ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾತುಕತೆ ನಡುವೆಯೇ, ಸಮಾಜವಾದಿ ಪಕ್ಷ ಮಂಗಳವಾರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಐದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಎಸ್‌ಪಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಹರಾನ್‌ಪುರ ಜಿಲ್ಲೆಯ ಬೆಹಟ್ ಕ್ಷೇತ್ರದಿಂದ ಉಮರ್ ಅಲಿ ಖಾನ್, ಸಹರಾನ್‌ಪುರ ಕ್ಷೇತ್ರದಿಂದ ಆಶು ಮಲಿಕ್, ಶಾಮ್ಲಿ ಜಿಲ್ಲೆಯ ಕೈರಾನಾ ಕ್ಷೇತ್ರದಿಂದ ನಾಹಿದ್ ಹಸನ್, ಅಮ್ರೋಹಾ ಕ್ಷೇತ್ರದಿಂದ ಮೆಹಬೂಬ್ ಅಲಿ ಹಾಗೂ ಲಲಿತ್‌ಪುರ ಕ್ಷೇತ್ರದಿಂದ ಜ್ಯೋತಿ ಲೋಧಿ ಅವರಿಗೆ ಟಿಕೆಟ್ ನೀಡಲಾಗಿದೆ.
ಇದಕ್ಕೂ ಮುನ್ನ, ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ತನ್ನ I.N.D.I.A ಮೈತ್ರಿಕೂಟದ ಪಾಲುದರ ಕಾಂಗ್ರೆಸ್‌ಗೆ 26 ಕ್ಷೇತ್ರಗಳನ್ನು ನೀಡುವ ಪ್ರಸ್ತಾಪ ಮಾಡಿದ್ದರು. ಇದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೂ, ಮಂಗಳವಾರ ನಡೆದ ಎರಡನೇ ಸುತ್ತಿನ ಮಾತುತೆ ಬಳಿಕ ಎರಡೂ ಪಕ್ಷಗಳು ಒಗ್ಗಟ್ಟಿನ ಸಂದೇಶ ನೀಡಿವೆ.
ಎಸ್‌ಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾತುಕತೆಯ ಮುಖ್ಯ ಸಂಧಾನಕಾರ ರಾಮ್‌ಗೋಪಾಲ್ ಯಾದವ್ ಅವರು ಕಾಂಗ್ರೆಸ್‌ಗೆ 26 ಕ್ಷೇತ್ರಗಳ ಪ್ರಸ್ತಾಪ ಮಾಡಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ ಬೆನ್ನಲ್ಲೇ ಎರಡನೇ ದಿನದ ಮಾತುಕತೆ ಆರಂಭವಾಯಿತು. ಈ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದ ಎರಡು ಕ್ಷೇತ್ರಗಳು, ಎರಡನೇ ಸ್ಥಾನ ಪಡೆದಿದ್ದ ನಾಲ್ಕು ಕ್ಷೇತ್ರಗಳು ಹಾಗೂ ಉಳಿದ 20 ಕ್ಷೇತ್ರಗಳಲ್ಲಿ ಎಸ್‌ಪಿ 60-70 ಸಾವಿರ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಸುಮಾರು 2 ಸಾವಿರ ಮತಗಳನ್ನು ಪಡೆದಿತ್ತು ಎಂದು ಅವರು ವಿವರಿಸಿದರು.
ಅಖಿಲೇಶ್ ಯಾದವ್ ಈ ಹಿಂದೆ ಕಾಂಗ್ರೆಸ್‌ಗೆ 181 ಕ್ಷೇತ್ರಗಳನ್ನು ನೀಡುವುದಾಗಿ ಹೇಳಿದ್ದರೆ, ಕಾಂಗ್ರೆಸ್ 131 ಕ್ಷೇತ್ರಗಳ ಬೇಡಿಕೆ ಮುಂದಿಟ್ಟಿತ್ತು. ಇದೀಗ ಕಾಂಗ್ರೆಸ್ ತನ್ನ ಬೇಡಿಕೆಯನ್ನು 100 ಕ್ಷೇತ್ರಗಳಿಗೆ ಇಳಿಸಿದೆ ಎಂದು ಮೂಲಗಳು ತಿಳಿಸಿವೆ.
ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಯಾದವ್ ಮಾತುಕತೆ ಸಕಾರಾತ್ಮಕವಾಗಿತ್ತು ಎಂದು ತಿಳಿಸಿದರು.



