ಬಾಲ್ಯ ವಿವಾಹವು ಸಾಮಾಜಿಕ ಅನಿಷ್ಠ ಪದ್ಧತಿಯಾಗಿದ್ದು, ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯ ವಿವಾಹದಂತಹ ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ಸಂಘಟಿತ ಹೋರಾಟ ಮಾಡಿ, ಶ್ರೀಸಾಮಾನ್ಯರಲ್ಲಿ ಅರಿವಿನ ಜಾಗೃತಿ ಮೂಡಿಸಬೇಕು. ಆ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಗರೀಕ ಸಮಾಜದ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕೆಆರ್ ಪೇಟೆ ಜೆಎಂಎಫ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಹೆಚ್ ಓಂಕಾರಮೂರ್ತಿ ಮನವಿ ಮಾಡಿದರು.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಕೆಪಿಎಸ್ ಶಾಲಾ ಆವರಣದಲ್ಲಿ ಬಾಲ್ಯ ವಿವಾಹ ನಿಷೇಧ ಹಾಗೂ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಹೆಣ್ಣು ಮಕ್ಕಳು ಈ ರಾಷ್ಟ್ರದ ಶಕ್ತಿ. ದೇಶದ ಮುನ್ನಡೆಯಲ್ಲಿ ಹೆಣ್ಣುಮಕ್ಕಳ ಕೊಡುಗೆ ಅಪಾರವಾಗಿದೆ. ಆಟ ಪಾಠ ಮಾಡಿಕೊಂಡು ಸಂತೋಷದಿಂದ ಕಾಲ ಕಳೆಯಬೇಕಾದ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿಯೇ ವಿವಾಹವೆಂಬ ಬಂಧನಕ್ಕೆ ಕೂಡಿ ಹಾಕಲಾಗುತ್ತದೆ. ಇದರಿಂದ, ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಹೆಣ್ಣು ಮಕ್ಕಳು ಆರೋಗ್ಯ ಸಮಸ್ಯೆಯಿಂದ ಬಳಲುವ ಜೊತೆಗೆ, ವಿವಾಹ ಬಂಧನದಲ್ಲಿ ಸಿಲುಕಿ ನರಳ ಬೇಕಾಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಕನಿಷ್ಠ 18 ವರ್ಷ ತುಂಬುವ ಮೊದಲೇ ಮದುವೆ ಮಾಡಬಾರದು” ಎಂದು ಹೇಳಿದರು.
“ಹೆಣ್ಣು ಮಕ್ಕಳು ಮಾನಸಿಕವಾಗಿ, ಶಾರೀರಿಕವಾಗಿ ಸದೃಢರಾಗಿ, ಕನಿಷ್ಠ ಪದವಿ ಶಿಕ್ಷಣವನ್ನು ಪಡೆದು ಜ್ಞಾನವನ್ನು ಹೆಚ್ಚಿಸಿಕೊಳ್ಳುವವರೆಗೆ ವಿವಾಹ ಬಂಧನದಿಂದ ದೂರ ಇಡಬೇಕು. ಗಂಡು ಮಕ್ಕಳಿಗೆ ಕನಿಷ್ಠ 21 ವರ್ಷ, ಹೆಣ್ಣು ಮಕ್ಕಳಿಗೆ ಕನಿಷ್ಠ 18 ವರ್ಷ ತುಂಬುವವರೆಗೂ ವಿವಾಹವೆಂಬ ಪದವು ಅವರ ಬಳಿ ಸುಳಿಯದಂತೆ ತಂದೆ ತಾಯಿಗಳು ಹಾಗೂ ಪೋಷಕರು ಎಚ್ಚರ ವಹಿಸಬೇಕು” ಎಂದು ನ್ಯಾಯಾಧೀಶ ಓಂಕಾರ ಮೂರ್ತಿ ತಿಳಿಸಿದರು.
ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಕೆ.ವಿ. ಅರ್ಪಿತಾ ಅವರು ಮಾತನಾಡಿ, “ಬಾಲ್ಯ ವಿವಾಹ, ವರದಕ್ಷಿಣೆ ಪದ್ಧತಿ ಮುಂತಾದ ಸಾಮಾಜಿಕ ಅನಿಷ್ಠಗಳನ್ನು ಸಮಾಜದಿಂದ ಸಂಪೂರ್ಣವಾಗಿ ತೊಳೆದು ಹಾಕಬೇಕು. ತಾಯಿಯಾಗಿ, ಮಡದಿಯಾಗಿ, ಸಹೋದರಿಯಾಗಿ ಹೆಣ್ಣನ್ನು ಒಪ್ಪಿಕೊಳ್ಳುವ ನಾವು ಮಗಳಾಗಿ ಗೌರವದಿಂದ ಏಕೆ ನಡೆಸಿಕೊಳ್ಳಬಾರದು” ಎಂದು ಪ್ರಶ್ನಿಸಿದರು.
“ಹೆಣ್ಣು ಮಕ್ಕಳು ಕೂಡ ಪುರುಷರಿಗೆ ಸರಿ ಸಮಾನವಾಗಿ ವ್ಯಾಸಂಗವನ್ನು ಮಾಡಿ ಸರ್ಕಾರದ ವಿವಿಧ ಹುದ್ದೆಯನ್ನು ಅಲಂಕರಿಸಿ ನಾಗರೀಕ ಸಮಾಜ ಸೇರಿದಂತೆ ಇಡೀ ಕುಟುಂಬವನ್ನು ಮುನ್ನಡೆಸಲು ಅವಕಾಶ ಮಾಡಿಕೊಡಬೇಕು. ಹೆಣ್ಣು ಮನಸ್ಸು ಮಾಡಿ ನಿಂತರೆ ಯಾವುದೇ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಲು ಸಾಧ್ಯ. ಹೆಣ್ಣು ಮಕ್ಕಳ ಸಾಧನೆಗೆ ಪೋಷಕರು ಪ್ರೋತ್ಸಾಹ ನೀಡಿ ಅವಕಾಶ ಒದಗಿಸಿಕೊಡಬೇಕು. ಹೆಣ್ಣು ಮಕ್ಕಳು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಸಹಕರಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮ್ ಇದ್ದರು.