ರಾಜ್ಯ ರಾಜಕೀಯದಲ್ಲಿ ಸಚಿವ ಸ್ಥಾನವು ಕೇವಲ ಗೌರವದ ಹುದ್ದೆಯಲ್ಲ, ಅದು ಒಂದು ಕ್ಷೇತ್ರದ ಅಭಿವೃದ್ಧಿಗೆ ದಿಕ್ಕು ತೋರಿಸುವ ಪ್ರಮುಖ ಸಾಧನ. ಆದರೆ ಹಲವು ದಶಕಗಳಿಂದ ರಾಮದುರ್ಗ ಕ್ಷೇತ್ರಕ್ಕೆ ಈ ಅವಕಾಶ ಸಿಗದಿರುವುದೇ ಪ್ರಶ್ನಾರ್ಹವಾಗಿದೆ.
ಕ್ಷೇತ್ರದ ಜನರ ಈ ಪ್ರಶ್ನೆ ಕೇವಲ ಒಬ್ಬ ವ್ಯಕ್ತಿ, ರಾಜಕಾರಣಿ ಅಥವಾ ಯಾವುದೋ ಒಂದು ಪಕ್ಷಕ್ಕೆ ಸಂಬಂಧಪಟ್ಟಿದ್ದಲ್ಲ. ನಾವು ಆಯ್ಕೆ ಮಾಡಿದ ನಮ್ಮ ಶಾಸಕರಿಗೆ ಸಚಿವ ಸ್ಥಾನ ಸಿಗಲಿ, ನಮ್ಮ ಕ್ಷೇತ್ರವು ಅಭಿವೃದ್ದಿಯಾಗಲಿ ಎಂಬ ನಿರೀಕ್ಷೆಯಲ್ಲಿರುತ್ತಾರೆ ಎಂಬುದನ್ನು ಎಲ್ಲ ಪಕ್ಷಗಳ ಹೈಕಮಾಂಡ್ ಅರ್ಥಮಾಡಿಕೊಳ್ಳಬೇಕಿದೆ ಎಂಬುದು ರಾಮದುರ್ಗ ಜನತೆಯ ದುಗುಡಕ್ಕೆ ಕಾರಣವಾಗಿದೆ.
ಮುಂಬೈ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳಲ್ಲಿ ರಾಮದುರ್ಗವೂ ಒಂದಾಗಿದ್ದು, ರಾಮದುರ್ಗ ಕ್ಷೇತ್ರದಲ್ಲಿ 15 ಬಾರಿ ಚುನಾವಣೆ ನಡೆದಿದೆ. ಆದರೆ ಈವರೆಗೆ ಒಂದು ಬಾರಿ ಮಾತ್ರವೇ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿದೆ.
ರಾಮದುರ್ಗ ಕ್ಷೇತ್ರಕ್ಕೆ ಈವರೆಗೂ ಸಚಿವ ಸ್ಥಾನ ಸಿಗದಿರುವುದು ಕ್ಷೇತ್ರದ ಜನರ ಬೇಸರಕ್ಕೆ ಕಾರಣವಾಗಿದೆ. ಈ ಬಾರಿಯಾದರೂ ರಾಮದುರ್ಗ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು ಹಾಗೂ ಇದು ಕೇವಲ ವ್ಯಕ್ತಿ ಮತ್ತು ಪಕ್ಷದ ಕಾರಣಕ್ಕೆ ಅಲ್ಲ, ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಎಂಬ ಒತ್ತಾಯ ದಿನೇದಿನೆ ಜೋರಾಗುತ್ತಿದೆ.
ಮೂರು ಬಾರಿ ಶಾಸಕರಾದ ಇವರಿಗಾದರೂ ಸಚಿವ ಸ್ಥಾನ ನೀಡಿ
ಈಗ ಶಾಸಕರಾಗಿರುವ ಅಶೋಕ ಪಟ್ಟಣ ಅವರ ರಾಜಕೀಯ ಹಿನ್ನೆಲೆ ಗಮನಿಸಿದರೆ, ಅವರ ಕುಟುಂಬವೇ ರಾಜಕೀಯ ಪರಂಪರೆಯಾಗಿದೆ. ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, 1957ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ತಾಯಿ ಶಾರದಾ ಪಟ್ಟಣ ಅವರೂ ಕೂಡ 1967ರಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಈ ಪರಂಪರೆಯನ್ನು ಮುಂದುವರಿಸಿಕೊಂಡು ಅಶೋಕ ಪಟ್ಟಣವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡೂ ಅವಧಿಗಳಲ್ಲಿ ವಿಧಾನಸಭೆಯ ಮುಖ್ಯ ಸಚೇತಕರಾಗಿ ಜವಾಬ್ದಾರಿ ನಿರ್ವಹಿಸಿರುವ ಅಶೋಕ ಪಟ್ಟಣ ಅವರಿಗೆ ಈವರೆಗೂ ಸಚಿವ ಸ್ಥಾನ ಸಿಗದಿರುವುದು ಗಮನಾರ್ಹವಾಗಿದೆ.
ಇದನ್ನೇ ಮನಗಂಡು, ಮಾಜಿ ಸಚಿವ ಟಿ ಬಿ ಜಯಚಂದ್ರ ಅವರ ನೇತೃತ್ವದಲ್ಲಿ ಮೂರುಕ್ಕಿಂತ ಹೆಚ್ಚು ಬಾರಿ ಶಾಸಕರಾಗಿರುವ ಸುಮಾರು 15 ಮಂದಿ ಶಾಸಕರ ತಂಡವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಿದೆ.
ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ಶಾಸಕ ಅಶೋಕ ಪಟ್ಟಣ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳ ನಂತರ ಸಚಿವ ಸಂಪುಟ ಪುನರ್ ರಚನೆ ಮಾಡುವುದಾಗಿ ಹೇಳಿದ್ದರು. ಈ ಬಗ್ಗೆ ಸುರ್ಜೇವಾಲಾ ಅವರನ್ನು ಭೇಟಿಯಾದಾಗ ಅವರು ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ ನೆರವಾಗುವುದಾಗಿ ಭರವಸೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ಇನ್ನೂ ಮುಂದುವರೆದು, “ಉಪಚುನಾವಣೆ ಮತ್ತು ವಿಧಾನಸಭಾ ಚುನಾವಣೆಯ ಕಾರಣದಿಂದ ವಿಳಂಬವಾಗಿದೆ. ಮುಖ್ಯಮಂತ್ರಿ ಮರಳಿದ ನಂತರ ಸಚಿವ ಸಂಪುಟ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು.
ಹಿಂದುಳಿದ ರಾಮದುರ್ಗ: ಅಭಿವೃದ್ಧಿಗೆ ಸಚಿವ ಸ್ಥಾನ ಅಗತ್ಯ
ರಾಮದುರ್ಗ ತಾಲೂಕು ರಾಜ್ಯದಲ್ಲಿಯೇ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದೆ. ಸಮರ್ಪಕ ನೀರಾವರಿ ಯೋಜನೆಗಳ ಕೊರತೆ, ಉದ್ಯೋಗಾವಕಾಶಗಳ ಅಭಾವದಿಂದ ಯುವಜನರು ಬೇರೆ ಜಿಲ್ಲೆಗಳು ಮತ್ತು ರಾಜ್ಯಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಶೈಕ್ಷಣಿಕ ಸೌಲಭ್ಯಗಳ ಕೊರತೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಸಮರ್ಪಕ ಸಾರಿಗೆ ವ್ಯವಸ್ಥೆ, ಅತಿವೃಷ್ಠಿ ಮತ್ತು ಅನಾವೃಷ್ಠಿ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಈ ಭಾಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಕ್ಷೇತ್ರಕ್ಕೆ ಬಲವಾದ ಪ್ರತಿನಿಧಿತ್ವ ಅಗತ್ಯವಿದೆ. ಆದ್ದರಿಂದ ಈ ಬಾರಿ ಸಚಿವ ಸಂಪುಟದಲ್ಲಿ ರಾಮದುರ್ಗ ಕ್ಷೇತ್ರಕ್ಕೆ ಅವಕಾಶ ನೀಡಿ, ಶಾಸಕ ಅಶೋಕ ಪಟ್ಟಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಕ್ಷೇತ್ರದ ಜನರ ಆಶಯವಾಗಿದೆ.
ʼನಮ್ಮವರಿಗೆ ಅವಕಾಶ ಕೊಡದಿದ್ದರೆ ನಮ್ಮ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ?ʼ
“ನಮ್ಮ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಗಮನಸೆಳೆಯಲು ನಮ್ಮವರಿಂದನೇ ಸಾಧ್ಯ. ಹಾಗಾಗಿ ನಮ್ಮ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಬೇಕು. ಬೇರೆ ಕ್ಷೇತ್ರಗಳಿಗೆ ಒಳ್ಳೆಯ ಸ್ಥಾನಮಾನಗಳು ಸಿಗುತ್ತವೆ, ನಮ್ಮಗೆ ಯಾಕೆ ಇಲ್ಲ? ಈ ಬಾರಿಯಾದರೂ ನ್ಯಾಯ ಸಿಗಬೇಕು” ಎಂದು ಮಹಿಳಾ ಸಂಘದ ಸದಸ್ಯೆ ಲಕ್ಷ್ಮೀ ಈ ದಿನ.ಕಾಮ್ ಮೂಲಕ ಅಭಿಪ್ರಾಯ ತಿಳಿಸಿದರು.
ಈ ಕುರಿತು ಈ ದಿನ.ಕಾಮ್ ಜತೆ ರೈತ ಶಿವಪ್ಪ ಮಾತನಾಡಿ, “ನಮ್ಮ ಕ್ಷೇತ್ರ ಹಿಂದುಳಿದಿದೆ. ನೀರಾವರಿ, ಉದ್ಯೋಗ ಸಮಸ್ಯೆಗಳು ತುಂಬಾ ಗಂಭೀರವಾಗಿವೆ. ನಮ್ಮ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಹೇಳಲು ಸಚಿವ ಸ್ಥಾನ ಬೇಕು” ಎಂದು ಆಗ್ರಹಿಸಿದರು.
ಗೃಹಿಣಿ ಸರಸ್ವತಿಯವರು ಈ ದಿನ.ಕಾಮ್ ಜತೆ ಮಾತನಾಡಿ, “ಅಶೋಕ ಪಟ್ಟಣ ಅವರು ಮೂರು ಬಾರಿ ಶಾಸಕರಾಗಿದ್ದಾರೆ. ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದಾರೆ. ಇಷ್ಟಾದರೂ ಸಚಿವ ಸ್ಥಾನ ಸಿಗದಿದ್ದರೆ ಅನ್ಯಾಯವಾಗುತ್ತದೆ” ಎಂದು ಹೇಳಿದರು.
“ಯುವಕರು ಕೆಲಸಕ್ಕಾಗಿ ಹೊರ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಇಲ್ಲಿ ಅಭಿವೃದ್ಧಿ ತರಲು ನಮ್ಮ ಕ್ಷೇತ್ರದವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ವಿದ್ಯಾರ್ಥಿ ರವಿ ಈ ದಿನ.ಕಾಮ್ ಜತೆ ಮಾತನಾಡಿದರು.
ವ್ಯಾಪಾರಿ ಬಸಪ್ಪ ಈ ಕುರಿತು ಮಾತನಾಡಿ, “ಪ್ರತಿ ಬಾರಿ ನಮ್ಮ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ. ಈ ಬಾರಿ ಅವಕಾಶ ಕೊಡದಿದ್ದರೆ ಜನರಿಗೆ ಬೇಸರ ಹೆಚ್ಚಾಗುತ್ತದೆ ಹಾಗೂ ಸರ್ಕಾರದ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಳ್ಳುತ್ತಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ ಅಜ್ಜಿ ಕಥೆ!
ರಾಮದುರ್ಗ ಕ್ಷೇತ್ರದ ವಿಚಾರವು ಕೇವಲ ಒಂದು ಶಾಸಕರಿಗೆ ಸಚಿವ ಸ್ಥಾನ ಸಿಗಬೇಕೆಂಬ ಬೇಡಿಕೆಗೆ ಸೀಮಿತವಾಗಿಲ್ಲ. ಅದು ಹಿಂದುಳಿದ ಪ್ರದೇಶಗಳಿಗೆ ನ್ಯಾಯ ಸಿಗಬೇಕೆಂಬ ದೊಡ್ಡ ಪ್ರಶ್ನೆಯಾಗಿದೆ. ವರ್ಷಗಳಿಂದ ಮುಂದುವರಿದ ನಿರ್ಲಕ್ಷ್ಯ, ಅಪೂರ್ಣ ಅಭಿವೃದ್ಧಿ ಮತ್ತು ಪುನರಾವರ್ತಿತ ಭರವಸೆಗಳು ಜನರಲ್ಲಿ ನಿರಾಸೆಯನ್ನುಂಟುಮಾಡಿವೆ.
ಈ ಕಾರಣದಿಂದ ಮುಂದಿನ ಸಚಿವ ಸಂಪುಟ ಪುನರ್ ರಚನೆ ಒಂದು ಸಾಮಾನ್ಯ ರಾಜಕೀಯ ಪ್ರಕ್ರಿಯೆಯಾಗಿರದೆ, ನ್ಯಾಯ ಮತ್ತು ಸಮಾನತೆಯ ಪರಿಕಲ್ಪನೆಗೆ ಉತ್ತರ ನೀಡುವ ಅವಕಾಶವಾಗಬೇಕು. ರಾಮದುರ್ಗದಂತಹ ಕ್ಷೇತ್ರಗಳಿಗೆ ವಿಧಾನ ಸಭೆಯಲ್ಲಿ ಬಲವಾದ ಪ್ರತಿನಿಧಿತ್ವ ನೀಡಿ ಸಮಗ್ರ ಅಭಿವೃದ್ಧಿ ಅವಕಾಶ ಮಾಡಿಕೊಡಬೇಕು ಎನ್ನುವುದು ಕ್ಷೇತ್ರದ ಜನರ ಪಕ್ಷಾತೀತ ಅಭಿಪ್ರಾಯವಾಗಿದೆ.





