ಭಾರತ ಸ್ವಾಭಿಮಾನ ಟ್ರಸ್ಟ್ (ಪತಂಜಲಿ ಯೋಗ ಸಮಿತಿ) ಬೀದರ್ ಜಿಲ್ಲಾಧ್ಯಕ್ಷರಾಗಿ ಯೋಗ ಸಾಧಕ ಗೋರಖನಾಥ್ ಕುಂಬಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪತಂಜಲಿ ಯೋಗಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಘೋಷಿಸಿದರು.
ಬೀದರ್ ನಗರದ ಬರೀದ್‌ಶಾಹಿ ಉದ್ಯಾನವನದಲ್ಲಿ ಆಯೋಜಿಸಿದ್ದ ವಿಶೇಷ ಯೋಗ ಶಿಬಿರದಲ್ಲಿ ಗೋರಖನಾಥ್ ಕುಂಬಾರ್ ಅವರನ್ನು ನೂತನ ಜಿಲ್ಲಾಧ್ಯಕ್ಷರನ್ನಾಗಿ ಅಧಿಕೃತವಾಗಿ ಘೋಷಿಸಲಾಯಿತು.
ಗೋರಖನಾಥ್ ಕುಂಬಾರ್ ಅವರು ಕಳೆದ ಎರಡು ದಶಕಗಳಿಂದ ಬೀದರ್ ಜಿಲ್ಲೆಯಾದ್ಯಂತ ಯೋಗದ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಉಚಿತವಾಗಿ ಯೋಗ ತರಬೇತಿ ನೀಡುವ ಮೂಲಕ ಯೋಗದ ಪ್ರಚಾರ ಮತ್ತು ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ರಚಿಸಿದ ಯೋಗಕ್ಕೆ ಸಂಬಂಧಿಸಿದ ‘ಯೋಗ ಸಾಂಗತ್ಯ’ ಪುಸ್ತಕವನ್ನು ಹರಿದ್ವಾರದಲ್ಲಿ ಯೋಗಗುರು ಬಾಬಾ ರಾಮದೇವ್ ಅವರು ಲೋಕಾರ್ಪಣೆಗೊಳಿಸಿರುವುದು ವಿಶೇಷವಾಗಿದೆ.

ಮಹಿಳಾ ವಿಭಾಗದ ಪದಾಧಿಕಾರಿಗಳ ನೇಮಕ
ಪತಂಜಲಿ ಯೋಗ ಸಮಿತಿಯ ಬೀದರ್ ಜಿಲ್ಲಾ ಮಹಿಳಾ ಪ್ರಭಾರಿಯಾಗಿ ವಿದ್ಯಾವತಿ ಹಿರೇಮಠ ಹಾಗೂ ಸಹ ಪ್ರಭಾರಿಯಾಗಿ ರೂಪಾ ಪಾಟೀಲ್ ಅವರನ್ನು ನೇಮಕ ಮಾಡಿರುವುದಾಗಿ ಘೋಷಿಸಲಾಯಿತು.

ಭವರಲಾಲ್ ಆರ್ಯ ಮಾತನಾಡಿ, “ನೂತನ ಜಿಲ್ಲಾಧ್ಯಕ್ಷರು ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳು ಜಿಲ್ಲೆಯ ಇತರ ಸಂಘ-ಸಂಸ್ಥೆಗಳು ಮತ್ತು ಹಿರಿಯ ಯೋಗಸಾಧಕರ ಸಹಕಾರದೊಂದಿಗೆ ಜನರಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸಬೇಕು. ಜಿಲ್ಲೆಯ ಜನರ ಉತ್ತಮ ಆರೋಗ್ಯಕ್ಕಾಗಿ ಯೋಗದ ಪ್ರಚಾರ ಹಾಗೂ ಪ್ರಸಾರ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು” ಎಂದರು.
ಇದನ್ನೂ ಓದಿ : ಬೀದರ್ | ಬರದಲ್ಲೂ ಪಪ್ಪಾಯಿ ಬೆಳೆದು ₹25 ಲಕ್ಷ ಗಳಿಕೆ: ರೈತ ವೆಂಕಟರೆಡ್ಡಿ ತೋಟಕ್ಕೆ ಶಾಸಕರ ಭೇಟಿ




