- ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ
- ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ನಗರದ ಪಾರ್ಕ್‌ವೊಂದರಲ್ಲಿ ಸ್ನೇಹಿತನ ಜೊತೆ ಕುಳಿತಿದ್ದ ಯುವತಿಯನ್ನು ಎಳೆದೊಯ್ದ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸರ್ಕಾರಿ ನೌಕರರು ಇರುವ ನ್ಯಾಷನಲ್ ಗೇಮ್ಸ್ ವಿಲೇಜ್ ಪಾರ್ಕ್‌ನಲ್ಲಿ ಸಂತ್ರಸ್ತ ಯುವತಿಯೂ ತನ್ನ ಸ್ನೇಹಿತನೊಂದಿಗೆ ಕುಳಿತಿದ್ದಳು. ಈ ವೇಳೆ, ಅಲ್ಲಿಗೆ ಬಂದ ನಾಲ್ವರು ದುಷ್ಕರ್ಮಿಗಳು ಯುವತಿಯ ಸ್ನೇಹಿತನನ್ನು ಬೆದರಿಸಿ, ಯುವತಿಯನ್ನು ಕೆಎ 01 ಎಂಬಿ 6169 ಸಂಖ್ಯೆಯ ಕಾರಿನಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ಈ ಘಟನೆ ಮಾರ್ಚ್ 25ರ ರಾತ್ರಿ 10 ಗಂಟೆಗೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಸೇರಿದಂತೆ ಹಲವೆಡೆ ಕಾರಿನಲ್ಲಿ ಸುತ್ತಾಟ ನಡೆಸಿ, ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ. ಮರುದಿನ ಮಾರ್ಚ್ 26ರ ಬೆಳಗ್ಗೆ 4 ಗಂಟೆಗೆ ಯುವತಿಯನ್ನು ಮನೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೇಸಿಗೆಗೆ ಮತ್ತಷ್ಟು ಹುಳಿಯಾದ ನಿಂಬೆಹಣ್ಣು
ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮಾರ್ಚ್ 26ರಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ನಾಲ್ವರು ಆರೋಪಿಗಳಾದ ಸತೀಶ್, ವಿಜಯ್, ಶ್ರೀಧರ್, ಕಿರಣ್ ಎಂಬುವವರನ್ನ ಬಂಧಿಸಿದ್ದಾರೆ.
ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಳ
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪೋಕ್ಸೊ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ.
ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಪೋಕ್ಸೋ ಪ್ರಕರಣಗಳ ವರದಿಯೂ ಆಘಾತಕಾರಿಯಾಗಿದೆ.
ರಾಜ್ಯದಲ್ಲಿ 2018ರಲ್ಲಿ 2,063 ಪೋಕ್ಸೊ ಪ್ರಕರಣಗಳು, 2020ರಲ್ಲಿ 2,166 ಹಾಗೂ 2021ರಲ್ಲಿ 2863 ಪ್ರಕರಣಗಳು ದಾಖಲಾಗಿವೆ.
ಈ ಸಂಖ್ಯೆ 2022ರ ವೇಳೆಗೆ 3,097ಕ್ಕೆ ಏರಿಕೆಯಾಗಿದೆ. 2023 ಜನವರಿ ತಿಂಗಳೊಂದರಲ್ಲಿಯೇ 207 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಲ್ಲಿ 200ಕ್ಕೂ ಹೆಚ್ಚು ಪೋಕ್ಸೊ ಪ್ರಕರಣಗಳು ದಾಖಲಾಗಿವೆ.
ಕೆ ಸಿ ಜನರಲ್ ಆಸ್ಪತ್ರೆಯೊಂದರಲ್ಲಿ ಕಳೆದ ವರ್ಷ 35 ಪ್ರಕರಣಗಳು ದಾಖಲಾಗಿದ್ದವು, ಈ ವರ್ಷದ ಡಿಸೆಂಬರ್ನಿಂದ ಮಾರ್ಚ್ವರೆಗೂ ಈಗಾಗಲೇ ಪೊಕ್ಸೋ ಪ್ರಕರಣಗಳು 35ರ ಗಡಿ ದಾಟಿವೆ.