“ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗದಗ ಜಿಲ್ಲಾ ರೈತರ ಸಮನ್ವಯ ಸಮಿತಿ ವತಿಯಿಂದ ನ.26ರಂದು ನಗರದ ಜಿಲ್ಲಾಡಳಿತ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುತ್ತದೆ” ಎಂದು ಸಮಿತಿಯ ಉಪಾಧ್ಯಕ್ಷ ಶಂಕರಗೌಡ ಜಾಯನಗೌಡ್ರ ತಿಳಿಸಿದರು.
ಗದಗ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ಬರ ಪರಿಹಾರ ಹಾಗೂ ಬೆಳೆ ವಿಮೆಗಾಗಿ ಮನವಿ ಮಾಡಿದರೂ ಸರ್ಕಾರ ಕ್ರಮ ವಹಿಸಿಲ್ಲ. ಸಾಲ ತೀರಿಸಲಾಗದ ರೈತರ ವಾಹನಗಳನ್ನು ಖಾಸಗಿ ಫೈನಾನ್ಸ್ ಕಂಪನಿಯವರು ಜಪ್ತಿ ಮಾಡುತ್ತಿದ್ದಾರೆ. ಕೃಷಿ ಸಾಲ ಮರುಪಾವತಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಪೀಡಿಸುತ್ತಿವೆ” ಎಂದು ಆರೋಪಿಸಿದರು.
“ರೈತರ ಮೇಲೆ ದಬ್ಬಾಳಿಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ರೈತರ ರಕ್ಷಣೆಗೆ ಕಾನೂನು ಜಾರಿ ಮಾಡಬೇಕು. ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಸೂಚಿಸಬೇಕು. ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿ ಮಾಡಬೇಕು. ಎಂ.ಎಸ್. ಸ್ವಾಮಿನಾಥನ್ ವರದಿ ಸಂಪೂರ್ಣ ಜಾರಿ ಮಾಡಬೇಕು” ಎಂದರು.
“ಬೆಳೆ ಪರಿಹಾರವಾಗಿ ಹೆಕ್ಟೇರ್‌ಗೆ ₹50 ಸಾವಿರ ನೀಡಬೇಕು. ಕಬ್ಬಿಗೆ ಕನಿಷ್ಠ ಮೊತ್ತ ನೀಡುತ್ತಿರುವ ವಿಜಯನಗರ ಶುಗರ್ಸ್ ಕಾರ್ಖಾನೆ ಬಂದ್ ಮಾಡಿಸಬೇಕು. ಮಹಾಲೇಖಪಾಲರ ವರದಿಯಂತೆ ಪರಿಹಾರ ನಿಗದಿಗೊಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಏಳು ತಾಲ್ಲೂಕುಗಳಿಗೆ ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 2ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ” ಎಂದು ಮುಖಂಡರು ಎಚ್ಚರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರು ಪರಮೇಶ್ವರಪ್ಪ ಜಂತ್ರಿ, ಮಂಜು ಮಾಗಡಿ, ಎಫ್.ಎಸ್. ಪಾಟೀಲ. ಆರ್.ಎಸ್. ಹಿರೇಮಠ, ಕರಬಸಯ್ಯ ನಾಲ್ವತಾಡಮಠ, ಶರಣಪ್ಪ ಧರ್ಮಾಯತ, ಬಸವರಾಜ ದುಂಡಪ್ಪನವರ, ಬೂದೇಶ ಮೈಲಾರ, ಉಮೇಶ ಲಿಂಗರೆಡ್ಡಿ, ಮೇಘರಾಜ ಬಾವಿ, ಮಂಜುನಾಥ ವಡ್ಡರ, ಮಂಜುನಾಥಗೌಥ ರಾಮನಗೌಡ, ಗಿರೀಶ ಹೊಸಮನಿ ಇದ್ದರು.



