- ಯೋಗೇಶ್ ಮಾಸ್ಟರ್ ಅವರ ‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ
- ಬೆಂಗಳೂರಿನ ಬಿಫ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅಭಿಪ್ರಾಯ
ಇಸ್ಲಾಂ ಎಂದರೆ ಹಿಂಸೆ ಬಿತ್ತುವ ಧರ್ಮ ಎನ್ನುವುದು ಜಗತ್ತಿನಾದ್ಯಂತ ಇರುವ ಶುದ್ಧ ಸುಳ್ಳು. ಅದನ್ನು ಹೋಗಲಾಡಿಸಿ, ಶಾಂತಿಯ ಧರ್ಮ ಎನ್ನುವ ಸತ್ಯದ ದರ್ಶನವನ್ನು ‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಮಾಡಿಸುತ್ತದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್ ಹೇಳಿದರು.
ಮಂಗಳೂರಿನ ಶಾಂತಿ ಪ್ರಕಾಶನ ಗುರುವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಗೀಶ್ ಮಾಸ್ಟರ್ ಅವರ ‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಸವ ತತ್ವಕ್ಕೂ ಕುರಾನಿಗೂ ಸಾಕಷ್ಟು ಹೋಲಿಕೆ ಇದೆ. ಎರಡೂ ಧರ್ಮಗಳ ಸಾರವೂ ಒಂದೇ ಆಗಿದೆ. ಯೋಗೀಶ್ ಮಾಸ್ಟರ್ ಅವರ ಪುಸ್ತಕ ಪೈಗಂಬರ್ ಅವರ ಅನುಭವದ ಕಥನವಾಗಿದೆ. ಎಲ್ಲ ಧರ್ಮಗಳನ್ನೂ ಗೌರವಿಸುವ, ಸ್ಮರಿಸುವ ಧ್ಯೇಯಗಳನ್ನು ಒಳಗೊಂಡಿದೆ. ಸರ್ವ ಜನಾಂಗದ ಶಾಂತಿಯ ತೋಟದ ಪರಿಕಲ್ಪನೆ ಕಟ್ಟಿಕೊಟ್ಟಿದೆ. ಓದುವ ಅಭ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಪುಸ್ತಕವನ್ನು ಡಿಜಿಟಲ್ ಆವೃತ್ತಿಗಳ ಮೂಲಕವೂ ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದರು.
ಲೇಖಕಿ ವಸುಂಧರಾ ಭೂಪತಿ ಮಾತನಾಡಿ, ಉತ್ತಮ ನಡೆಯ ಮೂಲಕ ಅಪ್ಪಂದಿರು ಮಕ್ಕಳನ್ನು ತಿದ್ದಬೇಕು. ಸ್ನೇಹಿತರಂತೆ ಕಾಣಬೇಕು. ತ್ಯಾಗ ಸೌಹಾರ್ದ ಕಲಿಸಬೇಕು. ಮಕ್ಕಳ ಸುಳ್ಳುಗಳನ್ನು ಕ್ಷಮಿಸಬೇಕು. ಅಂತಹ ಮಕ್ಕಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗುತ್ತಾರೆ ಎಂಬ ವಿವರಗಳನ್ನೂ ಪುಸ್ತಕ ದಾಖಲಿಸಿದೆ ಎಂದರು.

ಕೃತಿ ಕುರಿತು ‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಮಾತನಾಡಿದರು.
ಜಮಾತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿ, ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಲೇಖಕ ಯೋಗೀಶ್ ಮಾಸ್ಟರ್ ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಸಾದ್ ಬೆಳಗಾಮಿ ಅಧ್ಯಕ್ಷತೆ ವಹಿಸಿದ್ದರು.
