ಮಾರಕ ಝೀಕಾ ವೈರಸ್ ಪತ್ತೆ: ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಿದ ಆರೋಗ್ಯ ಇಲಾಖೆ

0
365
ಜಿಕಾ ವೈರಸ್
ಜಿಕಾ ವೈರಸ್

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳ ರಕ್ತದಲ್ಲಿ ಅಪಾಯಕಾರಿ ಝೀಕಾ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆ, ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ.

ಆರೋಗ್ಯ ಸಚಿವರ ಟ್ವೀಟ್

“ರಾಜ್ಯದ 68 ಕಡೆಗಳಲ್ಲಿ ನಡೆಸಲಾದ ಸೊಳ್ಳೆ ಪರೀಕ್ಷೆಗಳಲ್ಲಿ ಚಿಕ್ಕಬಳ್ಳಾಪುರದ ತಲಕಾಯಲಬೆಟ್ಟದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಹಾಗಾಗಿ, ಆರೋಗ್ಯ ಅಧಿಕಾರಿಗಳು ವಿಶೇಷ ಸಭೆ ನಡೆಸಿ, ವೈರಸ್ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಇದುವರೆಗೂ ಮನುಷ್ಯರ ದೇಹದಲ್ಲಿ ಝೀಕಾ ವೈರಸ್ ಪತ್ತೆಯಾಗಿಲ್ಲ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮುನ್ನೆಚ್ಚರಿಕೆಯ ಕ್ರಮವಾಗಿ ಜ್ವರ ಬಾಧಿಸಿದವರ ರಕ್ತದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಬರಲಿದೆ. ನಿಪಾ ವೈರಸ್‌ನಷ್ಟು ಝೀಕಾ ಮಾರಣಾಂತಿಕ ವೈರಸ್ ಅಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ, ಮಕ್ಕಳು ವಿಶೇಷವಾಗಿ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು” ಎಂದು ತಿಳಿಸಿದ್ದಾರೆ.

ಜನರಲ್ಲಿ ಆತಂಕ

ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ಶಿಡ್ಲಘಟ್ಟ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಮೂಡಿದೆ. ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಝೀಕಾ ವೈರಸ್ ವಿಶ್ವದಾದ್ಯಂತ ಎಲ್ಲೆಡೆ ಪತ್ತೆಯಾಗುತ್ತಿರುವ ಹಿನ್ನೆಲೆ, ರಾಜ್ಯದ 68 ಕಡೆಗಳಲ್ಲಿ ಸೊಳ್ಳೆಗಳನ್ನು ಸಂಗ್ರಹಿಸಿ ಅವುಗಳಲ್ಲಿ ಮಾರಣಾಂತಿಕ ವೈರಸ್ ಇದೆಯೇ ಎಂಬ ಬಗ್ಗೆ ತಜ್ಞರು ಪರೀಕ್ಷೆ ನಡೆಸಿದ್ದಾರೆ. ಈ ವೇಳೆ, ಚಿಕ್ಕಬಳ್ಳಾಪುರದ ಆರು ಪ್ರದೇಶಗಳಲ್ಲಿ ಸೊಳ್ಳೆಗಳನ್ನು ಹಿಡಿದು ಪರೀಕ್ಷೆ ನಡೆಸಲಾಗಿತ್ತು. ಸದ್ಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದ ಸೊಳ್ಳೆಗಳಲ್ಲಿ ಮಾರಕ ಝೀಕಾ ವೈರಸ್‌ ಪತ್ತೆಯಾಗಿದೆ. ಕೂಡಲೇ ಈ ಬಗ್ಗೆ ಎಚ್ಚೆತ್ತ ಅಧಿಕಾರಿಗಳು ಮಾರಕ ವೈರಸ್ ಪತ್ತೆಯಾಗುತ್ತಿದ್ದಂತೆಯೇ ಸಭೆ ನಡೆಸಿ, ರೋಗ ಹರಡದಂತೆ ತಡೆಯಲು ಕ್ರಮ ಕೈಗೊಂಡಿದ್ದಾರೆ.

“ಜತೆಗೆ, ತಲಕಾಯಲಬೆಟ್ಟದ ಸುತ್ತಮುತ್ತ 5 ಗ್ರಾಮಗಳಿವೆ. ತಲಕಾಯಲಬೆಟ್ಟದಿಂದ 5 ಕಿ.ಮೀ ವ್ಯಾಪ್ತಿಯ ವೆಂಕಟಾಪುರ, ದಿಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಸೇರಿದಂತೆ ಹಲವು ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ 30 ಗರ್ಭಿಣಿಯರು ಮತ್ತು ಜ್ವರಪೀಡಿತ 7 ಮಂದಿಯ ರಕ್ತವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿದ್ದಾರೆ” ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ

“5 ಗ್ರಾಮಗಳಲ್ಲಿ ಸೊಳ್ಳೆಗಳ ನಾಶ, ಜನಜಾಗೃತಿ ಕೈಗೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಸೊಳ್ಳೆ ಪತ್ತೆ ಹಾಗೂ ಜಾಗೃತಿ ಮೂಡಿಸುತ್ತಿದ್ದೇವೆ. 5 ಗ್ರಾಮದಲ್ಲಿ 40 ಜನ ಗರ್ಭಿಣಿಯರು ಇದ್ದಾರೆ. ಅದರಲ್ಲಿ 30 ಜನರನ್ನು ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಲಾಗಿದೆ. 3 ಜ್ವರ ಪ್ರಕರಣಗಳು ಕಂಡು ಬಂದಿವೆ. ಎಲ್ಲರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಝೀಕಾ ವೈರಸ್‌ನಿಂದ ಪ್ರಾಣಾಪಾಯವಿಲ್ಲ. ಆದರೆ ಗರ್ಭಿಣಿಯರಿಗೆ ವೈರಸ್ ತಗುಲಿದರೆ, ಹುಟ್ಟುವ ಮಕ್ಕಳಿಗೆ ನರದೌರ್ಬಲ್ಯ ಆಗುತ್ತೆ. ಸದ್ಯಕ್ಕೆ ಝೀಕಾ ವೈರಸ್‌ಗೆ ಸೂಕ್ತ ಚಿಕಿತ್ಸೆ ಇಲ್ಲ. ಸೊಳ್ಳೆ ಪರದೆ ಹಾಗೂ ಮೈತುಂಬ ಬಟ್ಟೆ ಬಳಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, “ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ವೈದ್ಯರ ತಂಡ ಮುನ್ನೆಚ್ಚರಿಕೆ ವಹಿಸಿದೆ. ವೈರಸ್ ಪತ್ತೆಯಾದ ಭಾಗಗಳಲ್ಲಿ ಯಾವುದೇ ರೋಗ ಹರಡುವಿಕೆಯಾಗಿಲ್ಲ. ಝೀಕಾ ವೈರಸ್ ಪತ್ತೆಯಾದ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ನಿಗಾ ಇಡಲಾಗಿದೆ. ಮನೆ ಮನೆ ಸಮೀಕ್ಷೆ ಮಾಡಿ ರಕ್ತ ಸಂಗ್ರಹಕ್ಕೆ ಮುಂದಾಗಿದ್ದೇವೆ. ಝೀಕಾ ವೈರಸ್ ಹರದಡಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚೈತ್ರಾ ವಂಚನೆ ಪ್ರಕರಣ | ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಮುಂದಾದ ಸಿಸಿಬಿ

ಈ ಕುರಿತು ಮಾತನಾಡಿರುವ ಚಿಕ್ಕಬಳ್ಳಾಪುರ ಡಿಹೆಚ್​ಒ ಡಾ.ಮಹೇಶ್​ ಕುಮಾರ್, “ಅ. 27ರಂದು ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಮನುಷ್ಯರಲ್ಲಿ ಝೀಕಾ ವೈರಸ್ ಪತ್ತೆಯಾದರೆ ವೇಗವಾಗಿ ಹರಡುತ್ತದೆ. ಪರೀಕ್ಷೆಗೆ ಮನುಷ್ಯರ ರಕ್ತದ ಮಾದರಿಯನ್ನು ಲ್ಯಾಬ್​ಗೆ ಕಳುಹಿಸಲಾಗಿದೆ. ಝೀಕಾ ವೈರಸ್ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಏನಿದು ಝೀಕಾ ವೈರಸ್

ಝೀಕಾ ಎಂಬುದು ಒಂದು ವೈರಸ್ ಸೋಂಕು. ಡೆಂಗೀ, ಚಿಕೂನ್‌ಗುನ್ಯ ರೋಗ ಹರಡುವ ಈಡಿಸ್ ಜಾತಿಯ ಸೊಳ್ಳೆಗಳು, ಝೀಕಾ ವೈರಸ್ ಸೋಂಕನ್ನು ಸಹ ಹರಡುತ್ತವೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ನಿಂತ ನೀರು ಈ ಸೊಳ್ಳೆಗಳ ಉತ್ಪತ್ತಿ ತಾಣ.

ಝೀಕಾ ವೈರಸ್ ಲಕ್ಷಣಗಳು

ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ಕೀಲು ಮತ್ತು ಸ್ನಾಯು ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಬಹುತೇಕ ಸೋಂಕಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ.

LEAVE A REPLY

Please enter your comment!
Please enter your name here