ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಮೂಲಕ ಸಂವಿಧಾನಬದ್ಧ ಮತದಾನದ ಹಕ್ಕಿಗೆ ಧಕ್ಕೆಯುಂಟು ಮಾಡಲಾಗುತ್ತಿದೆ ಎಂಬ ಆರೋಪದೊಂದಿಗೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ (SYM) ಬಾಗಲಕೋಟೆ ಜಿಲ್ಲೆಯ ಇಳಕಲ್ ಘಟಕ ಆಗ್ರಹಿಸಿದೆ.
ಈ ಕುರಿತು ಸಂಘಟನೆಯ ಮುಖಂಡರು ಇಳಕಲ್ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಲೋಪಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಅರ್ಹ ಮತದಾರರ ಹೆಸರು ಅಳಿಸುವ ಆರೋಪ:
SIR ಪ್ರಕ್ರಿಯೆಯಲ್ಲಿ ಗೈರುಹಾಜರಿ, ಸ್ಥಳಾಂತರ, ಮರಣ, ದ್ವಿಪ್ರತಿ ಸೇರಿದಂತೆ ವಿವಿಧ ಕಾರಣಗಳಡಿ (ASDDO) ಅರ್ಹ ಮತದಾರರ ಹೆಸರುಗಳನ್ನೂ ಕೈಬಿಡಲಾಗುತ್ತಿದೆ ಎಂಬ ಆತಂಕವನ್ನು ಸಂಘಟನೆ ವ್ಯಕ್ತಪಡಿಸಿದೆ. ವಿಶೇಷವಾಗಿ ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗಗಳ ಜನರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಚುನಾವಣಾ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದೆ.
ಫಾರ್ಮ್-7 ಅನ್ನು ದುರುಪಯೋಗಪಡಿಸಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆರೋಪ ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗೆ ಒತ್ತಾಯ:
ವಿವಾದಗಳಿಗೆ ಕಾರಣವಾಗಿರುವ SIR ಪ್ರಕ್ರಿಯೆಯನ್ನು ರದ್ದುಗೊಳಿಸುವುದರ ಜತೆಗೆ, ಚುನಾವಣಾ ಪ್ರಕ್ರಿಯೆಯಲ್ಲಿ ಲೋಪ ಹಾಗೂ ಪಕ್ಷಪಾತ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು SYM ಒತ್ತಾಯಿಸಿದೆ.
ಅಲ್ಲದೆ, ಮತದಾರರ ಮಾಹಿತಿ ನಿರ್ವಹಣಾ ವ್ಯವಸ್ಥೆ ಹಾಗೂ ECINet ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ತಜ್ಞರ ಸಮಿತಿಯಿಂದ ಸ್ವತಂತ್ರ ಐಟಿ ಆಡಿಟ್ ನಡೆಸಬೇಕು ಎಂದು ಆಗ್ರಹಿಸಿದೆ.
ಮತದಾನವು ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾಗಿದೆ. ಆಡಳಿತಾತ್ಮಕ ಲೋಪಗಳು ಅಥವಾ ದುರುದ್ದೇಶಪೂರಿತ ಕ್ರಮಗಳಿಂದ ಯಾವುದೇ ಅರ್ಹ ನಾಗರಿಕ ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು. ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಿ, ಅನ್ಯಾಯವಾಗಿ ಹೆಸರು ಕೈಬಿಡಲಾಗಿರುವ ಅರ್ಹ ಮತದಾರರನ್ನು ಮರು ಸೇರ್ಪಡೆಗೊಳಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಹೋರಾಟ ತೀವ್ರಗೊಳಿಸುವ ಎಚ್ಚರಿಕೆ:
ಈ ಸಂದರ್ಭದಲ್ಲಿ SYM ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುರ್ತುಜಾ ಕಕ್ಬಾಲ್, ಇಳಕಲ್ ಘಟಕದ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಹಣಚಗಿ, ಕಾರ್ಯದರ್ಶಿ ಮುಝಮ್ಮಿಲ್ ಹಕ್ಕಿ ಹಾಗೂ ಬ್ಲಾಕ್ ಕಾಂಗ್ರೆಸ್ ಇಲ್ಕಲ್ ಅಧ್ಯಕ್ಷ ಅಬ್ದುಲ್ ರಝಕ್ ಪಾನಿಬಂದ್ ಉಪಸ್ಥಿತರಿದ್ದರು.




