ಯುಬಿಡಿಟಿ ಕಾಲೇಜಿನ 50% ಸೀಟುಗಳನ್ನು ಹೆಚ್ಚಿನ ಶುಲ್ಕಕ್ಕೆ ಮಾರುವ ನಿರ್ಧಾರವನ್ನು ಕೈಬಿಡಲು ಆಗ್ರಹಿಸಿ ಎಐಡಿಎಸ್‌ಓ ಕಲಬುರಗಿ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ. ಮಾತನಾಡಿ, “ಕಳೆದ ಒಂದು ತಿಂಗಳಿನಿಂದ, ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವಲ್ಲಿ ನಿರತರಾಗಿದ್ದಾರೆ. ರಾಜ್ಯದ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದಾದ ಹಾಗೂ ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಾದ ಯುಬಿಡಿಟಿಯಲ್ಲಿ ಶೇ.50 ರಷ್ಟು ಪ್ರಮಾಣದ ಸೀಟುಗಳಲ್ಲಿ ಭೀಕರ ಶುಲ್ಕ ಏರಿಕೆಯನ್ನು ಮಾಡಿ, 97 ಸಾವಿರ ರೂಪಾಯಿಗಳಷ್ಟು ವಿದ್ಯಾರ್ಥಿಗಳಿಂದ ಪಡೆಯಲು ನಿರ್ಧರಿಸಲಾಗಿದೆ” ಎಂದು ಆರೋಪಿಸಿದರು.

“ದೇಶದ ಯಾವುದೇ, ಸರ್ಕಾರದ ದೇಣಿಗೆಯಿಂದ ನಡೆಯುವ ಒಂದು ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಪ್ರಮಾಣದ ಶುಲ್ಕ ಪಡೆಯುವ ನಿರ್ವಹಣಾ ಕೋಟಾದ ಸೀಟುಗಳ ಸಂಖ್ಯೆ ಇಲ್ಲ. ಸರ್ಕಾರಿ ಇಂಜಿನಿಯರಿಂಗ್ ಶುಲ್ಕವೇ. 43 ಸಾವಿರದಷ್ಟಿದ್ದು, ಈಗಾಗಲೇ ಬಡ ವಿದ್ಯಾರ್ಥಿಗಳಿಗೆ ಇದನ್ನು ಭರಿಸಲು ಕಷ್ಟ ಸಾಧ್ಯವಾಗಿದೆ. ಅಂತಹ ಸಂದರ್ಭದಲ್ಲಿ, ಸರ್ಕಾರಿ ಕಾಲೇಜು ಒಂದರಲ್ಲಿ 97,000 ಶುಲ್ಕ ಪಡೆಯುವುದು ವಿದ್ಯಾರ್ಥಿಗಳ ಮೇಲೆ ಒಂದು ಬೃಹತ್ ಪ್ರಹಾರವಾಗಿದೆ. ಇದೇ ರೀತಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಯುವಿಸಿಇ ಕಾಲೇಜ್ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಏರಿಸುವ ಹಾಗೂ ಕಾಲೇಜು ನಿರ್ವಹಣೆಯ ಹಣವನ್ನು ವಿದ್ಯಾರ್ಥಿಗಳ ಶುಲ್ಕ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇದು ಸಾರ್ವಜನಿಕ ಶಿಕ್ಷಣದ ಮೂಲ ಉದ್ದೇಶಕ್ಕೆ ವಿರುದ್ಧವಾದ ನಡೆಯಾಗಿದೆ” ಎಂದರು.

“ತಮ್ಮ ಸರ್ಕಾರ, ರಾಜ್ಯದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಪ್ರೇಮಿ ಜನ, ರಾಷ್ಟ್ರೀಯ ಶಿಕ್ಷಣ ನೀತಿ (2020) ವಿರೋಧಿಸಿ ನಡೆಸಿದ “ಸಾರ್ವಜನಿಕ ಶಿಕ್ಷಣ ಉಳಿಸಿ” ಎಂಬ ಹೋರಾಟಕ್ಕೆ ಸ್ಪಂದಿಸಿ ರಾಜ್ಯದಲ್ಲಿ ಎನ್.ಈ.ಪಿ(2020) ಹಿಂಪಡೆದು ವಿದ್ಯಾರ್ಥಿಗಳ ಪರವಾದ ನಿಲುವನ್ನು ತಾಳಿದ್ದೀರಿ. ದೇಶದಲ್ಲಿಯೇ, ಶಿಕ್ಷಣ ವಿರೋಧಿ ಹಾಗೂ ಬಡ ಮಕ್ಕಳ ಕೈಯಿಂದ ಉನ್ನತ ಶಿಕ್ಷಣ ಕಸಿಯುವ ಎನ್.ಇ.ಪಿ (2020)ನ್ನು ಹಿಂಪಡೆದ ಏಕೈಕ ರಾಜ್ಯ ಕರ್ನಾಟಕ, ಆದರೆ, ಇದೀಗ ಎನ್.ಈ.ಪಿ (2020)ರ ಭಾಗವೇ ಆಗಿರುವ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಶುಲ್ಕ ಏರಿಕೆ, ಅನುದಾನ ಕಡಿತ ಹಾಗೂ ವಿದ್ಯಾರ್ಥಿಗಳ ಶುಲ್ಕದಲ್ಲಿ ಕಾಲೇಜು ನಿರ್ವಹಣೆ ಇವುಗಳನ್ನು ರಾಜ್ಯದಲ್ಲಿ ಅನುಷ್ಠಾನ ಗೊಳಿಸುತ್ತಿರುವುದು ಅತ್ಯಂತ ವಿಷಾದನೀಯ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಸರ್ಕಾರಿ ಅನುದಾನ ದುರ್ಬಳಕೆ; ಸಹಾಯಕ ಇಂಜಿನಿಯರ್‌ಗಳ ಅಮಾನತಿಗೆ ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹ
ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಪ್ರೀತಿ ದೊಡ್ಡಮನಿ, ಗೋವಿಂದ ಯಳವಾರ, ಜಿಲ್ಲಾ ಸಮಿತಿ ಸದಸ್ಯರಾದ ಅಜಯ, ಸ್ಫೂರ್ತಿ, ಬಾಬೂ, ಯುವರಾಜ್, ರಾಹುಲ್, ಸಂಪತ್, ವಿದ್ಯಾರ್ಥಿಗಳಾದ ಸಂತೋಷ್, ಪವಿತ್ರ, ಅಂಕಿತಾ, ಮಹಾಲಕ್ಷ್ಮಿ, ರಕ್ಷಿತಾ, ರತ್ನ, ಸೌಂದರ್ಯ, ಅಭಿಶೇಖ್, ಮಂಜು,ಮಹಾದೇವ ಇನ್ನಿತರರು ಉಪಸ್ಥಿತರಿದ್ದರು.
