ಬೀದಿ ನಾಯಿಗಳ ಹಾವಳಿ ತಪ್ಪಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ(ಎಚ್‌ಡಿಎಂಸಿ) ಶೀಘ್ರದಲ್ಲೇ ಸಂತಾನಶಕ್ತಿ ಹರಣ ಕೇಂದ್ರ ಆರಂಭಿಸಲಿದ್ದು, ಅದಕ್ಕಾಗಿ ಸ್ಥಳವನ್ನು ಗುರುತಿಸಲಾಯಿತು ಜತೆಗೆ ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಈ ಯೋಜನೆಗೆ ಸರ್ವಾನುಮತದ ಬೆಂಬಲ ದೊರೆಯಿತು.
ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಾಣಿಗಳ ಜನನ ನಿಯಂತ್ರಣ(ಎಬಿಸಿ) ಕಾರ್ಯಕ್ರಮವು ಶಸ್ತ್ರಚಿಕಿತ್ಸೆಯ ಅಗತ್ಯವಿರುವ ತಾತ್ಕಾಲಿಕ ಸೌಲಭ್ಯಗಳ ಕೊರತೆಯಿಂದ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಿತು. ಇದಕ್ಕೆ ಪರಿಹಾರವಾಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ತನ್ನ ಅಧಿಕಾರ ವ್ಯಾಪ್ತಿಯ ಒಳಗೆ ಸಂತಾನಶಕ್ತಿ ಹರಣ(ಶಸ್ತ್ರಚಿಕಿತ್ಸೆ) ಕೇಂದ್ರವನ್ನು ಸ್ಥಾಪಿಸಲು ಸೂಕ್ತ ಭೂಮಿಯ ಅನ್ವೇಷಣೆಯನ್ನು ಪ್ರಾರಂಭಿಸಿದೆ. ಈ ಹೊಸ ಕೇಂದ್ರವು ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯನ್ನು ಸುಗಮಗೊಳಿಸಿ, ಕಾರ್ಯಕ್ರಮದ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.
“ಪ್ರಸ್ತುತ ಶಸ್ತ್ರಚಿಕಿತ್ಸಾ ಸೌಕರ್ಯಗಳು ಇಲ್ಲದ ಕಾರಣ ದಿನಕ್ಕೆ ಸುಮಾರು 20 ಬೀದಿನಾಯಿಗಳಿಗೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಆದರೆ, ಸೂಕ್ತ ಸೌಲಭ್ಯಗಳು ಮತ್ತು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದರೆ ಹೆಚ್ಚಿನ ಸಂಖ್ಯೆಯ ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗುತ್ತದೆ” ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೂಲಗಳಿಂದ ತಿಳಿದುಬಂದಿದೆ.
ಹುಬ್ಬಳ್ಳಿಯ ಹೊರವಲಯದಲ್ಲಿರುವ ಶಿವಳ್ಳಿ ಗ್ರಾಮದ ಬಳಿ ಹೊಸದಾಗಿ ಅನುಮೋದಿತ ಸಂತಾನಶಕ್ತಿ ಹರಣ ಕೇಂದ್ರವನ್ನು ಸ್ಥಾಪಿಸಲಾಗುವುದು. ಪ್ರಾಣಿ ಕಲ್ಯಾಣ ಸಂಸ್ಥೆಗಳ ಅಡಿಯಲ್ಲಿ ಸುರಕ್ಷಿತ ಸಂತಾನಶಕ್ತಿ ಹರಣ ಕಾರ್ಯವಿಧಾನಗಳನ್ನು ನಿರ್ವಹಿಸಲು ಈ ಸೌಲಭ್ಯವು ಆಧುನಿಕ ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ತರಬೇತಿ ಪಡೆದ ಪಶುವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುತ್ತದೆ. ವಿಶೇಷ ವಾಹನಗಳು ಮತ್ತು ತರಬೇತಿ ಪಡೆದ ಸಿಬ್ಬಂದಿಯ ಸಹಾಯದಿಂದ ಮಾನವೀಯ ರೀತಿಯಲ್ಲಿ ಬೀದಿ ನಾಯಿಗಳನ್ನು ಸೆರೆಹಿಡಿಯಲು ಎಚ್‌ಡಿಎಂಸಿ ಯೋಜಿಸಿದೆ.
ಈ ಕೇಂದ್ರವು ದಿನಕ್ಕೆ ಸರಿಸುಮಾರು 100 ರಿಂದ 120 ನಾಯಿಗಳನ್ನು ಸಂತಾನಶಕ್ತಿ ಹರಣ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಶಸ್ತ್ರಚಿಕಿತ್ಸೆಯ ನಂತರ, ನಾಯಿಗಳನ್ನು ಅವುಗಳ ಮೂಲ ಸ್ಥಳಗಳಿಗೆ ಕೊಂಡೊಯ್ದು ಬಿಡುವ ಮೊದಲು ಏಳು ದಿನಗಳ ಕಾಲ ವೀಕ್ಷಣೆಯಲ್ಲಿ ಇರಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರದ ಆರೈಕೆ ಮತ್ತು ಔಷಧಿ ಸೇರಿದಂತೆ ಈ ಯೋಜನೆಗೆ ನಿಗಮವು ಸಾಕಷ್ಟು ಹಣವನ್ನು ನಿಗದಿಪಡಿಸಿದೆ.
ಸೌಲಭ್ಯದಲ್ಲಿ ನೈರ್ಮಲ್ಯ ಮಾನದಂಡಗಳನ್ನು ಕಾಪಾಡಿಕೊಳ್ಳಲು ವಿಶೇಷ ಗಮನ ನೀಡಲಾಗುವುದು. ಸರಿಯಾದ ಗುರುತಿಸುವಿಕೆ ವಿಧಾನಗಳ ಮೂಲಕ ಎಲ್ಲ ಸಂತಾನಶಕ್ತಿ ಹರಣಕ್ಕೆ ಒಳಗಾದ ನಾಯಿಗಳ ವಿವರವಾದ ದಾಖಲೆಗಳನ್ನು ನಿರ್ವಹಿಸಲು ನಿಗಮವು ಯೋಜಿಸಿದೆ. ಹೀಗೆ ಮಾಡುವುದರಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ಬೀದಿನಾಯಿಗಳನ್ನು ಮತ್ತೆ ಸೆರೆಹಿಡಿಯದಂತೆ ಸಹಾಯ ಮಾಡುತ್ತದೆ. ಜತೆಗೆ ಬೀದಿನಾಯಿಗಳ ಸಂಖ್ಯೆಯ ಉತ್ತಮ ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, “ಶಿವಳ್ಳಿ ಗ್ರಾಮದಲ್ಲಿ 67 ಎಕರೆ ಜಾಗ ಗುರುತಿಸಲಾಗಿದೆ. ಜತೆಗೆ ಈಗಿರುವ ಶೆಡ್ ಬಳಕೆಗೆ ಅನುಮೋದನೆ ನೀಡಿದೆ. ಅಸ್ತಿತ್ವದಲ್ಲಿರುವ ಶೆಡ್, ಪರಿಧಿ ಕಾಂಪೌಂಡ್ ಮತ್ತು ನೀರು ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಉಪಯುಕ್ತತೆಗಳನ್ನು ಹೊಂದಿದೆ. ಆದಾಗ್ಯೂ, ಕಾರ್ಯಾಚರಣೆಗಳು ಪ್ರಾರಂಭವಾಗುವ ಮೊದಲು ಸೈಟ್‌ಗೆ ಕೆನ್ನೆಲ್ ಗಳನ್ನು ನಿರ್ಮಿಸುವ ಅಗತ್ಯವಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ತೆರಿಗೆ ವಂಚನೆ; ವೆಗಾ ಫನ್‌ಮೊಬೈಲ್ ಪ್ರೈವೇಟ್ ಲಿಮಿಟೆಡ್‌ಗೆ ₹7 ಕೋಟಿ ದಂಡ ವಿಧಿಸಿದ ಬಿಬಿಸಿ
“ಇದೀಗ ತಜ್ಞ ಮಂಡಳಿಯು ಈಗಾಗಲೇ ಸಂತಾನಶಕ್ತಿ ಹರಣ ಕಾರ್ಯಕ್ರಮಕ್ಕೆ 67 ಎಕರೆ ಭೂಮಿ ಮತ್ತು ಈಗಿರುವ ಶೆಡ್ ಬಳಕೆಗೆ ಅನುಮೋದನೆ ನೀಡಿದೆ. ಅಧಿಕಾರಿಗಳು ಶೀಘ್ರದಲ್ಲೇ ಶ್ವಾನಶಾಲೆ(ಕೆನ್ನೆಲ್) ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ. ಶ್ವಾನಶಾಲೆಗಳು ಸಿದ್ಧವಾದ ನಂತರ ಸಂತಾನಶಕ್ತಿ ಹರಣ ಕಾರ್ಯಕ್ರಮವನ್ನು ಕೇಂದ್ರದಲ್ಲೇ ಪ್ರಾರಂಭಿಸಲಾಗುವುದು. ಹೆಚ್ಚಿನ ಪ್ರಾಣಿ ಕಲ್ಯಾಣ ಸಂಸ್ಥೆಗಳು ಹಾಗೂ ಏಜೆನ್ಸಿಗಳೊಂದಿಗೆ ಸಹಕರಿಸುವ ಮೂಲಕ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ವೇಗವಾಗಿ ನೆರವೇರಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ(HDMC) ಉದ್ದೇಶಿಸಿದೆ” ಎಂದು ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪಶುವೈದ್ಯಾಧಿಕಾರಿ ಡಾ.ಎ ಜಿ ಕುಲಕರ್ಣಿ ಮಾತನಾಡಿ, “ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 40,000 ಬೀದಿನಾಯಿಗಳಿವೆ. ಈ ಪೈಕಿ ಪ್ರಸ್ತುತ ಸುಮಾರು ಶೇ.20ರಷ್ಟು ನಾಯಿಗಳನ್ನು ಸಂತಾನಶಕ್ತಿ ಹರಣ ಚಿಕಿತ್ಸೆಗೆ ಒಳಪಡಿಸಲಾಗಿದೆ. ಸಾಕಷ್ಟು ಸೌಲಭ್ಯಗಳೊಂದಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳ ಸಂಖ್ಯೆಯನ್ನು ಹೆಚ್ಚಿಸಬಹುದು” ಎಂದು ಅವರು ಸೂಚಿಸಿದ್ದಾರೆ.