ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಮತ್ತು ಆತನ ಸ್ನೇಹಿತನನ್ನು ಅಪಹರಿಸಿ, ಜಾತಿ ನಿಂದನೆ ಮಾಡಿ, ಕಂಬಕ್ಕೆ ಕಟ್ಟಿ ಮರದ ದೊಣ್ಣೆ ಮತ್ತು ವಿದ್ಯುತ್ ತಂತಿಗಳಿಂದ ಬರ್ಬರವಾಗಿ ಥಳಿಸಿ ಹತ್ಯೆಗೈದಿರುವ ಅಮಾನವೀಯ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.
ಸೂರತ್‌ನ ದಿಂಡೋಲಿ ಪ್ರದೇಶದಲ್ಲಿ ನವೆಂಬರ್ 11ರಂದು ಈ ದಾರುಣ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಅನಿಲ್ ರಾಥೋಡ್ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಂತ್ರಸ್ತ ಅನಿಲ್ ರಾಥೋಡ್ ಮತ್ತು ಆತನ ಸ್ನೇಹಿತ ಸನಿಯಾ ಕನಡೆ – ಇಬ್ಬರೂ ದಿಂಡೋಲಿ ಗ್ರಾಮದ ಪಾರ್ಟಿ ಪ್ಲಾಟ್‌ವೊಂದರಲ್ಲಿ ಹುಲ್ಲು ಕತ್ತರಿಸುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಅಲ್ಲಿಗೆ ಬಂದ ಆರು ಮಂದಿಯ ಗುಂಪು, ಇವರಿಬ್ಬರೂ ಕಳ್ಳತನ ಮಾಡುವ ಉದ್ದೇಶದಿಂದ ಆವರಣದೊಳಗೆ ಪ್ರವೇಶಿಸಿದ್ದಾರೆ ಎಂದು ಶಂಕಿಸಿ ಅವಾಚ್ಯವಾಗಿ ಮತ್ತು ಜಾತಿ ಹೆಸರಿಡಿದು ನಿಂದಿಸಲು ಆರಂಭಿಸಿದ್ದಾರೆ. ಮಾತ್ರವಲ್ಲದೆ, ಇಬ್ಬರನ್ನೂ ಬಲವಂತವಾಗಿ ವಾಹನವೊಂದರಲ್ಲಿ ಕೂರಿಸಿಕೊಂಡು ಸಮೀಪದ ಕರಡ್ವಾ ಗ್ರಾಮದ ಮತ್ತೊಂದು ಪಾರ್ಟಿ ಪ್ಲಾಟ್‌ಗೆ ಎಳೆದೊಯ್ದಿದ್ದಾರೆ.
ಅಲ್ಲಿ, ಇಬ್ಬರೂ ಯುವಕರನ್ನು ಆರೋಪಿಗಳು ಕಬ್ಬಕ್ಕೆ ಕಟ್ಟಿಹಾಕಿ, ಮರದ ದೊಣ್ಣೆಗಳು ಮತ್ತು ವಿದ್ಯುತ್ ತಂತಿಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಭೀಕರ ಹಲ್ಲೆಯಿಂದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವ ಮತ್ತು ಆಘಾತದಿಂದ ಅನಿಲ್ ರಾಥೋಡ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ದಿಂಡೋಲಿ ಪೊಲೀಸರು ಆರು ಮಂದಿ ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಪ್ರಕರಣ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಿಜಯ್ ಅಲಿಯಾಸ್ ಸೋನು ಮೌರ್ಯ, ರಾಹುಲ್ ಮೌರ್ಯ, ಅಭಿಷೇಕ್ ಅಲಿಯಾಸ್ ಅಭಿ ಮೌರ್ಯ, ಸುಮಿತ್ ಸಿಂಗ್, ಸುಜಿತ್ ಯಾದವ್ ಮತ್ತು ಮಹೇಂದ್ರ ಮೌರ್ಯ ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಹಾಯಕ ಪೊಲೀಸ್ ಆಯುಕ್ತ (ACP) ಸುನಿಲ್ ತರ್ಡೆ, “ಸಂತ್ರಸ್ತರಿಬ್ಬರು ಹುಲ್ಲು ಕತ್ತರಿಸಲು ಪಾರ್ಟಿ ಪ್ಲಾಟ್‌ಗೆ ಹೋಗಿದ್ದಾಗ ಆರೋಪಿಗಳು ಅವರನ್ನು ಕಳ್ಳರೆಂದು ಹಣೆಪಟ್ಟಿ ಕಟ್ಟಿ ಅಪಹರಿಸಿ, ಬರ್ಬರವಾಗಿ ಥಳಿಸಿದ್ದಾರೆ. ಈ ಮಾರಣಾಂತಿಕ ಹಲ್ಲೆಯೇ ಅನಿಲ್ ಸಾವಿಗೆ ಕಾರಣವಾಗಿದೆ” ಎಂದು ದೃಢಪಡಿಸಿದ್ದಾರೆ.



