ಕಲಬುರಗಿಯ ನೃಪತುಂಗ ಕಾಲೋನಿಯಲ್ಲಿ ಇನ್ನೂರು ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಟುಂಬಗಳು ತುಂಬಾ ವರ್ಷದಿಂದ ವಾಸವಾಗಿದ್ದು, ಇವರುಗಳಿಗೆ ಈವರೆಗೂ ಕನಿಷ್ಠ ಮೂಲಭೂತ ಸೌಲಭ್ಯಗಳನ್ನೂ ನೀಡಿಲ್ಲ.
ಇವರು ವಾಸವಿರುವ ಜಾಗದಲ್ಲಿ ನೀರು,ಮನೆ, ಬಟ್ಟೆ, ವಿದ್ಯುತ್ ಅಷ್ಟೇ ಅಲ್ಲ ರಸ್ತೆಕೂಡ ಇಲ್ಲ. ʼನಮಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಇರಲಿಲ್ಲ. ಆದರೆ, ನಮ್ಮ ಅಲೆಮಾರಿ ಜನಾಂಗ ಮಕ್ಕಳಾದರೂ ವಿದ್ಯಾವಂತರಾಗಿ, ಎಲ್ಲರಂತೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಬೇಕು ಎಂಬುವುದು ನಮ್ಮ ಆಸೆʼ ಎನ್ನುವುದು ಈ ಜನರ ಕನಸು.
ಬುಡಕಟ್ಟು ಜನಾಂಗದ ಈರಮ್ಮ ಈದಿನ.ಕಾಮ್ ನೊಂದಿಗೆ ಮಾತನಾಡಿ, “ಸುಮಾರು 30 ವರ್ಷದಗಳಿಂದ ಗುಡಿಸಲು ಕಟ್ಟಿಕೊಂಡು, ಜೋಪಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಮಳೆ ಬಂದಾಗ ಗುಡಿಸಲಲ್ಲಿ ಮಲಗುವುದಕ್ಕೂ ಜಾಗ ಇರುವುದಿಲ್ಲ. ಮಳೆ ನೀರು ಗುಡಿಸಲಿಗೆ ನುಗ್ಗುತ್ತದೆ. ರಸ್ತೆ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಕೇಸರಿನಲ್ಲಿ ನಡೆದುಕೊಂಡು ಓಡಾಡಬೇಕು. ವಿದ್ಯುತ್ ಸಂಪರ್ಕ ಇಲ್ಲ. ಕತ್ತಲಲ್ಲಿ ಜೀವನ ನಡೆಸುತ್ತಿದ್ದೇವೆ. ಈ ಹಿಂದೆ ಹಾವು ಕಡಿದು ಒಂದು ಮಗು ತೀರಿಕೊಂಡಿದೆ. ನಮ್ಮ ಕಷ್ಟಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ನೀರಿಗಾಗಿ ಕೊಡ ಹಿಡಿದುಕೊಂಡು ಪ್ರತಿಭಟನೆ ಮಾಡಿದ್ದೇವೆ. ಆದರು ಕೂಡ ಸಮಸ್ಯೆ ಬಗ್ಗೆ ಹರಿದಿಲ್ಲ. ನಮ್ಮ ಗೋಳು ಕೇಳುವವರು ಯಾರು ಇಲ್ಲ” ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಗಜರಪ್ಪ ಮಾತನಾಡಿ, “ನಾವು ಜೋಪಡಿಯಲ್ಲಿ ಇರುವುದರಿಂದ ನಮಗೆ ಕಿಮ್ಮತ್ತೇ (ಗೌರವ) ಇಲ್ಲ. ಈ ಮೊದಲು ಕಲಬುರಗಿ ನಗರದ ರಾಜಾಪುರ ಕಾಲೋನಿಯಲ್ಲಿ ವಾಸವಾಗಿದ್ದೇವು. ಅಲ್ಲಿಂದ ನಮ್ಮನ್ನ ಓಡಿಸಿದರು. ನಂತರ ನೃಪತುಂಗ ಕಾಲೋನಿಗೆ ಬಂದು ವಾಸವಾಗಿದ್ದೇವೆ. ನಾವು ಇಲ್ಲಿಗೆ ಬಂದು ಸುಮಾರು ವರ್ಷಗಳೇ ಕಳೆದರು ರಸ್ತೆ, ನೀರು, ವಿದ್ಯುತ್ ಯಾವುದೇ ಸೌಲಭ್ಯವಿಲ್ಲದೇ, ಕಾಡಿನಲ್ಲಿ ಇದ್ದಹಾಗಿದೆ ನಮ್ಮ ಪರಿಸ್ಥಿತಿ. ನಾಯಕರುಗಳು ಓಟು ಕೇಳಲು ಬರುತ್ತಾರೆ. ಚುನಾವಣೆ ಮುಗಿದ ಬಳಿಕ ಇತ್ತಾ ಸುಳಿಯುವುದಿಲ್ಲ. ಇಷ್ಟು ವರ್ಷ ಕಳೆದರು ಒಂದು ಮನೆ ಮಾಡಿಲ್ಲ. ಎಷ್ಟು ಹೋರಾಟ ಮಾಡಿದರು ಪ್ರಯೋಜನ ಆಗಿಲ್ಲ” ಎಂದು ಬೇಸರ ಹೊರಹಾಕಿದರು.
ಸಾಬಮ್ಮಾ ಮಾತನಾಡಿ, “ನಮ್ಮ ಜನಾಂಗದವರಿಗೆ ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಆದರೆ ಮುದುಕರು, ಮಕ್ಕಳು, ಎಲ್ಲರೂ ನಡೆದುಕೊಂಡೆ ಆಸ್ಪತ್ರೆ ಹೋಗಬೇಕು. ಹೆಣ್ಣು ಮಕ್ಕಳಿಗೆ ಹೆರಿಗೆ ಸಂದರ್ಭದಲ್ಲಿ ಆಂಬುಲೆನ್ಸ್ ಕೂಡ ಬರುವುದಿಲ್ಲ. ರಸ್ತೆ ಸರಿ ಇಲ್ಲ ಬರಲು ಆಗುವುದಿಲ್ಲ ಎಂದು ಹೇಳುತ್ತಾರೆ. ರಸ್ತೆ ಮಧ್ಯ ಏನಾದರು ಅನಾಹುತ ಆದರೆ ಯಾರು ಹೊಣೆ? ನಮ್ಮ ನೋವು ಯಾರು ಕೇಳುವವರಿಲ್ಲ. ನಮಗೆ ನೀರು, ಕರೆಂಟ್, ರಸ್ತೆ ಮಾಡಿಕೊಡಬೇಕು” ಎಂದು ಮನವಿ ಮಾಡಿಕೊಂಡರು.
ಮಹದೇವಪ್ಪ ಮಾತನಾಡಿ, “ಯಾವ ಪಕ್ಷದವರಾದರೂ ಬರಲಿ. ಅವರು ಯಾರೂ ನಮಗೆ ಸೌಲಭ್ಯ ಒದಗಿಸಿ ಕೊಡೋದಿಲ್ಲ. ನಮ್ಮ ಮಕ್ಕಳಿಗೆ ಶಿಕ್ಷಣದ ಬಗ್ಗೆ ಕಿಂಚಿತ್ತು ತಿಳುವಳಿಕೆ ಇಲ್ಲ. ನಾವು ಶಾಲೆ ಕಲಿತಿಲ್ಲ. ಆದರೆ, ನಮ್ಮ ಮಕ್ಕಳಿಗಾದರು ಒಳ್ಳೆ ವಿದ್ಯಾಭ್ಯಾಸ ಸಿಗಬೇಕು ಎನ್ನುವುದು ನಮ್ಮ ಆಶಯ. ಚುನಾವಣೆ ಸಂದರ್ಭದಲ್ಲಿ ಓಟು ಹಾಕುವುದಕ್ಕೆ ನಾವು ಬೇಕು. ಅದರ ನಂತರದಲ್ಲಿ ನಾವು ಅವರಿಗೆ ಬೇಡಾ. ನಾವು ಯಾವ ಸ್ಥಿತಿಯಲ್ಲಿದ್ದೀವಿ, ನಮ್ಮ ಮಕ್ಕಳು ಪರಿಸ್ಥಿತಿ ಏನಾಗಿದೆ? ಎಂಬುವುದು ಸರ್ಕಾರಕ್ಕೆ ಬೇಡದೆ ಇರುವ ವಿಚಾರವಾಗಿದೆ. ನಮ್ಮ ತಾತಾ, ಮುತ್ತಾತ, ಅಪ್ಪ, ನಾವು ಗುಡಿಸಲಲ್ಲಿಯೇ ಜೀವನ ಕಳೆದಿದ್ದೇವೆ. ನಮಗೆ ಒಂದು ಒಳ್ಳೆಯ ಜೀವನ ಸಿಕ್ಕಿಲ್ಲ. ನಮ್ಮ ಮಕ್ಕಳಿಗಾದರು ಒಳ್ಳೆಯ ಅವಕಾಶ ಕಲ್ಪಿಸಿಕೊಡಲು ಸರ್ಕಾರ ಮುಂದಾಗಬೇಕು” ಎಂದು ಬೇಡಿಕೊಂಡರು.
ಅಲೆಮಾರಿ ಜನಾಂಗದ ಮರಲಿಂಗಪ್ಪ ಮಾತನಾಡಿ, “ಸಾಬವ್ವ ಆಕೆಗೆ ಕಿವಿ ಕೇಳಿಸುವುದಿಲ್ಲ ಜೊತೆಗೆ ಅವಳ ಗಂಡ ತೀರಿಕೊಂಡಿದ್ದಾನೆ, ಮಗುವಿನೊಂದಿಗೆ ಗುಡಿಸಲಲ್ಲಿ ಜೀವನ ನಡೆಸುತ್ತಿದ್ದಾಳೆ. ವಿಧವಾ ವೇತನಕ್ಕೆ ಅರ್ಜಿ ಹಾಕಿದರೆ. ಜಾತಿ, ಆದಾಯ ಪ್ರಮಾಣ ಪತ್ರದಲ್ಲಿ ಐವತ್ತು ಸಾವಿರ ರೂಪಾಯಿ ಆದಾಯ ತೋರಿಸಿದ ಸಲುವಾಗಿ ಅವಳಿಗೆ ವಿಧವಾ ವೇತನ ಬರುವುದಿಲ್ಲ ಎಂದು ವಾಪಾಸ್ ಕಳುಹಿಸಿದ್ದಾರೆ. ಐವತ್ತು ಸಾವಿರ ರೂಪಾಯಿ ಆದಾಯ ಇದ್ದಿದ್ದರೇ, ಗುಡಿಸಲಲ್ಲಿ ಯಾಕೆ ಜೀವನ ನಡೆಸುತ್ತಾರೆ? ಅಧಿಕಾರಿಗಳು ವಿಚಾರ ಮಾಡದೇ ಈ ತಪ್ಪುಗಳು ಮಾಡಿ, ಬಡವರ ಹೊಟ್ಟೆ ಮೇಲೆ ಹೊಡೆಯುತ್ತಾರೆ. ಬಡ ಜನರಿಗೆ ಸರ್ಕಾರ ಸಹಾಯ ಮಾಡದಿದ್ದರೆ. ಇನ್ನು ಎಂತವರಿಗೆ ಸರ್ಕಾರ ಸಹಾಯ ಮಾಡುತ್ತದೆ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಒಟ್ಟಿನಲ್ಲಿ, ತಲೆ ತಲೆ ಮಾರುಗಳಿಂದ ಗುಡಿಸಲಲ್ಲಿ ವಾಸವಿರುವ ಈ ಅಲೆ ಮಾರಿಗಳು ಓಟುಗಳಾಗಿ ಮಾತ್ರ ಕಣ್ಣಿಗೆ ಕಾಣಿಸುತ್ತಾರೆಯೇ ಹೊರತು ಅವರ ಸಮಸ್ಯೆಗಳು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುವರೇ ಕಾದುನೋಡಬೇಕು.