ಚಿತ್ರದುರ್ಗ | ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯ; ಚಳ್ಳಕೆರೆ ಬಂದ್‌ ಯಶಸ್ವಿ

Date:

ಭದ್ರಾಮೇಲ್ದಂಡೆ ಯೋಜನೆ ಶೀಘ್ರ ಕಾರ್ಯಾನುಷ್ಠಾನ ಮತ್ತು ಅನುದಾನ ಬಿಡುಗಡೆಗೆ ಆಗ್ರಹಿಸಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕರೆ ನೀಡಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಂದ್‌ಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು, ಬಂದ್‌ ಯಶಸ್ವಿಯಾಗಿದೆ.

ಶುಕ್ರವಾರ (ಫೆ.9) ಬೆಳಿಗ್ಗೆಯಿಂದಲೇ ಜನರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಾಗಿಲು ತೆಗೆಯದೆ ಬೆಂಬಲ ಸೂಚಿಸಿದರು. ನಗರದ ಮುಖ್ಯ ರಸ್ತೆ ಬಿಕೋ ಎನ್ನುತ್ತಿದ್ದು, ವಾಹನಗಳ ಸಂಚಾರ ಸಹ ಸ್ಥಗಿತವಾಗಿತ್ತು.

ಬಂದ್‌ಗೆ ರೈತಪರ ಸಂಘಟನೆಗಳು, ಎಐಟಿಯುಸಿ, ಕಾರ್ಮಿಕರ ಸಂಘ, ದಲ್ಲಾಲರ ಸಂಘ, ವಾಣಿಜ್ಯ ಸಂಘಟನೆ, ಕೆಆರ್‌ಎಸ್ ಪಕ್ಷ, ಛೇಂಬರ್ ಆಫ್‌ ಕಾಮರ್ಸ್‌, ಕನ್ನಡ ರಕ್ಷಣಾ ವೇದಿಕೆ ಸೇರಿ ಹತ್ತಕ್ಕೂ ಹೆಚ್ಚು ಸಂಘಟನೆಗಳು ಬಂದ್‌ ಬೆಂಬಲಿಸಿ ರಸ್ತೆಗಿಳಿದಿದ್ದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚಳ್ಳಕೆರೆ-ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದಕ್ಕೆ ಪರಿಹಾರವಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹ 5,300 ಕೋಟಿ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 20 ವರ್ಷಗಳಿಂದ ಜಿಲ್ಲೆಯ ಜನರನ್ನು ವಂಚಿಸುತ್ತಲೇ ಬಂದಿವೆ. ಭದ್ರಾದಿಂದ ಕೆರೆಗಳಿಗೆ ನೀರು ಹರಿಯದಿರುವ ಕಾರಣ ಜಿಲ್ಲೆಯ ಜನರು ಬರಗಾಲ ಅನುಭವಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಕುಂಟುತ್ತಾ ಸಾಗಿರುವುದು ರೈತಾಪಿ ಸಮುದಾಯದಲ್ಲಿ ಕಳವಳ ಮೂಡಿಸಿದೆ. ರಾಜ್ಯ ಸರ್ಕಾರದ ಉದಾಸೀನ ಮನೋಭಾವ, ಕೇಂದ್ರ ಸರ್ಕಾರ ಘೋಷಿತ ವಚನ ಈಡೇರಿಸದೇ ಇರುವುದು ಪ್ರಮುಖ ಕಾರಣವಾಗಿದೆ.

22 ಸಾವಿರ ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿಗೆ ಇದುವರೆಗೂ ರಾಜ್ಯ ಸರ್ಕಾರ ಮಾಡಿದ ವೆಚ್ಚ ಹತ್ತು ಸಾವಿರ ಕೋಟಿ ರೂ ದಾಟಿಲ್ಲ. ಕಾಮಗಾರಿ ಆರಂಭವಾಗಿ ಸುಮಾರು ಇಪ್ಪತ್ತು ವರ್ಷಗಳು ಕಳೆದರೂ ಅರೆಬರೆಯಾಗಿದೆ. ಯೋಜನೆ ಕಾಲಮಿತಿ ಅನುಸಾರ ಕಾಮಗಾರಿ ಕೈಗೊಂಡಿದ್ದರೆ ಇಷ್ಟೊತ್ತಿಗೆ ಪೂರ್ಣಗೊಳ್ಳುತ್ತಿತ್ತು. ಜನತೆ ನಿತ್ಯವೂ ಬೀದಿಗೆ ಬಂದು ನೀರಿಗಾಗಿ ಕೂಗುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಕೇಂದ್ರದಿಂದ ಅನುದಾನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು , 2023-24ರ ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ರುಪಾಯಿ ಮೀಸಲಿಡಲಾಗಿತ್ತು. ವರ್ಷಗಳು ಉರುಳಿದರೂ ಒಂದು ಪೈಸೆ ಅನುದಾನ ಬಿಡಗಡೆಯಾಗಿಲ್ಲ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜಲಶಕ್ತಿ ಸಚಿವರ ಭೇಟಿ ಮಾಡಿ ಅನುದಾನಕ್ಕೆ ವಿನಂತಿಸಿದರೂ ಮನ್ನಣೆ ದೊರೆಯದೇ ಇರುವುದು ವಿಷಾಧನೀಯವಾಗಿದೆ.

ಯೋಜನೆ ತ್ವರಿತಗೊಳಿಸಲು ಆಗ್ರಹಿಸಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಬಂದ್ ಸೇರಿದಂತೆ ಹಲವು ಸರಣಿ ಹೋರಾಟಗಳ ಕೈಗೆತ್ತಿಕೊಂಡಿದೆ. ಜಿಲ್ಲೆಯ ಎಲ್ಲ ಜನಪರ , ಕನ್ನಡಪರ, ಕಾರ್ಮಿಕ ಸಂಘಟನೆಗಳು, ಉದ್ದಿಮೆ ವಲಯಗಳು ಹೋರಾಟಕ್ಕೆ ಬೆಂಬಲ ನೀಡಿವೆ. ಜನರ ಆಕ್ರೋಶಗಳು ಇಮ್ಮಡಿಯಾಗುವ ಮೊದಲು ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ರಾಜ್ಯ ಸರ್ಕಾರ ಕೇಂದ್ರದ ಅನುದಾನ ಕಾದು ಕುಳಿತುಕೊಳ್ಳದೇ ಭದ್ರಾ ಮೇಲ್ದಂಡೆ ಕಾಮಗಾರಿಗೆ ಶರವೇಗ ನೀಡಿ ಪೂರ್ಣಗೊಳಿಸಬೇಕು. ಎಲ್ಲ ಅಡೆ ತಡೆಗಳ ನಿವಾರಿಸಬೇಕು. ಕೇಂದ್ರ ಸರ್ಕಾರ ₹ 5300 ಕೋಟಿ ನೆರವು ನೀಡಿ ತನ್ನ ವಚನ ಬದ್ಧತೆ ಮೆರೆಯಬೇಕೆಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸಿತು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ , ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಮುಖಂಡ ಕೆ.ಪಿ.ಭೂತಯ್ಯ ಕರುನಾಡ ವಿಜಯಸೇನೆ ಕಾರ್ಯಕರ್ತರು ಹಾಗು ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಐಟಿಯುಸಿ ಮುಖಂಡ ಸಿ.ವೈ.ಶಿವರುದ್ರಪ್ಪ, ರೈತ ಸಂಘದ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ಶಾಖೆ ಮಾಜಿ ಅಧ್ಯಕ್ಷ ಒ.ಟಿ. ತಿಪ್ಪೇಸ್ವಾಮಿ, ಹಮಾಲರ ಸಂಘಟನೆ ಮುಖಂಡ ಟಿ.ತಿಪ್ಪೇಸ್ವಾಮಿ, ಟಿ.ನಿಂಗಣ್ಣ, ಕನ್ನಡ ರಕ್ಷಣಾ ವೇದಿಕೆಯ ಚೇತನ್‍ಕುಮಾರ್, ದೊಡ್ಡುಳ್ಳಾರ್ತಿ ಕರಿಯಣ್ಣ, ದಲ್ಲಾಲರ ಸಂಘದ ಅಧ್ಯಕ್ಷ ಅರವಿಂದ್, ಛೇಂಬರ್ ಆಫ್‌ ಕಾಮರ್ಸ್ ಅಧ್ಯಕ್ಷ ರಘುನಾಥ ಬಾಬು, ಕೆಆರ್‌ಎಸ್ ಪಕ್ಷದ ಮಹೇಶ್, ಸಾಮಾಜಿಕ ಹೋರಾಟಗಾರ ಎಚ್.ಎಸ್.ಸೈಯದ್, ಬಂಡೆ ತಿಪ್ಪೇಸ್ವಾಮಿ ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಬಿಸಿಲಿನ ತಾಪ ಹೆಚ್ಚಳ; ಮೃಗಾಲಯ ತಂಪಾಗಿಡಲು ವಿಶೇಷ ವ್ಯವಸ್ಥೆ

ಪ್ರಸ್ತುತ ವರ್ಷ ಮೈಸೂರು ನಗರದಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಿರುವುದರಿಂದ ಮೃಗಾಲಯದ ಪ್ರಾಣಿಗಳು...

ತುಮಕೂರು | ಹಾಲಪ್ಪ ಯಾರು? ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ: ಸಚಿವ ರಾಜಣ್ಣ

ಮಾಜಿ ಸಂಸದ ಮುದ್ದಹನುಮೇಗೌಡ ಅವರು ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದು,...

ಬೆಂಗಳೂರು | ಕನ್ನಡ ನಾಮಫಲಕ ಕಡ್ಡಾಯ; ತಪ್ಪಿದಲ್ಲಿ ‘ಕರ್ನಾಟಕ ಬಂದ್’: ವಾಟಾಳ್ ನಾಗರಾಜ್ ಎಚ್ಚರಿಕೆ

ಕನ್ನಡ ನಾಮಫಲಕ ಕಡ್ಡಾಯಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಗಡುವು ಮುಗಿಯುವುದರೊಳಗಾಗಿ...

ತುಮಕೂರು | ಲೋಕಸಭಾ ಚುನಾವಣೆಗೆ ಜೆಡಿಎಸ್‌ ಟಿಕೆಟ್‌ ಬೇಡಿಕೆಯಿಟ್ಟ ಕೆ.ಟಿ ಶಾಂತಕುಮಾರ್

ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್...