ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆಯ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.
ತೋಟಗಾರಿಕೆ ಇಲಾಖೆಯ ವತಿಯಿಂದ ‘ಪ್ರಮುಖ ತೋಟಗಾರಿಕೆ ಬೆಳೆಗಳು’ಎಂಬ ವಿಷಯದಡಿ ರೂಪಿಸಲಾದ ಈ ಸ್ತಬ್ಧಚಿತ್ರವು ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ವೈವಿಧ್ಯತೆ ಹಾಗೂ ಪ್ರಗತಿಪರ ಕೃಷಿ ಪದ್ಧತಿಗಳನ್ನು ಪರಿಚಯಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು.
ಸ್ತಬ್ಧಚಿತ್ರದಲ್ಲಿ ಕಮಠಾಣ ಗ್ರಾಮದ ಪ್ರಗತಿಪರ ರೈತ ವೈಜನಾಥ್ ನೀಡೋದ ಅವರ ಜಮೀನಿನಲ್ಲಿ ಬೆಳೆದ ಪಪ್ಪಾಯಿ ಹಣ್ಣು ಪ್ರಮುಖ ಆಕರ್ಷಣೆಯಾಗಿತ್ತು. ಜಿಲ್ಲೆಯ ರೈತರು ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ಸ್ತಬ್ಧಚಿತ್ರವು ಪ್ರತಿಬಿಂಬಿಸಿತು.ಹೂವಿನಲ್ಲಿ ಅರಳಿದ ಕರ್ನಾಟಕ ನಕಾಶೆ ಗಮನ ಸೆಳೆಯಿತು.

ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ ಲಭಿಸಿರುವುದಕ್ಕೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವಿಶ್ವನಾಥ್ ಜಿಳ್ಳೆ ಹರ್ಷ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರ ಮತ್ತು ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ತೋಟಗಾರಿಕೆ ಇಲಾಖೆ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ ಬಹುಮಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ, ಸಹಾಯಕ ಆಯುಕ್ತ ಅಭಿನವ್ ಜೈನ್ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ : ಬೀದರ್ | 71ನೇ ಕನ್ನಡ ರಾಜೋತ್ಸವ: ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ




