ಮನಿ ಲಾಂಡರಿಂಗ್ ಪ್ರಕರಣದಲ್ಲಿ 2019ರ ಸೆಪ್ಟೆಂಬರ್‌ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಶಕ್ಕೆ ಪಡೆದಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು.
ಸಿದ್ದರಾಮಯ್ಯ ಸಂಪುಟದಲ್ಲಿ ಇರುವ ಏಕೈಕ ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್. ಅವರು ಸಚಿವರಾಗುವುದರ ಜೊತೆಗೆ, ಹೊಸ ದಾಖಲೆಯೊಂದನ್ನು ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಇತಿಹಾಸದಲ್ಲಿ ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ- ಮೂರು ಕ್ಷೇತ್ರಗಳಿಂದ ಆಯ್ಕೆಯಾದ ಯಾವುದೇ ಶಾಸಕರೂ ಮಂತ್ರಿಯಾಗಿರಲಿಲ್ಲ. ಗ್ರಾಮೀಣ ಕ್ಷೇತ್ರದಿಂದ ಗೆದ್ದು ಮಂತ್ರಿಯಾದ, ಮೊದಲ ಮಂತ್ರಿಯೆಂಬ ಹೆಗ್ಗಳಿಕೆಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಪಡೆದುಕೊಂಡಿದ್ದಾರೆ. ಪ್ರಸ್ತುತ ಸಂಪುಟದಲ್ಲಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ರಾಜಕೀಯ ಜೀವನ ಆರಂಭವಾಗಿದ್ದು 1998ರಲ್ಲಿ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕಾಂಗ್ರೆಸ್ ಸೇರಿ, ಸಾಮಾನ್ಯ ಕಾರ್ಯಕರ್ತೆಯಾಗಿ ಅವರು ರಾಜಕೀಯ ಆರಂಭಿಸಿದರು. 25 ವರ್ಷಗಳ ರಾಜಕೀಯ ಜೀವನದಲ್ಲಿ ಇದೀಗ ಅವರು ಮಂತ್ರಿಯಾಗಿದ್ದಾರೆ.
1999ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಅವರ ಪರವಾಗಿ ಮೊದಲ ಬಾರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಚಾರ ಮಾಡಿದ್ದರು. ಈ ವೇಳೆ, ಉತ್ತಮ ಕಾರ್ಯಕರ್ತೆಯಾಗಿ ಗುರುತಿಸಿಕೊಂಡ ಅವರು, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಆಯ್ಕೆಯಾದರು. ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿಯೂ ಯಶಸ್ವಿಯಾದರು. ಅಲ್ಲದೆ, ಸತೀಶ್ ಜಾರಕಿಹೊಳಿ ಅವರೊಂದಿಗೆ ಜಿಲ್ಲೆಯಲ್ಲಿ ಹಲವಾರು ಸಮಾವೇಶಗಳನ್ನು ಸಂಘಟಿಸಿ, ಜನರ ನಡುವೆ ಗುರುತಿಸಿಕೊಂಡರು.
2013ರಲ್ಲಿ ಮೊದಲ ಬಾರಿಗೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು ಸೋಲುಂಡರು. ಮಾತ್ರವಲ್ಲದೆ, 2014ರ ಲೋಕಸಭಾ ಚುನಾವಣೆಯಲ್ಲಿಯೂ ಬೆಳಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ಒಂದು ವರ್ಷದ ಅವಧಿಯಲ್ಲಿ ಎರಡು ಸೋಲುಗಳನ್ನು ಕಂಡ ಅವರು, ನಂತರವೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. 2015ರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹುದ್ದೆ ಪಡೆದುಕೊಂಡರು.
2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದ ಅವರು ಗೆಲುವು ಸಾಧಿಸಿದರು. ಆ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶ್ರಮಿಸಿದ್ದರು.
ಶಾಸಕಿಯಾದ ಬಳಿಕ, ಲಕ್ಷ್ಮೀ ಹೆಬ್ಬಾಳ್ಕರ್ ಮನಿ ಲಾಂಡರಿಂಗ್ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು. 2019ರ ಸೆಪ್ಟೆಂಬರ್‌ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಶಕ್ಕೆ ಪಡೆದಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಅದಾದ ಬಳಿಕ ಅವರ ವಿರುದ್ಧ ಯಾವುದೇ ವಿಚಾರಣೆಗಳು ನಡೆದಿಲ್ಲ.
ಈ ಸುದ್ದಿ ಓದಿದ್ದೀರಾ?: ನಮ್ಮ ಸಚಿವರು | ದಿನೇಶ್ ಗುಂಡೂರಾವ್: ವರ್ಚಸ್ಸಷ್ಟೇ ಸಾಲದು; ಅಭಿವೃದ್ಧಿಗೂ ಬೇಕಿದೆ ಒತ್ತು
ಅದೇ ಹೊತ್ತಿನಲ್ಲಿ, ಸಹಕಾರ ಬ್ಯಾಂಕ್, ಸಕ್ಕರೆ ಮತ್ತು ಸ್ಥಳೀಯ ರಾಜಕಾರಣದ ಮೇಲಾಟದಲ್ಲಿ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬದ್ದ ವೈರಿಗಳಾದರು. 2019ರಲ್ಲಿ ಮೈತ್ರಿ ಸರ್ಕಾರವನ್ನು ಉರುಳಿಸಿ, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ರಮೇಶ್ ಜಾರಕಿಹೊಳಿ ಅವರ ಪಾತ್ರ ಪ್ರಮುಖವಾಗಿತ್ತು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಗುಡುಗಿದ್ದರು.
ಹಾಗಾಗಿಯೇ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಲಕ್ಷ್ಮೀ ಅವರನ್ನು ಸೋಲಿಸಬೇಕೆಂದು ರಮೇಶ್ ಜಾರಕಿಹೊಳಿ ಪಣತೊಟ್ಟಿದ್ದರು. ಅದಕ್ಕಾಗಿ, ತಮ್ಮ ಆಪ್ತ ಮರಾಠ ಸಮುದಾಯದ ನಾಗೇಶ್ ಮನ್ನೋಳಕರ್‌ಗೆ ಬಿಜೆಪಿ ಟಿಕೆಟ್ ಕೊಡಿಸಿದ್ದರು. ಆದರೆ, ರಮೇಶ್ ಜಾರಕಿಹೊಳಿ ಅವರ ತಂತ್ರ ಫಲಿಸಲಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಎರಡನೇ ಬಾರಿಗೆ ಗೆದ್ದು, ಈಗ ಮಂತ್ರಿಯೂ ಆಗಿದ್ದಾರೆ.
ಈ ಬಾರಿಯ ಚುನಾವಣೆ ವೇಳೆ ಮತದಾರರಿಂದ ಲಕ್ಷ್ಮೀ ಹೆಬ್ಬಾಳ್ಕರ್ ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಮಾಡಿತ್ತು. ಕ್ಷೇತ್ರದ ಜನರಿಗೆ ಮಿಕ್ಸಿ-ಗ್ರೈಂಡರ್ ಹಂಚಿಕೆ ಮಾಡಿದ್ದಾರೆ. ಜೊತೆಗೆ, ತಮಗೆ ಮತ ಹಾಕುವಂತೆ ತೆಂಗಿನಕಾಯಿ ಮೇಲೆ ಪ್ರಮಾಣ ಮಾಡಿಸಿಕೊಂಡಿದ್ದಾರೆ ಎಂದು ಕೇಸರಿ ನಾಯಕರು ಆರೋಪಿಸಿದ್ದರು.
ಆ ಆರೋಪಗಳನ್ನೆಲ್ಲ ತಿರಸ್ಕರಿಸಿದ ಬೆಳಗಾವಿಯ ಮತದಾರರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಿಕೊಂಡಿದ್ದಾರೆ. ಗೆದ್ದು ಸಚಿವೆಯಾಗಿರುವ ಲಕ್ಷ್ಮೀಯವರು ಮತದಾರರಿಟ್ಟ ನಂಬಿಕೆಗೆ ಮೋಸ ಮಾಡದಂತೆ, ತಾವೂ ಬೆಳೆದು ಕ್ಷೇತ್ರವನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾಗಿದೆ.