SIR ರದ್ದತಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾ ಆಗ್ರಹಿಸಿ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾದ್ಯಂತ 15 ವಲಯ ಕೇಂದ್ರಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಯಿತು.
ಗುರುಪುರ ಕೈಕಂಬ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಗೈದ ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿ “ಪಾರದರ್ಶಕ ಚುನಾವಣೆಯಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಚುನಾವಣಾ ಆಯೋಗ ನಡೆಸಿದ ಎಸ್‌ಐಆರ್ ಈ ಕೂಡಲೆ ರದ್ದತಿಗೊಳಿಸಿ, ಮುಖ್ಯ ಚುನಾವಣಾ ಆಯುಕ್ತರನ್ನು ವಜಾ ಗೊಳಿಸಿ ಬಂಧಿಸಬೇಕೆಂದು” ಎಂದು ಮನವಿ ಮಾಡಿದರು.
ಇದೇ ಸಂದರ್ಭ ಜಿಲ್ಲೆಯ ಬಿ.ಸಿ ರೋಡ್ – ಕೈಕಂಬ, ದೇರಳಕಟ್ಟೆ ನಾಟೆಕಲ್ ಜಂಕ್ಷನ್, ಮಂಗಳೂರು ಕ್ಲಾಕ್ ಟವರ್, ಮೂಡುಬಿದ್ರೆ ತಹಶೀಲ್ದಾರ್ ಕಚೇರಿ ಮುಂಭಾಗ, ಕಲ್ಲಡ್ಕ ಜಂಕ್ಷನ್, ಸುರತ್ಕಲ್ ಜಂಕ್ಷನ್, ಸುಳ್ಯ, ಕುಂಬ್ರ ಜಂಕ್ಷನ್, ಪುತ್ತೂರು – ಮಿನಿ ವಿಧಾನಸೌಧ ಮುಂಭಾಗ, ವಿಟ್ಲ ಬಸ್ ನಿಲ್ದಾಣ, ಕಬಕ ಜಂಕ್ಷನ್, ಉಪ್ಪಿನಂಗಡಿ ಬಸ್ ನಿಲ್ದಾಣ ಹಾಗೂ ಕಡಬ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಸಾವಿರಾರು ಕಾರ್ಯಕರ್ತರು ಕೇಂದ್ರ ಸರಕಾರ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಕಡೆಗಳಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮಲ್ಲಿ ಎಸ್.ಕೆ.ಎಸ್.ಎಸ್.ಎಫ್ ರಾಜ್ಯಾಧ್ಯಕ್ಷರಾದ ರಫೀಕ್ ಅಹ್ಮದ್ ಹುದವಿ ಕೋಲಾರಿ, ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ, ಉಪಾಧ್ಯಕ್ಷ ಇಕ್ಬಾಲ್ ಬಾಳಿಲ, ಮಾಜಿ ಸಚಿವ ಅಭಯಚಂದ್ರ ಜೈನ್, ಟಿ ಎಂ ಶಹೀದ್ ತೆಕ್ಕಿಲ್, ಶಶಿಧರ್ ಮಾಸ್ಟರ್,ಸೇರಿದಂತೆ ವಿವಿಧ ರಾಜಕೀಯ, ಸಾಂಸ್ಕೃತಿಕ, ಸಮಾಜಿಕ, ಹಾಗೂ ಸಂಘಟನಾ ನಾಯಕರು ಉಪಸ್ಥಿತರಿದ್ದರು.





