ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಕೊಳ್ನಾಡು ಗ್ರಾಮದ ದೇವಸ್ಯದಲ್ಲಿ ಕೋಳಿ ಫಾರಂ ಕಟ್ಟಡ ದಿಢೀರ್ ಕುಸಿದಿದ್ದು, 5,000ಕ್ಕೂ ಅಧಿಕ ಕೋಳಿಗಳು ಮೃತಪಟ್ಟಿರುವ ಘಟನೆ ನಡೆದಿದೆ. ಇದರಿಂದ ₹6 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಿದ್ದಾರೆ.
ಯಜ್ಞನಾಥ ಶೆಟ್ಟಿ ಮಾಲೀಕತ್ವದ ಕೋಳಿ ಫಾರಂ ಕಟ್ಟಡ ಏಕಾಏಕಿ ಕುಸಿದು ಬಿದ್ದಿದ್ದು, ಕಟ್ಟಡ ಕುಸಿದ ಶಬ್ದ ಕೇಳಿಸಿಕೊಂಡ ಮಾಲೀಕರು ಮತ್ತು ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಐದು ಸಾವಿರಕ್ಕೂ ಅಧಿಕ ಕೋಳಿಗಳು ಮೃತಪಟ್ಟಿದ್ದವು. ಕೋಳಿಫಾರಂ ಕಟ್ಟಡ ದಿಢೀರನೆ ಕುಸಿದು ಬಿದ್ದ ಘಟನೆಯಿಂದ ಮಾಲೀಕರು ಆಘಾತಗೊಂಡಿದ್ದಾರೆ.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅಸ್ಮಾ ಹಸೈನಾರ್, ಮಾಜಿ ಸದಸ್ಯ ಯೂಸುಫ್ ತಾಳಿತ್ತನೂಜಿ, ಸಾಮಾಜಿಕ ಕಾರ್ಯಕರ್ತ ಹಸೈನಾರ್ ಸೇರಿದಂತೆ ಹಲವು ಮಂದಿ ಘಟನಾ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ್ದಾರೆ. ಒಮ್ಮಿಂದೊಮ್ಮೆಲೆ ಕಟ್ಟಡ ಕುಸಿದು ಬೀಳಲು ಕಾರಣವೇನೆಂದು ತಿಳಿದುಬಂದಿಲ್ಲ.
ಈ ಸುದ್ದಿ ಓದಿದ್ದೀರಾ? ತುಮಕೂರು | ಪರೀಕ್ಷಾ ಕೇಂದ್ರಿತ ಶಿಕ್ಷಣ ವ್ಯವಸ್ಥೆ ತೊಲಗಲಿ: ಪರಿಸರವಾದಿ ಸಿ ಯತಿರಾಜು
“ಸುಮಾರು ಎರಡು ಕಿ.ಮೀ ದೂರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆವು. ಕೋಳಿ ಫಾರಂ ಕುಸಿದ ಸುದ್ದಿ ಹರಡುತ್ತಿದ್ದಂತೆ ನಾನೂ ಅಲ್ಲಿಗೆ ಧಾವಿಸಿದರೆ, ಹೆಂಚಿನ ಮಾಡು ಸಹಿತ ಕಟ್ಟಡ ನೆಲಕ್ಕುರುಳಿತ್ತು. ಅಷ್ಟೊಂದು ಕೋಳಿಗಳು ಸತ್ತು ಬಿದ್ದದ್ದನ್ನು ಕಂಡು ಮನ ಕಲಕಿತು” ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.