ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸುವ ಗುರಿಯೊಂದಿಗೆ ಕಾರ್ಯಕರ್ತರು ಈಗಿನಿಂದಲೇ ಸಕ್ರಿಯವಾಗಿ ಪಕ್ಷ ಸಂಘಟನೆಗೆ ಮುಂದಾಗಬೇಕು. ತಾವು ಮತ್ತೆ ಶಾಸಕರಾಗಿ ಸಚಿವರಾಗುವುದು ಖಚಿತ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಹೊರವಲಯದ ಕೋಗಿಲಹಳ್ಳಿಯಲ್ಲಿ ಭಾನುವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಕೋಲಾರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಇನ್ನೂ 18 ತಿಂಗಳು ಬಾಕಿಯಿದ್ದು, ಆರು ತಿಂಗಳ ನಂತರ ಚುನಾವಣಾ ಕಾವು ಹೆಚ್ಚಾಗಲಿದೆ. ಮುಂದಿನ ವಾರದಿಂದ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸುತ್ತೇನೆ. ಕಾರ್ಯಕರ್ತರು ಯುಗಾದಿ ಹಬ್ಬದಂತೆ ತೋರಣ ಕಟ್ಟಿ ಸ್ವಾಗತಿಸುವ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಹಿಂದೆ ಕ್ಷೇತ್ರದಲ್ಲಿ ನಾಲ್ಕು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದವು. ಕಾಂಗ್ರೆಸ್ ಸರ್ಕಾರ ಅವುಗಳನ್ನು ಮೂರಕ್ಕೆ ಇಳಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಗೆಲ್ಲುವ ಸಾಮರ್ಥ್ಯವಿರುವ ಸ್ಥಳೀಯ ಮುಖಂಡರು ತಮ್ಮ ಶಕ್ತಿಯ ಆಧಾರದಲ್ಲಿ ಸ್ಪರ್ಧೆಗೆ ಸಿದ್ಧರಾಗಬೇಕು. ಕ್ಷೇತ್ರದ ಹಳ್ಳಿಗಳಲ್ಲಿ ಪ್ರವಾಸ ಮಾಡಿ ರಾಜಕೀಯ ಸ್ಥಿತಿಗತಿ ಆಧರಿಸಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹಿಂದೆ ತಾವು ನೆರವು ನೀಡಿದ್ದ ಸಂಘಗಳು ಈಗ 30ರಿಂದ 40ಕ್ಕೆ ಬೆಳೆದಿದ್ದು, ಅವರೆಲ್ಲರನ್ನೂ ಒಗ್ಗೂಡಿಸಿ ಸಭೆ ನಡೆಸಲಾಗುವುದು. ಮುಂದಿನ ಸ್ಥಳೀಯ ಚುನಾವಣೆಗಳು ಸೆಮಿಫೈನಲ್ ಇದ್ದಂತೆ, ವಿಧಾನಸಭಾ ಚುನಾವಣೆ ಫೈನಲ್ ಇದ್ದಂತೆ ಕಾರ್ಯಕರ್ತರು ಕೆಲಸ ಮಾಡಬೇಕು. ಕಾಂಗ್ರೆಸ್‌ನಿಂದ ದೂರವಾಗಿರುವ ಒಬಿಸಿ, ದಲಿತ ಹಾಗೂ ಅಹಿಂದ ವರ್ಗದ ಮುಖಂಡರು ಮತ್ತು ಕಾರ್ಯಕರ್ತರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಮಾಜಿ ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಉದ್ದೇಶದಿಂದ ನ.3ರಂದು ನಡೆಯುವ ಕಾರ್ಯಕ್ರಮದಲ್ಲಿ ಮೈತ್ರಿಕೂಟದ ಲೆಕ್ಕಾಚಾರ ಬದಿಗಿಟ್ಟು ಬಿಜೆಪಿ ತನ್ನ ಶಕ್ತಿಯನ್ನು ಪ್ರದರ್ಶಿಸಬೇಕು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಕಾರ್ಯಕರ್ತರು ಮನೆಯಲ್ಲಿ ಕೂರಬಾರದು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸವೂ ಆಗಿಲ್ಲ. ಹಿಂದಿನ ಸರ್ಕಾರ ತಂದ ಅನುದಾನದಲ್ಲಿಯೂ ಕಮಿಷನ್ ಪಡೆಯುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು. ಕೋಲಾರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ಸಂಘಟನೆಯನ್ನು ಬಲಪಡಿಸಬೇಕು ಎಂದರು.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗೋಪಾಲಯ್ಯ ಮಾತನಾಡಿ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಶಕ್ತಿಗಳಿಗೆ ಕಾಂಗ್ರೆಸ್ ಹಣಕಾಸಿನ ನೆರವು ನೀಡುವುದಾಗಿ ಹೇಳುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಇಂತಹ ಬೆಳವಣಿಗೆಗಳ ವಿರುದ್ಧ ಜನರನ್ನು ಜಾಗೃತಗೊಳಿಸಬೇಕು. ಕೋಲಾರ ಬಿಜೆಪಿ ಪಾಲಿಗೆ ಶಕ್ತಿ ಕೇಂದ್ರವಾಗಬೇಕು. 2028ರ ಚುನಾವಣೆಯಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದ್ದು, ವರ್ತೂರು ಪ್ರಕಾಶ್ ಅವರಿಗೆ ಉತ್ತಮ ಅವಕಾಶವಿದೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಕೋಲಾರ ಬಿಜೆಪಿ ಭದ್ರಕೋಟೆಯಾಗಿದ್ದು, ವೇಮಗಲ್, ಕುರಗಲ್ ಪಟ್ಟಣ ಪಂಚಾಯಿತಿ ಹಾಗೂ ಅರಹಳ್ಳಿ ಸೊಸೈಟಿ ಮತ್ತು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ಸಾಧಿಸಿದ ಗೆಲುವು ಸಂಘಟನೆಯ ಶಕ್ತಿಗೆ ಸಾಕ್ಷಿಯಾಗಿದೆ. ಪಕ್ಷದಲ್ಲಿ ಲಾಬಿ ಮಾಡುವುದರಿಂದ ಟಿಕೆಟ್ ಸಿಗುವುದಿಲ್ಲ; ಜನರ ನಡುವೆ ಕೆಲಸ ಮಾಡಿ ಸಂಘಟನೆಯ ಶಕ್ತಿ ತೋರಿಸಬೇಕು ಎಂದರು.
ನ.3ರಂದು ಬೆಳಿಗ್ಗೆ 10.30ಕ್ಕೆ ನಗರದ ಡೂಂಲೈಟ್ ವೃತ್ತದಲ್ಲಿ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಕಠಾರಿಪಾಳ್ಯ ಮುಖ್ಯರಸ್ತೆ, ಶಾರದಾ ಟಾಕೀಸ್, ಹೊಸ ಬಸ್ ನಿಲ್ದಾಣ, ಅಮ್ಮವಾರಿಪೇಟೆ ಮೂಲಕ ಸಾಗಿ ಗಾಂಧಿವನದಲ್ಲಿ ಮುಕ್ತಾಯಗೊಳ್ಳಲಿದೆ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ..?ಕೋಲಾರ | ವಾಲ್ಮೀಕಿ, ಅಂಬೇಡ್ಕರ್ ನಮ್ಮ ನಿಜವಾದ ಹೀರೋಗಳು: ಶಾಸಕ ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಮಾವು ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೆಗ್ಲಿ ಸೂರ್ಯಪ್ರಕಾಶ್, ವಿಜಯಕುಮಾರ್, ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್. ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣ್ ಪ್ರಸಾದ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೂಲೂರು ಅಂಜಿನಪ್ಪ, ಬಿಜೆಪಿ ನಗರ ಅಧ್ಯಕ್ಷ ಸಾ.ಮಾ. ಅನಿಲ್ ಬಾಬು ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




