದಲ್ಲಿ ವಚನ ಬರೆದಿದ್ದನೆಂಬ ವಿವರಣೆಯೂ ಇದೆ.
ಇದೆಲ್ಲದರ ನಡುವೆ, ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣನವರ ವಿರುದ್ಧ ಚಾಡಿ ಹೇಳುತ್ತಿದ್ದನೆಂಬ ಕಥನದಿಂದ ಕೊಂಡಿ ಮಂಚಣ್ಣನ ಹೆಸರು ಹೆಚ್ಚು ಜನಪ್ರಿಯವಾಗಿವೆ. ಇದೇ ಹೆಸರು ದ್ರೋಹ ಮತ್ತು ಒಳಸಂಚಿನ ಪ್ರತೀಕವಾಗಿಯೂ ಶರಣ ಪರಂಪರೆಯಲ್ಲಿ ಬೆಳೆದು ಬಂದಿದೆ.
ಈಗ, ಎಂ.ಬಿ. ಪಾಟೀಲ್ ಅವರು ಕೊಂಡಿ ಮಂಚಣ್ಣನ ಹೆಸರನ್ನು ಬಳಸಿರುವುದು ಕೇವಲ ಹಳೆಯ ಐತಿಹಾಸಿಕ ಘಟನೆಯನ್ನು ನೆನಪಿಸುವುದಿಲ್ಲ. ರವಿ ಹಂಜ್ ಅವರ ಕೃತಿಯ ವಿವಾದದ ಹಿನ್ನೆಲೆಯಲ್ಲಿ ಶಂಕರ್ ಬಿದರಿ ಮತ್ತು ಮನು ಬಳಿಗಾರ್ ಅವರ ನಿಲುವನ್ನು ಅದು ಪ್ರಶ್ನಿಸಿದೆ.
ಬಸವಣ್ಣನವರನ್ನು ಅವಹೇಳನ ಮಾಡಲಾಗಿದೆ ಎನ್ನಲಾದ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವುದು ಗಂಭೀರವಾದ ನೈತಿಕ ಪ್ರಶ್ನೆ ಎಂಬುದು ಎಂ.ಬಿ ಪಾಟೀಲರ ವಾದ.


