ವೇತನ ಪರಿಷ್ಕರಣೆ, ಖಾಯಂ ನೇಮಕಾತಿ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ನೌಕರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಶಾಂತಾ ಘಂಟೆ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಬಿಎಲ್ಒ, ಎಸ್ಐಆರ್ ಸೇರಿದಂತೆ ಇಲಾಖೇತರ ಸಮೀಕ್ಷೆ ಮತ್ತು ಚುನಾವಣೆಗೆ ಸಂಬಂಧಿಸಿದ ಕರ್ತವ್ಯಗಳಿಂದ ಸಂಪೂರ್ಣ ಮುಕ್ತಗೊಳಿಸಬೇಕು. 50 ವರ್ಷ ಮೇಲ್ಪಟ್ಟವರು, ಸಹಾಯಕಿಯರಿಲ್ಲದ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಸಿಬ್ಬಂದಿಗೆ ಹೆಚ್ಚುವರಿ ಕೆಲಸ ನೀಡಬಾರದು’ ಎಂದು ಒತ್ತಾಯಿಸಿದರು.
‘ಪೋಷಣ್ ಟ್ರ್ಯಾಕರ್’ ಬಳಕೆಯ ಹೆಸರಿನಲ್ಲಿ ಸಿಬ್ಬಂದಿಗೆ ಆಗುತ್ತಿರುವ ಕಿರುಕುಳವನ್ನು ನಿಲ್ಲಿಸಿ, ಮೊಬೈಲ್, ಡೇಟಾ ಹಾಗೂ ನಿರ್ವಹಣಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಡಿಜಿಟಲ್ ಕಾರ್ಯಗಳಿಗೆ ಗುಣಮಟ್ಟದ ಟ್ಯಾಬ್ಲೆಟ್ ಹಾಗೂ ಉಚಿತ ಡೇಟಾ ಸೌಲಭ್ಯ ಒದಗಿಸಬೇಕು. ಎಫ್ಆರ್ಎಸ್ ಮತ್ತು ಇ-ಕೆವೈಸಿ ಕಡ್ಡಾಯಗೊಳಿಸಿರುವ ಕ್ರಮವನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
‘ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಸುಸಜ್ಜಿತ ಕಟ್ಟಡ, ಗ್ಯಾಸ್ ಸಂಪರ್ಕ ಹಾಗೂ ಅಗತ್ಯ ಅಡುಗೆ ಉಪಕರಣಗಳನ್ನು ಒದಗಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳಿಗೆ ಪ್ರದೇಶವಾರು ಸಮರ್ಪಕ ಬಾಡಿಗೆ ನಿಗದಿಪಡಿಸಿ ನೀಡಬೇಕು’ ಎಂದು ಮನವಿ ಮಾಡಿದರು.
‘ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ₹41 ಸಾವಿರ ಹಾಗೂ ಸಹಾಯಕಿಯರಿಗೆ ₹35 ಸಾವಿರ ಮಾಸಿಕ ವೇತನ ನಿಗದಿಪಡಿಸಬೇಕು. ನಿವೃತ್ತಿಯ ನಂತರ ₹18 ಸಾವಿರ ಮಾಸಿಕ ಪಿಂಚಣಿ ನೀಡಬೇಕು. ದೇಶಾದ್ಯಂತ ಏಕರೂಪದ ಸೇವಾ ನಿಯಮ ಜಾರಿಗೊಳಿಸಿ, ವಾರ್ಷಿಕ ಶೇ.10ರಷ್ಟು ವೇತನ ಹೆಚ್ಚಳ, ವೈದ್ಯಕೀಯ ಮತ್ತು ಬೇಸಿಗೆ ರಜೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಹ ಅಂಗನವಾಡಿ ಕಾರ್ಯಕರ್ತೆಯರನ್ನೇ ಬಡ್ತಿ ಮೂಲಕ ನೇಮಕ ಮಾಡಬೇಕು. ಎಎನ್ಎಂ, ಪ್ರಾಥಮಿಕ ಶಾಲಾ ಶಿಕ್ಷಕ, ಗ್ರಾಮ ಸೇವಕ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಭಾರೀ ಮಳೆಗೆ ಯುಪಿ ಸ್ಮಶಾನ ಜಲಮಯ: ನೀರಿನಲ್ಲಿ ತೇಲಿದ ಮೃತದೇಹಗಳು
ಪ್ರತಿಭಟನೆಯಲ್ಲಿ ಎಂ.ಬಿ. ಸಜ್ಜನ್, ಶಾಂತಾ ಸರಡಗಿ, ನಾಗಪ್ಪ ರಾಯಚೂರಕರ್, ರಾಜಮತಿ ಪಾಟೀಲ, ಮಹಾದೇವಿ ಪೋಲಕಪಳ್ಳಿ, ವಿಜಯಲಕ್ಷ್ಮೀ ಹಿರೇಮಠ, ಸಂಗೀತಾ ಗುತ್ತೇದಾರ, ರೇಖಾ ರಂಗನ್ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಮತ್ತು ಅಕ್ಷರ ದಾಸೋಹ ನೌಕರರು ಭಾಗವಹಿಸಿದ್ದರು.





