- ಕಸ ತೆರವು ಮಾಡುವ ವೇಳೆ 20 ಅಡಿ ಆಳದ ಮೋರಿಗೆ ಬಿದ್ದ ರತ್ನಮ್ಮ
- ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಸ್ವಚ್ಛತಾ ಸಿಬ್ಬಂದಿ ಕೆಲಸ ನಿರ್ವಹಿಸುವ ವೇಳೆ ಮ್ಯಾನ್‌ಹೋಲ್‌ಗೆ ಬಿದ್ದು ಬೆನ್ನು ಮೂಳೆ ಮುರಿದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ನಂದಿನಿ ಲೇಔಟ್‌ನ ಶ್ರೀಕಂಠ ನಗರದಲ್ಲಿ ಈ ಘಟನೆ ನಡೆದಿದೆ. ರತ್ನಮ್ಮ ಗಾಯಗೊಂಡವರು. ಮೇ 27ರಂದು ಸಿಬ್ಬಂದಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಈ ವೇಳೆ, ರಾಜಕಾಲುವೆ ಮೋರಿ ಮೇಲೆ ಹಾಕಿದ್ದ ಕಸವನ್ನು ತೆರವುಗೊಳಿಸುವ ವೇಳೆ ಈ ಘಟನೆ ನಡೆದಿದೆ.
ಕಸವಿರುವ ಕೆಳಗೆ ಮ್ಯಾನ್‌ಹೋಲ್ ಇರುವ ಬಗ್ಗೆ ತಿಳಿಯದ ರತ್ನಮ್ಮ ಕಸ ತೆರವು ಮಾಡುವ ವೇಳೆ ಅರಿವಿಲ್ಲದೆ 20 ಅಡಿ ಆಳದ ಮೋರಿಗೆ ಬಿದ್ದಿದ್ದಾರೆ. ಈ ವೇಳೆ, ಜತೆಗಿದ್ದ ಮತ್ತೋರ್ವ ಸಿಬ್ಬಂದಿ ಸ್ಥಳೀಯರನ್ನು ಕರೆದಿದ್ದಾರೆ. ಸ್ಥಳೀಯರು ನೀಡಿದ ಏಣಿ ಮೂಲಕ ರತ್ನಮ್ಮ ಅವರನ್ನು ರಕ್ಷಣೆ ಮಾಡಿದ್ದಾರೆ.
ರತ್ನಮ್ಮ ಅವರಿಗೆ ಸದ್ಯ ಬೆನ್ನು ಮೂಳೆ ಮುರಿದಿದ್ದು, ನಗರದ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾದಕ ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನಿಂದಲೇ ಡ್ರಗ್ಸ್ ಮಾರಾಟ!
ನೀರು ಸರಾಗವಾಗಿ ಹರಿದು ಹೋಗಲು ಕಳೆದ 7 ವರ್ಷಗಳ ಹಿಂದೆ ದೊಡ್ಡ ರಾಜಕಾಲುವೆ ಮೋರಿ ನಿರ್ಮಾಣ ಮಾಡಲಾಗಿತ್ತು. ಮೋರಿಯನ್ನು ನಿರ್ಮಾಣ ಮಾಡಿ ಅದನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದರು. ಈ ಮೋರಿಯ ಸುತ್ತಮುತ್ತ ಸಾಕಷ್ಟು ಮನೆಗಳಿದ್ದು, ಮಕ್ಕಳು ಬಿದ್ದಿದ್ದರೆ ಏನು ಗತಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.