ಜೀವಕ್ಕೆ ಯಾವ ಕುಲವಿದೆ, ನಮ್ಮ ಶರೀರದಲ್ಲಿನ ರಕ್ತಕ್ಕೆ ಯಾವ ಜಾತಿಯ ಲೇಪನವೂ ಇಲ್ಲ. ತುರ್ತು ಸಂದರ್ಭದಲ್ಲಿ ಬದುಕಲು ಯಾರ ರಕ್ತವನ್ನಾದರೂ ಪಡೆದು ನಮ್ಮ ಜೀವ ಉಳಿಸಿಕೊಳ್ಳುತ್ತೇವೆ. ಹಾಗಾಗಿ ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಕುರುಬ ಸಮಾಜದಿಂದ ಟಿ ಬಿ ವೃತ್ತದ ಬಳಿ ನಿರ್ಮಾಣ ಮಾಡಿರುವ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು.
“ಕುರುಬ ಸಮಾಜ ಹಾಗೂ ಇತರೆ ಎಲ್ಲರೂ ಸೇರಿ ಕನಕದಾಸರ ಪ್ರತಿಮೆ ಸ್ಥಾಪಿಸುವ ಕಾರ್ಯ ಮಾಡಿದ್ದಾರೆ. ದಾಸಶ್ರೇಷ್ಠ ಕನಕದಾಸರ ಪ್ರತಿಮೆ ಲೋಕಾರ್ಪಣೆ ಮಾಡಿದ್ದೇನೆ” ಎಂದರು.
“ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದರು. ಆದರೆ ಕುರುಬರಾಗಿ ಉಳಿದಿರಲಿಲ್ಲ. ವಿಶ್ವಮಾನವರಾಗಿದ್ದರು. ಆದರೆ ನಾವುಗಳು ಹುಟ್ಟಿದಾಗ ವಿಶ್ವಮಾನವರಾಗುತ್ತೇವೆ. ಕೊನೆಯಲ್ಲಿ ಅಲ್ಪಮಾನವರು. ಆದರೆ ಬುದ್ಧ, ಬಸವ, ಕನಕ, ಅಂಬೇಡ್ಕರ್, ಗಾಂಧೀಜಿ ಇವರೆಲ್ಲಾ ಜನರಿಗೆ ನೀಡಿದ ಸಂದೇಶ ವಿಶ್ವ ಮಾನವರಾಗಲು, ನಾವೆಲ್ಲರೂ ಮನುಷ್ಯರಾಗಲು ಪ್ರಯತ್ನ ಮಾಡಬೇಕು. ಒಬ್ಬರನ್ನೊಬ್ಬರು ದ್ವೇಷಿಸದೇ, ಪರಸ್ಪರ ಪ್ರೀತಿಸೋಣ” ಎಂದು ಕರೆ ನೀಡಿದರು.

“ಬಸವಾದಿ ಶರಣರು, ಕನಕದಾಸರು ಹೇಳಿದ್ದು, ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣದ ತತ್ವವನ್ನು ಸಾರಿದರು. ಇದನ್ನು ಅರಿಯಲು ವಚನಗಳು ಮತ್ತು ಕೀರ್ತನೆಗಳನ್ನು ಓದಲು ಮುಂದಾಗಬೇಕು” ಎಂದು ಕೇಳಿದರು.
“ಕನಕದಾಸರ ಪ್ರಮುಖ ಕಾವ್ಯ ಕೃತಿಗಳಾದ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಇವುಗಳನ್ನು ಜನರು ಓದಬೇಕು. ರಾಮಧಾನ್ಯ ಭಾಮಿನಿ ಷಟ್ಟದಿಯಲ್ಲಿದ್ದು, ಕಾಯಕ ದಾಸೋಹದ ಉಲ್ಲೇಖ ಇದರಲ್ಲಿ ಸಿಗುತ್ತದೆ. ಅಕ್ಕಿ ಮತ್ತು ರಾಗಿಯಲ್ಲಿ ಯಾವುದು ಹೆಚ್ಚು ಮಹತ್ವತೆಯನ್ನು ಹೊಂದಿದೆ ಎಂಬುದು ಇದರ ಸಾರಾಂಶವಾಗಿದ್ದು, ರಾಗಿಯ ಮಹತ್ವತೆಯ ಬಗ್ಗೆ ಸಂಪೂರ್ಣ ಉಲ್ಲೇಖವಿದೆ” ಎಂದರು.
“ಕನಕದಾಸರು ಸಮಾಜ ಸುಧಾರಕ. ದಾರ್ಶನಿಕ, ವಿಶ್ವಮಾನವ. ನಾವೆಲ್ಲರೂ ಇವರ ತತ್ವಾದರ್ಶ ಆರ್ಥ ಮಾಡಿಕೊಳ್ಳಲಿ ಎಂಬುದಾಗಿ ಇಂತಹ ಪ್ರತಿಮೆಗಳ ಅನಾವರಣ ಮಾಡುವ ಕೆಲಸ ಮಾಡಲಾಗುತ್ತಿದೆ. ಇವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಇದರ ಸಾರ್ಥಕತೆಯಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮೇ ಸಾಹಿತ್ಯ ಮೇಳದ 10ನೇ ಆವೃತ್ತಿ ಕುರಿತು ಸಭೆ
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಡಿ ಜಿ ಶಾಂತನಗೌಡ, ವಿಧಾನ ಪರಿಷತ್ ಸದಸ್ಯ ಕೆ ಅಬ್ದುಲ್ ಜಬ್ಬರ್, ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂ ವಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ, ಆರ್ ಪ್ರಸನ್ನಕುಮಾರ್, ಇನ್‌ಸೈಟ್ ವಿನಯ್ ಕುಮಾರ್, ಮುಖಂಡರುಗಳಾದ ಮಂಜಪ್ಪ, ಜಯಸಿಂಹ, ಸುಭಾಷ್ ಚಂದ್ರ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ ಎಸ್ ಫಾಲಾಕ್ಷಪ್ಪ, ಸಿದ್ದಪ್ಪ ಹಾಗೂ ಇತರೆ ಸಮಾಜದ ಮುಖಂಡರು ಇದ್ದರು.