ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಮತ್ತು ತತ್ವಗಳಿಗೆ ಅಪಮಾನ ಮಾಡುವಂತಹ ವಿವಾದಾತ್ಮಕ ಕೃತಿಯ ವಿರುದ್ಧ ಇಲ್ಲಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ‘ಇವ ನಮ್ಮವ’ ಚಿಂತನ-ಮಂಥನ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಕೃತಿಯನ್ನು ಸಂಪೂರ್ಣ ನಿಷೇಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತಮಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ “ವಿವಾದಿತ ಲೇಖಕನ ಹತ್ಯೆಗೆ ಬಹುಮಾನ ಘೋಷಿಸುವುದು ಸರಿಯಲ್ಲ. ವ್ಯಕ್ತಿಯನ್ನು ಕೊಲ್ಲುವ ಬದಲು ಅವರ ತಲೆಯಲ್ಲಿರುವ ಕಸವನ್ನು ತೆಗೆಯುವ ಕೆಲಸವಾಗಬೇಕು. ರಾಜ್ಯದ ಪ್ರತಿ ಗ್ರಾಮದಲ್ಲೂ ‘ಅನುಭವ ಮಂಟಪ ಅಭಿಯಾನ’ ಪುನರಾರಂಭಿಸಿ, ನುರಿತ ಸಂಶೋಧಕರಿಂದ ವಿವಾದಿತ ಕೃತಿಗೆ ತಕ್ಕ ಉತ್ತರ ನೀಡುವ ಯೋಗ್ಯ ಗ್ರಂಥವನ್ನು ಹೊರತರಬೇಕು.”
ಬಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು “ಅಪಚಾರದ ಬರಹಗಳಿಗೆ ತಕ್ಷಣ ಸ್ಪಂದಿಸಲು 11 ಅಥವಾ 21 ವಿದ್ವಾಂಸರ ಸಮಿತಿ ರಚನೆಯಾಗಬೇಕು. ಗಣಾಚಾರ ಪಡೆಯಂತೆ ಸಜ್ಜಾಗಿ, ಮುಂದೆ ದಾಖಲೆಗಳಾಗಿ ಉಳಿಯುವಂತಹ ರಚನಾತ್ಮಕ ಉತ್ತರ ಗ್ರಂಥವನ್ನು ಹೊರತರುವ ಮೂಲಕ ದೊಡ್ಡ ಗೆರೆ ಎಳೆಯೋಣ ಎಂದರು.
ಗದಗಿನ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಪುರಾಣ, ಕಾವ್ಯಗಳ ಅತಿಶಯೋಕ್ತಿಗಳನ್ನು ಆಧರಿಸಿ ಬಸವಣ್ಣನವರ ಚರಿತ್ರೆ ತಿರುಚುವುದು ಖಂಡನೀಯ. ಬಸವಣ್ಣನವರು ಲಿಂಗೈಕ್ಯರಾದ ಎರಡು ವರ್ಷಗಳ ನಂತರ ಬಿಜ್ಜಳನ ಹತ್ಯೆಯಾಯಿತು ಎಂಬುದಕ್ಕೆ ಶಾಸನಗಳ ಆಧಾರವಿದೆ. ಸಂವಿಧಾನದ ಬದಲು ಮನುಸ್ಮೃತಿ ತರಲು ಯತ್ನಿಸುವ ವಿಕೃತ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ಅಗತ್ಯ.”
ಸಿದ್ಧಗಂಗೆಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, “ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತರಲ್ಲ, ಇಡೀ ಮನುಕುಲಕ್ಕೆ ದಾರಿದೀಪ. ಸರ್ಕಾರ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ; ಆದರೆ ಅದು ಪ್ರಕಟವಾಗದಂತೆ ಸಂಪೂರ್ಣ ನಿಷೇಧ ಹೇರಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಕೂಡಲಸಂಗಮದ ಗಂಗಾಮಾತಾಜಿ ಮಾತನಾಡಿ”ಅಪ್ಪ ಬಸವಣ್ಣನವರ ವಿಚಾರ ಬಂದಾಗ ಭಿನ್ನಾಭಿಪ್ರಾಯ ಮರೆತು ನಾವೆಲ್ಲರೂ ಸಿಂಹಗಳಂತೆ ಒಂದಾಗಿ ಹೋರಾಡಬೇಕು. ಹೆಣ್ಣುಮಕ್ಕಳಿಗೆ ದೈವತ್ವ ಮತ್ತು ಆಚಾರ್ಯ ಸ್ಥಾನ ನೀಡಿದ ಶರಣ ಚಳವಳಿಯ ಬಗ್ಗೆ ಅವಹೇಳನ ಸಹಿಸಲು ಸಾಧ್ಯವಿಲ್ಲ ಎಂದರು.
ಶಿವಮೊಗ್ಗದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಮಾತಮಾಡಿ, “ಹೊರಗಿನ ಕೊಡಲಿಗಳಿಗಿಂತ ಅವುಗಳಿಗೆ ಕಾವಾಗಿ ನಿಲ್ಲುವ ನಮ್ಮವರ ಬಗ್ಗೆ ಎಚ್ಚರವಿರಬೇಕು. ಸರ್ಕಾರದ ಕ್ಷಿಪ್ರ ಕಾನೂನು ಕ್ರಮ ಸ್ವಾಗತಾರ್ಹ. ಸಮಾಜ ಒಗ್ಗಟ್ಟಿನಿಂದ ಎಚ್ಚರವಾಗಿರಬೇಕು.”
ಮೈಸೂರಿನ ಶರಶ್ಚಂದ್ರ ಸ್ವಾಮೀಜಿ, “ಕಾವ್ಯ-ಪುರಾಣಗಳ ಕಥನಗಳನ್ನೇ ಐತಿಹಾಸಿಕ ಸತ್ಯವೆಂದು ಬಿಂಬಿಸಬಾರದು. ಅನುಭವ ಮಂಟಪದ ಯೋಜನೆಯಡಿ ಶತಮಾನವಾರು ಗ್ರಂಥಗಳನ್ನು ಆಧರಿಸಿ ಸುಯೋಜಿತ ಇತಿಹಾಸ ಕಟ್ಟುವ ಕೆಲಸವಾಗಬೇಕು.”
ಚಿತ್ರದುರ್ಗ ಮುರುಘಾಮಠದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, “ವಚನ ಚಳವಳಿಯನ್ನು ವೈದಿಕ ಚೌಕಟ್ಟಿಗೆ ಸಿಲುಕಿಸಿ ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವ ನಾಶಪಡಿಸುವ ಯತ್ನ ಸಲ್ಲದು. ಪರಸ್ಪರ ನಿಂದನೆ ಬಿಟ್ಟು ಎಲ್ಲ ಸ್ವಾಮೀಜಿಗಳು ಒಟ್ಟಿಗೆ ಕುಳಿತು ಸೌಹಾರ್ದಯುತವಾಗಿ ಚರ್ಚಿಸಿ ಬಸವ ಸಂಸ್ಕೃತಿ ಅಭಿಯಾನ ಮುಂದುವರಿಸೋಣ ಎಂದರು.
ಚಿಂತಕ ಎಸ್.ಜಿ. ಸಿದ್ಧರಾಮಯ್ಯನವರು ಮಾತಮಾಡಿ, “ಅಂಬೇಡ್ಕರ್ ಅವರಿಗಿಂತ ಮೊದಲೇ 12ನೇ ಶತಮಾನದಲ್ಲಿ ಸಾಂಸ್ಕೃತಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬಸವಣ್ಣನವರು. ಪ್ರಕ್ಷಿಪ್ತ ವಚನಗಳನ್ನು ನಿವಾರಿಸಿ, ಕೆಳವರ್ಗದ ಶರಣರ ಮಾತುಗಳ ಆಧಾರದ ಮೇಲೆ ಸತ್ಯವನ್ನು ಎತ್ತಿಹಿಡಿಯಬೇಕು ಎಂದರು.
ಎಲ್. ಹನುಮಂತಯ್ಯ ಮಾತಮಾಡಿ, “ಸಮಾಜ ಒಡೆಯುವ ಇಂತಹ ‘ಸಾಂಸ್ಕೃತಿಕ ವಿಕೋಪ’ಗಳ ವಿರುದ್ಧ ಎಚ್ಚೆತ್ತು ಬಸವ ತತ್ವವನ್ನು ಮನೆಮನೆಗೆ ತಲುಪಿಸಬೇಕು. ಬಸವ ನಿಂದಕರಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು ಮತ್ತು ಅವರ ಬುದ್ಧಿಭ್ರಮಣೆ ಸರಿಪಡಿಸುವ ಕೆಲಸವನ್ನು ಚಿಂತಕರು ಮಾಡಬೇಕು.”
ಕೆಆರ್ ಎಸ್ ಪಕ್ಷದ ಮುಖ್ಯಸ್ಥ ರವಿಕೃಷ್ಣಾ ರೆಡ್ಡಿ ಮಾತನಾಡಿ, “ಮಠಾಧೀಶರು ಭ್ರಷ್ಟ ರಾಜಕಾರಣಿಗಳನ್ನು ಬೆಂಬಲಿಸುವುದನ್ನು ಬಿಟ್ಟು ಅಂತರ್ಜಾತಿ ವಿವಾಹಗಳಂತಹ ರಚನಾತ್ಮಕ ಸುಧಾರಣೆಗಳಿಗೆ ಒತ್ತು ನೀಡಬೇಕು. ಆಚಾರ ಲಿಂಗಾಯತರು ವಿಚಾರ ಲಿಂಗಾಯತರಾಗಿ ಪರಿವರ್ತನೆಯಾಗಬೇಕು ಎಂದರು.
ಹೋರಾಟಗಾರ ನವೀನ್ ಬಿಡದಿ ಮಾತಮಾಡಿ, “ರವಿ ಹಂಜ್ ಕೇವಲ ಸೂತ್ರದ ಬೊಂಬೆ; ಪ್ರಕರಣದ ಪ್ರಮುಖ ವ್ಯಕ್ತಿಯಾದ ವಿಶ್ವೇಶ್ವರ ಭಟ್ ಅವರಿಗೆ ತಕ್ಷಣ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿ ಆಸ್ಟ್ರೇಲಿಯಾದಿಂದ ಬಂಧಿಸಿ ಕರೆತರಬೇಕು. ಜನವರಿಯಲ್ಲಿ ರಾಜ್ಯಮಟ್ಟದ ‘ಬಸವ ಪಡೆ’ ಅಸ್ತಿತ್ವಕ್ಕೆ ಬರಲಿದೆ
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್, ಬಸವರಾಜ್ ಸಾದರ, ಬಸವರಾಜ ಸಬರದ, ಜಾಣಗೆರೆ ವೆಂಕಟರಾಮಯ್ಯ, ಆರ್ ಜಿಹಳ್ಳಿನಾಗರಾಜ್, ನಾಗರಾಜ ಮೂರ್ತಿ, ಅರವಿಂದ ಜತ್ತಿ, ರಾಜಸಾಬ್, ವಿಜಯಲಕ್ಷ್ಮಿ ಬಾಳೆಕುಂದ್ರಿ ಮುಕ್ತ, ಸಿದ್ದು ಯಾಪಲಪರವಿ, ಅನಂತನಾಯಕ, ಹೋರಾಟಗಾರ ನವೀನ್ ಬಿಡದಿ ಸೇರಿದಂತೆ ಅನೇಕ ಮಠಾಧೀಶರು, ಸಾಹಿತಿಗಳು ಹಾಗೂ ಬಸವಪರ ಚಿಂತಕರು ಉಪಸ್ಥಿತರಿದ್ಧರು




