ಶಿವಮೊಗ್ಗದಲ್ಲಿ ನಡೆದ ಯುವನಿಧಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದ್ದು, ಬಿಸಿಲಿನಲ್ಲಿ ವಿದ್ಯಾರ್ಥಿಗಳು ಬಳಲಿದ್ದಾರೆ. ಜತೆಗೆ ವಿದ್ಯಾರ್ಥಿಗಳಿಗೆ ಉಪಾಹಾರವನ್ನೂ ಸರಿಯಾಗಿ ನೀಡಿಲ್ಲ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಆರೋಪಿಸಿದರು.
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರ ಐದನೇ ಗ್ಯಾರಂಟಿ ಲೋಕಾರ್ಪಣೆ ಮಾಡಿದೆ. ಆದರೆ ಗ್ಯಾರಂಟಿಯ ಭರವಸೆಗಳು ಲೋಕಸಭಾ ಚುನಾವಣೆವರೆಗೆ ಮಾತ್ರ” ಎಂದು ವ್ಯಂಗ್ಯವಾಡಿದರು.
“ಸರ್ಕಾರಿ ಆದೇಶವಿಲ್ಲದಿದ್ದರೂ ಕೂಡ ಎಂಎ, ಎಂಎಸ್‌ಸಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ ಅವರೂ ಕೂಡ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಸರ್ಕಾರ ಆದೇಶಿಸಿರುವುದು ಪದವಿ ಕೋರ್ಸ್ ಮುಗಿದು ಆರು ತಿಂಗಳು ಸರ್ಕಾರಿ ಕೆಲಸ ಸಿಗದಿದ್ದರೆ ಅಂತಹವರಿಗೆ ಯುವನಿಧಿ ಕೊಡುವುದಾಗಿ ಹೇಳಿದ್ದಾರೆ. ನಿರುದ್ಯೋಗಿ ಯುವಸಮೂಹಕ್ಕೆ ಯುವನಿಧಿ ಅನ್ವಯವಾಗುತ್ತದೆ ಎನ್ನುತ್ತಾರೆ. ಆದರೆ ಕಾಲೇಜು ಓದುವ ಮಕ್ಕಳನ್ನು ಸಮಾರಂಭದಲ್ಲಿ ಬಳಸಿಕೊಂಡಿದ್ದಾರೆ” ಎಂದು ಆರೋಪಿಸಿದರು.
“ನಾವು ಗ್ಯಾರಂಟಿ ಯೋಜನೆಯ ವಿರುದ್ಧ ಇಲ್ಲ. ಆದರೆ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಒಂದು ಸಾವಿರಕ್ಕೂ ಹೆಚ್ಚು ಬಸ್‌ಗಳಲ್ಲಿ ಕರೆದುಕೊಂಡು ಹೋಗಿದ್ದಾರೆ. ಯೂನಿಫಾರಂ ಹಾಕಿದ್ದ ವಿದ್ಯಾರ್ಥಿಗಳೇ ಕಾರ್ಯಕ್ರಮದಲ್ಲಿ ಇದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಕೇಳಿದರೆ ಸ್ಪಷ್ಟ ಉತ್ತರವಿಲ್ಲ. ಜಿಲ್ಲಾಧಿಕಾರಿ ಸರ್ಕಾರಿ ಏಜೆಂಟರಾಗಿ ಕೆಲಸ ಮಾಡಿದ್ದಾರೆ” ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಐದು ಭರವಸೆಗಳೂ ಬೋಗಸ್ ಆಗಿವೆ. ಗೃಹಲಕ್ಷ್ಮೀ ಫ್ಲಾಪ್ ಆಗಿದೆ. ಅರ್ಹ ಬಡ ಮಹಿಳೆಯರಿಗೆ ತಲುಪಿಲ್ಲ. ಶಕ್ತಿಗೆ ಬಸ್ ಕೊರತೆ ಇದ್ದು, ಗ್ರಾಮೀಣ ಭಾಗದಲ್ಲಿ ಬಸ್ ಇಲ್ಲ, ವಿದ್ಯಾರ್ಥಿಗಳಿಗೆ ಬಸ್‌ಗಳೇ ಇಲ್ಲ. ಅನ್ನ ಭಾಗ್ಯವಿಲ್ಲ. ಕೇಂದ್ರದ ಅಕ್ಕಿಯನ್ನೇ ನೀಡಿದ್ದಾರೆ. ಗೃಹ ಜ್ಯೋತಿ ಬಿಲ್ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆ ನಿರ್ವಹಿಸಲು ಸರ್ಕಾರದ ಹಣ ಪೋಲು ಮಾಡುತ್ತಿದ್ದಾರೆ. ಇದಕ್ಕೆ ಒಂದು ಸಮಿತಿ ಮಾಡಿ ಅದಕ್ಕೆ ಅಧ್ಯಕ್ಷರು ಅವರಿಗೆ ವೇತನ ಹೀಗೆ ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ. ಕೆಪಿಸಿಸಿಯಿಂದ ಹಣ ಕೊಡಿ, ಸರ್ಕಾರಿ ಹಣ ಏಕೆ ಕೊಡುತ್ತೀರಾ?” ಎಂದು ಹರಿಹಾಯ್ದರು.
“ಈ ಸರ್ಕಾರ ಜನ ವಿರೋಧಿ ರೈತ ವಿರೋಧಿಯಾಗಿದೆ. ಈಗ ರಾಮನ ಜಪ ಪ್ರಾರಂಭ ಮಾಡಿದ್ದಾರೆ. ರಾಮನ ಬಗ್ಗೆ ಜನ್ಮ ಪ್ರಮಾಣ ಪತ್ರ ಕೇಳಿದವರು. ಕರ ಸೇವಕರನ್ನು ಬಂಧಿಸಿದ್ದ ಕಾಂಗ್ರೆಸ್‌ನವರು ಈಗ ಶ್ರೀರಾಮ ಮಂದಿರದ ಉದ್ಘಾಟನೆಗೆ ನಮ್ಮನ್ನು ಕರೆದಿಲ್ಲ ಎನ್ನುತ್ತಾರೆ. ಆದರೆ ಎಲ್ಲಾ ರಾಷ್ಟ್ರೀಯ ನಾಯಕರನ್ನು ಕರೆಯಲಾಗಿದೆ. ಇದು ಬಿಜೆಪಿ ಕಾರ್ಯಕ್ರಮ ಅಲ್ಲ ಸುಪ್ರೀಂ ಕೋರ್ಟ್ ಆದೇಶದಂತೆ ಟ್ರಸ್ಟ್ ಅಡಿ ಮಂದಿರ ನಿರ್ಮಾಣ ಮಾಡಲಾಗಿದೆ. ಪರಿವಾರದ ಶ್ರಮ, ಭಕ್ತರ ಸಹಕಾರದಿಂದ ಮಂದಿರ ನಿರ್ಮಾಣವಾಗಿದೆ. ಪ್ರತಿಯೊಂದಕ್ಕೂ ಲೆಕ್ಕ ಪತ್ರದ ಆಡಿಟ್ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕೋಳಿ ಫಾರಂ ಕಟ್ಟಡ ಕುಸಿತ; 5,000ಕ್ಕೂ ಅಧಿಕ ಕೋಳಿಗಳು ಸಾವು
“ಸಿಎಂ ತಮ್ಮ ಹೆಸರಿನಲ್ಲೇ ರಾಮನ ಹೆಸರು ಇಟ್ಟುಕೊಂಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಾರೆ. ಶ್ರೀರಾಮನ ಶಾಪಕ್ಕೆ ಗುರಿಯಾಗಲಿದ್ದಾರೆ, ರೈತರ ಶಾಪ ಹಿಂದೂಗಳ ಶಾಪದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಶತಸಿದ್ಧ” ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಟಿ ಜಿ ರವಿಕುಮಾರ್, ಕೆ ಪಿ ಕಲ್ಲಿಂಗಪ್ಪ, ಶಿವ ಪ್ರಕಾಶ್, ರಾಜು ವೀರಣ್ಣ, ಶಿವನಗೌಡ ಪಾಟೀಲ್, ಪ್ರವೀಣ್ ಜಾಧವ್ ದಯಾ ನಂದ್, ಜಯರುದ್ರೇಶ್, ಮೋಹನ್, ಅಣಜಿ ಬಸವರಾಜ್ ಇದ್ದರು.