- ಕೇಸರಿ ಶಾಲು ಧರಿಸಿ ಮತದಾನ ಮಾಡಲು ಮುಂದಾದ ಬಜರಂಗದಳ ಕಾರ್ಯಕರ್ತರು
- ಮತಗಟ್ಟೆಗೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ ಉಪವಿಭಾಗಾಧಿಕಾರಿ ಮತ್ತು ಎಎಸ್‌ಪಿ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಕಸಬಾ ಹೋಬಳಿಯ ಹೆನ್ನಲಿ ಮತದಾನ ಕೇಂದ್ರದಲ್ಲಿ ಬಜರಂಗದಳದ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಮತದಾನ ಮಾಡಲು ಮುಂದಾದಾಗ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯ ಕಾರ್ಯಕರ್ತರು ಮತ್ತು ಬಜರಂಗದಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಕೇಸರಿ ಶಾಲು ಧರಿಸಿ ಮತದಾನಕ್ಕೆ ಮುಂದಾಗಿದ್ದರಿಂದ ಹೆನ್ನಲಿ ಗ್ರಾಮದ ಬಜರಂಗದಳದ ಕಾರ್ಯಕರ್ತರನ್ನು ತಡೆದು, ಯಾವುದೇ ರೀತಿಯ ಶಾಲನ್ನು ಹಾಕದೆ ಮತದಾನ ಮಾಡುವಂತೆ ಸೂಚನೆ ನೀಡಿದರು. ಬಜರಂಗದಳ ಕಾರ್ಯಕರ್ತರು ಅದಕ್ಕೆ ಒಪ್ಪದಿದ್ದಾಗ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು.
ಸಕಲೇಶಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಉಪವಿಭಾಗಾಧಿಕಾರಿಯೂ ಆಗಿರುವ ಅನ್ಮೋಲ್ ಜೈನ್ ಹಾಗೂ ಎಎಸ್‌ಪಿ ಮಿಥುನ್ ರೈ ಮತಗಟ್ಟೆಗೆ ಭೇಟಿ ನೀಡಿ ಸಮಸ್ಯೆ ತಿಳಿಗೊಳಿಸಿದರು.
ಸಕಲೇಶಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ವಕೀಲ ಹಾಗೂ ದಲಿತ ಮುಖಂಡ ಎಂ ಆರ್ ವೇಣು ಹೆನ್ನಲಿ ಬೂತ್‌ಗೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯ ಗೌರವಾಧ್ಯಕ್ಷ ಶಾಂತರಾಜ್ ಹೆನ್ನಲಿ, ಸಮಿತಿಯ ಅಧ್ಯಕ್ಷ ಗೋಪಾಲ್ ಮಳಲಿ, ವೆಂಕಟೇಶ್, ಶಶಿಕುಮಾರ್, ದಿನೇಶ್ ಗೌಡ, ಈರೇಶ್, ದಿನೇಶ್ ಹಾಗೂ ಹೆನ್ನಲಿ ಗ್ರಾಮಸ್ಥರು ಹಾಜರಿದ್ದರು.
ಈ ಸುದ್ದಿ ಓದಿದ್ದೀರಾ? ಪ್ರತ್ಯೇಕ ಪ್ರಕರಣ | ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು