ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಇತ್ತೀಚೆಗೆ ಬಿಡುಗಡೆಯಾದ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಕೃತಿಯಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಕುರಿತು ‘ವಿಕೃತ ಮತ್ತು ತಪ್ಪು ಮಾಹಿತಿ’ ನೀಡಲಾಗಿದೆ ಎಂದು ಆರೋಪಿಸಿ ಸೋನಿಯಾ ಗಾಂಧಿ ಅವರಿಗೆ ಕಾನೂನು ನೋಟಿಸ್ ಜಾರಿಗೊಳಿಸಲಾಗಿದೆ.
ವೀರ ಸಾವರ್ಕರ್ ಅವರ ಮೊಮ್ಮಗನ ಸಂಬಂಧಿ ಸತ್ಯಕಿ ಸಾವರ್ಕರ್ ಅವರು ತಮ್ಮ ವಕೀಲ ಸಂಗ್ರಾಮ್ ಕೋಲ್ಹಟ್ಕರ್ ಅವರ ಮೂಲಕ ಈ ನೋಟಿಸ್ ಕಳುಹಿಸಿದ್ದಾರೆ. ಹಾರ್ಪರ್‌ಕಾಲಿನ್ಸ್ ಪ್ರಕಟಿಸಿರುವ ಈ ಪುಸ್ತಕದ 201 ಮತ್ತು 443ನೇ ಪುಟಗಳಲ್ಲಿ ಸಾವರ್ಕರ್ ಕುರಿತು ಆಧಾರರಹಿತ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕಥೆಯನ್ನು ಶಿವಸೇನೆ ಹರಿದು ಬಿಸಾಡಿದ್ದು ಯಾಕೆ?
ಪುಸ್ತಕದ 201ನೇ ಪುಟದಲ್ಲಿ, “ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ಆಡಳಿತಗಾರರಿಂದ ಹಲ್ಲೆ ಮತ್ತು ಸೆರೆವಾಸ ಅನುಭವಿಸುತ್ತಿದ್ದಾಗ, ಆರ್‌ಎಸ್‌ಎಸ್‌ನ ಹಿರಿಯ ಸಿದ್ಧಾಂತವಾದಿಗಳಾದ ವಿನಾಯಕ್ ದಾಮೋದರ್ ಸಾವರ್ಕರ್ ಅಂತಹವರು ತಮ್ಮ ವಸಾಹತುಶಾಹಿ ಒಡೆಯರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆಯುತ್ತಿದ್ದರು. ಅವರ ಸದಸ್ಯರು ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿದಾರರಾಗಿ ಕೈಜೋಡಿಸಿದ್ದರು” ಎಂದು ಬರೆಯಲಾಗಿದೆ ಎಂಬುದನ್ನು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ.
ಹಾಗೆಯೇ 443ನೇ ಪುಟದಲ್ಲಿ ಸಾವರ್ಕರ್ ಅವರ ‘ಹಿಂದುತ್ವ’ ಸಿದ್ಧಾಂತವನ್ನು “ಹಿಂದೂಗಳು ಸರ್ವೋಚ್ಚವಾಗಿರುವ ರಾಷ್ಟ್ರ” ಎಂಬ ದೃಷ್ಟಿಕೋನ ಎಂದು ವ್ಯಾಖ್ಯಾನಿಸಿರುವುದಕ್ಕೂ ಸತ್ಯಕಿ ಸಾವರ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಸಾವರ್ಕರ್ ಅನುಭವಿಸಿದ ಕಠಿಣ ಶಿಕ್ಷೆ ಮತ್ತು ತ್ಯಾಗಗಳನ್ನು ಕಡೆಗಣಿಸಿ, ಯಾವುದೇ ಐತಿಹಾಸಿಕ ಉಲ್ಲೇಖಗಳಿಲ್ಲದೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ದೂರಲಾಗಿದೆ.
ಈ ಹೇಳಿಕೆಗಳಿಗೆ ಪೂರಕವಾದ ದಾಖಲೆಗಳನ್ನು ಒದಗಿಸಬೇಕು ಮತ್ತು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಗಿದೆ. ನೋಟಿಸ್ ತಲುಪಿದ 15 ದಿನಗಳೊಳಗೆ ಪ್ರತಿಕ್ರಿಯಿಸದಿದ್ದರೆ ಪುಣೆ ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಸದ್ಯಕ್ಕೆ ಪುಸ್ತಕವನ್ನು ನಿಷೇಧಿಸುವಂತೆ ಕೋರುವುದಿಲ್ಲ ಎಂದೂ ಸತ್ಯಕಿ ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 10 ರಂದು ಬಿಡುಗಡೆಯಾದ ಈ ಕೃತಿಯ ಕುರಿತು ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಬಿಜೆಪಿ ಮತ್ತು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ನಾಯಕರು ಪುಸ್ತಕದ ವಿರುದ್ಧ ಪ್ರತಿಭಟನೆ ನಡೆಸಿದ್ದು, ದೆಹಲಿಯ ಮಧು ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.
ಇನ್ನೊಂದೆಡೆ, ಈ ಕಾನೂನು ನೋಟಿಸ್ ಕುರಿತಂತೆ ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ಹೈಕಮಾಂಡ್‌ನಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ. ಆದರೆ, ಪುಸ್ತಕದ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕರು, “ಈ ಕೃತಿಯು ಸೋನಿಯಾ ಗಾಂಧಿ ಅವರ ಜೀವನ ಪಯಣ ಮತ್ತು ದೇಶಕ್ಕಾಗಿ ಕಾಂಗ್ರೆಸ್ ಪಕ್ಷ ಮಾಡಿದ ತ್ಯಾಗಗಳ ನೈಜ ಚಿತ್ರಣವನ್ನು ಜನರ ಮುಂದಿಡುತ್ತದೆ” ಎಂದು ಹೇಳಿದ್ದಾರೆ.



