ಬೀದರ್ | ʼಚಮ್ಮಾರಿಕೆʼಯಿಂದ ಬದುಕು ರೂಪಿಸಿಕೊಂಡ ಪದವೀಧರ ಯುವಕ

Date:

ಶಿಕ್ಷಕನಾಗಬೇಕೆಂಬ ಕನಸು ಕಂಡು ಓದಲು ಆರಂಭಿಸಿದ ನಾನು ಪದವಿ, ಡಿ.ಇಡ್ ಪಾಸು ಮಾಡಿದ್ದೇನೆ. ನೌಕರಿಗಾಗಿ ಸಾಕಷ್ಟು ಕಷ್ಟಪಟ್ಟು ಓದಿದ್ದೇನೆ. ಆದರೆ ಶಿಕ್ಷಕನಾಗುವ ನನ್ನ ಕನಸು ಕೊನೆಗೂ ಈಡೇರಲಿಲ್ಲ. ಕೊನೆಗೆ ಖಾಸಗಿ ಶಾಲೆಯಲ್ಲಿ ಕೆಲ ವರ್ಷಗಳ ಕಾಲ ಶಿಕ್ಷಕನಾಗಿ ಕೆಲಸಕ್ಕೆ ಸೇರಿದರೂ ಅದರಿಂದ ಬದುಕು ರೂಪಿಸಿಕೊಳ್ಳುವುದು ಅಸಾಧ್ಯವೆಂದು ಕೆಲಸ ಬಿಟ್ಟ ನನಗೆ ಕೊನೆಗೆ ಕೈ ಹಿಡಿದಿದ್ದು ನಮ್ಮ ಕುಲಕಸುಬು ಚಮ್ಮಾರಿಕೆ ವೃತ್ತಿ

ಭಾರತ ಹಲವು ಜಾತಿ, ಉಪಜಾತಿಗಳ ನೆಲ, ಇಲ್ಲಿನ ಬಹುತ್ವ ಸಂಸ್ಕೃತಿ ಉಳಿದಿದ್ದು ಹಲವು ಜಾತಿಗಳ ಮೂಲ ಕಸುಬುಗಳಿಂದ ಎನ್ನುವುದಕ್ಕೆ ಇಂದಿಗೂ ಬಹುತೇಕ ತಾಜಾ ಉದಾಹರಣೆಗಳು ಕಣ್ಮುಂದೆಯೇ ಇವೆ. ಆಧುನಿಕ ಹೊಡೆತಕ್ಕೆ ಅನೇಕ ಮೂಲ ಕಸುಬು, ರೂಢಿ, ಸಾಂಪ್ರದಾಯಕ ವೃತ್ತಿಗಳು ನಲುಗಿ ಹೋಗಿದ್ದು ಅಕ್ಷರಶಃ ಸತ್ಯ. ಆದರೆ ಮೂಲ ಕಸುಬು ಬಿಡದೆ ಅದನ್ನೇ ಬದುಕಿಗೆ ಆಧಾರವಾಗಿಟ್ಟುಕೊಂಡ ಬೆರಳೆಣಿಕೆಯಷ್ಟು ಮಂದಿ ನೆಲಮೂಲ ಸಂಸ್ಕೃತಿಯ ಸಂರಕ್ಷಕರು ಎಂದರೂ ತಪ್ಪಾಗಲಾರದು. ಕುಲಕಸುಬು ಮುಂದುವರಿಸಿಕೊಂಡು ಬದುಕು ರೂಪಿಸಿಕೊಂಡ ಹಳ್ಳಿಯ ಪದವೀಧರ ಯುವಕನೋರ್ವನ ಜೀವನಗಾಥೆ ಇಲ್ಲಿದೆ.

“ಶಿಕ್ಷಕನಾಗಬೇಕೆಂಬ ಕನಸು ಕಂಡು ಓದಲು ಆರಂಭಿಸಿದ ನಾನು ಪದವಿ, ಡಿ.ಇಡ್ ಪಾಸು ಮಾಡಿದ್ದೇನೆ. ನೌಕರಿಗಾಗಿ ಸಾಕಷ್ಟು ಕಷ್ಟಪಟ್ಟು ಓದಿದ್ದೇನೆ. ಆದರೆ ಶಿಕ್ಷಕನಾಗುವ ನನ್ನ ಕನಸು ಕೊನೆಗೂ ಈಡೇರಲಿಲ್ಲ. ಕೊನೆಗೆ ಖಾಸಗಿ ಶಾಲೆಯಲ್ಲಿ ಕೆಲ ವರ್ಷಗಳ ಕಾಲ ಶಿಕ್ಷಕನಾಗಿ ಕೆಲಸಕ್ಕೆ ಸೇರಿದರೂ ಅದರಿಂದ ಬದುಕು ರೂಪಿಸಿಕೊಳ್ಳುವುದು ಅಸಾಧ್ಯವೆಂದು ಕೆಲಸ ಬಿಟ್ಟ ನನಗೆ ಕೊನೆಗೆ ಕೈ ಹಿಡಿದಿದ್ದು ನಮ್ಮ ಕುಲಕಸುಬು ಚಮ್ಮಾರಿಕೆ ವೃತ್ತಿ” ಎನ್ನುತ್ತಾರೆ ಚಮ್ಮಾರಿಕೆ ವಿನ್ಯಾಸಗಾರ ವಿನೋದ ಹಮೀಲಪುರೆ.

ಕುಲಕಸುಬಾದ ಚಮ್ಮಾರಿಕೆಯಲ್ಲಿ ತೊಡಗಿರುವ ಪದವೀಧರ ವಿನೋದ್

ಚಪ್ಪಲಿ, ಶೂ ಸೇರಿದಂತೆ ಚರ್ಮದ ಪರಿಕರಗಳನ್ನು ತಯಾರು ಮಾಡುವ ಚರ್ಮಶಿಲ್ಪಿ ವಿನೋದ ಹಮೀಲಪುರೆ ಮೂಲತಃ ಬೀದರ್ ಜಿಲ್ಲೆ ಔರಾದ್ ತಾಲೂಕಿನ ವಡಗಾಂವ(ದೇ) ಗ್ರಾಮದವರು. ವಿನೋದ ಓದಿದ್ದು ಬಿ.ಎ., ಡಿ.ಇಡ್ ಹಾಗೂ ಐಟಿಐ, ವಯಸ್ಸು 35 ಆಸುಪಾಸಿನ ಅವಿವಾಹಿತ. ಶಿಕ್ಷಕನಾಗುವ ಕನಸು ಕಂಡಿದ್ದ ವಿನೋದ ಇದೀಗ ತಮ್ಮ ಮೂಲ ಸಂಪ್ರದಾಯ ವೃತ್ತಿ ಆರಂಭಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಜ್ಜ-ತಂದೆ ಪ್ರೇರಣೆ

ವಿನೋದ ಅವರ ಕುಟುಂಬದಲ್ಲಿ ಎಲ್ಲರೂ ತಮ್ಮ ಸಂಪ್ರದಾಯ ಕುಲಕಸುಬು ಆಗಿರುವ ಚಪ್ಪಲಿ, ಬೂಟು ಸಿದ್ಧಪಡಿಸುವ ಕಾಯಕವನ್ನೇ ಮಾಡುತ್ತಾರೆ. ತಾತನಿಂದ ಶುರುವಾದ ಚಮ್ಮಾರಿಕೆ ಕಸುಬು ಮೂರನೇ ತಲೆಮಾರಿನ ವಿನೋದ್ ಅವರು ತಮ್ಮ ಕುಲಕಸುಬು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶತಮಾನದಿಂದಲೂ ಚಾಲ್ತಿಯಲ್ಲಿರುವ ಇವರ ಕುಟುಂಬದ ವೃತ್ತಿಯ ಬಗ್ಗೆ ಬೀದರ್ ಜಿಲ್ಲೆ ಅಷ್ಟೇ ಅಲ್ಲದೆ ನೆರೆಯ ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಗುರುತಿಸುತ್ತಾರೆ. ನಿಗದಿತ ಸಮಯಕ್ಕೆ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವ ಕುಟುಂಬ ಜನರ ಪ್ರೀತಿ, ವಿಶ್ವಾಸ ಉಳಿಸಿಕೊಂಡು ವ್ಯವಹಾರಿಕ ಜೊತೆಗೆ ಗ್ರಾಹಕರೊಂದಿಗೆ ಗಟ್ಟಿ ಬಾಂಧವ್ಯ ಬೆಸೆದಿದೆ.

ಚಮ್ಮಾರರು, ಸಮಗಾರರು ಎಂದು ಕರೆಸಿಕೊಳ್ಳುವ ಈ ಸಮುದಾಯ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದು‌, ಇತರೆ ಸಮುದಾಯಗಳಿಗೆ ಹೋಲಿಸಿದರೆ ಈ ಸಮುದಾಯದ ಅಭಿವೃದ್ಧಿ ಮರೀಚಿಕೆ ಎನ್ನಬಹುದು. ಚಿಕ್ಕದಿನಿಂದಲೇ ವಿನೋದ ಅವರು ಓದಿನೊಂದಿಗೆ ತಂದೆಯಿಂದ ಚಮ್ಮಾರಿಕೆ ಕಾಯಕ ಕಲಿಯಲು ಆಸಕ್ತಿ ಬೆಳೆಸಿಕೊಂಡಿದ್ದರು. ತಾತನ ಪ್ರೇರಣೆ ತಂದೆಯ ಮಾರ್ಗದರ್ಶನದಲ್ಲಿ ಬೆಳೆದು ವಿವಿಧ ಬಗೆಯ ಲೇದರ್ ಪಾದರಕ್ಷೆಗಳನ್ನು ವಿನ್ಯಾಸಗೊಳಿಸುವುದನ್ನು ಕರಗತ ಮಾಡಿಕೊಂಡರು.

ಸರ್ಕಾರಿ ನೌಕರಿ ಸಿಗಲಿಲ್ಲ, ಕುಲಕಸುಬ ಬಿಡಲಿಲ್ಲ

ಸರ್ಕಾರಿ ನೌಕರ ಆಗಬೇಕೆಂಬ ಕನಸು ಹೊತ್ತಿಕೊಂಡು ಕಲಿಕೆ ಮುಂದುವರಿಸಿದ್ದ ವಿನೋದ ಅವರು ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೂ ಯಾವುದೂ ಫಲಿಸಲಿಲ್ಲ. ಹೀಗಾಗಿ ಸರ್ಕಾರಿ ಹುದ್ದೆಗಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡದೆ ತಾತ-ತಂದೆಯಿಂದ ಬಳುವಳ್ಳಿಯಾಗಿ ಬಂದ ಸಾಂಪ್ರದಾಯಕ ಕಸುಬು ವೃತ್ತಿಯಾಗಿಸಿಕೊಂಡು ಹೊಸ ಬದುಕು ಕಟ್ಟಿಕೊಳ್ಳಲು ಮುಂದಾದರು.‌

“ನಾವೆಷ್ಟೇ ಓದಿದರೂ ನಮ್ಮ ಸಾಂಪ್ರದಾಯಕ ವೃತ್ತಿ ಬಿಡಬಾರದು. ಸರ್ಕಾರಿ ಹುದ್ದೆಯಲ್ಲಿ ಸಿಗುವ ನೆಮ್ಮದಿ ನನ್ನ ಸಾಂಪ್ರದಾಯಿಕ ವೃತ್ತಿಯಿಂದಲೂ ಸಿಗುತ್ತಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ʼಕಾಯಕವೇ ಕೈಲಾಸʼ ತತ್ವವೇ ನನಗೆ ಮೂಲ ಪ್ರೇರಣೆ. ಕಾಯಕ ಯಾವುದೇ ಆಗಿರಲಿ, ಶ್ರದ್ಧಾ, ಭಕ್ತಿ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೂಡಿದರೆ ಯಶಸ್ಸು ತಂತಾನೇ ಬೆನ್ನತ್ತಿ ಬರುತ್ತದೆ. ಇದಕ್ಕೆ ನಾನೇ ಸಾಕ್ಷಿ. ಈ ಕೆಲಸದಲ್ಲಿ ನನಗೆ ಯಾವುದೇ ಕೀಳರಿಮೆ, ಹಿಂಜರಿಕೆ ಇಲ್ಲ. ಸಂತೃಪ್ತಿಯಿದೆ. ಉತ್ತಮ ಸಂಪಾದನೆಯಿಂದ ಬದುಕು ಹಸನಾಗಿದೆ” ಎಂದು ಮನಬಿಚ್ಚಿ ಹೇಳುತ್ತಾರೆ ವಿನೋದ ಹಮೀಲಪುರೆ.

‘ವಡಗಾಂವ ಲೇದರ್ ಶೂ’ ಗೆ ಫುಲ್ ಡಿಮ್ಯಾಂಡ್

ಸುಮಾರು ನೂರು ವರ್ಷದಿಂದ ಲೆದರ್ ಬೂಟು, ಚಪ್ಪಲಿಗಳನ್ನು ಸಿದ್ಧಪಡಿಸುವ ವಿನೋದ ಅವರ ಕುಟುಂಬದಲ್ಲಿ ಈಗ ಮೂವರು ಸಹೋದರು ಇದೇ ಕಾಯಕ ಮಾಡುತ್ತಾರೆ. ಯಾವುದೇ ಅಂಗಡಿ, ದೊಡ್ಡ ಕಟ್ಟಡ ಇಲ್ಲದೆ ಮನೆ ಮುಂಭಾಗದ ಒಂದು ಕೋಣೆಯಲ್ಲೇ ಎಲ್ಲ ಕೆಲಸ ಮಾಡುತ್ತಾರೆ. ಮಹಾರಾಷ್ಟ್ರದ ನಾದೇಡ, ಉದಗೀರ್‌ನಿಂದ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಿ, ಅದನ್ನು ಹದ ಮಾಡಿ ಪಾದರಕ್ಷೆ ತಯಾರಿಸುತ್ತಾರೆ.

ಮುಕಾಶನ್, ಜಲ್ಸಾ, ಡೋರಿ, ಡಿಸ್ಕೊ, ಜಡಾವ್, ಲೋಫರ್, ಕೋಲಾಪುರಿ ಸೇರಿದಂತೆ ವಿವಿಧ ನಮೂನೆಯ ಶೂ, ಚಪ್ಪಲಿಗಳನ್ನು ತಯಾರಿಸುವ ಇವರಿಗೆ ಮಾರಾಟಕ್ಕೆ ವ್ಯವಸ್ಥೆ ಬೇಕಾಗಿಲ್ಲ. ಪ್ರಚಾರದ ಅಗತ್ಯವಿಲ್ಲ. ಆದರೂ ಪ್ರತಿ ದಿನವೂ ಅಂಗಡಿ ಹುಡುಕಿಕೊಂಡು ಹತ್ತಾರು ಗ್ರಾಹಕರು ಮನೆಗೆ ಬಂದು ಆರ್ಡರ್ ಕೊಡ್ತಾರೆ. ಬೀದರ್ ಜಿಲ್ಲೆಯ ವಿವಿಧ ಠಾಣೆಯ ಪಿಎಸ್ಐ, ಪೋಲೀಸ್ ಸಿಬ್ಬಂದಿ, ರೈತರು, ಕೂಲಿಕಾರ್ಮಿಕರು, ಶಿಕ್ಷಕರು ಹೀಗೆ ಪ್ರತಿಯೊಬ್ಬರೂ ಆಸಕ್ತಿಯಿಂದ ನಮ್ಮಲ್ಲಿ ಬೂಟು, ಚಪ್ಪಲಿ ಆರ್ಡರ್ ಕೊಟ್ಟು ಮಾಡಿಸುತ್ತಾರೆ. ಒಮ್ಮೆ ಖರೀದಿಸಿದವರೆ ಸಾಕು ಕನಿಷ್ಠ 6-12 ತಿಂಗಳು ಯಥೇಚ್ಛವಾಗಿ ಬಳಸಬಹುದು ಎನ್ನುವುದು ಗ್ರಾಮಸ್ಥರೊಬ್ಬರ ಅಭಿಪ್ರಾಯ.

“ಬಹುತೇಕರು ನಮ್ಮ ಪರ್ಮನೆಂಟ್ ಗಿರಾಕಿಗಳು, ಕಳೆದ 10-20 ವರ್ಷಗಳಿಂದ ನಮ್ಮಲ್ಲಿ ಸಿದ್ಧಪಡಿಸಿದ ಬೂಟು, ಚಪ್ಪಲಿ ಮಾತ್ರ ಬಳಸುತ್ತಾರೆ. ಇದಕ್ಕೆ ಉತ್ತಮ ಗುಣಮಟ್ಟದ ಲೆದರ್ ಬಳಕೆಯೇ ಕಾರಣ. ಪಕ್ಕಾ ಲೆದರ್‌ನಿಂದ ತಯಾರಾಗುವ ಈ ಪಾದರಕ್ಷೆ ಬಳಸುವುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಇತರೆ ಕಾಯಿಲೆಗಳಿಂದ ಮುಕ್ತವಾಗಿರಬಹುದು ಎನ್ನುವುದು ವೈಜ್ಞಾನಿಕ ಮನೋಭಾವ. ಆಧುನಿಕ ಜಗತ್ತಿಗೆ ಅನುಗುಣವಾಗಿ ಹೊಸ ಬಗೆಯ ವಿನ್ಯಾಸದ ಪಾದರಕ್ಷೆಗಳು ನಮ್ಮಲ್ಲಿ ಲಭ್ಯವಾಗದ ಕಾರಣ ದೊಡ್ಡ ಶೋ ರೂಮ್‌ಗಳಲ್ಲಿ ಇರುವ ಬೇಡಿಕೆಯಂತೆ ನಮ್ಮ ವಸ್ತುಗಳಿಗೂ ಭಾರೀ ಡಿಮ್ಯಾಂಡ್ ಇದೆ” ಎನ್ನುತ್ತಾರೆ ವಿನೋದ್.

“ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳ ಪಾದರಕ್ಷೆ ಅಂಗಡಿ ಮಾಲಿಕರು ನಮ್ಮ ಉತ್ಪಾದನೆ ವಸ್ತುಗಳನ್ನು ಖರೀದಿಸಲು ಡಿಮ್ಯಾಂಡ್ ಮಾಡ್ತಾರೆ. ಆದರೆ ಹಿಂದಿನಿಂದಲೂ ಖರೀದಿಸಿಕೊಂಡು ಹೋಗುವ ಗ್ರಾಹಕರ ಬೇಡಿಕೆಯೇ ಹೆಚ್ಚಾದ ಕಾರಣ ಸಗಟು ಮಾರಾಟ ತಿರಸ್ಕರಿಸುತ್ತೇವೆ. ನಮ್ಮ ನಂಬಿಕೆ, ಭರವಸೆಯಿಂದ ದೂರದ ಊರಿನಿಂದ ಬರುವ ಗ್ರಾಹಕರಿಗೆ ನಿಗದಿತ ಸಮಯಕ್ಕೆ ನೀಡುವುದು ನಮ್ಮ ಉದ್ದೇಶ. ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ಇಂದು ಜಿಲ್ಲೆಯಲ್ಲಿ “ವಡಗಾಂವ ಲೆದರ್ ಬೂಟ್” ಹೆಸರುವಾಸಿಯಾಗಿದೆ” ಎಂದು ಮಾತಿಗಿಳಿದು ಹೇಳುತ್ತಾರೆ.

“ಸುಮಾರು ಇಪ್ಪತ್ತು ವರ್ಷಗಳಿಂದ ಇಲ್ಲಿ ಸಿದ್ಧಪಡಿಸಿದ ಶೂಗಳನ್ನೇ ಬಳಸುತ್ತೇನೆ. ಪಕ್ಕಾ ಲೆದರ್ ಬಳಸಿ ತಯಾರಿಸುವ ಈ ಬೂಟು ಬಳಕೆಯಿಂದ ಪಾದಗಳು ಸುರಕ್ಷಿತವಾಗಿರುತ್ತವೆ. ಹೊರಗಡೆ ಹಲವು ಬಗೆಯ ಕಂಪನಿಗಳ ಬೂಟು, ಚಪ್ಪಲಿ ಇದ್ದರೂ ನಾವು ಇವುಗಳನ್ನೇ ಬಳಸುತ್ತೇವೆ. ಉತ್ತಮ ಗುಣಮಟ್ಟವಿದ್ದು, ಕನಿಷ್ಠ ದರದಲ್ಲಿ ಸಿಗುವ ಕಾರಣ ಬೇಡಿಕೆ ಹೆಚ್ಚಿದೆ. ಜನರ ಬಳಕೆ ಜಾಸ್ತಿಯಾಗಿದೆ” ಎಂದು ತೆಲಂಗಾಣ ಮೂಲದ ಗ್ರಾಹಕರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿದ್ದಾರೆ.

ಸರ್ಕಾರದ ಸಹಾಧನ ನಿರೀಕ್ಷೆ

ಹಲವು ವರ್ಷಗಳಿಂದ ಈ ಕಾಯಕ ಮುಂದುವರೆಸಿಕೊಂಡು ನಾಡಿನ ಜನರ ಕಾಲಿಗೆ ರಕ್ಷಣೆ ಮಾಡುತ್ತಾ ಬಂದರೂ ಇಲ್ಲಿಯವರಿಗೆ ಸರ್ಕಾರದ ನಯಾ ಪೈಸೆ ದಕ್ಕಿಲ್ಲ. ಕುಶಲಕರ್ಮಿಗಳಿಗೆ ಉತ್ತೇಜನ ನೀಡಲು ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದರೂ ಕುಲಕಸುಬು ನಂಬಿಕೊಂಡು ಜೀವನ ಸಾಗಿಸುವ ಕಾರ್ಮಿಕರಿಗೆ ಸೌಲಭ್ಯಗಳು ದಕ್ಕದೇ ಇರುವುದು ಸೋಜಿಗ. ವಿವಿಧ ಅಭಿವೃದ್ಧಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಪೋಲು ಮಾಡುವ ಸರ್ಕಾರ ಇಂಥ ಕುಶಲಕರ್ಮಿಗಳ ಆರ್ಥಿಕ ಜೀವನಮಟ್ಟ ಸುಧಾರಣೆಗೆ ಉತ್ತೇಜನ ನೀಡುವುದು ಅಗತ್ಯವಾಗಿದೆ.

“ಪ್ರತಿದಿನ 8-10 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ, ದಿನಕ್ಕೆ ಒಂದೆರಡು ಜೋಡಿ ಪಾದರಕ್ಷೆ ತಯಾರಿಸಬಹುದು. ಆದರೆ ಹೊಸ ಹೊಸ ವಿನ್ಯಾಸಕ್ಕೆ ಅಗತ್ಯವಾಗಿ ಬೇಕಾಗುವ ಯಂತ್ರೋಪಕರಣಗಳ ಕೊರತೆಯಿದೆ. ಈಗ ಎಲ್ಲವೂ ಕೈ ಶ್ರಮದಿಂದಲೇ ಮಾಡುತ್ತೇವೆ. ಹೆಚ್ಚಿನ ಉತ್ಪಾದನೆ ಆಗುತ್ತಿಲ್ಲ. ಶಕ್ತಿವೂ ಸಾಲುವುದಿಲ್ಲ. ಹೀಗಾಗಿ ಆಧುನಿಕತೆಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಬಳಸಿದರೆ ಉತ್ಪಾದನೆ ಹೆಚ್ಚಳ ಹಾಗೂ ಆದಾಯವೂ ಹೆಚ್ಚುತ್ತದೆ. ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ನಮ್ಮಂಥ ಕಸುಬು ಕಾರ್ಮಿಕರಿಗೆ ಸಹಾಯಧನ ಒದಗಿಸಿ ಪ್ರೋತ್ಸಾಹಿಸಬೇಕು” ಎಂದು ವಿನೋದ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

1 COMMENT

  1. “ಪ್ರತಿದಿನ 8-10 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ, ದಿನಕ್ಕೆ ಒಂದೆರಡು ಜೋಡಿ ಪಾದರಕ್ಷೆ ತಯಾರಿಸಬಹುದು. ಆದರೆ ಹೊಸ ಹೊಸ ವಿನ್ಯಾಸಕ್ಕೆ ಅಗತ್ಯವಾಗಿ ಬೇಕಾಗುವ ಯಂತ್ರೋಪಕರಣಗಳ ಕೊರತೆಯಿದೆ. ಈಗ ಎಲ್ಲವೂ ಕೈ ಶ್ರಮದಿಂದಲೇ ಮಾಡುತ್ತೇವೆ. ಹೆಚ್ಚಿನ ಉತ್ಪಾದನೆ ಆಗುತ್ತಿಲ್ಲ. ಶಕ್ತಿವೂ ಸಾಲುವುದಿಲ್ಲ. ಹೀಗಾಗಿ ಆಧುನಿಕತೆಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಬಳಸಿದರೆ ಉತ್ಪಾದನೆ ಹೆಚ್ಚಳ ಹಾಗೂ ಆದಾಯವೂ ಹೆಚ್ಚುತ್ತದೆ. ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ನಮ್ಮಂಥ ಕಸುಬು ಕಾರ್ಮಿಕರಿಗೆ ಸಹಾಯಧನ ಒದಗಿಸಿ ಪ್ರೋತ್ಸಾಹಿಸಬೇಕು” ಎಂದು ವಿನೋದ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    very good presentation, i appreciate -he can be supported, government has schemes , logistics i can help- [email protected]

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಐಸಿಯುನಲ್ಲಿದ್ದ ರೋಗಿಗೆ ರಕ್ತ ಬರುವ ಹಾಗೆ ಥಳಿಸಿದ ಕೆ.ಸಿ.ಜನರಲ್ ಆಸ್ಪತ್ರೆ ಸಿಬ್ಬಂದಿ

ರಾಜ್ಯ ರಾಜಧಾನಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ...

ಉಡುಪಿ | ಎರಡು ತಂಡಗಳ ನಡುವೆ ಗ್ಯಾಂಗ್ ವಾರ್; ತಡವಾಗಿ ಬೆಳಕಿಗೆ ಬಂದ ಪ್ರಕರಣ

ಉಡುಪಿ ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್‌ ವಾ‌ರ್ ನಡೆದ ಪ್ರಕರಣ...

ಸರ್ಕಾರೇತರ ವಾಹನಗಳ ಮೇಲೆ ಸರ್ಕಾರಿ ಲಾಂಛನ, ಚಿಹ್ನೆ; 7 ವಿಶೇಷ ತಂಡ ರಚನೆ, ಕಾರ್ಯಾಚರಣೆಗಿಳಿದ ಇಲಾಖೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಾಹನಗಳನ್ನು ಹೊರತುಪಡಿಸಿ,...

ಪೊಲೀಸ್ ಸಿಬ್ಬಂದಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ವಾಸ್ಥ್ಯಕ್ಕಾಗಿ ಕ್ರಮ; ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.87 ರಷ್ಟು ಪೊಲೀಸರು ಸ್ಥೂಲಕಾಯ, ಬೊಜ್ಜು ಅಥವಾ ಕಡಿಮೆ...