ಇತ್ತೀಚೆಗೆ ಇಂಧನ ಇಲಾಖೆ ರದ್ದುಗೊಳಿಸಿರುವ ಅಕ್ರಮ-ಸಕ್ರಮ ಯೋಜನೆಯನ್ನು ಮುಂದುವರಿಸುವುದು, ಬಹುಕೋಟಿ ವೆಚ್ಚದ ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸುವುದು ಸೇರಿದಂತೆ 7 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ರೈತ ಸಂಘ, ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್) ಬಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ನಗರಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಮಾತನಾಡಿ, “ಈ ಹಿಂದೆ ನಿಮ್ಮದೇ ಸರ್ಕಾರ ಇದ್ದಾಗ ಆರಂಭಗೊಂಡಿದ್ದ ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಇದೀಗ ಮತ್ತೆ ನೀವೇ ಮುಖ್ಯ ಮಂತ್ರಿಯಾಗಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳಸಿ ಬರ ಪರಿಸ್ಥಿತಿಯಲ್ಲಿರುವ ರೈತರಿಗೆ ನೀರು ಕೊಡಿ” ಎಂದು ಮನವಿ ಮಾಡಿದರು.
“ಬರುವ ಬಜೆಟ್ನಲ್ಲಿ ಜಗಳೂರು ತಾಲೂಕಿನಲ್ಲಿ ಒಂದು 220 ಕೆವಿ ರಿಸೀವಿಂಗ್ ಸ್ಟೇಷನ್ ಘೋಷಣೆ ಮಾಡಬೇಕು. ಹಿಂದುಳಿದ ಜಗಳೂರು ತಾಲೂಕಿನಲ್ಲಿ 3 ವಿದ್ಯುತ್ ಸಬ್ ಸ್ಟೇಷನ್ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ರಾಜ್ಯದಲ್ಲಿ ಎನ್ಬಿಎಫ್ಸಿ ಬ್ಯಾಂಕ್ಗಳು ರೈತರ ಮೇಲೆ ದೌರ್ಜನ್ಯದಿಂದ ಸಾಲ ವಸೂಲಾತಿ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ರೈತರ ಸಾಲದ ವಿಚಾರವಾಗಿ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
“ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿ ಹಕ್ಕುಪತ್ರ ಪಡೆದಂತಹ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿ ಕೊಡಬೇಕು. ಕೃಷಿ ಸಹಕಾರ ಸಂಘಗಳಲ್ಲಿ ಸಾಲ ನೀಡುವಂತೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿವಿ ಸಾಗರ ನಾಲೆಗಳಿಗೆ ತುರ್ತಾಗಿ ನೀರು ಹರಿಸಬೇಕು: ಕಸವನಹಳ್ಳಿ ರಮೇಶ್
ಈ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಕುರ್ಕಿ ಹನುಮಂತಪ್ಪ, ಪೂಜಾರ್ ಅಂಜಿನಪ್ಪ, ಚಿರಂಜೀವಿ, ಪಾಮೇನಹಳ್ಳಿ ಗೌಡರ ಶೇಖರಪ್ಪ, ರಾಜನಹಟ್ಟಿ ರಾಜು, ಕೋಗಲೂರು ಕುಮಾರ್, ಚಂದ್ರಪ್ಪ, ಎಸ್ ಕೆ ಅಣ್ಣಪ್ಪ, ಕಬ್ಬದಹಳ್ಳಿ ಗಂಗಾಧರಪ್ಪ ಸೇರಿದಂತೆ ಇತರರು ಇದ್ದರು.