ಯುವಜನರ ರಾಜಕಾರಣದ ದಿಕ್ಕು, ಭವಿಷ್ಯ ಮತ್ತು ಸವಾಲುಗಳನ್ನು ಪ್ರಧಾನ ಆಶಯವಾಗಿಟ್ಟುಕೊಂಡು ನ.28 ಮತ್ತು 29ರಂದು ಮಂಗಳೂರಿನ ಬಲ್ಮಠದ ಕೆಟಿಸಿ ಕ್ಯಾಂಪಸ್‌ನಲ್ಲಿ ನಡೆಯಲಿರುವ ‘ಜನನುಡಿ-2026’ ಸಮ್ಮೇಳನದ ಪೋಸ್ಟರ್ ಅನ್ನು ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಪ್ರಗತಿಪರ ಸಂಘಟನೆಗಳ ಪ್ರಮುಖರು ಬಿಡುಗಡೆ ಮಾಡಿದರು.
ಇಂದಿನ ಕಾಲಘಟ್ಟದಲ್ಲಿ ಯುವಜನರು ಕೇವಲ ಪ್ರೇಕ್ಷಕರಾಗಿ ಉಳಿಯಬೇಕೇ ಅಥವಾ ದೇಶದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ದಿಕ್ಕನ್ನು ನಿರ್ಧರಿಸುವ ಸಕ್ರಿಯ ಶಕ್ತಿಗಳಾಗಬೇಕೇ ಎಂಬ ಮಹತ್ವದ ಪ್ರಶ್ನೆಯನ್ನು ಜನನುಡಿ ಮುನ್ನೆಲೆಗೆ ತರಲಿದೆ.
ಯುವಜನರ ಉದ್ಯೋಗ, ಶಿಕ್ಷಣ, ಬದುಕು, ಘನತೆ, ಹಕ್ಕುಗಳು ಮತ್ತು ರಾಜಕೀಯ ಭಾಗವಹಿಸುವಿಕೆ ಕೇಂದ್ರವಾಗಿಟ್ಟುಕೊಂಡು ಸಮಕಾಲೀನ ಭಾರತದ ಸವಾಲುಗಳ ಕುರಿತು ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯಲಿದೆ. ಬೀದರ್ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಹಾಗೂ ಆಸಕ್ತರು ಭಾಗವಹಿಸಬೇಕು ಎಂದು ಮುಖಂಡರು ಮನವಿ ಮಾಡಿದರು.
ನ.28ರಂದು ಬೆಳಿಗ್ಗೆ 9 ಗಂಟೆಗೆ ಪುಸ್ತಕ ಮೇಳ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಹೋರಾಟಗಾರ ಬಸವರಾಜ ಸೂಳಿಭಾವಿ ಪುಸ್ತಕ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಜನನುಡಿ ಉದ್ಘಾಟನಾ ಗೋಷ್ಠಿಯನ್ನು ಸಂಸ್ಕೃತಿ ಚಿಂತಕ ಪ್ರೊ.ರಹಮತ್ ತರೀಕೆರೆ ಉದ್ಘಾಟಿಸಲಿದ್ದಾರೆ.

ಎರಡು ದಿನಗಳ ಜನನುಡಿಯಲ್ಲಿ ಕವಿಗೋಷ್ಠಿ, ಸಂವಾದ, ವಿದ್ಯಾರ್ಥಿ ಚಳವಳಿ, ಯುವಜನರ ರಾಜಕಾರಣದ ದಿಕ್ಕು ಮತ್ತು ಭವಿಷ್ಯ ಹಾಗೂ ಸಮಕಾಲೀನ ಭಾರತದ ಸವಾಲುಗಳ ಕುರಿತು ವಿವಿಧ ಗೋಷ್ಠಿಗಳು ಮತ್ತು ಚರ್ಚೆಗಳು ನಡೆಯಲಿವೆ.
ಇದನ್ನೂ ಓದಿ : ಭಾಲ್ಕಿ | ಬಸವಣ್ಣನವರ ಅವಹೇಳನ : ರವಿ ಹಂಜ್, ವಿಶ್ವೇಶ್ವರ ಭಟ್ ಪ್ರತಿಕೃತಿ ದಹಿಸಿ ಆಕ್ರೋಶ
ಈ ಸಂದರ್ಭದಲ್ಲಿ ಶ್ರೀಕಾಂತ್ ಸ್ವಾಮಿ, ಅಮೃತರಾವ್ ಚಿಮಕೋಡೆ, ಶಿವಶರಣಪ್ಪ ಹುಗ್ಗೆ ಪಾಟೀಲ, ಗುರುದೇವ, ಶಂಕರರಾವ್ ದೊಡ್ಡಿ, ಜಗದೀಶ್ವರ ಬಿರಾದಾರ, ವಿನಯಕುಮಾರ್ ಮಾಳಗೆ, ಮಹೇಶ್ ಗೋರನಾಳಕರ್, ಸುಧಾಮಣಿ, ಅರ್ಚನಾ, ಪ್ರಕಾಶ ರಾವಣ, ಸಂತೋಷ ಜೋಳದಾಬಕೆ ಸೇರಿದಂತೆ ಪ್ರಗತಿಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.



