ಬಸವಣ್ಣನವರ ವಚನಗಳು, ವಿಚಾರಧಾರೆ ಹಾಗೂ ಶರಣ ಚಳವಳಿಯ ಇತಿಹಾಸವನ್ನು ತಿರುಚಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪದೊಂದಿಗೆ ಬಸವಪರ ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಾದಿತ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರ ಸುಮ್ಮನಾಗಬಾರದು. ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಜತೆಗೆ, ಇಂತಹ ಬರಹಗಳ ಹಿಂದಿರುವ ಶಕ್ತಿಗಳನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಒತ್ತಾಯಿಸಿದ್ದಾರೆ.
ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಕುರಿತು ಅವಹೇಳನಕಾರಿ ಅಂಶಗಳನ್ನು ಒಳಗೊಂಡ ಕೃತಿ ರಚಿಸಿರುವ ಲೇಖಕನ ವಿರುದ್ಧ ಸರ್ಕಾರ ದಿಟ್ಟ ನಿಲುವು ತಳೆಯಬೇಕು. ಲೇಖಕ ಅಮೆರಿಕದ ರಾಯಭಾರ ಕಚೇರಿಯ ಸಂಪರ್ಕದಲ್ಲಿದ್ದು, ಅಲ್ಲಿಂದ ರಕ್ಷಣೆ ಪಡೆಯುವುದಾಗಿ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಅಗತ್ಯವಿದ್ದರೆ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಕಾನೂನು ಪ್ರಕ್ರಿಯೆ ಮುಂದುವರಿಸಬೇಕು. ಸರ್ಕಾರದ ದಿಟ್ಟತನ ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು ಎಂದು ಆಗ್ರಹಿಸಿದರು.
ಸಣ್ಣಪುಟ್ಟ ವಿಚಾರಗಳಿಗೂ ಪ್ರತಿಕ್ರಿಯಿಸುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಬಸವಣ್ಣನವರ ವಿಚಾರದಲ್ಲಿ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರ್‌ಎಸ್‌ಎಸ್‌ನಲ್ಲಿಯೂ ಬಸವ ತತ್ವವಿದೆ ಎಂದು ಹೇಳಿರುವುದು ಖಂಡನೀಯ ಎಂದರು.
ಬಸವಣ್ಣನವರ ವಚನಗಳು ಮತ್ತು ವಿಚಾರಧಾರೆಯನ್ನು ತಿರುಚಿ ಅಪಮಾನಿಸುವ ಪ್ರಯತ್ನ ನಡೆದಿರುವುದು ಬಸವಾಭಿಮಾನಿಗಳಿಗೆ ನೋವುಂಟು ಮಾಡಿದೆ. ಬಸವ ತತ್ವ ಹಾಗೂ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿಚಾರಧಾರೆಗಳಲ್ಲಿ ಸಾಮ್ಯತೆಗಳಿವೆ. ನಾನು ಬಸವೇಶ್ವರರ ಕಟ್ಟಾ ಅಭಿಮಾನಿಯಾಗಿದ್ದು, 1976ರಲ್ಲಿಯೇ ನನ್ನ ಕಿರಾಣಿ ಅಂಗಡಿಗೆ ಬಸವೇಶ್ವರರ ಹೆಸರಿಟ್ಟಿದ್ದೇನೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹಗಳನ್ನು ಸಹಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.
ಬಸವಪರ ಚಿಂತಕ ಡಾ. ರವಿಕುಮಾರ ಬಿರಾದಾರ ಮಾತನಾಡಿ, ರವಿ ಹಂಜ್ ಈ ವಿವಾದದ ಮುಂಚೂಣಿಯಲ್ಲಿರುವ ವ್ಯಕ್ತಿಯಾಗಿರಬಹುದು. ಆದರೆ ಅವರ ಹಿಂದೆ ಇರುವ ಶಕ್ತಿಗಳು ಯಾರು ಎಂಬುದನ್ನು ಪತ್ತೆಹಚ್ಚುವುದು ಮುಖ್ಯ. ಬಸವ ತತ್ವದ ವಿಚಾರಧಾರೆಯನ್ನು ಹತ್ತಿಕ್ಕುವ ಮತ್ತು ಶರಣ ಚಳವಳಿಯ ಅಸ್ತಿತ್ವವನ್ನೇ ಪ್ರಶ್ನಿಸುವ ಪ್ರಯತ್ನಗಳ ಹಿಂದಿರುವವರ ಕುರಿತು ಸಮಗ್ರ ತನಿಖೆ ನಡೆಸಲು ಎಸ್‌ಐಟಿ ರಚಿಸಬೇಕು ಎಂದು ಆಗ್ರಹಿಸಿದರು.
ಬಸವಾದಿ ಶರಣರ ವಿಚಾರಧಾರೆಯನ್ನು ಅಲ್ಲಗಳೆಯುವ ಜತೆಗೆ ವಚನ ಸಾಹಿತ್ಯದ ಮಹತ್ವವನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ. ಬಸವಾಭಿಮಾನಿಗಳೆಂದು ಗುರುತಿಸಿಕೊಳ್ಳುವ ಕನೇರಿ ಸ್ವಾಮೀಜಿಗಳು ಈ ವಿಚಾರದಲ್ಲಿ ಧ್ವನಿ ಎತ್ತದಿರುವುದೇಕೆ? ಬಸವಣ್ಣನವರ ಕುರಿತು ನಡೆದ ಹಿಂದೂ ಸಮಾವೇಶದಲ್ಲಿ ಭಾಗವಹಿಸಿದ್ದ ಮಠಾಧೀಶರು ಕೂಡ ಮೌನ ವಹಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.
ಅಲ್ಲದೆ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಅವರು ವಿವಾದಿತ ಕೃತಿಯನ್ನು ಖಂಡಿಸದಿರುವುದು ಬೇಸರದ ಸಂಗತಿ. ಕೃತಿಯನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಲಾದ ಅವರನ್ನು ಮಹಾಸಭೆಯ ಅಧ್ಯಕ್ಷ ಸ್ಥಾನದಿಂದ ತಕ್ಷಣ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿ ನಾಗರಾಜ ಲಂಬು ಮಾತನಾಡಿ, ಸತ್ಯವನ್ನು ಮರೆಮಾಚಿ ಸಮಾಜದಲ್ಲಿ ದ್ವಂದ್ವ ಹಾಗೂ ಗೊಂದಲ ಸೃಷ್ಟಿಸುವ ಬರಹಗಳ ಹಿಂದಿನ ಉದ್ದೇಶವನ್ನು ಜನರು ಅರ್ಥಮಾಡಿಕೊಳ್ಳಬೇಕು. ವಿಚಾರಧಾರೆಗಳ ಹೆಸರಿನಲ್ಲಿ ಸಮಾಜದ ನಡುವೆ ಗೊಂದಲ ಮೂಡಿಸುವ ಪ್ರಯತ್ನಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡ ನೀಲಕಂಠ ಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



