ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟುವುದಕ್ಕೆ ವಿಜ್ಞಾನಿಗಳು ನೆರವಾಗಿದ್ದಾರೆ ಎನ್ನುವ ಸುದ್ದಿಯನ್ನು ವಿಶೇಷವಾಗಿ ಪ್ರಚಾರ ಮಾಡಲಾಗುತ್ತಿದೆ. ಇವು ಸುಳ್ಳು ಸುದ್ದಿಗಳಂತೂ ಅಲ್ಲ. ಆದರೆ, ಇಲ್ಲಿ ಬಳಸಿದ್ದು ವಿಶೇಷ ವಿಜ್ಞಾನವೇ?

ಕೆಲವು ದಿನಗಳಿಂದಲೂ ಎಲ್ಲೆಡೆಯೂ ರಾಮಮಂದಿರದ್ದೇ ಸುದ್ದಿ. ಮೊನ್ನೆ ವಾಟ್ಸಾಪಿನಲ್ಲಿ ಹೀಗೊಂದು ಸಂದೇಶ ಬಂದಿತ್ತು; ‘ರಾಮಮಂದಿರದಲ್ಲಿ ವಿಗ್ರಹ ಕೆತ್ತಲು ಬಳಸಿರುವ ಕಲ್ಲು ಇನ್ನೂರೈವತ್ತು ಕೋಟಿ ವರ್ಷಗಳಷ್ಟು ಪುರಾತನ. ಅದು ಎಂದಿಗೂ ನಾಶವಾಗದ ಕಲ್ಲು.’ ವಿಗ್ರಹ ಶಾಶ್ವತವಾಗಿ ಇರುವಂತೆ ವಿಜ್ಞಾನಿಗಳು ಅಂತಹ ಕಲ್ಲನ್ನು ಹುಡುಕಿದ್ದಾರೆ ಎಂದೂ ಅದರಲ್ಲಿ ಹೇಳಿತ್ತು. ಕಲ್ಲು ಅಷ್ಟು ಹಳೆಯದೇನೋ ನಿಜ. ಏಕೆಂದರೆ, ಸಾಲಿಗ್ರಾಮ ಗ್ರಾಮದಲ್ಲಿರುವ ಶಿಲೆಗಳು ಸುಮಾರು ಇನ್ನೂರೈವತ್ತು ಕೋಟಿ ವರ್ಷಗಳ ಹಿಂದೆ ಅಖಂಡ ಭೂಮಿಯಾಗಿದ್ದ ಭೂಖಂಡವೊಂದರಿಂದ ಒಡೆದು ಆಗಿದ್ದು. ಆಗ ಅದು ಈಗ ಆಫ್ರಿಕಾ ಇರುವ ಜಾಗದಲ್ಲಿ ಇತ್ತು. ನಿಧಾನವಾಗಿ ಚಲಿಸುತ್ತ ಏಷ್ಯಾ – ಅಂದರೆ, ರಷ್ಯಾ ಮತ್ತು ಚೀನಾಗಳಿರುವ ಭಾಗಕ್ಕೆ ಬಂದು ಘಟ್ಟಿಸಿತು. ಹೀಗೆ, ಅದು ಬಡಿದ ಕಾರಣದಿಂದಲೇ ಹಿಮಾಲಯ ಸೃಷ್ಟಿಯಾಯಿತು. ಸಾಗರದ ತಳದಲ್ಲಿದ್ದ ನೆಲ ಮೇಲುಬ್ಬಿ ಶಿವಾಲಿಕ ಪರ್ವತಗಳಾದುವು ಎಂದು ಭೂವಿಜ್ಞಾನ ಹೇಳುತ್ತದೆ. ಇದು ಕತೆ ಅಲ್ಲ. ಹಲವರು, ಹಲವು ಬಗೆಯಲ್ಲಿ ಅಧ್ಯಯನ ಮಾಡಿ ಕಂಡುಕೊಂಡ ಸತ್ಯಾಂಶ.

ಹೀಗೆ ಭೂಮಿಯೊಳಗಿನ ಹಲವಾರು ವಿದ್ಯಮಾನಗಳ ಫಲವಾಗಿ ಹುಟ್ಟಿದ್ದು ಶಿವಾಲಿಕ ಪರ್ವತ. ಅದರ ಒಂದು ಮಡಿಕೆಯೊಳಗೆ ಇರುವ ನೇಪಾಳದಲ್ಲಿ ಬಚ್ಚಿಟ್ಟುಕೊಂಡ ಪುಟ್ಟ ಗ್ರಾಮವೇ ಸಾಲಿಗ್ರಾಮ. ಶಾಲ ಅಥವಾ ಸಾಲ್‌ ಮರಗಳು ಯಥೇಚ್ಛವಾಗಿ ಇರುವುದರಿಂದ ಈ ಹಳ್ಳಿಗೆ ಈ ಹೆಸರು ಬಂದಿದೆ ಎನ್ನುತ್ತಾರೆ. ಇದು ಸುಮಾರು ಇನ್ನೂರೈವತ್ತು ಕೋಟಿ ವರ್ಷಗಳ ಹಿಂದೆ ರೂಪುಗೊಂಡ ಶಿಲೆಯ ಮೇಲಿರುವ ಜಾಗ. ಇಲ್ಲಿನ ನೆಲದಡಿಯಲ್ಲಿರುವ ಎಲ್ಲ ಕಲ್ಲುಗಳೂ ಇಷ್ಟೇ ಹಳೆಯವೆನ್ನಬಹುದು. ಮೇಲಿರುವಂಥವು ತುಸು ಇತ್ತೀಚಿನವು. ಬಾಲರಾಮನ ವಿಗ್ರಹಕ್ಕೆ ಬಳಸಿಕೊಂಡ ಶಿಲೆ ಇದಕ್ಕಿಂತಲೂ ಹಳೆಯದು. ಮುನ್ನೂರ ಐವತ್ತು ಕೋಟಿ ವರ್ಷ ಹಳೆಯದು. ಹೆಗ್ಗಡದೇವನ ಕೋಟೆಯ ಗ್ರಾಮವೊಂದರಲ್ಲಿ ನೆಲದಡಿಯಲ್ಲಿ ಇದ್ದ ಈ ಶಿಲೆಯನ್ನು ವಿಗ್ರಹಕ್ಕಾಗಿ ಬಳಸಲಾಗಿದೆ. ‘ಧಾರವಾಡ ಕ್ರೇಟನ್‌’ ಎನ್ನುವ ವಿಶಾಲವಾದ ಶಿಲೆಯ ಭಾಗ ಈ ಕಲ್ಲು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇವೆಲ್ಲ ಮಾತು ಯಾಕೆ ಎಂದರೆ, ರಾಮ ಮಂದಿರದ ವಿಷಯದಲ್ಲಿ ವಿಜ್ಞಾನದ ನೆರವನ್ನು ಸಾಕಷ್ಟು ಪಡೆಯಲಾಗಿದೆ ಎಂದು ಸರಣಿಯಾಗಿ ವರದಿಗಳು ಬರುತ್ತಿವೆ. ಧಾರ್ಮಿಕ ನಂಬಿಕೆಗಳಿಗೆ ಒತ್ತು ನೀಡುವ ಕಟ್ಟಡಕ್ಕೆ – ಅದನ್ನು ಅಲ್ಲಗಳೆಯುವ ವಿಜ್ಞಾನವನ್ನು ಬಳಸಲಾಗುತ್ತಿದೆ ಎನ್ನುವುದು ನಿಜಕ್ಕೂ ಸುದ್ದಿಯಾಗುವಂತಹ ವಿಷಯವೇ. ಆದರೆ, ಅದಕ್ಕೂ ಆಳವಾದೊಂದು ವಿಚಾರ, ರಾಮ ಮಂದಿರದಲ್ಲಿ ವಿಜ್ಞಾನವನ್ನು ಬಳಸಿದ ರೀತಿ ಮತ್ತು ಅದರ ಬಗ್ಗೆ ನೀಡುತ್ತಿರುವ ಪ್ರಚಾರದಲ್ಲಿ ಇದೆ. ಭಾರತದಲ್ಲಿಯಂತೂ ದೇವಾಲಯಗಳು ವಿಜ್ಞಾನವನ್ನು ಬಳಸಿದ್ದು ಇದುವೇ ಮೊದಲೂ ಅಲ್ಲ, ಇದುವೇ ಕೊನೆಯೂ ಅಲ್ಲ.

ಭಾರತದಲ್ಲಿ ಈ ಹಿಂದೆಯೂ ಹಲವು ಧಾರ್ಮಿಕ ಸಂಸ್ಥೆಗಳು ವಿಜ್ಞಾನದ ನೆರವನ್ನು ಪಡೆದಿದ್ದವು. ಆದರೆ, ಅವು ಯಾವುವೂ ಇಷ್ಟೊಂದು ಸುದ್ದಿಯಾಗಲಿಲ್ಲ. ಇಷ್ಟೊಂದು ವಿಶೇಷ ಎನ್ನಿಸಲೂ ಇಲ್ಲ ಎನ್ನುವುದು ಬೇರೆ ಮಾತು. ನಮ್ಮ ದೇಶದ ಹಲವಾರು ಪಾರಂಪರಿಕ ಎನ್ನಿಸಿದ ದೇವಾಲಯಗಳು ಮತ್ತು ಕಟ್ಟಡಗಳನ್ನು ಜೀರ್ಣೋದ್ಧಾರ ಮಾಡಲು ನವನವೀನ ವಿಜ್ಞಾನವನ್ನು ದಶಕಗಳಿಂದಲೂ ಬಳಸಿದ್ದೇವೆ. ಪುರಾತತ್ವ ಇಲಾಖೆಯ ವಿಜ್ಞಾನಿಗಳ ಈ ಸಾಮರ್ಥ್ಯವೇ ಅವರು ಕಾಂಬೋಡಿಯಾದಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಪತ್ತೆಯಾದ ಪುರಾತನ ಹಿಂದೂ ದೇವಾಲಯಗಳನ್ನು ಪುನರುಜ್ಜೀವನಗೊಳಿಸಲು ನೆರವಾಯಿತು.

ದೂರದ ಕಾಂಬೋಡಿಯಾ ಯಾಕೆ, ನಮ್ಮದೇ ದಕ್ಷಿಣದ ಕಾಶಿ ಎನ್ನಿಸಿದ ತಿರುಪತಿಯ ಲಡ್ಡು ವಿಶೇಷ ಧಾರ್ಮಿಕ ಪ್ರಸಾದವೆಂದು ಖ್ಯಾತಿ ಪಡೆದಿದೆ. ಹಲವಾರು ದಿನಗಳ ಕಾಲ ಇಟ್ಟರೂ ಇದು ಕೆಡುವುದಿಲ್ಲ. ಇದು ಆ ದೇವಾಲಯದ ಪವಾಡಭೂತ ಶಕ್ತಿ ಎಂದು ನಂಬುವವರೂ ಇದ್ದಾರೆ. ವಾಸ್ತವದಲ್ಲಿ ಇತ್ತೀಚೆಗೆ ಅಲ್ಲಿ ಉತ್ಪಾದನೆಯಾಗುತ್ತಿರುವ ಲಡ್ಡು ಮೊದಲಿನಂತೆ ತಯಾರಾಗುವುದಿಲ್ಲ. ಅದಕ್ಕಾಗಿ ವಿಶೇಷ ಯಂತ್ರಗಳಷ್ಟೇ ಅಲ್ಲ, ಸ್ವಚ್ಛವಾದ ಪರಿಸರ ಮತ್ತು ಬಲು ದೀರ್ಘಕಾಲ ಕೆಡದೆ ಇರುವಂತೆ ಮಾಡುವ ವಿಧಾನಗಳನ್ನು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಒದಗಿಸಿತ್ತು. ಇದು ಹಲವು ದಶಕಗಳ ಹಿಂದಿನ ಮಾತು. ಇತ್ತೀಚೆಗೆ, ಅಂದರೆ, ಕಳೆದ ದಶಕದಲ್ಲಿ ಕೇರಳದ ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆ ಮಿತಿ ಮೀರಿದಾಗ, ಅಲ್ಲಿಯೂ ಪ್ರಸಾದದ ಸಮಸ್ಯೆ ಉದ್ಭವಿಸಿತ್ತು. ಸಾಂಪ್ರದಾಯಿಕ ವಿಧಾನದಿಂದ ಅಷ್ಟೊಂದು ಪ್ರಮಾಣದಲ್ಲಿ ಮತ್ತು ಅದೇ ರುಚಿಯ ಪ್ರಸಾದ ತಯಾರಿಸುವುದು ಕಷ್ಟವಾಗಿತ್ತು. ಹೀಗಾಗಿ, ಅಲ್ಲಿನ ವಿಶೇಷ ಪ್ರಸಾದವಾದ ‘ಅರವಣಮ್‌’ ಮತ್ತು ‘ಅಪ್ಪಂ’ಗಳನ್ನು ದೀರ್ಘಕಾಲ ಕೆಡದಂತೆ ಉಳಿಸುವ ಬಗ್ಗೆಯೂ ದೇವಾಲಯ ಸಂಶೋಧಕರ ನೆರವನ್ನು ಪಡೆದಿತ್ತು.

ಆದರೆ, ಈಗ ರಾಮ ಮಂದಿರದ ಸಂದರ್ಭದಲ್ಲಿ ವಿಜ್ಞಾನದ ಬಳಕೆ ವಿಶೇಷ ಎನ್ನಿಸಿತೇಕೆ? ಇದು ನಾವು ಇಂದು ಕೇಳಬೇಕಾದ ಪ್ರಶ್ನೆ. ಏಕೆಂದರೆ, ವಿಜ್ಞಾನ ಮತ್ತು ಧರ್ಮಗಳ ನಡುವಣ ತಿಕ್ಕಾಟ ಐದಾರು ಶತಮಾನಗಳಿಂದಲೂ ನಡೆದು ಬಂದಿದೆ. ಪ್ರಮುಖವಾಗಿ ಈ ತಿಕ್ಕಾಟವನ್ನು ನಾವು ಹದಿನೇಳನೆಯ ಶತಮಾನದಿಂದ ಯುರೋಪಿನಲ್ಲಿ ಕಾಣುತ್ತೇವೆ. ಆ ಕಾಲಘಟ್ಟದಲ್ಲಿ ಅಲ್ಲಿ ಅತ್ಯಂತ ಶೀಘ್ರವಾಗಿ ಹಲವು ವಿಜ್ಞಾನ ಶಾಖೆಗಳು ಅಭಿವೃದ್ಧಿಯಾದವು. ಪ್ರತಿಯೊಂದೂ ಹೊಸದೊಂದು ಅರಿವನ್ನು ಮೂಡಿಸುತ್ತಿತ್ತು. ಇವೆಲ್ಲವುಗಳ ಮೂಲವೂ ಅಂದಿನ ಕಾಲದಲ್ಲಿದ್ದ ಮಾಟ, ಮಂತ್ರಗಳಂತಹ ನಂಬಿಕೆಗಳಿಂದಲೇ ಹುಟ್ಟಿದ್ದವು. ಉದಾಹರಣೆಗೆ, ಯಾವುದೇ ಲೋಹವನ್ನೂ ಪಾದರಸ ಚಿನ್ನವನ್ನಾಗಿ ಮಾಡಿಬಿಡುತ್ತದೆ ಎನ್ನುವ ನಂಬಿಕೆಯಿಂದ ಇಂದಿನ ರಸಾಯನ ವಿಜ್ಞಾನ ಉದಯವಾಯಿತು. ನಾನಾ ಲೋಹಗಳು ಮತ್ತು ಮಿಶ್ರಲೋಹಗಳ ಬಳಕೆ ಆರಂಭವಾಯಿತು. ದೇಹ ರಚನೆಯೂ ದೈವ ಸೃಷ್ಟಿ ಎನ್ನುವ ನಂಬಿಕೆ ಇತ್ತು. ಆ ವಿವರಣೆಗೆ ಒಗ್ಗದ ಹೊಸ ಶೋಧಗಳಾದಾಗ ಸಂಘರ್ಷ ಆರಂಭವಾಯಿತು. ವಿಜ್ಞಾನದ ಬೆಳೆವಣಿಗೆಯಿಂದಾಗಿ ಸಮಾಜದ ಮೇಲೆ ಧರ್ಮಕ್ಕೆ ಇದ್ದ ಪ್ರಭಾವವನ್ನು ಕುಗ್ಗಿಬಿಡಬಹುದೆನ್ನುವ ಆತಂಕದಿಂದ ಈ ಸಂಘರ್ಷ ಹುಟ್ಟಿಕೊಂಡಿತು ಎಂದು ಚರಿತ್ರಕಾರರು ಅಭಿಪ್ರಾಯಪಟ್ಟಿದ್ದಾರೆ. ಯುರೋಪಿನಲ್ಲಿ ಹದಿನೆಂಟನೆಯ ಶತಮಾನದಿಂದ ಜಾರಿಯಲ್ಲಿರುವ ವಿಜ್ಞಾನ ವಿರೋಧಿ ಚಳವಳಿಗಳಿಗೆ ಇದೇ ಕಾರಣ.

ಇದೇಕೆ ಎನ್ನುವುದಕ್ಕೆ ವಿವರಣೆ ಬಹಳ ಸರಳ. ಅಂದಿನ ಅಧ್ಯಯನಗಳೆಲ್ಲವೂ ಧಾರ್ಮಿಕ ನಂಬಿಕೆಗಳ ಚೌಕಟ್ಟಿನಲ್ಲಿಯೇ ನಡೆಯುತ್ತಿದ್ದಂಥವು. ಆದರೆ, ಒಮ್ಮೆ ಕೋಪರ್ನಿಕಸ್‌ ಮತ್ತು ಗೆಲಿಲಿಯೋ ಈ ತತ್ವಗಳು ವಾಸ್ತವವಲ್ಲ ಎಂದು ನಿರೂಪಿಸಿದಾಗ, ವಿಜ್ಞಾನ ಅಧರ್ಮೀಯ ಎನ್ನಿಸಿತು. ಹಾಗೆಯೇ, ವಿಲಿಯಂ ಹಾರ್ವೆ ರಕ್ತನಾಳಗಳಲ್ಲಿ ಗಾಳಿ ಓಡಾಡುವುದಿಲ್ಲ, ರಕ್ತ ಹರಿಯುತ್ತದೆ ಎಂದು ಹೇಳಿದಾಗಲೂ ಅದು ಅಧರ್ಮೀಯ ಎನ್ನಿಸಿತು. ಅಂಗ ಕಸಿಯ ವಿಷಯದಲ್ಲಿಯೂ ಹೀಗೆಯೇ ಆಯಿತು. ಇದು ಒಂದು ಕಡೆಯಾದರೆ, ವಿಜ್ಞಾನವನ್ನೇ ಧಾರ್ಮಿಕ ನಂಬಿಕೆಗಳನ್ನು ನಿರೂಪಿಸಲು ಬಳಸಿಕೊಂಡ ಪ್ರಯತ್ನಗಳೂ ಇವೆ. ಯುರೋಪಿನಲ್ಲಿ ಧರ್ಮಧ ಪ್ರಭಾವ ಹೆಚ್ಚು ಇವೆ ಎನ್ನಲಾದ ರೋಮ್‌, ಮಧ್ಯಪ್ರಾಚ್ಯದ ತುರ್ಕಿ ಹಾಗೂ ಜೆರುಸಲೇಮಿನಂತಹ ಸ್ಥಳಗಳಲ್ಲಿ ಇಂದಿಗೂ ಹಲವಾರು ಪುರಾತನ ಧಾರ್ಮಿಕ ನಂಬಿಕೆಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಸತ್ಯ ಎಂದು ಸಾಧಿಸುವ ಯತ್ನಗಳು ನಡೆದಿವೆ. ಪವಾಡಗಳು ಎನ್ನುವ ಹಲವಾರು ವಿದ್ಯಮಾನಗಳ ಬಗ್ಗೆ ದಶಕಗಳ ಕಾಲ ಅಧ್ಯಯನಗಳನ್ನು ನಡೆಸಿದ್ದಾರೆ. ಉದಾಹರಣೆಗೆ, ಇಟಲಿಯ ತ್ಯೂರಿನ್ನಿನಲ್ಲಿ ಇರುವ ಹೊದಿಕೆಯೊಂದರಲ್ಲಿ ವ್ಯಕ್ತಿಯೊಬ್ಬನ ನೆರಳಚ್ಚು ಇದೆ. ಅದು ಯೇಸುಕ್ರಿಸ್ತನದ್ದೇ ಎಂದು ನಿರೂಪಿಸಲು ಹಲವು ಬಗೆಯ ಅಧ್ಯಯನಗಳು ನಡೆದಿದ್ದು ಎಲ್ಲರಿಗೂ ತಿಳಿದ ವಿಷಯ.

ಇದೀಗ ಅಯೋಧ್ಯೆಯ ರಾಮ ಮಂದಿರವನ್ನು ಕಟ್ಟುವುದಕ್ಕೆ ವಿಜ್ಞಾನಿಗಳು ನೆರವಾಗಿದ್ದಾರೆ ಎನ್ನುವ ಸುದ್ದಿಯನ್ನು ವಿಶೇಷವಾಗಿ ಪ್ರಚಾರ ಮಾಡಲಾಗುತ್ತಿದೆ. ರಾಮ ಮಂದಿರದ ಅಸ್ತಿಭಾರ ಕಟ್ಟಲು ಬೇಕಾದ ತಂತ್ರಗಳನ್ನು ವಿಜ್ಞಾನಿಗಳು ಒದಗಿಸಿದ್ದಾರೆ. ಅಲ್ಲಿನ ಕಲ್ಲುಗಳನ್ನು ಗಾರೆಯಿಲ್ಲದೆಯೇ ಕಟ್ಟಲು ವಿಜ್ಞಾನ ನೆರವಾಗಿದೆ. ರಾಮನ ಹಣೆಯ ಮೇಲೆ ತಿಲಕದಂತೆ ಸೂರ್ಯ ರಶ್ಮಿ ಬೀಳಲು ಹೊಸದೊಂದು ತಂತ್ರವನ್ನು ವಿಜ್ಞಾನಿಗಳು ರೂಪಿಸಿದ್ದಾರೆ. ಬೆಂಗಳೂರಿನ ಕಂಪನಿಯೊಂದು ಇದನ್ನು ನಿರ್ಮಿಸಿದೆ. ನಡು ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ ಮೂರನೆಯ ಅಂತಸ್ತಿನಲ್ಲಿ ಬೀಳುವ ಸೂರ್ಯನ ಬಿಸಿಲನ್ನು ಕನ್ನಡಿ, ಮಸೂರಗಳ ನೆರವಿನಿಂದ ನೆಲ ಅಂತಸ್ತಿಗೆ ತಂದು, ರಾಮನ ವಿಗ್ರಹದ ಹಣೆಯ ಮೇಲೆ ಬೀಳುವಂತೆ ಮಾಡಲಾಗಿದೆಯಂತೆ. ಅದೂ ಕೇವಲ ರಾಮನವಮಿಯಂದು.

ಇವು ಸುಳ್ಳು ಸುದ್ದಿಗಳಂತೂ ಅಲ್ಲ. ಆದರೆ, ಇವು ವಿಶೇಷ ವಿಜ್ಞಾನವೇ? ಇದು ಯೋಚಿಸಬೇಕಾದ ವಿಷಯ. ಉದಾಹರಣೆಗೆ, ಗಾರೆಗಳಿಲ್ಲದೆಯೇ ಕಟ್ಟಡಗಳನ್ನು ಕಟ್ಟಿರುವ ಉದಾಹರಣೆಗಳು ಬಹಳ ಇವೆ. ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಕಟ್ಟಿದ ಕರ್ನಾಟಕದ ಹಳೆಬೀಡು, ಬೇಲೂರು, ಆಂಧ್ರಪ್ರದೇಶದ ಕಾಕತೀಯರ ದೇವಸ್ಥಾನಗಳು, ಹಂಪಿಯ ಕಟ್ಟಡಗಳಲ್ಲಿ ಇಂತಹ ರಚನೆಗಳನ್ನು ಕಾಣಬಹುದು. ಇವು ಏಕಶಿಲೆಯ ಕೆತ್ತನೆಗಳಲ್ಲ. ಬದಲಿಗೆ, ಕಲ್ಲನ್ನು ಒಂದಿನ್ನೊಂದರೊಳಗೆ ಭದ್ರವಾಗಿ ಕೂರುವಂತೆ, ಬೆಣೆ, ಗುಳಿಗಳನ್ನು ಬಳಸಿ ಜೋಡಿಸಿದ ತಂತ್ರ. ಹಾಗೆಯೇ, ಸೂರಿನ ಭಾರವನ್ನು ಹೊರುವುದಕ್ಕೂ ಒಂದೇ ಕಲ್ಲನ್ನು ಕಡೆದು, ಕಂಬದ ಮೇಲಿಟ್ಟಿರುವ ವಿಶೇಷ ರಚನೆಗಳು ಹಂಪಿಯಲ್ಲಿ ಇವೆ. ಇವೆಲ್ಲವೂ ತಿಳಿದಿದ್ದ ವಾಸ್ತು ರಚನೆಗಳು. ಅಂದರೆ, ನಾನು ವಿಜ್ಞಾನವನ್ನು ಅನುಮಾನಿಸುತ್ತಿದ್ದೇನೆ ಅಂತಲ್ಲ. ‘ಪ್ರಾಯೋಗಿಕ ವಿಜ್ಞಾನ’ ಎನ್ನುವ ಅತ್ತ ತಂತ್ರಜ್ಞಾನವೂ ಅಲ್ಲದ, ಇತ್ತ ಪಾರಂಪರಿಕ ಅರಿವೂ ಅಲ್ಲದ ಜ್ಞಾನಗಳಿವೆ. ಬಡಗಿ, ವಾಸ್ತುಶಿಲ್ಪ, ಕಮ್ಮಾರಿಕೆ, ಕೃಷಿ ವಿಜ್ಞಾನಗಳು ಇಂಥವು. ಇವುಗಳನ್ನು ಮಾಡುವವರು ಕೈಯಾರ ಕೆಲಸ ಮಾಡುವುದರಿಂದ ಹಲವು ವಿಷಯಗಳನ್ನು ಕಲಿತಿರುತ್ತಾರೆ. ಅದನ್ನೇ ಪಾರಂಪರಿಕ ಜ್ಞಾನ ಎನ್ನುತ್ತೇವೆ.

ಉಳಿಯೇಟು ಬಿದ್ದರೆ ಯಾವ ಕಲ್ಲು ಒಡೆಯುವುದಿಲ್ಲ? ಗಟ್ಟಿಯಾಗಿದ್ದರೂ ಉರುಳೆ ಉಳಿಗೆ ಕೊಟ್ಟು ಆಕಾರ ತಿದ್ದಬಹುದಾದ ಕಲ್ಲು ಯಾವುದು? ಮಂದಿರದ ಬುನಾದಿಯನ್ನು ಮರಳು ತುಂಬಿದ ನೆಲದ ಮೇಲೆ ಕಟ್ಟಬೇಕಾಗಿದ್ದರಿಂದ, ಗಟ್ಟಿಯಾದ ಗ್ರಾನೈಟು ಶಿಲೆಗಳ ದಪ್ಪ ಹಾಸನ್ನು ಹಾಸಿ, ಅದರ ಮೇಲೆ ಕಟ್ಟಡವನ್ನು ಕಟ್ಟಲಾಗಿದೆ. ಈ ತಂತ್ರವನ್ನು ವಾರಂಗಲ್‌ ಬಳಿ ಇರುವ ಸಾವಿರ ವರ್ಷ ಹಳೆಯ ರಾಮಪ್ಪ ದೇವಾಲಯದಲ್ಲಿ ಕಾಣಬಹುದು. ಅದೇ ರೀತಿಯಲ್ಲಿ, ಉರುಳೆಗಳನ್ನು ಉಳಿಯಿಂದ ಕೆತ್ತುವ ಉರುಳೆಯುಳಿ ಅಥವಾ ಲೇಥ್‌ ತಂತ್ರವನ್ನು ಬೇಲೂರು, ಹಳೆಬೀಡಿನಲ್ಲಿ ಕಂಬಗಳನ್ನು ಕೆತ್ತಲು ಬಳಸಿರುವುದನ್ನು ಕಾಣಬಹುದು. ಅಂದರೆ, ಈಗಾಗಲೇ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ವಿಜ್ಞಾನದ ನೆರವು ಬೇಕಿತ್ತೇ? ಪಡೆದಿದ್ದರೂ ಇಷ್ಟೊಂದು ಪ್ರಚಾರ ನೀಡುವ ಹೊಸ ತಂತ್ರಗಳೇ? ಇದು ಪ್ರಶ್ನೆ.

ಅಯೋಧ್ಯೆಯಲ್ಲಿ ಬಳಸಲಾದ ಶಿಲೆಗಳ ಕಾಲ, ಅವುಗಳಲ್ಲಿರುವ ಖನಿಜಗಳ ಸ್ವರೂಪ, ಶಿಲೆಯ ಧೃಢತೆ ಮೊದಲಾದವನ್ನು ಅತ್ಯಾಧುನಿಕ ತಂತ್ರಗಳನ್ನು ಬಳಸಿ ಪರೀಕ್ಷಿಸಲಾಗಿದೆ. ಈ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಶಿಲೆಗಳನ್ನಷ್ಟೇ ಮಂದಿರ ಕಟ್ಟಲು ಬಳಸಿದ್ದಾರೆ. ಇದರಲ್ಲಿ ವಿಜ್ಞಾನದ ವಿಶೇಷ ಏನು ಎಂದು ಕೇಳಬಹುದು. ಬಹುಶಃ ಇಂತಿಷ್ಟು ವರ್ಷಗಳವರೆಗೂ ಈ ಮೂರ್ತಿ ಹೀಗೆಯೇ ಇರುತ್ತದೆ ಎನ್ನುವ ಖಾತ್ರಿಯನ್ನು ವಿಜ್ಞಾನ ನೀಡಿದ್ದರೆ, ಆಗ ಅದು ನಿಜವಾದ ವಿಜ್ಞಾನ ಎನ್ನಿಸಿಕೊಳ್ಳುತ್ತಿತ್ತೇನೋ. ಆದರೆ ಹಾಗಾಗಿಲ್ಲ. ಯಾವುದೇ ವಾಸ್ತುಶಿಲ್ಪಿ ಇಲ್ಲವೇ ಶಿಲ್ಪಿಯೂ ಗುಣಮಟ್ಟವನ್ನು ನೋಡಿಯೇ ಕೆಲಸ ಆರಂಭಿಸುತ್ತಾನಷ್ಟೆ. ಈಗ ವಿಜ್ಞಾನಿಗಳು ಮಾಡಿರುವುದು ಅಡಿಗೋಲಿನ ಬದಲಿಗೆ ಸೆಂಟಿಮೀಟರಿನ ಕೋಲನ್ನು ಹಿಡಿದು ಅಳೆದಂತೆ ಎನ್ನಬಹುದೇ?

ಇನ್ನು, ಸೂರ್ಯನ ಕಿರಣಗಳು ವಿಗ್ರಹದ ಹಣೆಯ ಮೇಲೆ ನೇರವಾಗಿ ಬೀಳುವಂತೆ ಮಾಡಿರುವ ಯೋಜನೆ. ಶೃಂಗೇರಿಯಲ್ಲಿ, ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ, ಇನ್ನೂ ಹಲವು ದೇವಾಲಯಗಳಲ್ಲಿ ನಿರ್ದಿಷ್ಟ ದಿನದಂದು ನಿರ್ದಿಷ್ಟ ಜಾಗದಲ್ಲಿ ಸೂರ್ಯರಶ್ಮಿ ಬೀಳುತ್ತದೆ. ಅಂದಿನವರಿಗೆ ತಿಳಿದಿದ್ದ ಸಂಗತಿ ಇಂದಿನವರಿಗೆ ಗೊತ್ತಿಲ್ಲವಾ? ಅದಕ್ಕೆ ವಿಶೇಷ ವ್ಯವಸ್ಥೆ ಬೇಕಾ? ಎಂದು ಗೇಲಿ ಮಾಡಬಹುದು. ವಾಸ್ತವವೇನೆಂದರೆ, ರಾಮನವಮಿ ಎನ್ನುವುದು ಚಂದ್ರಮಾನದ ಲೆಕ್ಕಾಚಾರ. ಇದಕ್ಕೂ ಸಂಕ್ರಾಂತಿಯನ್ನು ಲೆಕ್ಕ ಹಾಕುವ ಸೂರ್ಯಮಾನಕ್ಕೂ ಹತ್ತು ಹದಿನೈದು ದಿನಗಳ ವ್ಯತ್ಯಾಸ ಇದೆ. ಹೀಗಾಗಿ, ಪ್ರತಿವರ್ಷವೂ ರಾಮನವಮಿಯಂದು ಸೂರ್ಯ ನಿರ್ದಿಷ್ಟ ಸ್ಥಾನದಿಂದಲೇ ಹುಟ್ಟುವುದಿಲ್ಲ. ಆತನ ರಶ್ಮಿಗಳನ್ನು ನೇರವಾಗಿ ವಿಗ್ರಹದ ಮೇಲೆ ಬೀಳುವಂತೆ ಮಾಡಲೂ ಆಗುವುದಿಲ್ಲ. ಅದಕ್ಕೆ ಬೆಳಕನ್ನು ಅದು ಬೀಳುವೆಡೆಯಿಂದ ರಾಮನ ನೆತ್ತಿಯವರೆಗೆ ಸಾಗುವಂತೆ ಕನ್ನಡಿಗಳನ್ನಿಟ್ಟು ಪ್ರತಿಫಲಿಸುವಂತೆ ಮಾಡಬೇಕು. ರಾಮ ಮಂದಿರದಲ್ಲಿ ಇದೇ ವ್ಯವಸ್ಥೆ ನಡೆದಿದೆ. ಬೆಳಕನ್ನು ಸುಲಭವಾಗಿ ಸಾಗಿಸಬಲ್ಲ ಆಪ್ಟಿಕ್‌ ಫೈಬರ್‌ ದೊರೆಯುವ ಈ ಕಾಲದಲ್ಲಿ ಕನ್ನಡಿ, ಮಸೂರಗಳನ್ನು ಬಳಸಿದ್ದು ಸ್ವಲ್ಪ ವಿಚಿತ್ರವೇ ಸರಿ. ಆದರೆ, ಈ ಲೆಕ್ಕಾಚಾರವೂ ತಪ್ಪಬಹುದು ಎನ್ನಿ. ಏಕೆಂದರೆ, ಉತ್ತರ ಭಾರತದಲ್ಲಿ ವರ್ಷದ ಯಾವುದೇ ದಿನದಲ್ಲಿಯೂ ನೆತ್ತಿಯ ಮೇಲೆ ಸೂರ್ಯ ಬರುವುದೇ ಇಲ್ಲ. ಏನಿದ್ದರೂ ಸ್ವಲ್ಪ ಉತ್ತರಕ್ಕೇ ಇರುತ್ತದೆ. ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೋ ಎನ್ನುವುದಕ್ಕೆ ರಾಮನವಮಿಗೇ ಕಾಯಬೇಕು.

ಆದರೂ ಒಂದು ಪ್ರಶ್ನೆ ಕಾಡುತ್ತದೆ… ಇದು ಸಮಸ್ಯೆಯೇ ಅಲ್ಲವಾದಾಗ ವಿಜ್ಞಾನ, ತಂತ್ರಜ್ಞಾನವನ್ನು ಬಳಸಿದ್ದೇಕೆ? ರಾಮನವಮಿಯಂದು ಸೂರ್ಯರಶ್ಮಿ ವಿಗ್ರಹದ ಮೇಲೆ ಬೀಳಲೇಬೇಕೆನ್ನುವ ಶಾಸ್ತ್ರ ಇರಲಿಲ್ಲವಲ್ಲ. ಮತ್ತೇಕೆ ಈ ಸರ್ಕಸ್ಸು ಎನ್ನುವ ಪ್ರಶ್ನೆ, ರಾಮಮಂದಿರದಲ್ಲಿ ವಿಜ್ಞಾನದ ಬಳಕೆಯಿಂದ ಧಾರ್ಮಿಕ ಸ್ಥಾನಗಳು ಮತ್ತು ವಿಜ್ಞಾನದ ನಡುವಣ ಸಂಬಂಧದಲ್ಲಿ ಆಗಿರುವ ವ್ಯತ್ಯಾಸವನ್ನು ತೋರಿಸುತ್ತಿದೆಯೇ? ಸಾಮಾನ್ಯವಾಗಿ ಧಾರ್ಮಿಕ ಸ್ಥಳಗಳು ಮತ್ತು ವಿಜ್ಞಾನದ ನಡುವಣ ಸಂಬಂಧ ಎರಡು ರೀತಿಯದ್ದು. ಮೊದಲನೆಯದು, ಧಾರ್ಮಿಕ ಸ್ಥಳಗಳು ತಮ್ಮಿಂದ ಪರಿಹರಿಸಲಾಗದ ಸಮಸ್ಯೆಗಳಿಗೆ ವಿಜ್ಞಾನವನ್ನು ಬಳಸಿಕೊಳ್ಳುವುದು. ತಿರುಪತಿಯ ಲಡ್ಡು, ಶಬರಿಮಲೆಯ ಅರವಣಮ್‌ ಇದಕ್ಕೆ ಉದಾಹರಣೆ. ಎರಡನೆಯದು, ಧಾರ್ಮಿಕ ಕ್ಷೇತ್ರಗಳ ನಂಬಿಕೆಗಳನ್ನು ಸತ್ಯ ಎಂದು ನಿರೂಪಿಸಲೋ ಅಥವಾ ಅದಕ್ಕೆ ಒತ್ತು ನೀಡಲೋ ವಿಜ್ಞಾನವನ್ನು ಬಳಸಿಕೊಳ್ಳುವುದು; ತ್ಯೂರಿನ್‌ ಹೊದಿಕೆಯ ಬಗೆಗಿನ ಸಂಶೋಧನೆ ಇಂತಹದ್ದು. ವಿಜ್ಞಾನಿಗಳು ಇಷ್ಟಾರ್ಥ ಸಿದ್ಧಿಗಾಗಿ ಧಾರ್ಮಿಕ ಸ್ಥಳಗಳಿಗೆ, ದೇವಾಲಯಗಳಿಗೆ ಭೇಟಿ ನೀಡುವುದು ಇಲ್ಲಿ ಸೇರಿಲ್ಲ. ಆದರೆ, ರಾಮ ಮಂದಿರದಲ್ಲಿ ಆಗಿದ್ದು ಇವೆರಡೂ ಅಲ್ಲ. ಅಲ್ಲಿ ಸಮಸ್ಯೆಯೇ ಇರಲಿಲ್ಲ. ಏನಿದ್ದರೂ ಶ್ರದ್ಧೆಯನ್ನು ಹೆಚ್ಚಿಸುವುದಕ್ಕಾಗಿ ವಿಜ್ಞಾನವನ್ನು ಬಳಸಿಕೊಂಡಂತೆ ಆಗಿದೆ ಎನ್ನಬೇಕಷ್ಟೆ. ಇದು ಹೊಸತು. ಇದುವರೆಗೂ ನಾ ಮೇಲೋ, ನೀ ಮೇಲೋ ಎಂಬಂತೆ ವಿಜ್ಞಾನ-ಧರ್ಮಗಳ ನಡುವೆ ವಾದಗಳಾಗುತ್ತಿದ್ದುವು. ಆದರೆ ಈಗ, ಧರ್ಮವೇ ಮೇಲುಗೈ, ವಿಜ್ಞಾನ ಅದರ ಅಡಿಯಾಳಾಯಿತೇ? ಅರಿವಿಗೆ ತಿಲಕಪ್ರಾಯವಾಗಿದ್ದ ವಿಜ್ಞಾನ, ಕೆಲವು ಕ್ಷಣಗಳ ಕಾಲ ತಿಲಕವೊಂದನ್ನು ರೂಪಿಸುವುದಕ್ಕೆ ತಿಣುಕಬೇಕೇ?

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

2 COMMENTS

  1. ಈಗ ಧರ್ಮವು ವಾಣಿಜ್ಯೀಕರಣಗೊಂಡು ಮಾರುಕಟ್ಟೆಯ ವಸ್ತುವಾಗಿದೆ. ಹಾಗಾಗಿ ಅದಕ್ಕೆ ವಿಜ್ಞಾನದ ಮುದ್ರೆಯನ್ನು ಒತ್ತುವ ಪ್ರಯತ್ನ ನಡೆಯುತ್ತಿದೆ. ಸದ್ಯಕ್ಕೆ ಪ್ರಭುತ್ವ ಅದರ ಮುಂಚೂಣಿಯಲ್ಲಿದೆ.

  2. ಅವರು ವಿಜ್ಞಾನ ಬಳಸಿದ್ದಾರೆ. ಸಂತೋಷ. ಹೊಟ್ಟೆ ಉರಿ ಪಡುವ ವಿಷಯ ಕಾಣಿಸುತ್ತಿಲ್ಲ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಯ ಗಾರುಡಿ | ‘ಪ್ರೀತ್ಸೆ ಪ್ರೀತ್ಸೆ’ ಎಂಬ ಚಿತ್ರಗೀತೆಯೂ ‘ಜನಗಣಮನ’ ಎಂಬ ರಾಷ್ಟ್ರಗೀತೆಯೂ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ನಮ್ ಜನ | ದುಡಿದರೂ ದಣಿದರೂ ನಿಸೂರಾಗದ ನಿರ್ಮಲಮ್ಮನ ಬದುಕು

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಈಗ ನೀವೇ ಹೇಳಿ… ಟಕೂ ಬಾಯಿಯ ಮಗು ನಿಜಕ್ಕೂ ಯಾರದ್ದು?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ವಿಳಾಸವಿರದ ಪ್ರೇಮಪತ್ರಗಳು – 5 | ಇದನ್ನೆಲ್ಲ ಇವತ್ತು ಹೇಳಲೇಬೇಕಿತ್ತು ನಿನಗೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...